ಮಂಗಳವಾರ, ಆಗಸ್ಟ್ 3, 2021
28 °C

ಚುರುಮುರಿ | ಹೊಸ ಸಜೆಷನ್‌

ಮೋಹನ್ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಸ್ಕೂಲ್ ಓಪನ್ ಆದ್ಮೇಲೆ ಹೇಗಿರಬೇಕೆಂದು ಮಗಳು ಚಿನ್ನುಗೆ ಬುದ್ಧಿವಾದ ಹೇಳುತ್ತಿದ್ದಳು ಪದ್ದು.

‘ಸ್ಕೂಲ್ ಬಸ್ಸಲ್ಲಿ, ಸ್ಕೂಲಲ್ಲಿ ಯಾರ ಪಕ್ಕಾನೂ ಕೂತುಕೋಬೇಡ, ಒಬ್ಬಳೇ ಕೂತುಕೋ’.

‘ಹೋದ್ವರ್ಷ, ಬಸ್ಸಲ್ಲಿ ಮತ್ತೆ ಸ್ಕೂಲಲ್ಲಿ ಒಬ್ಬೊಬ್ಬಳೇ ಇರ್ಬೇಡ, ಯಾವಾಗ್ಲೂ ಯಾರ ಜೊತೆಯಾದ್ರೂ ಇರು ಅಂತ ಹೇಳ್ತಿದ್ದಲ್ಲಮ್ಮ’.

ಕಳೆದ ವರ್ಷ ಅಮ್ಮ ಹೇಳುತ್ತಿದ್ದ ಬುದ್ಧಿಮಾತುಗಳನ್ನು ನೆನಪಿಸಿದಳು ಚಿನ್ನು.

‘ಯಾರತ್ರಾನೂ ತಿಂಡಿ ಗಿಂಡಿ ಈಸ್ಕೋಬೇಡ’.

‘ನಮ್ಮನೇಲಿ ದಿನಾ ಮಾಡೋ ಥರಥರದ ತಿಂಡೀನ ನಿನ್ನ ಫ್ರೆಂಡ್ಸ್‌ಗೆ ಶೇರ್‌ ಮಾಡು. ಅವರೆಲ್ಲ ಅದನ್ನ ಅವರ ಅಮ್ಮಂದ್ರಿಗೆ ಹೇಳಿ, ನಮ್ಮ ಡಿಗ್ನಿಟಿ ಎಲ್ಲರಿಗೂ ಗೊತ್ತಾಗಲಿ ಅಂದಿದ್ದಲ್ಲಮ್ಮ’.

‘ಮೈ ಬಿಸಿ ಆದ್ರೆ ಯಾರಿಗೂ ಹೇಳ್ಬೇಡ, ಮರ್ಯಾದೆ ಪ್ರಶ್ನೆ. ಮನೇಲಿ ಬಂದು ನನ್ನ ಹತ್ರಾನೇ ಹೇಳ್ಬೇಕು’.

‘ಏನೇ ಆದ್ರೂ ನಿಮ್ಮ ಕ್ಲಾಸ್ ಟೀಚರ್ ಹತ್ತಿರ ಕೂಡಲೇ ಹೇಳು ಅಂದಿದ್ದಲ್ಲಮ್ಮ’.

‘ಮಾರ್ಕ್ಸ್‌ಗಿಂತ ಮಾಸ್ಕ್ ಮುಖ್ಯ, ಯಾವಾಗ್ಲೂ ಮೂಗಿನ ಮೇಲೆ ಮಾಸ್ಕ್ ಇರಲಿ’.

‘ಹೋದವರ್ಷ ಇನ್ಫೆಕ್ಷನ್ ಆಗಿದ್ದಾಗ ಡಾಕ್ಟರ್ ಅಂಕಲ್ ಚೆಕ್ ಮಾಡಿ, ಮಾಸ್ಕ್ ಹಾಕಿಸಿ ಅಂದಾಗ, ಮೇಕಪ್ ಕಾಣಲ್ಲ ಮಾಸ್ಕ್ ಬೇಡ ಅಂದಿದ್ದಲ್ಲಮ್ಮ’.

ಹೇಳಿದ್ದಕ್ಕೆಲ್ಲ ಒಂದೊಂದು ಎದುರೇಳುವ ಅಧಿಕಪ್ರಸಂಗಿ ಎಂದು ಮನದಲ್ಲೇ ಬೈದುಕೊಂಡ ಪದ್ದು, ‘ಲೇ, ಹೋದವರ್ಷದ್ದು ನಿರ್ಭಯಾ ಕೇಸ್ ಸಜೆಷನ್, ಈ ವರ್ಷದ್ದು ಕೊರೊನಾ ಕೇಸ್ ಸಿಚುಯೇಷನ್, ಸುಮ್ನೆ ನಾ ಹೇಳಿದ್ದು ಫಾಲೋ ಮಾಡು’ ಅಂತ ಗದರಿದಳು.

‘ವರ್ಷಕ್ಕೊಂದೊಂದು ರೀತಿ ಹೇಳ್ತೀಯ. ಸಿಕ್ಕಾಪಟ್ಟೆ ಕನ್‌ಫ್ಯೂಸ್‌ ಮಾಡ್ತಿಯ. ನಿನ್ನ ಮಾತು ಕೇಳಲ್ಲ, ನಮ್ಮ ಟೀಚರ್ ಹೇಳಿದಂಗೇ ನಾ ಕೇಳೋದು’ ಎನ್ನುತ್ತಾ ರೂಮಿನಲ್ಲಿ ಆಟವಾಡುತ್ತಿದ್ದ ಅಣ್ಣನ ಜೊತೆಗೂಡಲು ಓಡಿದಳು ಚಿನ್ನು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.