ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸಾಲ ಕೊಡ್ರಿ ಸಾ...!

Published 22 ಜನವರಿ 2024, 22:18 IST
Last Updated 22 ಜನವರಿ 2024, 22:18 IST
ಅಕ್ಷರ ಗಾತ್ರ

‘ಸಯಾಬ್ರಿಗೆ ನಮಸ್ಕಾರ ಸಾ!’

‘ನಮಸ್ಕಾರ ಕನಾ. ಬಲ್ರಿ, ಏನಾಗ್ಬೇಕಾಗಿತ್ತು?’

‘ನವ್ಯೋದ್ಯಮ ಸ್ಥಾಪನೆಗೆ ರಾಜ್ಯದಲ್ಲಿ ಭಾರಿ ಉತ್ತೇಜನ ಅದಂತೆ. ನಾವು ಯುವ ಪ್ರತಿಭೆಗಳನ್ನೇ ಆಯ್ಕೆ ಮಾಡಿಕ್ಯಂದ್ದು ಹೊಸ ಉದ್ಯಮ ಸುರು ಮಾಡ್ತಿದೀವಿ. ನಮಗೆ ಯಾರ್ದೂ ಸಪೋರ್ಟಿಲ್ಲ. ನಮಗೆ ಸಾಲ ಕೊಡ್ರಿ ಸಾ’.

‘ಸುಪರ್ ಕಣ್ರಿ, ನಿಮ್ಮ ಥರ ಬ್ರಾಡ್ ಮೈಂಡ್ ಇರೋ ನವ್ಯೋದ್ಯಮ ಪರಿಚಾರಕ ಎಲ್ಲೂ ಸಿಕ್ಕಕುಲ್ಲ’.

‘ಸಾ, ಹೋದೊರ್ಸ ಬಜೆಟ್ಟಲ್ಲಿ ಸಿಎಂ ‘ಇಮಾನ ನಿಲ್ದಾಣದ ತಾವು ಸ್ಟಾರ್ಟಪ್ ಪಾರ್ಕ್ ಮಾಡ್ತೀವಿ, ಸಾಂಕ್ರಾಮಿಕ ರೋಗ ಸಂಶೋಧನೆ ಮಾಡ್ತೀವಿ. ಅದುನ್ನೂ ಮಾಡ್ತೀವಿ, ಇದುನ್ನೂ ಮಾಡ್ತೀವಿ’ ಅಂದಿದ್ರಲ್ಲ, ಏನಾಯ್ತು ಸಾ?’

‘ಹೇಳಿದೋರೆಲ್ಲಾ ಮನೆಗೋದ್ರು. ಪುಗಸಟ್ಟೆ ಸಾಲ ಕೊಡಕ್ಕೆ ನೀವೇನು ರಾಜಕಾರಣಿ ಮಗನೇನ್ರಿ? ಕಾಸು ಕೊಟ್ರೇ ಕೈಸಾಲ ಸಿಗೋದು ಕನಪ್ಪಾ. ನಿಮ್ಮಾಫೀಸು ಎಲ್ಲದೆ? ಎಷ್ಟು ಜನ ಕೆಲಸ ಮಾಡ್ತೀರಿ? ಎಷ್ಟು ಸಾಲ ಬೇಕಾಗ್ಯದೆ? ಯಂಗೆ ತೀರಿಸ್ತೀರಿ?’

‘ಸಾ, ಸಾಲ ತಕಂದು ದೇಸ ಬುಟ್ಟೋಗೋ ಐನಾತಿಗಳಿಗೆ, ಬ್ಯಾಂಕಲ್ಲಿದ್ದ ಕಾಸೆಲ್ಲಾ ಎಪ್ಪೆಸ್ ಮಾಡೋರಿಗೆ, ಬ್ಯಾಂಕಿನೋರ ಥರ ಓಟಿಪಿ ಕೇಳಿ ಅಕೌಂಟಿಗೆ ದುಡ್ಡು ಟ್ರಾನ್ಸ್‌ಫರ್ ಮಾಡಿಕ್ಯಳೋರಿಗೆ, ಬಿಟ್‍ಕಾಯಿನ್ ಯಾಪಾರ ಮಾಡೋರಿಗೆ, ಹೈಜಾಕರುಗಳಿಗೆ ಕರೆದು ಸಾಲ ಕೊಡ್ತೀರ, ನಾವೇನು ಮಾಡಿದ್ದೋ?’

‘ರೀ ಸ್ವಾಮಿ, ಮೊದಲು ಬದುಕೋ ದಾರಿ ನೋಡ್ರೀ. ನೀವೆನನ್ನಾ ಸಂಪಾದನೆ ಮಾಡಬೇಕು ಅಂದ್ರೆ ಸರ್ಕಾರಿ ಉದ್ಯಮಗಳಿಗೆ ಬೋಗಸ್ ಸಪ್ಲೈ ಮಾಡಿ, ಡುಪ್ಲಿಕೇಟ್ ಔಸದಿ ಮಾಡಿ, ತಲೆ ಒಡೆದು ಕಾಸು ಮಾಡಿ, ಫಿಶಿಂಗ್ ಮಾಡಿ, ಇಲ್ಲವಾ ರಾಜಕೀಯಕ್ಕೆ ಸೇರಿಕ್ಯಳಿ’.

‘ಥಾಂಕ್ಯೂ ಸಾ. ನೀವು ಯುವಜನದ ನವ್ಯೋದ್ಯಮಕ್ಕೆ ಸಹಾಯ ಮಾಡ್ತೀರ ಅಂದ್ಕಂದಿದ್ದೋ! ರೈತರಿಗೆ ಶೂನ್ಯ ಬಡ್ಡಿ ದರದೇಲಿ ಸಾಲ ಕೊಡ್ತೀವಿ ಅಂದಿದ್ರಿ. ಯಾವುದೂ ಕಾಣೆನಲ್ಲಾ ಸಾ?’

‘ನಿಮ್ಮಂತೋರಿಗೆಲ್ಲಾ ಸಾಲ ಸಿಕ್ಕಕುಲ್ಲ, ಸಾಲಾ ಚಲ್ ಬಾಹರ್!’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT