ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಅಭ್ಯರ್ಥಿಯೇ ಚೇಂಜ್ !

Published 13 ಮಾರ್ಚ್ 2024, 23:40 IST
Last Updated 13 ಮಾರ್ಚ್ 2024, 23:40 IST
ಅಕ್ಷರ ಗಾತ್ರ

‘ಚೇಂಜ್‌ ಮಾಡ್ತೀನಿ, ಎಲ್ಲ ಬದಲಿಸಿಬಿಡ್ತೀನಿ...’ 

‘ಏನೇನೋ ಬಡಬಡಿಸ್ತಿದೀರಲ್ರೀ, ಎದ್ದೇಳ್ರೀ ಮೇಲೆ’ ನೀರು ಎರಚಿ ನನ್ನನ್ನು ಎದ್ದೇಳಿಸಿದಳು ಹೆಂಡತಿ. 

‘ಇಷ್ಟೊತ್ತು ನಾನು ಕಂಡಿದ್ದು ಕನಸಾ?’ ಬೇಸರದಲ್ಲಿ ಕೇಳಿದೆ. 

‘ನಾಲ್ಕೂವರೆ ವರ್ಷಗಳಿಂದ ಮಲಗೇ ಬಿಟ್ಟಿದ್ದೀರೇನೋ ಎನ್ನುವಂತಿದ್ದವರು ಏನು ಈಗೀಗ ತುಂಬಾ ಆ್ಯಕ್ಟೀವ್‌ ಆಗಿಬಿಟ್ಟಿದ್ದೀರಿ’ ವ್ಯಂಗ್ಯವಾಗಿ ಕೇಳಿದಳು ಹೆಂಡತಿ. 

‘ನೋಡು, ಯಾವಾಗಲೂ ಎಚ್ಚರದಿಂದಿದ್ದರೆ ಯಾರ ಗಮನವನ್ನೂ ಸೆಳೆಯೋದಿಕ್ಕಾಗಲ್ಲ. ಸಮಯ ಬಂದಾಗ ಎದ್ದೇಳಬೇಕು, ಎದ್ದು ಸದ್ದು ಮಾಡಬೇಕು’. 

‘ಅದ್ ಸರಿ, ಅದೇನೋ ಬದಲಿಸಿಬಿಡ್ತೀನಿ ಅಂತ ಬಡಬಡಿಸ್ತಿದ್ರಲ್ಲ, ಏನದು?’ 

‘ದೇಶದ ಸಂವಿಧಾನವನ್ನ ಬದಲಿಸ್ತೀನಿ’. 

‘ಮೊದಲು ಮನೆಯಲ್ಲಿ ಟೀವಿಯ ರಿಮೋಟ್‌ ತೆಗೆದುಕೊಂಡು ಚಾನೆಲ್‌ ಬದಲಿಸೋಕಾಗುತ್ತೋ ನೋಡಿ’.

‘ಕನಸು ಕಾಣೋದಕ್ಕೆ ಕಾಸು ಕೊಡಬೇಕಾ? ’

‘ನೀವು ಹೀಗೇ ಕನಸು ಕಾಣ್ತಾ ಇರಿ. ನಾನೇ ಎಲೆಕ್ಷನ್‌ಗೆ ನಿಲ್ಲೋಕೆ ರೆಡಿಯಾಗ್ತಿದೀನಿ.. ಗೆದ್ದು ಮಂತ್ರಿನೂ ಆಗ್ತೀನಿ’ ಗತ್ತಿನಲ್ಲಿ ಹೇಳಿದಳು ಪತ್ನಿ. 

‘ನೀನು ಎಲೆಕ್ಷನ್‌ಗೆ ನಿಲ್ತೀಯಾ’ ಹೊಟ್ಟೆಯಲ್ಲಿ ಸಂಕಟವಾದರೂ ತೋರಗೊಡದೆ ಕೇಳಿದೆ. 

‘ನಿಂತರೆ ತಪ್ಪೇನು?’ ಪ್ರಶ್ನೆ ಎಸೆದಳು ಹೆಂಡತಿ.

‘ರಾಣಿ ಹಾಗೆ ಇದ್ದವಳು ನೀನು. ನಿನಗ್ಯಾಕೆ ಎಲೆಕ್ಷನ್‌ ಸಹವಾಸ?’ 

‘ನಾನು ಚುನಾವಣೆಗೆ ನಿಲ್ಲೋಕೆ ಮುಂಚೆಯೇ ನಿಮಗೆ ಹೆದರಿಕೆ ಪ್ರಾರಂಭವಾದಂತಿದೆ’ ನಕ್ಕಳು ಪತ್ನಿ. 

‘ಹಾಗಲ್ಲ, ರಾಣಿ ರಾಣಿಯ ಹಾಗೆಯೇ ಇರ
ಬೇಕು, ಸೇವಕಿ ಆಗೋದೇಕೆ? ಸುಖದ ಸುಪ್ಪತ್ತಿಗೆ
ಯಲ್ಲಿರೋಳು ನೀನು, ಎಮ್ಮೆಲ್ಲೆ, ಎಂಪಿಗಳ ರೀತಿ ಬೀದಿಯಲ್ಲಿ ಕೆಲಸ ಮಾಡೋಕಾಗುತ್ತಾ?’ 

‘ಪ್ರಜಾಪ್ರಭುತ್ವ ರೀ ಇದು. ರಾಜ–ರಾಣಿಯರ ಪ್ರಶ್ನೆ ಬರಲ್ಲ. ಇಲ್ಲಿ ಪ್ರಜೆಗಳೇ ಪ್ರಭುಗಳು. ನಾನೂ ಪ್ರಜೆ ಆಗಿರೋದರಿಂದ ಪ್ರಭುವೂ ಆಗಬಹುದಲ್ಲ’ ಪಾಠ ಮಾಡುತ್ತಾ ಟಿ.ವಿ. ಆನ್‌ ಮಾಡಿದಳು ಪತ್ನಿ.

ಬ್ರೇಕಿಂಗ್‌ ನ್ಯೂಸ್ ಬರ್ತಾ ಇತ್ತು. ‘ಬದಲಿಸ್ತೀನಿ ಎಂದ ಕ್ಷೇತ್ರದ ಸಂಸದನನ್ನೇ ಪಕ್ಷ ಬದಲಿಸಲಿದೆಯಂತೆ!’ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT