ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಗೆಳೆಯನ ಗುಟುರು

Last Updated 8 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಅಮೆರಿಕದ ಚುನಾವಣೆಯಲ್ಲಿ ‘ಜೋ’ ಬೀಳುತ್ತಾನೆ ಎಂದುಕೊಂಡಿದ್ದ ನಮೋಗುರುಗಳು, ಫಲಿತಾಂಶದ ನಂತರ ‘ಜೋ’ ಭದ್ರನು ಹಾಗಿದ್ದರೆ ಎಂದುಕೊಂಡು ಫೋನು ಮಾಡಿ ಶುಭ ಹಾರೈಸಿದರು. ಪ್ರೊಟೊಕಾಲೆಂಬ ಕಾಟಾಚಾರವ ಬಿಡಲುಂಟೇ. ಹಾಗೆಂದು ಗೆಳೆಯ ಟ್ರಂಪಣ್ಣನನ್ನು ಮರೆಯಲುಂಟೇ. ಸರಿ, ಅವನಿಗೂ ಕರೆ ಮಾಡಿದರು.

ಶ್ವೇತಭವನದಿಂದ ಗಂಟುಮೂಟೆ ಕಟ್ಟುತ್ತಿದ್ದ ಟ್ರಂಪಣ್ಣನಿಗೆ ರೇಗಿಹೋಯಿತು. ‘ಎಲ್ಲಾ ಮೋಸ... ವೋಟು ಕದ್ದಿದ್ದಾರೆ ಅವ್ರು... ನಿಮ್ಮವ್ರೂ ನಂಗೆ ವೋಟು ಹಾಕಿದಂತಿಲ್ಲ’ ಗುಟುರು ಹಾಕಿದ.

‘ಹೌಡಿ ಮೋದಿ ಕಾರ್ಯಕ್ರಮದಲ್ಲಿ ‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಅಂತ ಘಂಟಾಘೋಷ ಮಾಡಿದ್ದೆ. ನೀನು ಯಾಕಪ್ಪ ಆ ನಿನ್ನ ಕೊನೇ ಭಾಷಣದಲ್ಲಿ ಭಾರತ ಕೊಳಕು, ಅಲ್ಲಿನ ಗಾಳಿ ಕೊಳಕು ಅಂತೆಲ್ಲ ಅಂದೆ... ಅಷ್ಟೇ ಸಾಲದು ಅಂತ ಕೊರೊನಾ ಟೆಸ್ಟ್ ಸರಿಯಾಗಿ ಮಾಡ್ತಿಲ್ಲ ಅಂತನೂ ನಮಗೆ ಬೈದೆ... ಏನು ಬಂತಪ್ಪ ಅಷ್ಟೆಲ್ಲ ಬೈದು’ ನಮೋಗುರುಗಳು ಮೆಲ್ಲಗೆ ಕಾಲೆಳೆದರು.

‘ನಾನು ಹೇಳಿದ್ದು ಸತ್ಯ ಅಲ್ಲವಾ... ನೀವೆಲ್ಲರೂ ಮೋಸಗಾರ್‍ರು...’ ಗುರ್‍ರೆಂದ ಟ್ರಂಪಣ್ಣ ‘ನಾನೇನ್ ಸುಮ್ನೆ ಕುತ್ಕೋತೀನಿ ಅಂದ್ಕಂಡ್ಯಾ... ನಮ್ಮ ಸುಪ್ರೀಂ ಕೋರ್ಟಿಗೆ ಹೋಗ್ತೀನಿ.... ಅಲ್ಲಿರೋ 9 ನ್ಯಾಯಾಧೀಶರಲ್ಲಿ 6 ಜನರನ್ನು ಅಲ್ಲಿ ಕೂರಿಸಿದ್ದೇ ನಾನು...’ ಟ್ರಂಪಣ್ಣ ಗಹಗಹಿಸಿದ.

‘ಅದೆಲ್ಲ ಯಾಕಪ್ಪಾ... ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣ, ಆಪರೇಷನ್ ಕಮಲಾ... ಈ ಟ್ರಿಪಲ್ ಈಕ್ವೇಶನ್ ಸರಿಯಾಗಿ ಮಾಡಿದ್ರೆ ನೀನೇ ಇನ್ನೂ ನಾಕ್ ವರ್ಷ ಶ್ವೇತಭವನದಲ್ಲಿ ಕೂರಬಹುದು’ ನಮೋಗುರುಗಳು ಕಕ್ಕುಲಾತಿಯಿಂದ ಹೇಳಿದರು.

‘ಕಮಲಾ’ ಹೆಸರು ಕೇಳುತ್ತಿದ್ದಂತೆ ಹಾರಿಬಿದ್ದ ಟ್ರಂಪ್, ‘ಬ್ಯಾಡೋ ಮಾರಾಯ... ಇಲ್ಲಿರೋ ನಿಮ್ಮ ಒಬ್ಬಾಕಿ ಕಮಲಾನೆ ಸಾಕು. ಆಪರೇಷನ್ ಕಮಲಾ, ಕುದುರೆ ವ್ಯಾಪಾರ, ಅಂಥವೆಲ್ಲ ನಿಮಗೇ ಸರಿ... ನಮ್ಮ ಸೂತ್ರಗಳೇ ಬೇರೆ’ ಎಂದು ಫೋನು ಕುಕ್ಕಿದ. ಇತ್ತ ನಮೋಗುರುಗಳು ಬಿಹಾರದ ‘ಅಬ್ ಕೀ ಬಾರ್’ಗೆಂದು ಹೊಸ ಸೂತ್ರ ಹೆಣೆಯತೊಡಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT