ಮಂಗಳವಾರ, ಮಾರ್ಚ್ 21, 2023
20 °C

ಚುರುಮುರಿ | ವಿಲಾಸ ವಿಹಾರ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

‘ನನಗೊಂದು ಇಪ್ಪತ್ತು ಲಕ್ಷ ರೂಪಾಯಿ ರೊಕ್ಕ ಕೊಡು...’ ಬೆಕ್ಕಣ್ಣ ಬೆಳ್ಬೆಳಗ್ಗೆ ವರಾತ ಹಚ್ಚಿತು.

‘ನನ್ನ ಹತ್ತಿರ ಇಪ್ಪತ್ತು ಸಾವ್ರನೂ ಇಲ್ಲ. ನಾ ಜುಜುಬಿ ಸಂಬಳದ ನೌಕರಿ ಮಾಡತೀನಿ. ಎರಡೇ ವರ್ಷದಾಗೆ ನನ್ನ ಆದಾಯ ಡಬಲ್‌ ಟ್ರಿಪಲ್ ಆಗಾಕೆ ನಂದೇನು ಅದಾನಿ ಥರಾ ಕಂಪನಿ ಐತೇನು...’ ನಾನು ವದರಾಡಿದೆ.

‘ಹೋಗ್ಲಿ... ಬ್ಯಾಂಕಿನಾಗೆ ಸಾಲ ಎತ್ತಿಸಿಕೊಡು. ಸಾಲ ತೀರಿಸಲೇಬೇಕು ಅಂತೇನಿಲ್ಲ. ಎನ್‌ಪಿಎ ಅಂದ್ರ ವಸೂಲಾಗದ ಸಾಲದ ಬಾಬತ್ತಿನೊಳಗ ಬರೂ ಹಂಗ ಮಾಡೂಣು. ಕೇಳೀಯಿಲ್ಲೋ... ಮುಂಬೈ ಕಂಪನಿಯೊಂದು ಸುಮಾರು 5,000 ಕೋಟಿ ಸಾಲ ಎನ್‌ಪಿಎ ಅಂತ ಬರೋಡ ಬ್ಯಾಂಕಿಗೆ ಟೋಪಿ ಹಾಕೈತಂತ’ ಬೆಕ್ಕಣ್ಣ ತಾನೂ ಬ್ಯಾಂಕಿಗೆ ಟೋಪಿ ಹಾಕುವ ಕನಸು ಕಾಣತೊಡಗಿತು.

‘ಟೋಪಿ ಹಾಕೂದು ನಮ್ಮಂಥ ಶ್ರೀಸಾಮಾನ್ಯರು ಅಲ್ಲಲೇ... ಅದಕ್ಕೆ ಬ್ಯಾರೇದೇ ಶಾಣ್ಯಾತನ ಬೇಕಾಗತೈತಿ. ಅದ್ಸರಿ... ಈಗೆದಕ್ಕೆ ಇಪ್ಪತ್ ಲಕ್ಷ?’

‘ಮೋದಿ ಮಾಮಾ ಗಂಗಾ ವಿಲಾಸ ಅಂತ ನೌಕಾ ವಿಹಾರ ಶುರು ಮಾಡ್ಯಾರಲ್ಲ... ನಾನೂ ಅದ್ರಾಗೆ ಪ್ರವಾಸ ಹೋಗತೀನಿ. ಎಷ್ಟಕೊಂದು ತೀರ್ಥಕ್ಷೇತ್ರ ದರ್ಶನನೂ ಆಗತೈತಿ. ಕಾಂಗಿಗಳು ಅಷ್ಟ್ ವರ್ಷ ಇದ್ರೂ ಹಿಂತಾ ಅಭಿವೃದ್ಧಿ ಯೋಚನೆನೇ ಮಾಡಿರಲಿಲ್ಲ. ಈಗ ವಿಲಾಸಿ ನೌಕಾ ವಿಹಾರಕ್ಕೆ ಬ್ಯಾರೆ ದೇಶಕ್ಕೆ ಹೋಗೂದೇ ಬ್ಯಾಡ, ನಮ್ಮಲ್ಲೇ ಸಿಗತೈತಿ’ ಉದ್ದಕ್ಕೆ ಭಾಷಣ ಕುಟ್ಟಿತು.

‘ಅಲ್ಲಲೇ... ಆ ವಿಲಾಸೀ ನೌಕೆ ಗಂಗಾ ನದಿಯ ಡಾಲ್ಫಿನ್ ವಲಯದೊಳಗೆ ಹೋಗತೈತಿ. ಅದ್ರಿಂದ ಡಾಲ್ಫಿನ್‌ಗಳಿಗೆ ಅಪಾಯ ಆಗತೈತಿ. ಹಿಂಗ ಪ್ರವಾಸೀ ತಾಣ ಅಭಿವೃದ್ಧಿ ಅಂತ ಹಾರಾಡಿದ್ದಕ್ಕೆ ಉತ್ತರಾಖಂಡದ ಜೋಶಿಮಠ ಮಕಾಡೆ ಬಿದ್ದೈ ತಿ. ಐಷಾರಾಮಿ ರೆಸಾರ್ಟ್, ಹೈವೇ, ಡ್ಯಾಂ ಕಟ್ಟೂದು, ಹಿಂತಾ ಅಭಿವೃದ್ಧಿ ಪರಿಸರಮಾತೆಗೆ ವಜ್ಜೆ ಆಗತೈತಿ’.

ಬೆಕ್ಕಣ್ಣ ನನ್ನ ಮಾತು ಕಿವಿಗೇ ಹಾಕಿ ಕೊಳ್ಳಲಿಲ್ಲ.

‘ಒಂದು ಜೋಶಿಮಠ ಬಿದ್ದರೇನಾತು... ಹಂತಾ ಹತ್ತು ಪ್ರವಾಸೀ ನಗರ ಕಟ್ಟತೀವೇಳು’ ಉಡಾಫೆಯಿಂದ ನಕ್ಕಿತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.