ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ದುಡ್ಡಿನ ಗಿಡ ನೆಟ್ಟವರು

Published 21 ಏಪ್ರಿಲ್ 2024, 20:04 IST
Last Updated 21 ಏಪ್ರಿಲ್ 2024, 20:04 IST
ಅಕ್ಷರ ಗಾತ್ರ

‘ನಿನ್‌ ಹತ್ರ ಎಷ್ಟ್‌ ಕೋಟಿ ದುಡ್ಡು ಐತಿ?’ ಬೆಕ್ಕಣ್ಣ ಬಲು ಗಂಭೀರವಾಗಿ ಕೇಳಿದಾಗ ನಾನು ಕಕ್ಕಾಬಿಕ್ಕಿಯಾದೆ.

‘ಕೋಟಿ… ನನ್‌ ಹತ್ರ? ತಿಂಗಳ ಕೊನಿಗೆ ಸಾವಿರ ಉಳಿದ್ರೆ ಹೆಚ್ಚು’ ಎಂದು ತಡವರಿಸಿದೆ.

‘ನೀ ವಯಸ್ಸಿನಾಗೆ ಅರ್ಧಶತಕ ಬಾರಿಸಿದಿ… ಇನಾ ತನಾ ಒಂದ್‌ ಕೋಟಿ ರೂಪಾಯಿ ದುಡಿದಿಲ್ಲ. ನೋಡು… ಐದು ತಿಂಗಳ ಕೂಸು ಕೋಟ್ಯಾಧಿಪತಿ ಆಗೈತಿ. 240 ಕೋಟಿ ರೂಪಾಯಿ ಆಸ್ತಿ ಮಾಡೈತಿ!’ ಬೆಕ್ಕಣ್ಣ ನನ್ನ ಮೂತಿಗೆ ತಿವಿಯಿತು.

‘ಇನ್ನೂ ನೆಟ್ಟಗೆ ನಿಲ್ಲಕ್ಕೂ ಬರದ ಐದು ತಿಂಗಳ ಕೂಸು 240 ಕೋಟಿ ಹೆಂಗೆ ದುಡಿತಲೇ?’ ನನಗೆ ನಂಬಿಕೆಯೇ ಆಗಲಿಲ್ಲ.

‘ನಮ್‌ ಮೂರ್ತಿ ಅಜ್ಜಾರು ಅವರ ಮೊಮ್ಮಗನಿಗೆ 15 ಲಕ್ಷ ಇನ್ಫೊಸಿಸ್‌ ಷೇರು ಕೊಟ್ಟಾರಂತೆ. ಅದರ ಬೆಲೆ 240 ಕೋಟಿ ರೂಪಾಯಿ ಅಂತೆ. ಆ ಕೂಸು ಈಗ ಅತ್ಯಂತ ಕಿರಿಯ ಭಾರತೀಯ ಮಿಲಿಯನೇರ್!’ ಬೆಕ್ಕಣ್ಣ ಸುದ್ದಿ ತೋರಿಸಿತು.

‘ಅಬ್ಬಬ್ಬಾ… ಈ ಕೂಸು ಆಗಲೇ ವಾರಕ್ಕೆ 70 ತಾಸು ದುಡಿಲಾಕೆ ಶುರುಮಾಡೈತಿ ನೋಡು!’ ಎಂದು ನಾ ಮೂಗಿನ ಮೇಲೆ ಬೆರಳಿಟ್ಟೆ.

‘ಈ ಕೂಸಿಗೇನೋ ಅಜ್ಜಾರು ಷೇರು ಕೊಟ್ಟಾರೆ, ಕೋಟ್ಯಾಧಿಪತಿ ಆಗೈತಿ. ನಮ್‌ ಸಂಸದರು, ಶಾಸಕರ ಆಸ್ತಿ ಚುನಾವಣೆ ಗೆದ್ದ ಐದು ವರ್ಸದಾಗೆ ಕೋಟಿಗಟ್ಟಲೆ ಹೆಚ್ಚಾಗತೈತಲ್ಲ, ಅದೆಂಗೆ ಅಂತ?!’ ಬೆಕ್ಕಣ್ಣನೂ ಮೂಗಿನ ಮೇಲೆ ಬೆರಳಿಟ್ಟು ಕೇಳಿತು.

‘ಅದೇ ನನಗೂ ತಿಳಿವಲ್ದು. 2019ರ ಚುನಾವಣೆಯಲ್ಲಿ 430 ಕೋಟ್ಯಾಧಿಪತಿ ಅಭ್ಯರ್ಥಿಗಳು ಇದ್ದರಂತೆ. ಈ ಸಲ 450 ಅದಾರಂತೆ. ಈ ಎಲ್ಲಾ ಕೋಟ್ಯಾಧಿಪತಿ ಅಭ್ಯರ್ಥಿಗಳ ಆಸ್ತಿ ಕಳೆದ ಚುನಾವಣೆಯಲ್ಲಿ ಘೋಷಣೆ ಮಾಡಿದ್ದಕ್ಕಿಂತ ಡಬಲ್‌, ಟ್ರಿಪಲ್‌ ಆಗೈತಂತೆ’.

‘ಯಾವ ಪಕ್ಷದವರೇ ಆದರೂ, ಗೆದ್ದ ಕೂಡಲೇ ದುಡ್ಡಿನ ಗಿಡ ನೆಡಾಕೆ ಶುರು ಮಾಡ್ತಾರೆ. ನಮ್‌ ರೈತರಿಗೂ ಒಂದಾದರೂ ದುಡ್ಡಿನ ಗಿಡದ ಸಸಿ ಕೊಟ್ಟಿದ್ರ ಛಲೋ ಇತ್ತು!’ ಎಂದಿತು ಬೆಕ್ಕಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT