ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತೆಗೆದು ನಮೋ ಭಾರತ ಅಂತ ಮಾಡಿದ್ರ...

Last Updated 18 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

‘ಆಂಟಿರೀ... ಅಂತೂ ಈ ವರ್ಷ ದಸರಾ ಪರಿಶುದ್ಧವಾಗಿ ನಡೀತದರೀ’– ಗೆಳತಿಯ ಮಗಳು ಖುಷಿಯಿಂದ ಉಲಿದಳು. ಸಂಭ್ರಮ ದಿಂದ ನಡೆಯುತ್ತೆ ಅಂತ ಈವರೆಗೆ ಕೇಳಿದ್ದೆ. ಆದರೆ ಇದೇನಪ್ಪ ಹೊಸ ಪರಿಭಾಷೆ...?

‘ಶುದ್ಧ ಸಾಹಿತಿಗಳು ದಸರಾ ಉದ್ಘಾಟಿಸ್ತಾರ ಅಂದ್ರ, ಇಷ್ಟು ವರ್ಷದಾಗ ಈ ಸಲ ಪರಿಶುದ್ಧ ವಾಗಿ ನಡೀತದ ಅಂದ್ಹಂಗಾತಿಲ್ರೀ. ನಮ್ಮವ್ವಗ ಹೇಳೀನ್ರಿ. ನೀ ಸುಳ್ಳೆ ಆ ಟೈಮಿಗಿ ಏನರ ಕಾರಬಾರ ಹಚ್ಚಬ್ಯಾಡ, ನಾನಂತೂ ಈ ಸಲ ದಸರಾ ನೋಡಾಕ ಹೋಗಾಕಿನೇ ಅಂತ’ ಇಷ್ಟುದ್ದ ವಿವರಿಸಿದಳು.

‘ಮತ್ ಹೀಂಗ ಹರಕು ಜೀನ್ಸ್, ಟೀ ಶರ್ಟ್ ಹಾಕ್ಕೊಂಡು ಹೋಗಬ್ಯಾಡ... ನಿಮ್ಮವ್ವನ ಮಡಿಸೀರಿ ಸುತ್ತಿಕೊಂಡು ಹೋಗವಾ’ ಛೇಡಿಸಿದೆ. ‘ಮಡಿಸೀರಿ ಯಾಕ್ರಿ... ಮೈಸೂರ್ ಸಿಲ್ಕ್ ಸೀರಿನೆ ಉಡತೀನ್ರಿ’ ಎಂದು ಹೆಮ್ಮೆಯಿಂದ ಬೀಗಿದಳು.

‘ಮತ್ತೇನವಾ... ಗುರುತ್ವಾಕರ್ಷಣೆ ಬಗ್ಗೆ ನ್ಯೂಟನ್ನನಿಗಿಂತ ಮದ್ಲಿಗಿ ನಮ್ಮ ಮಂದಿಗಿ ಗೊತ್ತಿತ್ತು, ತಾಳೆಗರಿಯೊಳಗ ಬರದಾರ ಅಂತ ಎಚ್‍ಆರ್‍ಡಿ ಮಂತ್ರಿಗೋಳು ಹೇಳ್ಯಾರಲ್ಲ... ಆ ತಾಳೆಗರಿ ಎಲ್ಲಿ ಸಿಕ್ಕಾವಂತ?’ ಕೇಳಿದೆ.

‘ಬರೋಬ್ಬರಿ ಹೇಳ್ಯಾರ. ನ್ಯೂಟನ್ನನ ತೆಲಿ ಮ್ಯಾಗ ಸೇಬಿನ ಹಣ್ಣು ಬೀಳೂದಕ್ಕಿಂತ ಎಷ್ಟೋ ಮದ್ಲಿಗೆ ಇಲ್ಲಿ ಕೆಲಸ ಮಾಡೂ ಮಂದಿ ತೆಲಿ ಮ್ಯಾಲ ತೆಂಗಿನಕಾಯಿ ಬಿದ್ದದ. ನಮ್ಮ ಸಂಸ್ಕೃತಿ, ಪರಂಪರೆ ಬಗ್ಗಿ ಒಂದೀಟರ ಅಭಿಮಾನ ಪಡ್ರಿ’ ಭಾಷಣ ಕುಟ್ಟಿದಳು.

‘ಜೆಎನ್‍ಯು ಹೆಸರು ತೆಗದು ಮೋದಿ ಹೆಸರಿಡ್ರಿ ಅಂತ ಡೆಲ್ಲಿ ಬಿಜೆಪಿ ಸಂಸದರು ಹೇಳ್ಯಾರ. ಹಂಗ ನೆಹ್ರೂ, ಗಾಂಧಿ ಹೆಸರು ಎಲ್ಲೆಲ್ಲಿ ತಗದು ಮೋದಿ ಹೆಸರಿಟ್ಟರ ಸೂಕ್ತ ಅಂತ ವಿಶ್ಲೇಷಣೆ ಮಾಡಿ, ನಾಳಿಗಿ ಕಳಿಸಬೇಕ್ರಿ. ರಗಡ ಕೆಲಸದ’ ಎನ್ನುತ್ತ ಹೊರಟಳು.

‘ಸಣ್ಣಪುಟ್ಟದು ಎದಕ್ಕ... ಬದ್ಲು ಮಾಡಿದ್ರೆ ದೊಡ್ಡದೇ ಮಾಡ್ರಿ. ಭಾರತ ತೆಗೆದು ನಮೋ ಭಾರತ ಅಂತ ಮಾಡಿದ್ರ, ಬ್ಯಾರೆ ದೇಶದವ್ರೂ ಸಹಿತ ಹೇಳೂಮುಂದ ನಮಸ್ಕಾರ ಮಾಡಿದಂಗ ಆಗ್ತದ. ಅವ್ರ ಹೆಸರೂ ಸೇರಿಸಿದಂಗ ಆಗ್ತದ’ ಎಂದೆ. ‘ಬಂಗಾರದಂಥ ಮಾತು ಹೇಳಿದ್ರಿ... ಮ್ಯಾಲಿನವ್ರಿಗಿ ಈಗ್ಲೇ ಹೇಳ್ತೀನ್ರಿ’ ನೆಗೆದಾಡುತ್ತ ಫೋನು ಹಚ್ಚತೊಡಗಿದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT