‘ಯಾಕೋ ವರ್ಷ ತೊಡಕಿನ ದಿನನೇ ಹಳೇದೆಲ್ಲಾ ತಡವಿಕೊಂಡು ಕೂತಿರೋ ಹಾಗಿದೆ. ಏನೂ ಇಲ್ವಾ ಸ್ಪೆಶಲ್ಲು?’ ಮಾತು ತೆಗೆದ ಗುದ್ಲಿಂಗ ಹರಟೆ ಕಟ್ಟೇಲಿ.
‘ಅಯ್ಯೋ, ಯಾವ ಸ್ಪೆಶಲ್ಲೂ ಇಲ್ಲ, ತಲೆ ಮೇಲೆ ಬಿದ್ದಿದೆ ಚಪ್ಪಡಿ ಕಲ್ಲು. ವರ್ಷತೊಡಕು ಬಿಡಿಸಲಾಗದ ಸೊಡಕು ಆಗೈತೆ...! ನಮ್ ನಾಯಕ್ರು ಮುಂದಿನ ಯುಗಾದಿಗೆ ಮತ್ತೆ ಗಾದಿ ಮೇಲೆ ಕುಂತ್ಕಬೇಕು ಅಂತಾವ್ರೆ. ಅವರಿಗೆ 74 ವರ್ಷ 360 ದಿನ ಆಗೈತೆ. ಅಂಗಾಗಿ ಈ ಬಾರಿ ಕಂಟೆಸ್ಟ್ ಮಾಡಾದ್ ಬೇಡ ಅಂತ ಹೈಕಮಾಂಡ್ ತೊಡ್ರುಗಾಲು ಕೊಟ್ಟೈತೆ’ ಎಂದ ಮಾಲಿಂಗ.
‘ಸರಿ ಅವರ ಮಗ ಇದಾರಲ್ಲ, ಅವರಿಗೇ ಟಿಕೆಟ್ ಕೊಡ್ಸುದ್ರಾಯ್ತು’.
‘ಅಯ್ಯೋ ಅವರ ಎಂಡ್ರು ನಾನೇ ನಿಂತ್ಕತೀನಿ ಅಂತ ತೊಡ್ರುಗಾಲ್ ಕೊಡ್ತಾವ್ರೆ’.
‘ಅಯ್ಯೋ ಹೌದಾ? ಹಂಗಾದ್ರೆ ಎರಡೂ ದದ್ದ ಹೊರಕ್ ಹಾಕು ಅನ್ನೋಅಂಗೆ ಪರಂದಾಮಯ್ಯಂಗೇ ಸೀಟು ಸಿಗೋದು ಅನ್ಸುತ್ತೆ’.
‘ಅಂಗಾಗ್‍ಬಾರ್ದು, ಜನನ್ ಸೇರ್ಸಿ ಹೈಕಮಾಂಡ್ಗೆ ಒತ್ತಡ ತರಾಣ ಅಂದ್ರೆ ಎಲೆಕ್ಷನ್ ಕಮಿಷನ್ನೋರು ತೊಡ್ರುಗಾಲು ಹಾಕ್ತಾವ್ರೆ. ಲೋಕಲ್ಲಲ್ಲೂ ಅಲ್ಲಾಡದಂಗೆ ಆಗೋಗೈತೆ. ನಾಯಕ್ರು ನನ್ ಮೇಲೆ ನಂಬ್ಕೆ ಮಡಗಿ ಭಾರೀ ಟಾಸ್ಕ್ ಕೊಟ್ಟವ್ರೆ. ಆದ್ರೆ ಸೀರೆ, ಪಂಚೆ, ಮೂಗ್‍ಬಟ್ಟು, ಲಿಖ್ಖರ್ರು, ಕುಕ್ಕರ್ರು ಏನೂ ಹಂಚೋಕೇ ಆಯ್ತಿಲ್ಲ. ಬೇರೆ ಪಾರ್ಟಿಯೋರು ಕಣ್ ಕಿಸ್ಕೊಂಡು ಕಾಯ್ತಾವ್ರೆ. ಆ ಬದ್ಮಾಶ್ ನನ್ಮಗ ಕೊಟ್ರೇಶಿ ನಂಗ್ ಶಾನೆ ಕಾಲೆಳೀತಾವ್ನೆ’.
‘ಅವ್ನು ನಿಮ್ ಪಾರ್ಟಿಲೇ ಇದ್ನಲ್ಲ...’
‘ಆಪರೇಶನ್ ಕಮಲ ಆದ್ಮೇಲೆ ಆ ಕುಯ್ದೆತ್ತು ಗುಂಜಪ್ಪನ ಬಾಲ ಹಿಡ್ಕೊಂಡ್ ಹೋಗವ್ನೆ. ಐನಾತಿ ಬಡ್ಡಿಮಗಂಗೆ ನಮ್ ಪಟ್ಟು, ಜುಟ್ಟು ಎಲ್ಲಾ ಗೊತ್ತೈತೆ. ಎಲ್ ಹೋದ್ರೂ ತೊಡ್ರುಗಾಲ್ ಕೊಡ್ತಾವ್ನೆ. ಇದಕ್ಕೆ ಏನರಾ ಉಪಾಯ ಮಾಡ್ಬೇಕಲ್ಲ?’
‘ಈಗ ನಿಂಗ್ ಹಂಚಕ್ಕೆ ಕೊಟ್ಟಿರೋದೆಲ್ಲಾ ಎಲ್ಲಿವೆ?’
‘ನಮ್ ತ್ವಾಟದ ಮನೇಲೈತೆ’.
‘ನಡೀಮತ್ತೆ, ಒಂದು ಕ್ವಾರ್ಟ್ರು ಹಾಕ್ಕಂಡು ಒಂದು ಕೋಳಿಕಾಲು ಕಡೀತಿದ್ರೆ ಎಲ್ಲ ಉಪಾಯನೂ ಉದುರ್ತಾವೆ’ ಎಲ್ಲಾ ಹುರ್ರೇ ಎಂದು ಕೂಗುತ್ತಾ ಪಂಚೆ ಕೊಡವಿ ಮೇಲೆದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.