ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮೋ ಶಾ’ಣಾಯಃ!

Last Updated 15 ಡಿಸೆಂಬರ್ 2019, 20:10 IST
ಅಕ್ಷರ ಗಾತ್ರ

ಗೆಳತಿ ರವೆಉಂಡೆ ಮುಂದಿಟ್ಟುಕೊಂಡು ‘ಓಂ ನಮೋ ಶಾಣಾಯಃ’ ಎಂದು ಜಪಿಸುತ್ತ, ಮಧ್ಯೆ ಇನ್ನಾವುದೋ ಸಂಸ್ಕೃತ ಶ್ಲೋಕ ಉದುರಿಸುತ್ತ ಕೂತಿದ್ದಳು. ಪಕ್ಕದಲ್ಲಿ ಮಗಳು ಇವಳ ಶ್ಲೋಕಗಳನ್ನು ಎಣಿಸುತ್ತಿದ್ದಳು. ಶಾಲೆಯಲ್ಲಿ ಸವಿಗನ್ನಡದ ಪದ್ಯ ಓದುವಾಗಲೇ ತಪ್ಪುತ್ತಿದ್ದವಳು
ಈ ಪರಿ ಶ್ಲೋಕ ಹೇಳುವುದು ನೋಡಿ ಅಚ್ಚರಿಯಾಯಿತು.

‘ಸಂಸ್ಕೃತ ಮಾತಾಡಿದ್ರೆ ಸಕ್ಕರೆ ಕಾಯಿಲೆ, ಬೊಜ್ಜು ಕಡಿಮೆ ಆಗ್ತಾವಂತ ಕೇಂದ್ರ ಸಚಿವರು ಹೇಳ್ಯಾರ. ನೂರು ಶ್ಲೋಕ ಹೇಳಿದರಷ್ಟೇ ರವೆಉಂಡೆ ಅಂತ ಈಕಿ ಗಂಟು ಬಿದ್ದಾಳ’ ಗೆಳತಿ ನಿಟ್ಟುಸಿರಿಟ್ಟಳು. ‘ಅಮೆರಿಕದವ್ರು ರಿಸರ್ಚ್ ಮಾಡ್ಯಾರ ನೋಡ್ರಿ’ ಎಂದು ಮಗಳು ಲ್ಯಾಪ್ಟಾಪಿನಲ್ಲಿ ತೋರಿಸಿದಳು. ‘ಇನ್ಸುಲಿನ್ ರೊಕ್ಕ ಉಳೀತು ಹಂಗಾರೆ’ ಎಂದೆ.

‘ಅದು ಪೂರಾ ಬಿಡಂಗಿಲ್ರೀ... ಸಂಸ್ಕೃತ ಎಕ್ಸ್‌ಟ್ರಾ ಎಫೆಕ್ಟ್‌ಗೆ’ ಮಗಳು ನಕ್ಕಳು. ಪಕ್ಕದಲ್ಲಿ ಪುಟ್ಟ ಬೀಗ ಜಡಿದಿದ್ದ ಬ್ರೀಫ್‍ಕೇಸ್‍ ನೋಡಿ, ಅದೇನೆಂದು ಕೇಳಿದೆ. ‘ನಮ್ಮ ಒರಿಜಿನಲ್ ಡಾಕ್ಯುಮೆಂಟ್ಸ್. ಪೌರತ್ವ ತಿದ್ದುಪಡಿ, ಎನ್‍ಆರ್‌ಸಿ ಸಂಬಂಧ ತೋರಿಸಾಕ. ಅಂತೂ ಭಾರತ ಖರೇ ಹಿಂದೂಸ್ತಾನ ಆಗಲಿಕ್ಕೆ ನಮೋ ಯುಗದವರೆಗೆ ಕಾಯಬೇಕಾತ್ ನೋಡ್ ಆಂಟಿ... ಇನ್ ಎಲ್ಲಾ ಕಡಿಗಿ ನಮ್ಮವ್ರೇ’ ಎಂದು ಎದೆಯುಬ್ಬಿಸಿದಳು.

‘ಮತ್ತೆ ಅವರು?’ ನನ್ನ ಪ್ರಶ್ನೆಗೆ ‘ಎಲ್ಲಿಂದ ಬಂದಾರ ಅಲ್ಲಿಗೇ ಅವ್ರನ್ನೆಲ್ಲಕಳಿಸಬೇಕ್ರಿ ಆಂಟಿ’ ಎಂದು ನಕ್ಕಳು.

‘ನಮ್ ಪೂರ್ವಜರು ಐವತ್ ಸಾವಿರ ವರ್ಷದ ಕೆಳಗೆ ಆಫ್ರಿಕಾದಿಂದ ಹೊಂಟು ಈಕಡಿಗೆ ಬಂದವರಂತೆ. ಈಗ ಭಾರತದಲ್ಲಿರೋ ಹಿಂದೂಗಳು, ಮುಸಲ್ಮಾನರು ಹೆಚ್ಚುಕಡಿಮೆ ಒಂದೇ ಮೂಲದಿಂದ ಬಂದವರು ಅಂತ ಹೋದ ವರ್ಷ ಬೇರೆ ಬೇರೆ ದೇಶಗಳ 92 ವಿಜ್ಞಾನಿಗಳು ಸೇರಿ ಸಂಶೋಧನೆ ಮಾಡಿ ಹೇಳ್ಯಾರ. ಅಂದ್ರ ನಾವೆಲ್ಲಾರೂ ವಲಸೆ ಬಂದವ್ರೆ. ನೀ ಹೇಳೂ ಹಿಂದೂಗಳೂ ಇಲ್ಲಿನ ಮೂಲನಿವಾಸಿಗಳಲ್ಲ’ ನಾ ವಾದಿಸಿದೆ.

‘ನೀವ್ ಎಲ್ಲಿಂದೆಲ್ಲಿಗೋ ಜೋಡಿಸಬ್ಯಾಡ್ರಿ’ ಎಂದು ಮುಖ ಹುಳ್ಳಗೆ ಮಾಡಿ ಎದ್ದು ಹೋದಳು. ಇದೇ ಸಮಯ ಕಾದಿದ್ದ ಗೆಳತಿ ಉಂಡೆ ಗುಳುಂ ಮಾಡಿ ‘ರವೆಉಂಡೆ ಸ್ವಾಹಾ’ ಎಂದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT