ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಅರಣ್ಯ ನ್ಯಾಯ

Published 20 ಆಗಸ್ಟ್ 2024, 0:45 IST
Last Updated 20 ಆಗಸ್ಟ್ 2024, 0:45 IST
ಅಕ್ಷರ ಗಾತ್ರ

‘ಮಂಡೇದ ಮೆಡಿಕಲ್ ಕಾಲೇಜಲ್ಲಿ ಎಕ್ಸ್‌ಪೈರಾದ ಹಳೇ ಔಷಧಿಗಳನ್ನೆಲ್ಲಾ ಸ್ಟಾಕು ಮಡೀಕಂದು ಅದುನ್ನೇ ಜನಿಗೆ ಚುಚ್ಚಿ ಚುಚ್ಚಿ ಯಮದೋರ ತಕ್ಕೆ ಬಿರ‍್ರನೆ ಕಳುಗುಸೋ ಪ್ಲಾನ್ ನಡೆದಿತ್ತಂತೆ?’ ಚಂದ್ರು ಗಾಬರಿಯಾಗಿದ್ದ.

‘ಅಲ್ಲ ಕಜಾ, ಹೆಣ್ಣುಟ್ತದೆ ಅಂತ ಆಲೆಮನೇಲೇ ಕೊಂದು ಮಂಡೇದ ಮರ್ವಾದೆ ಮುಕ್ಕಾಗಂಗೆ ಮಾಡ್ಯವೆ. ಬಡ್ಡೆತ್ತವ್ಕೆ ಅವ್ವ ಬೇಕು, ಹೆಂಡ್ರು ಬೇಕು, ಸೊಸೆ ಬೇಕು ಮಗಳು ಬ್ಯಾಡವುಲಾ?’ ಯಂಟಪ್ಪಣ್ಣ ನೊಂದ್ಕತ್ತು.

‘ಅದೇನ್ ಕಂಡ್ರಿ. ಕಾರ್ಮಿಕರು ಮೆಹನತ್ತು ಮಾಡಿ ತುಂಗಭದ್ರ ಅಣೆಗೆ ಹೊಸ ಎಲಿಮೆಂಟುಗಳ ಜೋಡಿಸ್ಯವರಂತೆ. ಈಗಾಗ್ಲೇ ಕಡೆದೋಗಿರೋ 20 ಟಿಎಂಸಿ ಅಡಿ ಅಂದ್ರೆ 566 ಕೋಟಿ ಲೀಟರ್ ನೀರಿನ ಕಾಸನ್ನ ಅಲ್ಲಿ ಸೇರಿಕ್ಯಂದಿರೋ ಬ್ಯಾಡ್ ಎಲಿಮೆಂಟುಗಳ ಜೋಬಿಂದ ಲೀಟರಿಗೆ ಇಪ್ಪತ್ತು ರೂಪಾಯಿಯಂಗೆ ವಸೂಲು ಮಾಡಬೇಕು’ ತುರೇಮಣೆ ರೂಲಿಂಗ್ ಕೊಟ್ಟರು.

‘ಇಲ್ಲಿ ನೋಡ್ರಿ, ಕೆಆರ್‌ಎಸ್ಸಿಗೆ ಬಾಗಿನ ಕೊಟ್ಟಾರಂತೆ. ಕೆಆರ್‌ಎಸ್‌ ಗೇಟು ಯಂಗದೆ ಅಂತ ಅಲ್ಲಿರೋ ಬ್ಯಾಡ್ ಎಲಿಮೆಂಟುಗಳು ನೋಡಿಕ್ಯಂದವೋ ಇಲ್ಲವೋ ಕಾಣ್ನಲ್ಲಾ?’ ಅಂತಂದೆ ನಾನು.

‘ಈ ಭಂಗ ಕೇಳ್ರಪ್ಪಾ. ಮೂಡರಬಲೆಗೆ ಹಳೇಹುಲಿ ಸಿದ್ದಣ್ಣ ಸಿಗೇ ಬಿದ್ದು ಕಗ್ಗಂಟಾಗ್ಯಾದಂತೆ. ಯಂಗೆ ಬಚಾವಾದದೋ?’ ಯಂಟಪ್ಪಣ್ಣ ಬೇಜಾರು ಮಾಡಿಕೊಂಡಿತು.

‘ರಾಜಕಾರಣಿಗಳೇನಣೈ, ಬಿದಿರ ಕೋಲು ಮುರಿದ್ರೂ ಕಾಣ್ದಂಗೆ ಬೆಸಗೆ ಹಾಕಿಬುಡ್ತರೆ’ ಚಂದ್ರು ಸಿಟ್ಟಿಗೆ ಬಿದ್ದಿದ್ದ.

‘ರಾಜಕೀಯ ಅರಣ್ಯ ನ್ಯಾಯದೇಲಿ ಇವೆಲ್ಲಾ ಕಾಮನ್ ಕಯ್ಯಾ ಚಂದ್ರು. ಬಲಿಷ್ಠರು ಅವರ ನಸುಗುನ್ನಿ ಆಟದೇಲಿ ನಮ್ಮ ಕುತ್ತಿಗೆ ಕೂದು ತಾವು ಮಜ ತಕ್ಕತರೆ. ಸತ್ತು ಬೇಯೋ ನಾವೇ ಕುರಿಗಳು. ನಮ್ಮನ್ನ ಕೇಳಿ ಯಾರೂ ಕಾರ ಅರೆಯಕುಲ್ಲ’ ಅಂದ್ರು ತುರೇಮಣೆ.

‘ರಾಜಕೀಯ ನಮ್ಮ ಕೆರದೊಳಗಿನ ಕಲ್ಲಿದ್ದಂಗೆ ಸಾ. ಮೆಟ್ಟಿಕಂದ ಮ್ಯಾಲೆ ಉಸುರುಯ್ಯದೇ ನೀಸಬೇಕು. ಇಷ್ಟೇ ನಮ್ಮ ಯೇಗ್ತೆ!’ ಅಂದ ನನ್ನ ಮಾತಿಗೆ ಎಲ್ಲರೂ ತಲೆದೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT