ತೆಪರೇಸಿ, ಗುಡ್ಡೆ ಬಾರಲ್ಲಿ ಗುಂಡಾಕ್ತ ಕೂತಿದ್ದರು. ಎರಡು ಪೆಗ್ ಏರಿದ ಮೇಲೆ ಗುಡ್ಡೆ ಕೇಳಿದ ‘ಗುರೂ... ಈ ಸನಾತನಕ್ಕೂ ಪುರಾತನಕ್ಕೂ ಏನು ವ್ಯತ್ಯಾಸ?’
‘ಎರಡೂ ಒಂದೇ ತರ ಕಾಣ್ತವೆ ಕಣಲೆ, ಆದ್ರೆ ಒಂದೇ ಅಲ್ಲ’.
‘ಮತ್ತೆ ಇಂಡಿಯಾ, ಭಾರತ? ಒಂದೇ ತಾನೆ?’
‘ಅಲ್ಲ, ಈಗ ‘ಇಂಡಿಯಾ’ನೇ ಬೇರೆ, ‘ಭಾರತ’ನೇ ಬೇರೆ’.
‘ಹೌದಾ? ಮತ್ತೆ ಕರ್ನಾಟಕ ಇಂಡಿಯಾದಾಗೈತೋ ಭಾರತದಾಗೈತೋ?’
‘ಅದು ಮುಂದಿನ ಪಾರ್ಲಿಮೆಂಟ್ ಎಲೆಕ್ಷನ್ ರಿಸಲ್ಟ್ ಬಂದ ಮೇಲೆ ಗೊತ್ತಾಕ್ಕತಿ’ ತೆಪರೇಸಿ ನಕ್ಕ.
‘ಹೋಗ್ಲಿಬಿಡು, ಈಗ ಏಷ್ಯಾ ಕಪ್ಪಲ್ಲಿ ಇಂಡಿಯಾ ಆಡ್ತಾ ಐತೋ ಭಾರತವೋ?’
‘ಸದ್ಯಕ್ಕೆ ಇಂಡಿಯಾ ಆಡ್ತಾ ಐತಿ’.
‘ಅವತ್ತು ‘ಇಂಡಿಯಾ’ದೋರು ‘ಭಾರತ್’ ಜೋಡೊ ಮಾಡಿದ್ರು. ಇವತ್ತು ‘ಭಾರತ್’ನೋರು ‘ಇಂಡಿಯಾ’ ಜೋಡೊ ಮಾಡ್ತಾರಾ?’
‘ಗೊತ್ತಿಲ್ಲ...’
‘ಹೋಗ್ಲಿಬಿಡು, ಈಗ ಧರ್ಮ ಅಂದ್ರೇನು?’
‘ಯಾವ ಧರ್ಮ? ಇಂಡಿಯಾದ್ದೋ ಭಾರತದ್ದೋ?’
‘ಥೋ ತೆಲಿ ಕೆಟ್ಟೋತಪ... ಅದು ಬ್ಯಾರೆ ಐತಾ?’ ಗುಡ್ಡೆ ತಲೆ ಕೆರೆದುಕೊಂಡ.
‘ಅದು ಹಂಗೇ... ಈಗ ಧರ್ಮ, ದೇವರು, ಜಾತಿಮತ ಎಲ್ಲ ಇಂಡಿಯಾದ್ದೇ ಬೇರೆ, ಭಾರತದ್ದೇ ಬೇರೆ’.
‘ಅಲೆ ಇವ್ನ, ಹಂಗಾ? ಹೆಸರು ಬದ್ಲಾದ್ರೆ ಎಲ್ಲ ಬದ್ಲಾಗ್ತಾವಾ? ಈ ರಾಜಕಾರಣಿಗಳು ಎಲ್ಲ ಬದ್ಲಾಗ್ತಾರಾ? ಹೋಗ್ಲಿ, ಈಗ ನಿನ್ ಧರ್ಮ ಯಾವುದು?’ ಗುಡ್ಡೆ ಕಪ್ ಎತ್ತಿ ಕೆಳಗಿಟ್ಟ.
‘ನನ್ ಧರ್ಮನಾ? ಈಗ ಬಿಲ್ ಬಂದ ಮೇಲೆ ನೀನು ದುಡ್ಡಿಲ್ಲ ಅಂದ್ರೆ ನಾನೇ ಬಿಲ್ ಕೊಟ್ಟು ನಿನ್ನ ನಿಮ್ಮನಿ ಬಾಗಿಲಿಗೆ ಮಲಗ್ಸಿ ಬರೋದು’.
‘ಗ್ರೇಟ್ ಕಣಲೆ ತೆಪರ, ಅಲ್ಲ ನನ್ ಜೇಬಲ್ಲಿ ದುಡ್ಡಿಲ್ಲ ಅಂತ ನಿಂಗೆಂಗ್ ಗೊತ್ತಾತಲೆ?’
‘ಅದು ನಿನ್ ಮುಖ ನೋಡಿದ್ರೆ ಗೊತ್ತಾಗಲ್ವ?’ ತೆಪರೇಸಿ ನಕ್ಕ. ಗುಡ್ಡೆಗೂ ನಗು ತಡೆಯಲಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.