ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಪಾರ್ಲಿಮೆಂಟ್ ಪಾಠ

Published 23 ಜನವರಿ 2024, 20:15 IST
Last Updated 23 ಜನವರಿ 2024, 20:15 IST
ಅಕ್ಷರ ಗಾತ್ರ

ಪರೀಕ್ಷಾಪಟುಗಳಿಗೆ ಪಾರ್ಲಿಮೆಂಟ್ ಪಾಠ ಹೇಳಲು ದೆಹಲಿಯ ದೊಡ್ಡ ಮೇಷ್ಟ್ರು ಬಂದಿದ್ದರು.

‘ಪಕ್ಷದ ಗುರಿ, ತತ್ವ, ಸಿದ್ಧಾಂತವನ್ನು ಆಳವಾಗಿ ಅಧ್ಯಯನ ಮಾಡಿ ಅಳವಡಿಸಿಕೊಳ್ಳಬೇಕು. ಪಾರ್ಲಿಮೆಂಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ‘ಪದವೀಧರ’ರಾಗಿ ದೇಶಾಡಳಿತದ ಕೀರ್ತಿಪತಾಕೆ ಹಾರಿಸುತ್ತೇನೆ ಎಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀವೆಲ್ಲರೂ ಸಂಕಲ್ಪ ಮಾಡಬೇಕು...’ ಅಂದರು ದೊಡ್ಡ ಮೇಷ್ಟ್ರು.

‘ಸಾರ್, ನಮ್ಮಲ್ಲಿ ಬಣಗಳ ವ್ಯಾಜ್ಯೋತ್ಸವ ವಿಜೃಂಭಿಸಿದೆ. ಒಗ್ಗಟ್ಟಾಗಿ ಪಕ್ಷದ ಧ್ವಜ ಹಾರಿಸಬೇಕಾದವರು ಪರಸ್ಪರ ಭುಜ ಹಾರಿಸಿ ಜಗಳ ಆಡುತ್ತಿದ್ದಾರೆ. ಭಿನ್ನಮತ, ಗುನ್ನಮತವನ್ನು ದಯವಿಟ್ಟು ನಿವಾರಿಸಿ’ ಕೇಳಿಕೊಂಡರು ಒಬ್ಬರು.

‘ಡೋಂಟ್‍ ವರಿ, ಗುನ್ನಮತೀಯರನ್ನು ಮುಲಾಜಿಲ್ಲದೆ ಡಿಬಾರ್ ಮಾಡಿ ಪಕ್ಷದಲ್ಲಿ ಶಿಸ್ತು, ಸಂಯಮ ಕಾಪಾಡ್ತೀವಿ’ ಎಂದರು.

‘ಸಾರ್, ಪಾಠ ಪ್ರವಚನದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನೂ ಕಲಿಯಬೇಕಲ್ವಾ?’ ಇನ್ನೊಬ್ಬರು ಕೇಳಿದರು.

‘ಹೌದು, ಇಂಡೋರ್‌ನಲ್ಲಿ ಶಿಸ್ತಿನ ಪಾಠ, ಔಟ್‍ಡೋರ್‌ನಲ್ಲಿ ಕುಸ್ತಿ ಆಟ ಕಲಿಯಬೇಕು. ಸಾಂಸ್ಕೃತಿಕ ಚಟುವಟಿಕೆಯಾಗಿ ಭಾಷಣ ಕಲೆಯನ್ನು ಕರಗತ ಮಾಡಿಕೊಂಡರೆ ಪರೀಕ್ಷಾರ್ಥಿಗೆ ಗೆಲುವು ಸುಲಭವಾಗುತ್ತದೆ’.

‘ಸಾರ್, ಪರಪಕ್ಷದವರು ನಮ್ಮ ಪಕ್ಷ ಸೇರಲು ಬಂದರೆ ಪ್ರವೇಶ ನೀಡಬಹುದಾ?’

‘ಅವರ ಪ್ರೋಗ್ರೆಸ್ ರಿಪೋರ್ಟ್, ಕ್ಯಾರೆಕ್ಟರ್ ಸರ್ಟಿಫಿಕೇಟ್ ಆಧಾರದ ಮೇಲೆ ಅಡ್ಮಿಷನ್ ಕೊಡಿ. ಲಾಭದಾಯಕ ನಾಯಕ ಎನಿಸಿದರೆ ಯಾವ ರಿಪೋರ್ಟೂ ಪರಿಗಣಿಸದೆ ಅಡ್ಮಿಷನ್ ಮಾಡಿಕೊಳ್ಳಿ, ಆಪರೇಷನ್ ಮಾಡಿಯಾದರೂ ಪಕ್ಷಕ್ಕೆ ಎಳೆದುತಂದು ಶಕ್ತಿ ಹೆಚ್ಚಿಸಿಕೊಳ್ಳಿ’.

‘ಸಾರ್, ಕೊನೆಯ ಪ್ರಶ್ನೆ, ಯಾವ ಯಾವ ಪರೀಕ್ಷಾರ್ಥಿಗಳಿಗೆ ಹಾಲ್ ಟಿಕೆಟ್ ಕೊಡ್ತೀರಿ?’

‘ಷಟಪ್!... ಪಕ್ಷದ ಸಿಲೆಬಸ್‍ನಲ್ಲಿ ಇಲ್ಲದ ಉದ್ಧಟತನದ ಪ್ರಶ್ನೆ ಕೇಳಕೂಡದು. ಟಿಕೆಟ್ ಪ್ರಶ್ನೆ ಬಿಟ್ಟು ಹಾರ್ಡ್‌ವರ್ಕ್‌ ಕಡೆಗೆ ಗಮನಹರಿಸಿ’ ಎಂದು ರೇಗಿದ ದೊಡ್ಡ ಮೇಷ್ಟ್ರು ಪಾಠ ಮುಗಿಸಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT