ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಅದೂ... ಅದೂ...

Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

‘ಮಹಾಮಾರಿ, ಮಹಾಸೋಂಕು... ಇವೆಲ್ಲ ಮತ್ತೆ ಚಾಲೂ ಆದ್ವು ನೋಡು ಮಾಧ್ಯಮದಾಗೆ’ ಎಂದೆ ಮಡದಿ ಕೊಟ್ಟ ಕಾಫಿ ಕುಡಿಯುತ್ತ.

‘ಹೋದ್ಯಾ ಪಿಶಾಚಿ ಅಂದ್ರೆ ಇದೇನ್ರಿ ಮತ್ ಬಂತಲ್ಲ. ಮತ್ತೆ ಮಾಸ್ಕು, ಮಣ್ಣು ಮಸಿ ತೆಲಿನೋವು’.

‘ಕೊರೊನಾ ಸೋಂಕಿನ ಈ ಹೊಸ ಉಪತಳಿ ಡೀಸೆಂಟಂತೆ ಬಿಡು, ಹೆಸರು ನೋಡು ಜೆಎನ್.1 ಅಂತೆ. ಸರಿಗಮಪ ಸೀಸನ್ ಒನ್ ಟೂ ತ್ರೀ ತರ. ಆದ್ರೆ ಹಿಂದೆ ಬಂದಿತ್ತಲ್ಲ ಕೊರೊನಾ, ಅದು ನಿನ್ ತರ, ಡೈರೆಕ್ಟ್ ಅಟ್ಯಾಕ್!’

‘ಏನು, ನನ್ ತರಾನ? ಹೆಂಗೈತಿ ಮೈಯಾಗೆ? ನೀವು ಟಿ.ವಿ ಬಿಟ್ಟು ಪೇಪರ್ ಓದಿ. ನಮ್ ಸಿದ್ರಾಮಣ್ಣ ನೋಡಿ, ಮೋದಿ ಸಾಹೇಬ್ರತ್ರ ಹೆಂಗ್ ನಗ್ತಾ ನಗ್ತ ಮಾತಾಡ್ತದಾರೆ. ಒಳ್ಳೆ ಸುದ್ದಿ ಓದೋದು ಆರೋಗ್ಯಕ್ಕೆ ಒಳ್ಳೇದು’.

‘ಅಲ್ಲ ಮೋದಿ ಸಾಹೇಬ್ರು ನಿಮ್ ಡಿಸಿಎಂ ಡಿ.ಕೆ.ಶಿವಕುಮಾರ್ ಹೆಂಗದಾರೆ ಅಂತಾನೂ ವಿಚಾರಿಸಿದ್ರಂತೆ. ಅದೇನು ಅಷ್ಟ್ ಪ್ರೀತಿ ಅವರ ಮೇಲೆ?’

‘ಅದೂ... ಏನೋಪ್ಪ ನಂಗೇನ್ರಿ ಗೊತ್ತು?’

‘ಈ ಅದೂ... ಅನ್ನೋ ರಾಗ ಇದೆಯಲ್ಲ, ಅದ್ನ ಕೇಳಿದ್ರೆ ನಂಗಾಗಲ್ಲ ನೋಡು. ಅದ್ರಲ್ಲಿ ಎಂತೆಂಥ ಸುಳ್ಳುಗಳು, ಕತೆಗಳು ಅಡಗಿರ್ತಾವಂದ್ರೆ... ನೀನು ನೋಡ್ತಿರ್ತೀಯಲ್ಲ ಟಿ.ವಿ ಧಾರಾವಾಹಿಗಳು, ಅವೆಲ್ಲವೂ ಈ ‘ಅದೂ...’ ಅನ್ನೋದ್ರ ಮೇಲೇ ನಿಂತಿರ್ತಾವೆ ನೋಡು’.

‘ನೀವೂ ಅಷ್ಟೆ, ರಾತ್ರಿ ಯಾಕ್ ಲೇಟು ಅಂದ್ರೆ ‘ಅದೂ...’ ಅಂತ ರಾಗ ತೆಗೀತೀರಿ. ಹಬ್ಬಕ್ಕೆ ಸೀರಿ ಕೊಡ್ಸಿ ಅಂದ್ರೆ ‘ಅದೂ...’ ಅಂತ ಏನೇನೋ ಕತಿ ಹೇಳ್ತೀರಿ. ಹೋಟೆಲ್‌ಗೆ ಊಟಕ್ಕೆ ಕರ್ಕೊಂಡು ಹೋಗ್ರಿ ಅಂದ್ರೆ ‘ಅದೂ...’ ಅಂತ ಏನೇನೋ ಹೇಳಿ ತಪ್ಪಿಸ್ಕಂತೀರಿ. ಹೌದು ತಾನೆ?’

‘ಮಾತಿಗೆ ಮಾತು ಕೊಡೋದ್ರಲ್ಲಿ ನಿನ್ನ ಮೀರ್ಸೋರಿಲ್ಲ ಬಿಡು. ಅದಿರ್‍ಲಿ, ರಾತ್ರಿ ನನ್ ಶರ್ಟ್ ಜೇಬಿನಾಗಿದ್ದ ರೊಕ್ಕದಲ್ಲಿ ಸಾವಿರ ರೂಪಾಯಿ ಕಮ್ಮಿಯಾಗೇತಿ, ನೀನು ತಗಂಡ್ಯಾ?’

‘ಅದೂ...’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT