ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪಟಾಕಿ ಫಜೀತಿ

Last Updated 10 ನವೆಂಬರ್ 2020, 19:22 IST
ಅಕ್ಷರ ಗಾತ್ರ

ಪಟಾಕಿ ಚೀಟಿ ಪದ್ಮಾ, ಪಟಾಕಿ ಜೊತೆ ರೇಷ್ಮೆ ಸೀರೆ ಗಿಫ್ಟ್ ತಂದು ಸುಮಿಗೆ ಕೊಟ್ಟಳು.

‘ಈ ಪಟಾಕಿ ಬೇಡ, ಹಸಿರು ಪಟಾಕಿ ಕೊಡು’ ಎಂದಳು ಸುಮಿ.

‘ಬೇಕಾದ್ರೆ ಹಸಿರು ಕಲರ್ ರೇಷ್ಮೆ ಸೀರೆ ಕೊಡ್ತೀನಿ, ಹಸಿರು ಪಟಾಕಿ ಕೊಡಕ್ಕಾಗಲ್ಲ’ ಅಂದಳು.

‘ಈ ಪಟಾಕಿ ವಾಪಸ್ ತಗೊಂಡು, ಅದರ ಬದಲು ರೇಷ್ಮೆ ಸೀರೆಯ ಬ್ಲೌಸ್‍ನ ಸ್ಟಿಚ್ಚಿಂಗ್ ಚಾರ್ಜ್ ಕೊಡಿ’ ಎಂದ ಶಂಕ್ರಿ.

‘ವಾಪಸ್ ತಗೊಳ್ಳೋಲ್ಲ, ಬೇಕಾದ್ರೆ ಪಟಾಕಿ ಹೊಡೆಯಿರಿ, ಇಲ್ಲಾಂದ್ರೆ ತಿಪ್ಪೆಗೆ ಸುರಿಯಿರಿ’ ಎಂದು ಪದ್ಮಾ ಸಿಟ್ಟಿನಿಂದ ಹೇಳಿ ಹೋದಳು.

ಶಂಕ್ರಿ ಮನೇಲಿ ಪಟಾಕಿ ಇರುವ ವಿಷಯ ತಿಳಿದು ನೆರೆಹೊರೆ ಜನ ಧಾವಿಸಿ ಬಂದರು.

‘ನಮ್ಮ ಏರಿಯಾದಲ್ಲಿ ಈ ಬಾರಿ ಪಟಾಕಿ ಹಚ್ಚಬಾರದು ಅಂತ ತೀರ್ಮಾನ ಮಾಡಿದ್ದೀವಿ. ಆದರೂ ನೀವು ಅಪಾಯಕಾರಿ ಪಟಾಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಕದ್ದುಮುಚ್ಚಿ ಹೊಡೆಯಲು ಪ್ಲಾನ್ ಮಾಡ್ತಿದ್ದೀರಿ’ ಅಂತ ಒಬ್ಬ ರೇಗಿದ.

‘ಪಟಾಕಿಯನ್ನು ಕದ್ದುಮುಚ್ಚಿ ಹೊಡೆಯಲು ಸಾಧ್ಯನಾ? ಸೌಂಡ್ ಕೇಳಿಸುತ್ತಲ್ಲ...’ ಅಂದ ಶಂಕ್ರಿ.

‘ಅದೆಲ್ಲಾ ಗೊತ್ತಿಲ್ಲ, ಹಾನಿಕಾರಕ ಪಟಾಕಿಯನ್ನು ಕೂಡಲೇ ವಿಲೇವಾರಿ ಮಾಡಬೇಕು’ ಎಂದರು.

‘ಆಗಲಿಬಿಡಿ, ಊರಿನಿಂದ ಆಚೆ ತಗೊಂಡು ಹೋಗಿ ಸುಟ್ಟು ಬರ್ತೀವಿ’ ಅಂದಳು ಸುಮಿ.

‘ಸುಡಕೂಡದು, ಪಟಾಕಿ ಸುಟ್ಟರೆ ವಾಯುಮಾಲಿನ್ಯ, ಪರಿಸರ ನಾಶ ಆಗುತ್ತೆ’ ಅಂದ ಇನ್ನೊಬ್ಬ.

‘ಆಳುದ್ದ ಹಳ್ಳ ತೆಗೆದು ಮಣ್ಣಿನಲ್ಲಿ ಹೂತುಬಿಡ್ತೀವಿ’.

‘ಬೇಡ, ಮಣ್ಣೂ ಕಲುಷಿತವಾಗುತ್ತದೆ, ನೀರಿನಲ್ಲೂ ವಿಸರ್ಜನೆ ಮಾಡಬೇಡಿ, ನೀರು ಮಲಿನ ಆಗುತ್ತೆ... ಗಾಳಿ, ನೀರು, ಮಣ್ಣಿಗೆ ಸೋಂಕದಂತೆ ವಿಲೇವಾರಿ ಮಾಡಬೇಕು...’ ಎಂದು ಎಚ್ಚರಿಕೆ ಕೊಟ್ಟು ಹೋದರು.

ಮಡಿಲಲ್ಲಿ ಕೆಂಡ ಕಟ್ಟಿಕೊಂಡಂತೆ ಮನೇಲಿ ಪಟಾಕಿ ಇಟ್ಟುಕೊಂಡು ಶಂಕ್ರಿ, ಸುಮಿ ಕಂಗಾಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT