ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಫಲಿಸಿದ ಪ್ಲ್ಯಾನು!

Last Updated 2 ಜುಲೈ 2021, 18:55 IST
ಅಕ್ಷರ ಗಾತ್ರ

ಮೊನ್ನೆ ಸ್ಕೂಟರ್‌ನಿಂದ ಬಿದ್ದು ಕೈಮುರಿದುಕೊಂಡಿದ್ದ ಗೆಳೆಯನನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ ಚಿಕ್ಕೇಶಿ.

‘ಸ್ಕೂಟರ್ ನಿಧಾನವಾಗಿ ಓಡಿಸೋ ಅಂದ್ರೆ ಕೇಳಿದೆಯಾ?!’ ಅಂದ ಗೆಳೆಯನಿಗೆ.

ಇಲ್ಲಯ್ಯಾ, ಹತ್ತೇ ಕಿಲೊಮೀಟರ್ ಸ್ಪೀಡ್‌ನಲ್ಲಿದ್ದೆ. ರಸ್ತೆಯಲ್ಲಿ ನೀರು, ಗುಂಡಿಗಳ ತಪ್ಪಿಸೋದ್ರಲ್ಲಿ ಗಾಡಿ ಸ್ಕಿಡ್ ಆಯ್ತು. ನಗರಸಭೆ ಮೇಲೆ ಕೇಸ್ ಹಾಕೋಣಾಂತಿದೀನಿ’ ಎಂದು ನೋವಿನಿಂದ ಮುಲುಕಿದ ಸ್ನೇಹಿತ.

ಅಷ್ಟರಲ್ಲಿ ಪಕ್ಕದ ಬಡಾವಣೆಯ ಒಬ್ಬರನ್ನು ಸ್ಟ್ರೆಚರ್‌ನಲ್ಲಿ ಕರೆದೊಯ್ದರು. ‘ಕುಡಿಯೋ ನೀರಿನಿಂದ ಡಯೇರಿಯಾ ಆಗಿದೇಂದ್ರು ಡಾಕ್ಟ್ರು. ಕಾಲುವೆ ನೀರನ್ನು ಹಾಗೇ ಜನರಿಗೆ ಕುಡಿಸಿದ್ರೆ ಇನ್ನೇನಾಗುತ್ತೆ?’ ಎಂದರು ಜೊತೆಗಿದ್ದ ಮಹಿಳೆ.

ಚಿಕ್ಕೇಶಿಗೆ ಹೊರಗೆ ಮಿತ್ರ ಗುಂಡಣ್ಣ ಎದುರಾದ. ಕೇಳಿದ್ದಕ್ಕೆ ‘ನಿನ್ನೆ ರಾತ್ರಿ ಮೋಟರ್ ಬೈಕ್ ಕಳ್ಳರು ನನ್ನ ಹೆಂಡ್ತಿ ಕೊರಳ ಸರಕ್ಕೆ ಕೈ ಹಾಕಿದಾಗ ಅದನ್ನು ಗಟ್ಟಿಯಾಗಿ ಹಿಡಕೊಂಡ್ಲಂತೆ. ಓಲೆ ಕಿತ್ಕೊಂಡು ಹೋಗಿದಾರೆ. ಡಾಕ್ಟ್ರು ಕಿವಿಗೆ ಸ್ಟಿಚ್ ಹಾಕಿದ್ರು... ನಮ್ಮ ಸ್ಟ್ರೀಟ್ ಲೈಟ್ ಬರ್ನ್ ಆಗಿ ತಿಂಗಳಾಯ್ತು’.

ಸಂಜೆ ಬಡಾವಣೆ ಹಿತರಕ್ಷಣಾ ಸಮಿತಿ ಸಭೆಯಲ್ಲಿ ನಗರಸಭಾಧ್ಯಕ್ಷರ ಗುಣಗಾನ! ‘ಎಷ್ಟು ಹೇಳಿದ್ರೂ ಹಂದಿಗಳನ್ನು ಸ್ಥಳಾಂತರಿಸಲಿಲ್ಲ, ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸಲಿಲ್ಲ, ಕಸದ ರಾಶಿ ತೆಗೆಸಲಿಲ್ಲ’.

‘ಬೆಳಿಗ್ಗೆ ಎಲ್ರೂ ನಗರಸಭೆಗೆ ಬನ್ನಿ... ಪ್ಲ್ಯಾನ್ ಮಾಡೋಣ’ ಎಂದ ಚಿಕ್ಕೇಶಿ.

ಬೆಳಿಗ್ಗೆ ಬಡಾವಣೆ ನಾಗರಿಕರು ಧಿಕ್ಕಾರ ಕೂಗುತ್ತಾ ಹೋದಾಗ ನಗರಸಭಾಧ್ಯಕ್ಷರು ಕಚೇರಿಯಲ್ಲಿ ಗತ್ತಿನಿಂದ ಕೂತಿದ್ದರು. ಚಿಕ್ಕೇಶಿ ಕೈಲಿದ್ದ ವೃತ್ತಪತ್ರಿಕೆಯನ್ನು ಮೇಜಿನ ಮೇಲೆ ಹರಡಿ ಬೆರಳಿಟ್ಟು ತೋರಿಸಿದ. ಜನರ ಕಷ್ಟಕ್ಕೆ ಸ್ಪಂದಿಸದ ದಕ್ಷಿಣ ಮೆಕ್ಸಿಕೊದ ನಗರವೊಂದರ ಮೇಯರನ್ನು ಜನರು ಟ್ರಕ್‍ಗೆ ಕಟ್ಟಿ ಬೀದಿಗಳಲ್ಲಿ ಎಳೆಸಿದ ಸಚಿತ್ರ ಸುದ್ದಿ ಇತ್ತು!

‘ಹೊರಗೆ ಟ್ರಕ್ ರೆಡಿ ಇದೆ!’ ಎಂದ ಚಿಕ್ಕೇಶಿ.

ಬೆವರು ಒರೆಸಿಕೊಂಡ ನಗರಸಭಾಧ್ಯಕ್ಷರು, ‘ಬೇಡ, ಬೇಡ, ಕೂಡ್ಲೇ ಕ್ರಮ ವಹಿಸ್ತೀನಿ’ ಎಂದು ಕೈ ಮುಗಿಯುತ್ತಾ ಮೇಲೆದ್ದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT