ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ‘ಸಿ’ ಗ್ರೇಡಿಗರು!

Last Updated 11 ಜುಲೈ 2021, 19:11 IST
ಅಕ್ಷರ ಗಾತ್ರ

ಬೆಕ್ಕಣ್ಣನಿಗೆ ಎಸ್ಎಸ್ಎಲ್‌ಸಿ ಓದುವ ಹುಕಿ ಬಂದಿತ್ತು. ಕಳೆದ ವರ್ಷದ ಆರಂಭದಲ್ಲಿ ಪಕ್ಕದಲ್ಲಿದ್ದ ಸರ್ಕಾರಿ ಸ್ಕೂಲಿಗೆ ಸೇರಿಸಿದ್ದೆ. ಮೊದಲು ನಾಕಾರು ತಿಂಗಳು ವಿದ್ಯಾಗಮ ಆಯಿತು. ಆಮೇಲೆ ಒಂದೆರಡು ತಿಂಗಳು ತರಗತಿಗಳೂ ನಡೆದವು. ಮಹಾ ಕುಡುಮಿಯಂತೆ ನಟಿಸುತ್ತ ಏನೋ ಓದಿಕೊಳ್ಳುತ್ತಿದ್ದ ಬೆಕ್ಕಣ್ಣ ಮೊನ್ನೆಯಿಂದ ತೀರಾ ಹ್ಯಾಪು ಮೋರೆ ಮಾಡಿತ್ತು.

‘ನಾ ಎಷ್ಟ್ ಬಡಕೊಂಡೆ... ನನ್ನೂ ಛಲೋ ಪ್ರೈವೇಟ್ ಸ್ಕೂಲಿಗೆ ಸಿಬಿಎಸ್‌ಇ ಅಥವಾ ಐಸಿಎಸ್ಇ ಸಿಲಬಸ್ ಇರೂ ಸ್ಕೂಲಿಗೆ ಸೇರಿಸು ಅಂತ. ಡೊನೇಶನ್ ತುಂಬಾಕೆ ರೊಕ್ಕ ಎಲ್ಲಿಂದ ತರೂದು ಅಂತ್ಹೇಳಿ ಸರ್ಕಾರಿ ಸ್ಕೂಲಿಗೆ ಸೇರಿಸಿದೆ. ಈಗ ನೋಡು... ಸಿಬಿಎಸ್‌ಇ ಅವ್ರಿಗೆಲ್ಲ ಪರೀಕ್ಷೆನೆ ಇಲ್ಲ. ನಮಗ ಸ್ಟೇಟ್ ಸಿಲಬಸ್ಸಿನೋರಿಗೆ ಮಾತ್ರ ಪರೀಕ್ಷೆ ಮಾಡೇಮಾಡ್ತೀವಿ ಅಂತ ನಮ್ಮ ಪರೀಕ್ಷಾ ಸಚಿವರು ಟೊಂಕ ಕಟ್ಟಿ ನಿಂತಾರ’ ಎಂದು ಉದ್ದಕ್ಕೆ ವದರುತ್ತ ಅಳುಮೋರೆ ಮಾಡಿತು.

‘ಪರೀಕ್ಷೆ ಮಾಡೂದು ನಿಮ್ಮ ವಳ್ಳೇದಕ್ಕೆ ಅಲ್ಲೇನು... ಮತ್ತ ಪರೀಕ್ಷೆಲಿ ಹೆಂಗಿದ್ರೂ ಯಾರೂ ಫೇಲೇ ಆಗಂಗಿಲ್ಲ, ಫೇಲಾಗೋರಿನ್ನೂ ಸಿ ಗ್ರೇಡಿನಾಗೆ ಪಾಸ್ ಮಾಡ್ತೀನಿ ಅಂದಾರಲ್ಲ’ ನಾನು ಸಮಾಧಾನಿಸಲು ನೋಡಿದೆ.

‘ಹಳ್ಳಿ ಹುಡುಗರಿಗೆ ಒಎಂಆರ್ ಶೀಟ್ ಹೆಂಗಿರತೈತಿ ಅಂತ್ಲೇ ಗೊತ್ತಿಲ್ಲ. ಖಾಸಗಿ ಸ್ಕೂಲಿಗ್ಹೋಗೋ ಉಳ್ಳವರ ಮಕ್ಕಳೆಲ್ಲ ಒಎಂಆರ್ ಶೀಟಿನಾಗೆ ಛಲೋ ಉತ್ತರ ಬರದು ಎ ಗ್ರೇಡ್ ತಗೋತಾರ, ನನ್ನಂಗ ಸರ್ಕಾರಿ ಸ್ಕೂಲಿನಾಗೆ ಓದಿದವರು ಸಿ ಗ್ರೇಡ್ ಅಂದ್ಹಂಗ ಆತಿಲ್ಲೋ’ ಬೆಕ್ಕಣ್ಣ ಭಾರೀ ಆ್ಯಕ್ಟಿವಿಸ್ಟ್ ದನಿಯಲ್ಲಿ ಕೇಳಿತು.

‘ಅಲ್ಲಲೇ... ನಿಮ್ಮ ಸದಾನಂದ ಮಾಮಾಗೆ ನೋಡಿ ಕಲತುಕೋ. ಮೋದಿಮಾಮಾ ಅವ್ರನ್ನ ಸಿ ಗ್ರೇಡಿನಾಗೆ ಪಾಸು ಮಾಡಿ ಮನಿಗಿ ಕಳಿಸಿದ್ರೂ, ‘ನಗು ನಗುತಾ ನಲಿ ನಲಿ... ಎಲ್ಲಾ ವಿಶ್ವಗುರುವಿನ ಲೀಲೆ’ ಅಂತ ಹಾಡ್ಕೋತ, ನಕ್ಕೋತ ಮನಿಗೆ ಬಂದಾರೆ. ನೀವೂ ಸಿ ಗ್ರೇಡ್ ತಗಂಡು ಹಾಡ್ಕೋತ ಕುಂದುರ್‍ರಿ’ ಎಂದಿದ್ದೇ ಬಾಲ ಮುದುರಿ ಕೂತಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT