ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಪತ್ರ ಪ್ರಹಸನ

Published 30 ನವೆಂಬರ್ 2023, 20:27 IST
Last Updated 30 ನವೆಂಬರ್ 2023, 20:27 IST
ಅಕ್ಷರ ಗಾತ್ರ

ತೆಪರೇಸಿಯನ್ನು ಪರೀಕ್ಷಿಸಿದ ಡಾಕ್ಟರು, ‘ಏನು ಪ್ರಾಬ್ಲಂ?’ ಎಂದು ಕೇಳಿದರು.

‘ಗೊತ್ತಿಲ್ಲ ಸಾ, ಇತ್ತೀಚೆಗೆ ಸುಂಸುಮ್ನೆ ಏನೇನೋ ಬಡಬಡಿಸ್ತಾರೆ. ‘ಓಯ್, ಕೆಳಗೆ ಬಾ’ ಅಂತಾರೆ, ಕೆಳಗೇ ಇದೀನಲ್ಲ ಅಂದ್ರೆ ಅದೇನೋ ‘ಬಾಯಲ್ಲಿ ಹೇಳಿ...’ ಅಂತಾರೆ’ ಹೆಂಡ್ತಿ ಪಮ್ಮಿ ವರದಿ ಒಪ್ಪಿಸಿದಳು.

‘ಯಾಕ್ರಿ ತೆಪರೇಸಿ, ಏನಾಗಿದೆ ನಿಮ್ಗೆ?’ ಡಾಕ್ಟರು ಬೆನ್ನು ತಟ್ಟಿ ಕೇಳಿದರು.

‘ನಾನು ನಿಮ್ ಜೊತೆ ಕ್ರಿಕೆಟ್ ನೋಡಬೋದಾ?’ ಎಂದ ತೆಪರೇಸಿ. ಡಾಕ್ಟರು ಕಕ್ಕಾಬಿಕ್ಕಿಯಾದರು. ಮತ್ತೆ ಮರುಕ್ಷಣ ‘ಇವನಿಗೆ ಏನ್ ತಿನ್ನಿಸ್ತೀರಾ?’ ಎಂದ.

ಪಮ್ಮಿಗೆ ಗಾಬರಿಯಾಯಿತು. ‘ರೀ... ಸರಿ
ಯಾಗಿ ಮಾತಾಡ್ರಿ, ಇವರು ಡಾಕ್ಟ್ರು...’ ಎಂದಳು.

‘ಆಂಟಿ, ಸ್ವಲ್ಪ ಶುಂಠಿ ಕೊಡ್ತೀರಾ?’ ಎಂದ ತೆಪರೇಸಿ. ಇದನ್ನ ಎಲ್ಲೋ ಕೇಳಿದೀನಲ್ಲ ಅನ್ನಿಸಿತು ಡಾಕ್ಟರಿಗೆ.

‘ನಿಮ್ಮ ಪೇಸ್ಟಿನಲ್ಲಿ ಉಪ್ಪಿನಕಾಯಿ ಇದೆಯಾ?’ ಎಂದ. ಡಾಕ್ಟರಿಗೆ ಅರ್ಥವಾಗಿ ಹೋಯಿತು. ‘ಇವರ ಕಾಯಿಲೆ ಏನೂಂತ ಗೊತ್ತಾಯ್ತು. ಟೀವಿ ಜಾಸ್ತಿ ನೋಡ್ತಾರಾ?’ ಎಂದು ಕೇಳಿದರು.

‘ಅಯ್ಯೋ ವಿಪರೀತ ಸಾ, ನ್ಯೂಸು, ಧಾರಾವಾಹಿ, ಸಿನಿಮಾ ಯಾವುದ್ನೂ ಬಿಡಲ್ಲ. ಜಾಹೀರಾತು ಬರ್ತಿದ್ದಂಗೆ ಇವರೇ ಮೊದ್ಲೇ ಎಲ್ಲ ಹೇಳಿಬಿಡ್ತಾರೆ’.

‘ಕರೆಕ್ಟ್, ಇವೆಲ್ಲ ಟೀವಿ ಜಾಹೀರಾತು ಡೈಲಾಗ್‌ಗಳು’.

‘ಮೊನ್ನೆ ಅದೇನೋ ಪತ್ರ, ಪತ್ರ ಅಂತಿದ್ರು ಸಾ, ಆಸ್ತಿಪತ್ರನೋ ಪ್ರೇಮಪತ್ರನೋ ಗೊತ್ತಾಗ್ತಿಲ್ಲ...’

ಪಮ್ಮಿ ಮಾತಿಗೆ ನಕ್ಕ ಡಾಕ್ಟರು, ‘ಅದು ರಾಜಕೀಯ ಪತ್ರ, ಎಮ್ಮೆಲ್ಲೆ ಒಬ್ರು ಸೀಎಂಗೆ ಬರೆದಿದ್ದು. ಅದು ಸುಖಾಂತ್ಯ ಆಯ್ತಲ್ಲ, ಇವ್ರು ಮತ್ತೆ ಪತ್ರದ ವಿಷ್ಯ ಮಾತಾಡಲ್ಲ ಬಿಡಿ’ ಎಂದರು.

‘ಸರಿ, ಇದಕ್ಕೆಲ್ಲ ಟ್ರೀಟ್‌ಮೆಂಟು?’

‘ಒಂದಾರು ತಿಂಗಳು ನಿಮ್ಮನೆ ಟೀವಿ ಕನೆಕ್ಷನ್ ತೆಗೆಸಿಬಿಡಿ, ಎಲ್ಲ ಸರಿಹೋಗುತ್ತೆ’.

‘ಅಯ್ಯೋ... ಮತ್ತೆ ನಾನು ‘ಮನೆಯೊಂದು ಆರು ಬಾಗಿಲು’ ಸೀರಿಯಲ್ ನೋಡ್ಬೇಕಲ್ಲ ಸಾ...’

ಪಮ್ಮಿ ಮಾತು ಕೇಳಿ ಡಾಕ್ಟರು ತಲೆ ಮೇಲೆ ಕೈ ಹೊತ್ತು ಕೂತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT