ಚುರುಮುರಿ: ಕಷ್ಟಮಂಗಲ ಪ್ರಶ್ನೆ

‘ಸಾ ನಿರ್ಮಲವ್ವ, ಮೋದಿ ಮಾವಾರು ಪೆಟ್ರೋಲಿಗೆ ಹತ್ತು ರೂಪಾಯಿ ಏರಿಸಿ ಈಗ ಒಂಬತ್ತು ರೂಪಾಯಿ ಇಳಿಸಿ ‘ನಮಗೆ ಜನರೇ ಮೊದಲು’ ಅಂತ ನುಲೀತವ್ರೆ?’ ಅಂದೆ.
‘ಇವುರ ಸಿಂಡಾಟಕೆ ಏನೇಳನೆ! ಸಿದ್ದಣ್ಣ ಗೋಮಾಂಸ ಉಣ್ಣಕ್ಕೂ ರೆಡಿಯಂತೆ, ಕುಮಾರಣ್ಣನೋ ‘ಬಿಜೆಪಿ-ಕಾಂಗ್ರೆಸ್ ಲೂಟಿ ದಾಖಲೆ ನಂತಾವದ. ಅದ ಈಚಿಗೆ ಬುಟ್ರೆ ತಲೆಗಳೇ ಉಳ್ಳೋಯ್ತವ!’ ಅಂತ ಸೋಬಾನೆ ಹಾಡ್ತದೆ. ಇವುರ ದೆಸಿಂದಾಗಿ ನಮ್ಮ ಬದುಕು ಅಂಬಲಿ-ತುಂಬೆಸೊಪ್ಪು ತಿನ್ನೋ ಲೆವೆಲ್ಲಿಗೆ ಬಂದದೆ’ ಯಂಟಪ್ಪಣ್ಣ ನೊಂದ್ಕತ್ತು.
‘ಅಣೈ, ಕುಮಾರಣ್ಣ ಕುಂತಲ್ಲೇ ತೆವೀತಿರಲಿ, ನಾವು ನಮ್ಮೂರ ಐನೋರ ತಾವ್ಕೋಗಿ ಕಷ್ಟಮಂಗಲ ಪ್ರಶ್ನೆ ಕೇಳಮು!’ ತುರೇಮಣೆ ಘೋಷಿಸಿದರು.
‘ಇದ್ಯಾವುದು ಸಾ ಕಷ್ಟಮಂಗಲ? ಆಯ್ತು ಅಯ್ನೋರ ಏನು ಪ್ರಶ್ನೆ ಕೇಳೀರಿ?’ ಅಂತಂದೆ.
‘ಬೊಡ್ಡಿಹೈದ್ನೆ, ಕೇಳಕೇನು ಬೇಕಾದೊಷ್ಟವೆ! ಡ್ರಗ್ಸ್ ಕೇಸು, ಪಿಎಸ್‍ಐ ಅಕ್ರಮಿಗಳಿಗೆ ಶಿಕ್ಷೆಯಾದದಾ? ರೈತರ ಬೆಳೆಗೆ ಸರಿಯಾದ ಬೆಲೆ ಸಿಕ್ಕದು ಯಾವಾಗ? ರೋಡುಗಳು ಯಾವಾಗ ಬಾಯಿ ಮುಚ್ಚಿಕಂಡಾವು? ಕೊಂದಾಯ ಇಲಾಖೆ ಸರೋಗದು ಯಾವಾಗ? ರಾಜಕೀಯದೋರ ಟ್ವೀಟಾಟಿಕೆ ಯಾವಾಗ ನಿಂತದು? ಜನಕ್ಕೆ ಒಳ್ಳೇದು ಮಾಡೋ ಬುದ್ಧಿ ರಾಜಕೀಯ ಪಕ್ಷಗಳಿಗೆ ಯಾವಾಗ ಬಂದದು? ಕರ್ನಾಟಕದ ರಾಜಕಾರಣದ ದೂಳು ಮೋದಿ ಕಣ್ಣಿಗೆ ಬಿದ್ದಿಲ್ವಾ? ಗುತ್ತಿಗೆ ಪರ್ಸೆಂಟೇಜ್ ಕಥೆ ಮುಗೀತಾ ಅಂತ ತಿಳಕಮು’ ಅಂದರು.
ಅಯ್ನೋರು ಕವಡೆ ಬುಟ್ಟು ಬೆಳ್ಳು ಎಣಿಸಿ, ಮ್ಯಾಕ್ಕೆ ಕೆಳಿಕ್ಕೆ ನೋಡಿ ‘ನಿನ್ನ ಪ್ರಶ್ನೆಗಳಿಗೆಲ್ಲಾ ಉತ್ತರ ಇಲ್ಲ ಕಯ್ಯಾ! ಆದರೂ ಒಂದೊಗಟು ಹೇಳ್ತಿನಿ ಅರ್ಥ ಮಾಡಿಕೋ- ಅಡ್ಡಗೋಡೆ ಮ್ಯಾಲೆ ಲಡ್ಡು ದೀಪ, ಅಟ್ಟದ ಮ್ಯಾಲೆ ಪುಟ್ಟಲಕ್ಷ್ಮಿ ಕುಂತವಳೆ, ಮೂರು ಪಕ್ಷಿಗಳು ಅಟ್ಟ ಹತ್ತುವಾಗ ಮೂರು ಬಣ್ಣ. ಹತ್ತಿದ ಮ್ಯಾಲೆ ಒಂದೇ ಬಣ್ಣ’ ಅಂದೋರೆ ಎದ್ದು ಮನೆ ಒಳಿಕೆ ಕಡೆದರು.
ನಾವು ಕೋಲೆಬಸವನ ಥರಾ ಎದ್ದು ಹೊಂಟೋ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.