ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಹಲೋ ಜೀ...

Published 8 ಡಿಸೆಂಬರ್ 2023, 17:32 IST
Last Updated 8 ಡಿಸೆಂಬರ್ 2023, 23:33 IST
ಅಕ್ಷರ ಗಾತ್ರ

‘ಜೀ... ಜೀ...’ 

ಕೈಕಟ್ಟಿಕೊಂಡು, ನಡುಬಗ್ಗಿಸಿ, ನಗುಮೊಗದೊಂದಿಗೆ ಬಾಗಿಲ ಬಳಿ ನಿಂತು ಕೂಗಿದ ಶಿಷ್ಯೋತ್ತಮ.

ಶಿಷ್ಯ ಮನೆಯೊಳಗೆ ಅಡಿ ಇಡಬೇಕೆನ್ನುವಷ್ಟರಲ್ಲೇ ‘ಜೀ’ ಅವರೇ ಬಾಗಿಲ ಬಳಿ ಬಂದು ನಿಂತರು‌.

‘ಏನು ವಿಶೇಷ, ಬೆಳ್‌ಬೆಳಿಗ್ಗೆಯೇ ನಿಮ್ಮ ಬರೋಣವಾಗಿದೆ?’

‘ಸೂರ್ಯೋದಯವಾಗ್ತಿದ್ದಂಗೆ ನಿಮ್ ಮುಖ ನೋಡಿದರೆ ಜೀ, ಅಂದುಕೊಂಡ ಕೆಲಸ ಆಗದಿದ್ದರೂ ದೊಡ್ಡ ಅನಾಹುತ ಆಗಲ್ಲ ಅನ್ನೋ ನಂಬಿಕೆ ಜೀ’. 

ಶಿಷ್ಯ ಹೊಗಳ್ತಿದಾನೋ, ತೆಗಳ್ತಿದಾನೋ ತಿಳಿಯದೇ ನಿಂತರು ‘ಜೀ’. 

‘ನೀವೇ ನೀರಿಗಿಳಿಯದಿದ್ದರೂ ಎಲ್ಲರಿಗೂ ಈಜು ಕಲಿಸುವಂಥ  ಜೀನಿಯಸ್ ಜೀ ನೀವು’.

‘ಅಂದ್ರೆ?’

‘ಎಲೆಕ್ಷನ್‌ಗೇ ನಿಲ್ಲದಿದ್ದರೂ ಸಿಎಂಗಳನ್ನೇ ಆಯ್ಕೆ ಮಾಡೋವಂಥ ಪವರ್ ಇದೆಯಲ್ಲ ಜೀ ನಿಮಗೆ, ಅದಕ್ಕೆ ಹಾಗಂದೆ ಜೀ’ ಹಲ್ಕಿರಿದ ಶಿಷ್ಯ.‌

ಹೆಮ್ಮೆಯಿಂದ ಎದೆಯುಬ್ಬಿಸಿದರು ‘ಜೀ’. 

‘ಆದ್ರೂ ಜೀ, ‘ಆ’ ಸಮಾಜದವರು ಹಂಗೆ, ಹಿಂಗೆ, ಅವರಿಂದ ದೂರ ಇರಿ ಅಂತೆಲ್ಲ ಭಾಷಣ ಮಾಡ್ತೀರಿ ಜೀ, ಮತ್ತೆ ಅವರ ಜೊತೆಗೇ ಬಿಸಿನೆಸ್ ಪಾರ್ಟ್ನರ್ ಆಗ್ತೀರಲ್ಲ ಜೀ, ಇದೆಲ್ಲ ಹೆಂಗೆ ಜೀ?’

‘ಓ ಸಪರೇಟ್, ಏ ಸಪರೇಟ್. ಭಾಷಣ ಬೇರೆ, ಬದುಕು ಬೇರೆ’.

‘ನಾನು ಯಾವಾಗಲೂ ನಿಮ್ ಜೊತೆಗೇ ಇರ್ತೀನಿ, ಆದರೂ ನಮಗೆ ಇವೆಲ್ಲ ಹೊಳೆಯೋದೇ ಇಲ್ವಲ್ಲ ಜೀ...’ 

‘ಜೊತೆಗೆ ನಿಂತು ಫೋಟೊಗೆ ಪೋಸು ಕೊಟ್ಟ ಮಾತ್ರಕ್ಕೆ ‘ಜೊತೆಗೇ’ ಇದೀವಿ ಅಂತ ಅರ್ಥ ಅಲ್ಲವೋ ದಡ್ಡ’ ವ್ಯಂಗ್ಯದ ನಗೆ ಬೀರಿದರು ‘ಜೀ’.

ಜೀ ಮತ್ತು ಶಿಷ್ಯೋತ್ತಮನ ನಡುವಿನ ಈ ಸಂಭಾಷಣೆ ಪೂರ್ತಿ ಫೇಸ್‌ಬುಕ್‌ನಲ್ಲಿ ‘ಲೈವ್’ ಹೋಗ್ತಿತ್ತು.

‘ಜೀ ಜೀ ಅನ್ನುತ್ತಲೇ ಇದೇನೋ ಮಾಡಿದಿಯಾ? ನಿಮ್ಮಂಥವರನ್ನ ನೋಡಿಯೇ ನಮ್ ದೊಡ್ಡೋರು ಒಂದು ಮಾತು ಹೇಳಿದಾರೆ...’

ಮತ್ತಷ್ಟು ನಡು ಬಗ್ಗಿಸಿದ ಶಿಷ್ಯ ಕೇಳಿದ, ‘ಏನ್‌ ಹೇಳಿದಾರೆ ಜೀ?’ 

‘ಅತಿ ವಿನಯಂ ಧೂರ್ತ ಲಕ್ಷಣಂ!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT