ಮಂಗಳವಾರ, ಜನವರಿ 18, 2022
27 °C

ಚುರುಮುರಿ: ವೈರಸ್ ಸ್ಯಾರಿ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

ಸಂಕ್ರಾಂತಿ ಹಬ್ಬದ ಸೀರೆ ಖರೀದಿಗೆ ಸುಮಿ ಬಂದಿದ್ದಳು. ‘ಮೇಡಂ, ವೈರಸ್ ಸೀರೆ ತೋರಿಸಲಾ?’ ಸೇಲ್ಸ್‌ಗರ್ಲ್ ಕೇಳಿದಳು.

‘ಸ್ಯಾರಿ ಜೊತೆ ಮಾರಿಯನ್ನು ಕೊಳ್ತಾರೇನ್ರೀ?!’ ಸುಮಿ ಗಾಬರಿಯಾದಳು.

‘ಮೇಡಂ, ಇದು ಮಾರಕ ವೈರಸ್ ಅಲ್ಲ, ಮನಮೋಹಕ ವೈರಸ್ ಸ್ಯಾರಿ. ವೈರಸ್ ಚಿತ್ರಗಳ ಚಿತ್ತಾಕರ್ಷಕ ಸೀರೆ’.

‘ಲೇಟೆಸ್ಟ್ ಓಮೈಕ್ರಾನ್ ಬ್ರ್ಯಾಂಡ್ ಇಲ್ವಾ?’

‘ಇದೆ ನೋಡಿ, ಕ್ಯೂಟ್ ವೈರಸ್ ಚಿತ್ರಗಳ ಪ್ರಿಂಟ್ ಇದೆ. ಬಾರ್ಡರ್, ಸೆರಗು ಗ್ರ್ಯಾಂಡಾಗಿವೆ. ಡಿಸೈನ್, ಕಲರ್ ನಿಮಗೆ ಒಪ್ಪುತ್ತದೆ. ಸೀರೆ ಕೊಂಡರೆ ಬ್ಲೌಸ್ ಜೊತೆ ಮ್ಯಾಚಿಂಗ್ ಮಾಸ್ಕ್ ಫ್ರೀ’.

‘ಈ ಸೀರೆಯನ್ನು ಸ್ಯಾನಿಟೈಸ್ ಮಾಡಿ ಉಡಬೇಕಾ? ಬೇರೆ ಸೀರೆಗಳಿಂದ ಅಂತರ ಕಾಪಾಡಬೇಕಾ?’

ಸೇಲ್ಸ್‌ಗರ್ಲ್ ನಗುತ್ತಾ ಇನ್ನಷ್ಟು ಸೀರೆಗಳನ್ನು ಬಿಚ್ಚಿ ಹರಡಿದಳು. ಕಣ್ಣು ಕುಕ್ಕುವ ಸೀರೆಗಳಿಗೆ ಸುಮಿ ಮನಸೋತಳು.

‘ಗಂಡಸರೆಲ್ಲಾ ಗ್ಯಾಲರಿಗೆ ಹೋಗಿ...’ ಅಲ್ಲಿದ್ದವರಿಗೆ ಸೇಲ್ಸ್‌ಗರ್ಲ್ ಕೂಗಿ ಹೇಳಿದಳು.

‘ಗ್ಯಾಲರಿನಾ?!...’ ಅರ್ಥವಾಗದೆ ಸುಮಿ ಕೇಳಿದಳು.

‘ಹೌದು ಮೇಡಂ, ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ? ಸೀರೆ ಅಂಗಡಿಯಲ್ಲಿ ಗಂಡಸರಿಗೆ ಕೆಲಸವಿಲ್ಲ. ಹೆಂಡ್ತಿಯ ಸೀರೆ ಆಯ್ಕೆಗೆ ಡಿಸ್ಟರ್ಬ್ ಮಾಡುವ ಮಕ್ಕಳನ್ನು ಆಟ ಆಡಿಸಿಕೊಂಡು ಕಾಯಲೆಂದು ಗಂಡಸರ ಗ್ಯಾಲರಿ ಮಾಡಿದ್ದೇವೆ’.

‘ಅದೂ ಸರಿನೇ, ಗಂಡಂದಿರಿಗೆ ಸೀರೆ ಸೆಲೆಕ್ಷನ್ ಗೊತ್ತಿಲ್ಲ, ಸೀರೆ ಆಯ್ಕೆ ಹೆಂಗಸರ ಮೂಲಭೂತ ಜಾಣತನ...’ ಸುಮಿ ಬೀಗಿದಳು.

‘ಆದರೇನು, ಸೀರೆ ಆಯ್ಕೆ ಮಾಡುವಾಗ ಇರುವ ಜಾಣತನ ಗಂಡನನ್ನು ಆರಿಸುವಾಗ ಇರಲಿಲ್ಲ ಎಂದು ಎಷ್ಟೋ ಹೆಂಗಸರು ಪಶ್ಚಾತ್ತಾಪ
ಪಡುತ್ತಾರೆ ಮೇಡಂ...’

‘ಹೌದು, ನಮಗೆ ಮ್ಯಾಚ್ ಆಗುವ ರೆಡಿಮೇಡ್ ಗಂಡ ಸಿಗುವುದಿಲ್ಲ, ಸಿಕ್ಕಿರುವ ಗಂಡನನ್ನೇ ನಮಗೆ ಬೇಕಾದಂತೆ ಪಳಗಿಸಿಕೊಂಡು ಬಾಳಬೇಕಷ್ಟೇ...’ ಎಂದ ಸುಮಿ ಸೀರೆ ಪ್ಯಾಕ್ ಮಾಡಲು ಹೇಳಿದಳು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು