‘ಅರ್ಥ ಆಗ್ಲಿಲ್ವಾ? ಮೊದ್ಲು ಕೇಳಿದ್ದು ‘ಏನ್ರಲೆ ಎಲ್ಲ ಪಾಡದೀರಾ’ ಅಂತ. ಆಮೇಲೆ ಹೇಳಿದ್ದು ‘ಇದು ಸಂಸ್ಕೃತ, ನಿಮ್ಮಂಥ ದಡ್ಡರಿಗೆ ಅರ್ಥ ಆಗಲ್ಲ ಅಂತ. ನಾನು ಸಂಸ್ಕೃತ ಕಲೀತಿದೀನಿ’ ತೆಪರೇಸಿ ನಕ್ಕ.
‘ಹೌದಾ? ಮಾಡಾಕೆ ಬೇರೆ ಕೆಲ್ಸ ಇರ್ಲಿಲ್ವಾ?’ ಗುಡ್ಡೆ ಕೇಳಿದ.
‘ಸಂಸ್ಕೃತ ಕಲೀದಿದ್ರೆ ಸ್ವರ್ಗಕ್ಕೆ ಪ್ರವೇಶ ಇಲ್ಲಂತೆ, ಗುರುಗಳು ಹೇಳಿದ್ದು ಗೊತ್ತಿಲ್ವಾ?’
‘ಲೇಯ್ ಆ ತಗಡು ಸ್ವರ್ಗಕ್ಕೆ ಹೋಗಿ ಏನ್ ಮಾಡ್ತೀಯಲೆ. ಅಲ್ಲಿ ರಂಭೆ, ಊರ್ವಶಿ ಎಲ್ಲ ಮುದುಕರಾಗಿದಾರಂತೆ, ಸೋಮರಸ ಬಿಟ್ರೆ ಬೇರೆ ಬ್ರಾಂಡ್ ಸಿಗಲ್ಲಂತೆ’ ಗುಡ್ಡೆ ನಕ್ಕ.
‘ನೋಡು, ಸ್ವರ್ಗ, ನರಕ ಎಲ್ಲ ಇಲ್ಲೇ ಇರೋದು, ಆದ್ರೂ ನಿಂಗೆ ಮೇಲಿನ ಸ್ವರ್ಗನೇ ಬೇಕು ಅಂದ್ರೆ ನಿನ್ ಹೆಂಡ್ತಿ ದಾರಿ ತೋರಿಸ್ತಾಳೆ ಹೋಗು. ‘ನಾರಿ ಸ್ವರ್ಗಕ್ಕೆ ದಾರಿ’ ಅಂತ ಕೇಳಿಲ್ವ?’ ದುಬ್ಬೀರ ಅನುಭವದ ಮಾತಾಡಿದ.