ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀನ ಪ್ರಸಕ್ತಿ

Last Updated 2 ನವೆಂಬರ್ 2020, 19:30 IST
ಅಕ್ಷರ ಗಾತ್ರ

ತುರೇಮಣೆ ಏನೋ ಲೆಕ್ಕಾಚಾರದಲ್ಲಿದ್ದರು. ‘ಏನ್ಸಾ, ಭಾಳ ಲೆಕ್ಕಾಚಾರ ಹಾಕತಿದ್ದರಿ? ಉಪಚುನಾವಣೇಲಿ ಯಾರು ಗೆದ್ದಾರು ಅಂತಾನಾ’ ಅಂದೆ.

‘ಬಡ್ಡಿಹೈದ್ನೆ, ಊರಮ್ಯಾಲೆ ಊರುಬಿದ್ರೆ ಶಾನುಭೋಗರ ಶಲ್ಯಕ್ಕೇನ್ಲಾ! ಯಾರೋ ಒಬ್ಬರು ಗೆಲ್ಲತರೆ ನಮ್ಮುನ್ನ ಮರತೋಯ್ತರೆ. ನಾನು ಮೀಸಲಾತಿಗೆ ಹೋರಾಟ ಮಾಡಬೇಕು ಅಂತಿವ್ನಿ’ ಅಂದರು.

‘ಅಲ್ಲಾ ಸಾ, ಊರು ಹೋಗು ಅಂತಾದೆ ಬಾರು ಬಾ ಅಂತಾದೆ. ಈಗ್ಯಾವ ಮೀಸಲಾತಿ ಕೊಟ್ಟಾರು ಸಾ ನಿಮಿಗೆ’ ಅನುಕಂಪ ತೋರಿದೆ.

‘ಸತಸತಮಾನಗಳಿಂದ ಎಲ್ಲಾ ವ್ಯವಸ್ತೆನೂ ಕುಡುಕ ತೆರಿಗೆದಾರರನ್ನೇ ಹುರಕಂದು ತಿನ್ನತಾದೆ ಕನಯ್ಯಾ. ನಾವ್ಯಾವತ್ತಾದ್ರೂ ಟ್ಯಾಕ್ಸು ಕೊಡಕ್ಕೆ ಗೊಣಗಾಡಿದೀವ್ಲಾ! ಅದಕ್ಕೇ ಸರಕಾರದ ಹುದ್ದೇಲಿ ನಮ್ಮ ಮಕ್ಕಳಿಗೆ ಮೀಸಲಾತಿ ಕೊಡಬೇಕು. ನಮಗೆಲ್ಲಾ ಬಾಟ್ಲಿಬಾಯ್ ಕಾರ್ಡ್ ಕೊಟ್ಟು ಕ್ವಾರ್ಟರ್ ಖರೀದಿ ರೇಟಿಂಗ್ ಮ್ಯಾಲೆ ಬ್ಯಾಂಕುಗಳು ವಸೂಲಾಗದ ಸಾಲ ಕೊಡಬೇಕು, ಆಸ್ಪತ್ರೇಲಿ ಉಚಿತ ಚಿಕಿತ್ಸೆ ಕೊಡಬೇಕು. ಆಮೇಲೆ ಒಂದು ಯಂಡ್ಕುಡಕ ಪೀಠ ಆರಂಬಿಸಿ ಪ್ರತೀವರ್ಸ ಕುಡುಕರತ್ನ ಪ್ರಸಸ್ತಿ ಕೊಡಬೇಕು. ಬಾರಿಂದ ಮನೆಗೆ ಉಚಿತ ದ್ರವಯಾತ್ರೆ ಆಂಬುಲೆನ್ಸ್ ಏರ್ಪಾಡು ಮಾಡಬೇಕು. ಬಾರುಗಳಲ್ಲಿ ನೋ ಯುವರ್ ಕುಡುಕ– ಕೆವೈಕೆ ಡಾಟಾ ಮಡಗಿರಬೇಕು. ದೇಹದೊಳಿಕ್ಕೂ ಸ್ಯಾನಿಟೈಸ್ ಮಾಡುಕ್ಯಂಡು ಸೇಪಾಗಿರ ನಾವು ದೇಸದ ಅಭಿವೃದ್ಧಿಗೆ ಅನಿವಾರ್ಯ. ಪೆಗ್ನೇಶ್ವರರನ್ನ ಬೆಂಬಲಿಸಿ’ ಅಂತ್ಲೇ ಇದ್ದರು.

‘ಸಾ, ಹಿಂಗೆ ಎಷ್ಟು ಕೂಗಿದರೂ ಅಷ್ಟೀಯೆ. ನೀವು ಹೆಂಡಕಾರಣ್ಯ ಪೀನ ಪ್ರಸಕ್ತಿ ಪೀಠ ಓಪನ್ ಮಾಡಿ. ಗುಂಡೇ ತೀರ್ಥ, ತುಂಡೇ ಪ್ರಸಾದ. ಸರ್ಕಾರ ಕೈಯೆತ್ತಿ ಗ್ರಾಂಟು ಕೊಡತದೆ. ಪಾಲೋಯರ್ಸ್ ಹೆಚ್ಚತರೆ! ಆಗ ನೀವು ಹಾಕಿದ ಒಗ್ರಣೆ ಘಾಟು ವಾಸನೆ ಬತ್ತದೆ. ಒಳ್ಳೇ ಅಣ್ತಮ್ಮುನ್ನ ಅಧ್ಯಕ್ಸರನ್ನ ಮಾಡಿ’ ಅಂದೆ.

‘ನಮ್ಮ ಚಂದ್ರುನ ಅಧ್ಯಕ್ಸನ್ನ ಮಾಡಿದ್ರೆ ಸರೋತದೆ. ಅವುನು ಪೆಗ್ಗಾಕದಿದ್ರೂ ಯೇಳಿದಷ್ಟು ಕರೆಟ್ಟಾಗಿ ಮಾಡತನೆ. ನೀನು ಬ್ಯಾಡ’ ಅಂದುದ್ದು ಬೇಜಾರಾಯ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT