ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮಂತ್ರಿ ಆಗ್ತಾನ್ರೀ...!

Last Updated 18 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಮಲ್ಲೇಶಿ ಮುಂಜಾನೆಯೇ ಮಗನನ್ನು ಎತ್ತಿ ಮೂಲೆಯಲ್ಲಿ ಒಗೆದು ತದಕುತ್ತಿದ್ದ. ಒದೆತಕ್ಕೆ ಮಗ ಮಹಾರಾಜ ಊರ ಅಗಲ ಬಾಯಿ ತೆಗೆದು ಚೀರಿ ಅಳುತ್ತಿದ್ದ.

ಅಡುಗೆ ಮನೆಯಿಂದ ಓಡಿಬಂದ ಮಲ್ಲೇಶಿಯ ಮಡದಿ ಮಾದೇವಿ ‘ಏನ್ರೀ ಇದ್ದೊಬ್ಬ ಮಗನ್ನ ಹಿಂಗ್ ದನಕ್ಕ ಬಡದಂಗ ಬಡ್ಯಾಕತ್ತೀರಿ, ನಿಮಗೇನ್ ಮನುಷ್ಯತ್ವ ಐತಿಲ್ಲೋ. ಬಿಡ್ರೀ ಕೈಯ್ ಗಿಯ್ ಮುರಿದಗಿರದೀರಿ’ ಎಂದು ಗಂಡನನ್ನು ಎಳೆದು ಹೊರಗೆ ಒಗೆದಳು.

‘ಅವ್ನ ಕೈ ಮುರಿದ ತೀರತೈನಿ. ಶ್ಯಾಣ್ಯಾ ಆಗಲಿ ಅಂತಹೇಳಿ, ದಿನಾ ಬಂಡಿ ತುಪ್ಪಾ ತಿನ್ಸತಿದ್ದಿ. ತಿಂದು ಬಲಂಡ್ ಆಗಿ ಮೈ ಬೆಳಿಸ್ಯಾನ್. ಆದ್ರ ತಲಿಯಾಗ ಹೆಂಡಿ ತುಂಬೇತಿ. ಕೈಯಿಲ್ಲದ ಬಡವರ ಹುಡುಗ ಕಾಲಿನಿಂದ ಪರೀಕ್ಷೆ ಬರೆದು ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗ್ಯಾನ್. ಮನೆ ಕೆಲಸದಾಕಿ ಮಗ ಗೌಂಡಿ ಕೆಲಸ ಮಾಡುತ್ತ ಓದಿ ಹೆಮ್ಮೆಯ ಸಾಧನೆ ಮಾಡ್ಯಾನ್. ಸ್ವತಃ ಮಂತ್ರಿಗಳೇ ಅವನ ಜೋಪಡಿಗೆ ಹೋಗಿ ಹಾರ ಹಾಕಿ, ಬಹುಮಾನ ಕೊಟ್ಟು ಸನ್ಮಾನಿಸ್ಯಾರ್. ಇವನಿಗೆ ಬೆಣ್ಣೆ ತುಪ್ಪ ತಿನಿಸಿ, ಟ್ಯೂಷನ್ ಕೊಡಿಸಿ, ಬೇಕಾದಷ್ಟು ಸವಲತ್ತು ಮಾಡಿಕೊಟ್ಟರೂ ಪರೀಕ್ಷೆಯಲ್ಲಿ ಫೇಲ್ ಆಗಿ ನನ್ನ ಮರ್ಯಾದೆ ತೆಗೆದಾನ್’ ಎಂದು ಮಲ್ಲೇಶಿ ಉರಿದು ಬಿದ್ದ.

‘ಮಹಾ ಮರ್ಯಾದಸ್ತರು ನೀವೆಷ್ಟು ಮಾರ್ಕ್ಸ್ ತೆಗೊಂಡು ಪಾಸ್ ಆಗೀರಿ ಅನ್ನುದು ನಮಗೇನ್ ಗೊತ್ತಿಲ್ಲೇನ್? ನಮ್ಮಪ್ಪ ಕಂಡಾಬಟ್ಟಿ ರೊಕ್ಕ ಕೊಟ್ಟು ನಿಮಗ ನೌಕರಿ ಕೊಡಿಸ್ಯಾನ. ಅಷ್ಟಕ್ಕೂ ಹೈಕ್ಲಾಸ್ ಪಾಸ್ ಆದವ್ರು ನೌಕರಿ ಸಿಗದ ಉದ್ಯೋಗ ಖಾತ್ರಿ ಯೋಜನೇಲಿ ದಿನಗೂಲಿ ಮಾಡಕತ್ತಾರ. ಫೇಲ್ ಆದವರು ಕಾರ್ಪೊರೇಟರ್, ಎಂಎಲ್ಎ, ಮಂತ್ರಿ ಆಗ್ಯಾರ್. ನಮ್ಮ ಮಗಾ ಫೇಲ್ ಆದ್ರ ಜೀವನ ಅಲ್ಲಿಗೆ ಮುಗಿಲಿಲ್ಲ. ಜನರ ಮನಸು ಗೆದ್ದು ಮಂತ್ರಿ ಆಗ್ತಾನ್’ ಮಾದೇವಿ ಹೇಳುತ್ತಲೇ ಇದ್ದಳು.

‘ನನ್ನ ಮಗ ಗಟ್ಟಿ ಆಳು. ಏನೂ ಆಗ್ಲಿಲ್ಲಂದ್ರ ಹೊಲ ಉಳುಮೆ ಮಾಡಿಯಾದರೂ ಜೀವನ ಮಾಡ್ತಾನ್. ಓದಿದವರು ಎಷ್ಟು ಕಡೆದು ಕಟ್ಟೆ ಹಾಕ್ಯಾರ್? ವಯಸಿಗೆ ಬಂದ ಮಗನನ್ನ ಸ್ನೇಹಿತನಂತೆ ಕಾಣಬೇಕು...’ ಮಲ್ಲೇಶಿ ಬಾಯಿಮುಚ್ಚಿಕೊಂಡು ಕೇಳಿಸಿಕೊಳ್ಳುತ್ತಾ ಕುಳಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT