ಸರ್ವ ಸಮಸ್ಯೆಗೂ ರಿಯಾಯಿತಿ ದರದಲ್ಲಿ ಪರಿಹಾರ ಸೂಚಿಸುವ ಫ್ಯಾಮಿಲಿ ಜ್ಯೋತಿಷಿ ಬಳಿ ಬಂದು ಶಂಕ್ರಿ, ಸುಮಿ ಕೈಮುಗಿದರು. ‘ಏನು ನಿಮ್ಮ ಸಮಸ್ಯೆ?’ ಕೇಳಿದರು ಜ್ಯೋತಿಷಿ.
‘ಸತಿ-ಪತಿ ಕಲಹ...’ ಶಂಕ್ರಿ ಸಂಕಟ ಹೇಳಿಕೊಂಡ.
‘ಎಲ್ಲರ ಮನೆಯ ಕಾಮನ್ ಕಾಯಿಲೆ...’
‘ಗಂಡ ನೆಟ್ಟಗಿದ್ದರೆ ಹೆಂಡತಿ ತೆಪ್ಪಗಿರುತ್ತಾಳೆ ಗುರೂಜಿ, ಇವ್ರಿಗೆ ಬುದ್ಧಿ ಹೇಳಿ...’ ಸುಮಿಗೆ ಸಿಟ್ಟು.
‘ಲೆಕ್ಕಾಚಾರ, ವ್ಯವಹಾರಪ್ರಜ್ಞೆ ಇಲ್ಲ ಅನ್ನುವುದು ಬಿಟ್ಟರೆ ಶಂಕ್ರಿಯವರು ಬುದ್ಧಿವಂತರೇ...’ ಜ್ಯೋತಿಷಿಯ ಸಮರ್ಥನೆ.
‘ದುಡ್ಡಿಲ್ಲ, ಕಾಸಿಲ್ಲ ನನ್ನ ಗಂಡನೂ ಸರದಾರ ಅನ್ನುವಂತಾಗಿದೆ, ಆದಾಯವಿಲ್ಲದ ಗಂಡನನ್ನು ಕಟ್ಟಿಕೊಂಡು...’ ಸುಮಿ ಕಣ್ಣು ಒರೆಸಿಕೊಂಡಳು.
‘ಆರ್ಥಿಕ ಸಂಕಷ್ಟ ಗುರೂಜಿ. ಆದಾಯವಿಲ್ಲ, ಇನ್‍ಕಂನ ಇನ್‍ಕಮಿಂಗ್ ಕಟ್ಟಾಗಿದೆ, ಎಕಾನಮಿ ಯಡವಟ್ಟಾಗಿದೆ...’ ಶಂಕ್ರಿ ಸೋತು ಹೇಳಿದ.
‘ದುಡಿಯಲಾರದವರು ಜೇಬು ತೂತು ಅಂದರಂತೆ, ದುಡ್ಡಿನ ಸಮಸ್ಯೆಗೆ ದೇವರು ಕಾರಣ ಅಂದುಬಿಟ್ಟರೆ ಸಂಸಾರ ಸಾಗುತ್ತಾ ಗುರೂಜೀ?’
‘ಭಾಗ್ಯ ಕೊಡುವ ಭಗವಂತ ಮುನಿಸಿ
ಕೊಂಡಿದ್ದಾನೆ, ಆರ್ಥಿಕ ಸಂಕಷ್ಟಕ್ಕೆ ದೇವರು ಕಾರಣ ಅಂತ ಹಣಕಾಸಿನ ಅಮ್ಮ ನಿರ್ಮಲಮ್ಮ ಹೇಳಿಲ್ವಾ, ಅವರಿಗೇ ಕಷ್ಟ ಬಂದಿರುವಾಗ ಈ ಸಾಮಾನ್ಯ ಗಂಡನಿಗೆ ಬರದಿರುತ್ತದೆಯೇ...’
‘ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರುವ ದೇವರು ಯಾರು ಹೇಳಿ ಗುರೂಜಿ, ತಕ್ಕ ಪೂಜೆ ಮಾಡ್ತೀನಿ’.
‘ದೇವರು ಯಾವ ರೂಪದಲ್ಲಿರುವನೋ ಹೇಳಲಾಗದು. ನಿರ್ಮಲಮ್ಮನ ಪ್ರಕಾರ ಈಗ ದೇವರು ಕೊರೊನಾ ಅವತಾರದಲ್ಲಿ ಕಷ್ಟ ಕೊಡುತ್ತಿದ್ದಾನಂತೆ’.
‘ಕೊರೊನಾ ದೇವರ ಕೃಪೆ ಪಡೆಯಲು ಪೂಜೆ, ಹೋಮ ಮಾಡಬೇಕೆ, ಮುಡಿ ಕೊಡಬೇಕೆ ಹೇಳಿ’.
‘ಏನೂ ಬೇಡಮ್ಮ, ದೇವರು ಶಾಂತವಾಗುವ
ತನಕ ಬಾಯಿಗೆ ಮಾಸ್ಕ್ ಹಾಕಿಕೊಂಡು, ಗಂಡನ ಜೊತೆ ಡಿಸ್ಟೆನ್ಸ್ ಕಾಪಾಡಿಕೊಂಡು
ಮೌನ ವ್ರತ ಆಚರಿಸು...’ ಜ್ಯೋತಿಷಿ ಸಲಹೆ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.