ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಓವರ್‌ಗೆ ಒಂದು ಕೋಟಿ

ಆನಂದ
Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಟಿ.ವಿ. ಮೇಲೆ ಕಣ್ಣಾಡಿಸುತ್ತಿದ್ದ ಮಡದಿ ‘ಏನ್ರೀ ಈ ಪಾಟಿ ರೇಟು’ ಎಂದು ಉದ್ಗಾರವೆತ್ತಿದಳು.

‘ಈರುಳ್ಳಿ ಬೆಲೆ ತಾನೆ? ಇಳಿಯುತ್ತೆ ನೋಡು. ರಫ್ತಿನ ಮೇಲೆ ನಿಷೇಧ ಹೇರಲಾಗಿದೆ’ ಎಂದು ಸಮಾಧಾನಪಡಿಸಲು ನೋಡಿದೆ.

‘ಅಯ್ಯೋ, ಈರುಳ್ಳಿ ಅಲ್ಲಾರಿ. ಸ್ಟಾರ್ಕ್ ಬೆಲೆ’ ಎಂದಾಗ ಇದ್ಯಾವ ಪದಾರ್ಥ ಇರಬಹುದು ಎಂದು ಆಶ್ಚರ್ಯಪಟ್ಟೆ. ‘ಕಮಿನ್ಸ್‌ಗಿಂತ ಬೆಲೆ ಹೆಚ್ಚು ರೀ’ ಎಂದು ಅನೌನ್ಸ್ ಮಾಡಿದಳು.

‘ಸ್ಟಾರ್ಕೊ ಸ್ಟಾಕೊ, ಕಮಿನ್ಸೊ ಗಿಮಿನ್ಸೊ... ಅದೇನು ನಾವು ಕೊಳ್ಳಬೇಕೆ? ಹೆಚ್ಚಲಿ ಬಿಡು’ ಎಂದು ಉದಾಸೀನದಿಂದಲೇ ಹೇಳಿದೆ.

‘ನಾವು ಕೊಳ್ಳೋದಲ್ಲ ರೀ, ನೋಡೋದು’ ಎಂದಾಗ ನನಗೆ ಆಶ್ಚರ್ಯ ಆ ಬೆಲೆಗಳಂತೆ ಹೆಚ್ಚಾಯಿತು. ‘ಅದಲ್ಲ, ಅವರು. ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಕ್ರಿಕೆಟಿಗರು’ ಎಂದು ಸಸ್ಪೆನ್ಸ್‌ಗೆ ತೆರೆ ಎಳೆದಳು.

‘ಎಂಎಲ್‍ಎ ಟಿಕೆಟ್, ಎಪಿಎಂಸೀಲಿ ದಿನಸಿ, ಬೇರೆಡೆ ಮಾನ ಹರಾಜಾಗುವುದನ್ನು ಕೇಳಿದ್ದೀನಿ. ಇದೇನು ಕ್ರಿಕೆಟಿಗರನ್ನು ಹರಾಜು ಹಾಕುವುದೇ? ನಮ್ಮನ್ನು ಕೊಂಡುಕೊಳ್ಳಿ ಅಂತ ಅವರೇ ಹರಾಜಿಗೆ ನಿಲ್ತಾರೇನು?’

‘ಅಯ್ಯೋ! ನೀವೇನೂ ಫಾಲೋ ಮಾಡೋದೇ ಇಲ್ಲ. ಅವರನ್ನು ತಂಡಗಳೇ ಹರಾಜಿನಲ್ಲಿ ಬಿಡ್ ಮಾಡಿ ಖರೀದಿ ಮಾಡುತ್ತವೆ’.

‘ತಂಡಕ್ಕೆ ಅವರು ಬೇಕು ಸರಿ, ಆದರೆ ಅವರಿಗೆ ಆ ತಂಡ ಬೇಡವಾದರೆ?’

‘ಇಲ್ಲಿ ಲಾಯಲ್ಟಿ ಇರೋದು ತಂಡ ಕೊಡೋ ದುಡ್ಡಿಗೆ. ಯಾರು ಹೆಚ್ಚು ಕೊಡ್ತಾರೋ ಅವರ ಪರ ಅಷ್ಟೆ, ತಂಡ ಸೇರಿದ ಮೇಲೆ ಆ ತಂಡಕ್ಕೆ ಲಾಯಲ್ಟಿ’.

‘ಅಂದರೆ, ಯಾರು ಟಿಕೆಟ್ ಕೊಟ್ಟರೆ ಆ ಪಕ್ಷದ ಪರವಾಗಿ ಸ್ಪರ್ಧಿಸೋ ತರಹ ಅನ್ನು...’

‘ಹಾಗೇ ಅಂದ್ಕೊಳ್ಳಿ ಬೇಕಿದ್ದರೆ’.

‘ಐಪಿಎಲ್ ಅಂದ್ರೆ ಅದೇ 20 ಓವರ್ ಆಟ ತಾನೆ. ಅಂದ್ರೆ ನಿಮ್ಮ ಸ್ಟಾರ್ಕು, ಕಮಿನ್ಸು ಅವರೆಲ್ಲ ಒಂದು ಓವರ್‌ಗೆ ಒಂದು ಕೋಟಿ ಚಾರ್ಜ್ ಮಾಡ್ತಾರೆ ಅಂದಾಯಿತು’.

‘ಅಯ್ಯೋ! ನೀವೋ, ನಿಮ್ಮ ವ್ಯಾಪಾರಿ ಬುದ್ಧಿಯೋ...’

ಅಂದಹಾಗೆ, ಇದರ ಮೇಲೆ ಜಿಎಸ್‍ಟಿ ಇರುತ್ತೇನು? ವಿಚಾರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT