ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ಗಿರಾಕಿ!

Last Updated 3 ಸೆಪ್ಟೆಂಬರ್ 2020, 20:15 IST
ಅಕ್ಷರ ಗಾತ್ರ

ಇನ್‌ಸ್ಪೆಕ್ಟರ್‌ ಸ್ಟೇಶನ್ನಿಗೆ ಬರುತ್ತಲೇ ಸಿಬ್ಬಂದಿಯನ್ನು ವಿಚಾರಿಸಿದರು. ‘ಏನ್ರಿ, ರಾತ್ರಿ ಯಾವುದಾದ್ರು ಕೇಸ್ ರಿಪೋರ್ಟ್ ಆಗಿದಾವ?’

‘ಸರ್, ಒಬ್ಬನ್ನ ಕಳ್ಳ ಅಂತ ಬಾರ್‍ನೋರೇ ಹಿಡ್ಕಂಡ್ ಬಂದು ಕೊಟ್ಟಿದಾರೆ. ಆಸಾಮಿ ರಾತ್ರಿ ಎಲ್ಲ ಬರೀ ಸಿನಿಮಾ ಡೈಲಾಗ್ ಹೊಡೀತಿದ್ದ ಸಾ’ ದಫೇದಾರರು ವರದಿ ಒಪ್ಪಿಸಿದರು.

‘ಹೌದಾ? ಏನ್ ಡೈಲಾಗು?’ ಇನ್‌ಸ್ಪೆಕ್ಟರಿಗೆ ಕುತೂಹಲ.

‘ರಾತ್ರಿ ಅವನನ್ನ ಲಾಕಪ್‍ಗೆ ಹಾಕಕ್ಕೆ ಹೋದ್ರೆ ‘ಆನೆ ನಡೆದದ್ದೇ ದಾರಿ, ತಾಕತ್ ಇದ್ರೆ ಕಟ್ಟಿ ಹಾಕ್ರೋ’ ಅಂತಾನೆ! ಯಾರೋ ನೀನು? ಅರ್ಧ ರಾತ್ರೀಲಿ ಬಾರ್‌ಗ್ಯಾಕೆ ಹೋಗಿದ್ದೆ ಅಂತ ಕೇಳಿದ್ರೆ ‘ನಾನು ಯಾರು, ಯಾವ ಊರು, ಇಲ್ಲಿ ಯಾರೂ ಬಲ್ಲೋರಿಲ್ಲ’ ಅಂತ ಹಾಡು ಹೇಳ್ತಾನೆ. ಲಾಠೀಲಿ ಎರಡು ಬಿಟ್ಟೆ. ‘ಇವು ತೋಳಲ್ಲ ಕಣ್ರಲೆ, ತೊಲೆ... ಆಮೇಲೆ ನೋಡ್ಕತೀನಿ’ ಅಂತ ಧಮಕಿ ಹಾಕ್ತಾನೆ!’

‘ಹೌದಾ? ಅಲೆ ಇವ್ನ, ಆಮೇಲೆ?’

ಇನ್‌ಸ್ಪೆಕ್ಟರಿಗೆ ನಗು.

‘ಯಾರಲೆ ನೀನು? ಕಳ್ಳನಾ, ಡ್ರಗ್ ಸಪ್ಲಯರ‍್ರಾ, ಟೆರರಿಸ್ಟಾ ಅಂತ ಕೇಳಿದ್ರೆ ‘ಹೇಳಲ್ಲ, ಒಂದ್ಸಲ ನಾನು ಕಮಿಟ್ ಆದ್ರೆ ನನ್ ಮಾತು ನಾನೇ ಕೇಳಲ್ಲ’ ಅಂತ ಮತ್ತೊಂದ್ ಸಿನಿಮಾ ಡೈಲಾಗ್ ಹೊಡೆದ. ನಮಗೂ ಸಿಟ್ಟು ಬಂತು. ಚೆನ್ನಾಗಿ ರುಬ್ಬಿ ಲಾಕಪ್‍ಗೆ ಹಾಕಿದ್ವಿ’ ದಫೇದಾರರು ವಿವರಿಸಿದರು.

‘ಸರಿ, ಕರ್ಕಂಡ್ ಬನ್ನಿ ಅವನನ್ನ...’ ಇನ್‌ಸ್ಪೆಕ್ಟರ್‌ ಆದೇಶಿಸಿದರು.‌

ಲಾಕಪ್‍ನಿಂದ ಕುಂಟುತ್ತ ಬಂದ ಆರೋಪಿ ಇನ್‌ಸ್ಪೆಕ್ಟರನ್ನ ಕಂಡ ಕೂಡಲೆ ‘ಸಾರ್, ನಾನು ತೆಪರೇಸಿ ಅಂತ, ಕಳ್ಳ ಅಲ್ಲ. ನಿನ್ನೆ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಆಗಿದ್ವಲ್ಲ, ಸ್ವಲ್ಪ ಜಾಸ್ತಿನೇ ಕುಡಿದೆ. ನಾನೇ ಕೊನೇ ಗಿರಾಕಿ. ಬಾತ್‌ರೂಂಗೆ ಹೋಗಿ ನಿಲ್ಲೋಕಾಗದೆ ಅಲ್ಲೇ ಬಿದ್ದೆ. ಬೆಳಗಿನ ಜಾವ ಬಾರ್‌ನೋರು ನನ್ನ ಕಳ್ಳ ಅಂತ ಇಲ್ಲಿಗೆ ಹಿಡ್ಕಂಡ್ ಬಂದಿದಾರೆ...’ ಎಂದ.

‘ಮತ್ತಿದನ್ನ ರಾತ್ರಿ ಒದೆ ಬೀಳೋಕೆ ಮುಂಚೆ ಯಾಕೆ ಹೇಳಲಿಲ್ಲ?’

‘ಎಲ್ಲ ದೇವರ ಆಟ ಸಾ, ಒಳಗಿದ್ನಲ್ಲ, ಪರಮಾತ್ಮ...’ ತೆಪರೇಸಿ ಕೈ ಮುಗಿದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT