ಗುರುವಾರ , ಜನವರಿ 21, 2021
17 °C

ಚುರುಮುರಿ: ಶಾಕ್ ಆಗ್ತೀರ!

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

ವೆಬ್‌ಸೈಟ್‌ ಸುದ್ದಿಗಳ ಶೀರ್ಷಿಕೆಗೆ ಸಮಾಲೋಚನೆ

ಮುದ್ದಣ್ಣ ನ್ಯೂಸ್ ವೆಬ್‌ಸೈಟ್ ಒಂದಕ್ಕೆ ಸಂದರ್ಶನಕ್ಕೆಂದು ಹೋದ. ‘ಬನ್ನಿ, ಬನ್ನಿ... ನನ್ನನ್ನ ನೋಡಿ ಶಾಕ್ ಆದ್ರಾ?’ ಕೇಳ್ದ ಸಂದರ್ಶಕ ವಿಜಿ.

‘ನೀವೇನು ಹುಲಿನಾ ಸರ್?’

‘ಓನರ್‌ ಆದ್ರೂ ನಾನೇ ನಿಮ್ಮನ್ನ ವೆಲ್‌ಕಂ ಮಾಡಿದ್ನಲ್ಲ, ಅದಕ್ಕೆ...’

‘ಎಷ್ಟ್ ಜನ ಕೆಲ್ಸ ಮಾಡ್ತಿದ್ದಾರೆ ನಿಮ್ ವೆಬ್‌ಸೈಟ್‌ಗೆ’.

‘ಸದ್ಯ ನಾನೊಬ್ನೆ...’

‘ಸರ್, ನಿಜವಾಗಿಯೂ ಈಗ ಶಾಕ್ ಆಯ್ತು’.

‘ನಮ್‌ ವೆಬ್‌ಸೈಟ್‌ ಹೆಸರೇ ‘ಶಾಕ್‌ ಆಗ್ತೀರ’ ಅಂತ ಗೊತ್ತಾ. ಈಗ ಸಂದರ್ಶನ ಸ್ಟಾರ್ಟ್ ಮಾಡೋಣ. ಕೊರೊನಾ ಲಸಿಕೆ ಬಂದ್ರೆ ಏನ್ ಹೆಡ್ಡಿಂಗ್ ಕೊಡ್ತೀರಾ?’

‘ಬಂದೇಬಿಡ್ತು ಲಸಿಕೆ’.

‘ಒಂದೇ ಕ್ಷಣಕ್ಕೆ ಹೋಗ್ತಾರೆ ಮುಂದಕ್ಕೆ’.

‘ಶಾಕಿಂಗ್ ನ್ಯೂಸ್! ಸುಂದರವಾಗಿರೋರಿಗೆ ಮಾತ್ರ ಲಸಿಕೆ‌ ಅಂತ ಕೊಡಬೇಕು’.

‘ಲಸಿಕೆಗೂ, ಸುಂದರವಾಗಿರೋದಕ್ಕೂ ಏನ್ ಸಾರ್ ಸಂಬಂಧ?’

‘ಸರ್ಕಾರವೇ ಹೇಳಿಲ್ವೇನ್ರೀ, ಲಕ್ಷಣವಾಗಿದ್ದೋರಿಗೆ ಮಾತ್ರ ಲಸಿಕೆ ಅಂತ’.

‘ಸರ್, ಅದು ಲಕ್ಷಣವಾಗಿದ್ದೋರಿಗೆ ಅಲ್ಲ, ಕೋವಿಡ್ ಲಕ್ಷಣ ಹೊಂದಿರೋರಿಗೆ ಅಂತ...’

‘ಅಯ್ಯೋ ಅದನ್ನು ಕೊನೆಗೆ ಬರೆದರಾಯ್ತು ರೀ... ಜನ ಶಾಕ್ ಆದ್ರೇನೇ ನಮಗೆ ಕ್ಯಾಶ್ ಬರೋದು’.

‘ಮರುದಿನ ವೋಟಿಂಗ್ ಡೇ ಇದ್ರೆ, ನಾಳೆ ಕಲೆಯಾಗಲಿದೆ ನಿಮ್ ಕೈ ಅಂತ ಕೊಡಬಹುದಲ್ವ ಸರ್’ ಹೇಳ್ದ ಮುದ್ದಣ್ಣ.

‘ಗುಡ್. ನಿಮ್ಮಂಥವರು ಬೇಕು ನಮಗೆ’ ಎಂದು ವಿಜಿ ಹೇಳ್ತಿದ್ದಂತೆ ಹೆಂಡ್ತಿ ಓಡಿ ಬಂದಳು. ‘ರೀ, ನಿಮ್ ವೆಬ್‌ನ್ಯೂಸ್ ಓದಿ ಸಾವಿರಾರು ಜನಕ್ಕೆ ಶಾಕ್ ಆಗ್ತಿದೆಯಂತೆ’. ಜಾಗತಿಕ ಟಾಪರ್ ಆದಂತೆ ಖುಷೀಲಿ ಎದ್ದು ನಿಂತ ವಿಜಿ.

‘ಶಾಕ್ ತಡೆಯೋಕಾಗದೆ ಎಲ್ರಿಗೂ ಬಿ.ಪಿ ಜಾಸ್ತಿಯಾಯ್ತಂತೆ. ಅದಕ್ಕೆ ಎಲ್ರೂ ಅನ್‌ಫಾಲೋ ಮಾಡ್ತಿದಾರೆ. ವೆಬ್‌ಸೈಟ್ ಫಾಲೋವರ್ಸ್ ಸಂಖ್ಯೆ 5 ಲಕ್ಷದಿಂದ ಐದಕ್ಕೆ ಬಂದು ನಿಂತಿದೆ’. ವಿಜಿ ನಿಜಕ್ಕೂ ಶಾಕ್ ಆದ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.