ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕೊತ್ತಿಮಿರಿ ಕಥೆ!

Last Updated 20 ಆಗಸ್ಟ್ 2020, 20:40 IST
ಅಕ್ಷರ ಗಾತ್ರ

ರಾಜ್ಯದಾದ್ಯಂತ ಕೊತ್ತಂಬರಿ ಸೊಪ್ಪಿಗೆ ಸಿಕ್ಕ ದಿಢೀರ್ ಜನಪ್ರಿಯತೆ ಕಂಡು ಕಂಗಾಲಾದ ಕರಿಬೇವು, ಪುದೀನಾ, ಮೆಂತ್ಯೆ ಸೊಪ್ಪುಗಳೆಲ್ಲ ತುರ್ತು ಸಭೆ ಸೇರಿದವು. ‘ಏನಿದು ಅನ್ಯಾಯ? ಯಾರ ಬಾಯಲ್ಲಿ ಕೇಳಿದ್ರೂ ಬರೀ ಕೊತ್ತಿಮಿರಿ ಕೊತ್ತಿಮಿರಿ... ನಮಗೇನು ಬೆಲೆನೇ ಇಲ್ವ?’ ಕರಿಬೇವು ಸಿಡಿಮಿಡಿಗೊಂಡಿತು.

‘ಕೊತ್ತಂಬರಿ ಹೋಗಿ ಕೊತ್ತಿಮಿರಿ ಆಗಿದೆ? ಹೆಸರು ಬೇರೆ ಬದಲು! ಜುಜುಬಿ ತಿಂಡಿ ಮೇಲೆ ಉದುರಿಸೋ ಅದಕ್ಕೇ ಇಷ್ಟಿರಬೇಕಾದ್ರೆ ಅಡುಗೆಗೆ ಬಳಸೋ ನಮಗೆಷ್ಟಿರಬೇಕು...’ ಮೆಂತ್ಯೆ ಕೂಡ ಆಕ್ರೋಶ ವ್ಯಕ್ತಪಡಿಸಿತು.

‘ನನಗಿರೋ ಘಮ, ಔಷಧೀಯ ಗುಣ ಅದಕ್ಕೆಲ್ಲಿದೇರಿ?’ ಪುದೀನಾಕ್ಕೂ ಕೋಪ.

‘ಅಂದ್ರೆ? ನನ್ ಘಮ ಏನ್ ಕಡಿಮೆನಾ?’ ಕರಿಬೇವು ಆಕ್ಷೇಪಿಸಿದಾಗ, ‘ಸುಮ್ನಿರಪ್ಪ, ನಿನ್ಯಾರು ತಿಂತಾರೆ? ತಟ್ಟೆಯಿಂದ ತೆಗೆದು ಹಾಕ್ತಾರೆ’ ಪುದೀನಾ ತಿರುಗೇಟು ಕೊಟ್ಟಿತು.

‘ಈಗ ನಮ್ ನಮ್ಮಲ್ಲಿ ಜಗಳ ಬೇಡ. ಈ ಅನ್ಯಾಯದ ಬಗ್ಗೆ ರಾಜಾಹುಲಿಗೆ ದೂರು ಕೊಟ್ರೆ ಹೆಂಗೆ?’ ಮೆಂತ್ಯೆ ಪ್ರಶ್ನೆ.

‘ಅಯ್ಯೋ, ನಿನ್ನೆನೇ ದೂರು ಕೊಟ್ಟೆ. ಆದ್ರೆ ರಾಜಾಹುಲಿ ಸಾಹೇಬ್ರು ಕೊತ್ತಿಮಿರಿ ವಿಷಯ ಬಿಟ್ಟು, ಅರ್ಧ ರಾತ್ರೀಲಿ ಅದನ್ನ ಮಾರ್ತಿದ್ದೋರು ಯಾರು, ಅವರಿಗೆ ಪರ್ಮಿಶನ್ ಕೊಟ್ಟಿದ್ದು ಯಾರು, ಎಳ್ಕಂಡ್ ಬರ್ರಿ ಅವನನ್ನ ಅಂತ ರಾಂಗಾದ್ರು’ ಕರಿಬೇವು ಬೇಸರ ವ್ಯಕ್ತಪಡಿಸಿತು.

‘ಹೌದಾ? ನಮ್ ‘ಬಂಡೆ’ ಸಾಹೇಬ್ರಿಗೆ ಹೇಳ್ಬೇಕಿತ್ತು?’

‘ಹೇಳಿದೆ, ಅವ್ರು ಕೊತ್ತಿಮಿರಿ ಪರವಾಗೇ ಮಾತಾಡಿದ್ರು. ಅರ್ಧ ರಾತ್ರೀಲಿ ಕೊತ್ತಿಮಿರಿ ಯಾಕ್ರೀ ಮಾರಬಾರ್ದು? ಏನ್ ತಪ್ಪು? ನೀವು ಕೊತ್ತಿಮಿರೀಲಿ ಕಲ್ಲು ಹುಡುಕ್ತೀರಾ?’ ಅಂತ ಎಗರಾಡಿದ್ರು.

‘ಥೋತ್ತೆರಿ, ಹೋಗ್ಲಿ ನಮ್ ಕುಮಾರಣ್ಣಂಗಾದ್ರೂ ಹೇಳಿದ್ರೆ ಬೆಂಡೆತ್ತಿರೋರು...’

‘ಅವರಿಗೂ ಹೇಳ್ದೆ ಬಿಡಪ್ಪ...’

‘ಹೌದಾ? ಏನಂದ್ರು?’

‘ಈ ಕೊತ್ತಿಮಿರಿಗೆ ಇಷ್ಟು ಡಿಮ್ಯಾಂಡ್ ಬರುತ್ತೆ ಅಂತ ಎರಡು ವರ್ಷದ ಮೊದ್ಲೇ ನಂಗೆ ಗೊತ್ತಿತ್ತು ಅಂದ್ರು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT