ಅತ್ತೆ-ಸೊಸೆ ಜಗಳ ಜಗತ್ತಿನ ಮೊದಲ ಯುದ್ಧ. ಅಂದು ಶುರುವಾಗಿದ್ದು ಇಂದಿಗೂ ನಿಂತಿಲ್ಲ, ನಿಲ್ಲುವಂತೆಯೂ ಇಲ್ಲ. ಅತ್ತೆ-ಸೊಸೆ ಕದನದಲ್ಲಿ ಯಾರೊಬ್ಬರೂ ಗೆದ್ದಿಲ್ಲ, ಸೋತೂ ಇಲ್ಲ!
ಸರ್ಕಾರದ ಗೃಹಲಕ್ಷ್ಮಿ ಯೋಜನೆಗಾಗಿ ಕುಟುಂಬದ ಯಜಮಾನಿ ಫಲಾನುಭವಿ ಆಯ್ಕೆ ವಿಚಾರದಲ್ಲಿ ಶಂಕ್ರಿ ಸಂಸಾರದಲ್ಲಿ ಅತ್ತೆ-ಸೊಸೆ ಜಗಳ ಶುರುವಾಗಿತ್ತು.
‘ತಟ್ಟೆ, ಲೋಟದಿಂದ ಟಿ.ವಿ, ಫ್ರಿಜ್‍ವರೆಗೆ ಎಲ್ಲವನ್ನೂ ಸಂಪಾದಿಸಿ ಸಂಸಾರ ಕಟ್ಟಿ ಬೆಳೆಸಿದ್ದೇನೆ. ನಾನೇ ಕುಟುಂಬದ ಯಜಮಾನಿ’ ಎಂಬುದು ಸುಮಿಯ ಅತ್ತೆಯ ವಾದ.
‘ಚುನಾವಣೆ ಗೆದ್ದಂತೆ, ಸೊಸೆಯಾಗಿ ಸೇರು ಒದ್ದು ಮನೆ ಪ್ರವೇಶ ಮಾಡಿದ್ದೇನೆ. ನೀವು ನಿವೃತ್ತರಾಗಿ ನನಗೆ ಯಜಮಾನಿ ಹುದ್ದೆ ಹಸ್ತಾಂತರಿಸಬೇಕು’ ಎಂಬುದು ಸುಮಿಯ ಒತ್ತಾಯ.
‘ನಾನು ಬದುಕಿರುವವರೆಗೂ ಅದು ಸಾಧ್ಯವಿಲ್ಲ’ ಎಂದಳು ಅತ್ತೆ.
‘ಚುನಾವಣೆ ನಡೆಸೋಣ, ಗೆದ್ದವರಿಗೆ ಯಜಮಾನಿ ಪಟ್ಟ...’ ಸುಮಿ ಪಟ್ಟು ಬಿಡಲಿಲ್ಲ.
‘ಮಕ್ಕಳನ್ನು, ನನ್ನನ್ನು ಬೆದರಿಸಿ ವೋಟ್ ಹಾಕಿಸಿಕೊಂಡು ನೀನೇ ಗೆಲ್ತೀಯ, ಒಬ್ಬಂಟಿ ಅಮ್ಮ ಸಿಂಗಲ್ ವೋಟಿನಲ್ಲಿ ಸೋಲ್ತಾಳೆ’ ಶಂಕ್ರಿ ಮಧ್ಯ ಪ್ರವೇಶಿಸಿದ.
‘ಎದುರು ಮನೆಯ ಅತ್ತೆಯು ಸೊಸೆಗೆ ಪಟ್ಟಕಟ್ಟಿ ತಾನು ಜಪಮಣಿ ಎಣಿಸಿಕೊಂಡಿದ್ದಾಳೆ, ಅವಳನ್ನು ನೋಡಿ ಕಲಿಯಿರಿ’- ಸುಮಿ.
‘ಪಕ್ಕದ ಮನೆ ಸೊಸೆಯು ಅತ್ತೆಗೆ ಯಜಮಾನಿಕೆ ಬಿಟ್ಟುಕೊಟ್ಟು ದೊಡ್ಡತನ ತೋರಿದ್ದಾಳೆ’- ಅತ್ತೆ.
‘ಹುದ್ದೆ ನೀಡದಿದ್ದರೆ ಬೇರೆ ಸಂಸಾರ ಹೂಡಿ ಯಜಮಾನಿಯಾಗಿ ಸ್ವತಂತ್ರವಾಗಿ ಬಾಳುತ್ತೇನೆ...’ ಸುಮಿ ಎಚ್ಚರಿಸಿದಳು.
ಶಂಕ್ರಿ ಎಚ್ಚೆತ್ತುಕೊಂಡ. ಅತ್ತೆ-ಸೊಸೆ ನಡುವೆ ಹಲವು ಸುತ್ತಿನ ಸಂಧಾನ ಸಭೆ ನಡೆಸಿ, ಮೊದಲ ಅರ್ಧ ಅವಧಿ ಅಮ್ಮನಿಗೆ, ಉಳಿದ ಅವಧಿ ಹೆಂಡತಿಗೆ ಯಜಮಾನಿ ಹುದ್ದೆ ನೀಡುವ ಒಪ್ಪಂದವನ್ನು ಪ್ರಕಟಿಸಿದ.
‘ಆದರೆ ಗೃಹಲಕ್ಷ್ಮಿ ಯೋಜನೆಯ ಅರ್ಧ ಪಾಲು ಹಣ ತನಗೆ ಸೇರಬೇಕು...’ ಎಂಬ ಕಂಡೀಷನ್ನಿನೊಂದಿಗೆ ಸುಮಿ ಒಪ್ಪಂದ ಒಪ್ಪಿಕೊಂಡಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.