ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಫಲಿತಾಂಶದ ಸಿಹಿ-ಕಹಿ

Last Updated 21 ಜುಲೈ 2021, 20:24 IST
ಅಕ್ಷರ ಗಾತ್ರ

‘ಅಂತೂ ರೆಕಾರ್ಡು, ನೂರಕ್ಕಷ್ಟೇ ನೂರು ಫಲಿತಾಂಶ. ಎಲ್ಲರೂ ಪಾಸ್... ಮೊದಲ ಸ್ಥಾನಕ್ಕೆ 2,239 ವಿದ್ಯಾರ್ಥಿಗಳು! ಆದರೇನು, ಸಂಭ್ರಮ ಕೊಂಡಾಡೋಕ್ಕಾಗೋಲ್ಲ’ ಪಿಯು ಪರೀಕ್ಷೆಯ ಫಲಿತಾಂಶದತ್ತ ಬೆಳಕು ಚೆಲ್ಲಿದೆ.

‘ಆದರೂ ಸಪ್ಪೆ ಸಪ್ಪೆ, ವಿದ್ಯಾರ್ಥಿಗಳ ಫೋಟೊ ಪೇಪರ್‌ನಲ್ಲಿ ಬರೋಲ್ಲ, ‘ನಮ್ಮ ಸಂಸ್ಥೆಯ ಹೆಮ್ಮೆ’ ಅಂತ ಟ್ಯೂಷನ್ ಸೆಂಟರ್‌ಗಳು ಭಿತ್ತಿಚಿತ್ರ ಹಾಕ್ಕೊಳ್ಳೋಕ್ಕಾಗೋಲ್ಲ. ಟೀವಿಗಳಲ್ಲಿ ‘ನಿಮ್ಮ ಸಾಧನೆಯ ಹಿಂದಿನ ಕಥೆಯೇನು’ ಅಂತ ಕೇಳೋವರಿಲ್ಲ, ಸಿಹಿ ತಿನ್ನಿಸುತ್ತಿರುವ, ಅಪ್ಪಿ ಹಿಡಿದ ಪೋಷಕರ ಫೋಟೊ ಕಾಣದು... ನಮ್ಮ ಕಾಲದಲ್ಲಿ ಸಪ್ಲಿಮೆಂಟರೀಲಿ ಪಾಸ್ ಆಗಿದ್ದಕ್ಕೇ ಮನೇಲಿ ಮೈಸೂರುಪಾಕ್ ಮಾಡಿದ್ದರು’ ಅತ್ತೆ ಮೆಲುಕು ಹಾಕಿದರು.

‘ಸದ್ಯ ಇನ್ನೊಂದು ಮುಖ್ಯವಾದ ಸಂಗತಿ ಅಂದ್ರೆ, ಕಡಿಮೆ ಮಾರ್ಕ್ಸ್ ಬಂತು ಅಂತಾನೋ ಫೇಲ್ ಆಯಿತು ಅಂತಲೋ ವಿಪರೀತ ಅನಾಹುತಗಳನ್ನು ಮಾಡ್ಕೊಳ್ಳೋದು ತಪ್ತು’.

‘ಈಗ್ಲೂ ಅಷ್ಟೇ, ಸಮಾಧಾನವಿಲ್ಲದಿದ್ರೆ ಫಲಿತಾಂಶವನ್ನ ನಿರಾಕರಿಸಬಹುದು, ಮತ್ತೆ ಪರೀಕ್ಷೆ ಬರೀಬಹುದು. ಆದರೆ ಹುಷಾರಾಗಿರ ಬೇಕು. ಯಾಕಂದ್ರೆ ಬರೆದ ಪರೀಕ್ಷೇಲಿ ಕಡಿಮೆ ಮಾರ್ಕ್ಸ್ ಬಂದ್ರೆ, ಅದೇ ಫೈನಲ್’.

‘ಕುಚ್ ಭೀ ಲಿಖೇ ಬಿನಾ, ನಾವು ಮಾತ್ರ ಬರೀಬೇಕು’ ಪುಟ್ಟಿಯ ಅಳಲು.

‘ಯಾಕೆ ಹತ್ತನೆಯವರೂ ಬರೀಲಿಲ್ವಾ, ಅದೂ ದಿನಕ್ಕೆ ಮೂರು ಸಬ್ಜೆಕ್ಟ್! ಅದನ್ನ ನೋಡಿದರೆ ನಿಮ್ಮದು ಮೇಲು. ಪುಸ್ತಕಗಳಂತೂ ‘ಖರೀದಿಸಿದಾಗ ಹೇಗಿತ್ತೋ ಹಾಗೇ ಅನ್ನೋ ಸ್ಥಿತಿಯಲ್ಲಿ ಇದೆ’ ನನ್ನವಳು ಗುಡುಗಿದಳು.

‘ಇನ್ನೇನು ಕಾಲೇಜು ಶುರುವಾಗುತ್ತೆ ಅಂತಾಯ್ತಲ್ಲ, ಥಿಯೇಟರ್‌ಗಳೂ ರಿಓಪನ್, ಯಾವ ತೊಂದರೇನು ಇರೋಲ್ಲ’ ನಾನೆಂದೆ.

ಕಂಠಿ ಹೊರಲಾರದೆ ಹೊರುತ್ತ ದೊಡ್ಡ ಬ್ಯಾಗ್ ಹಿಡಿದು ಬಂದ. ‘ಬಾಸ್ ಕಸಿನ್ ಮಗ ಹತ್ತರಲ್ಲಿ ಎರಡು ಬಾರಿ ಡುಮ್ಕಿ, ಪಿ.ಯುಲಿ ಫಸ್ಟ್ ಅಟೆಂಪ್ಟ್‌ಗೇ ಸೆಕೆಂಡ್ ಕ್ಲಾಸ್. ಅದಕ್ಕೆ ಸ್ವೀಟ್ ಬಾಕ್ಸ್ ನಿಮಗೂ ತಂದೆ, ಇನ್ನೂ ಹಂಚೋದಿದೆ ಬರ‍್ಲಾ’ ಎಂದ.

‘ಹೆಲ್ಪ್ ಮಾಡೋಕ್ಕೆ ಇವರೂ ಬರ್ತಾರೆ, ಖಾಲಿ ಕೂತಿದಾರೆ... ತೊಟ್ಟು ಕಾಫಿ ಕುಡಿದು ಹೋಗ್ತೀರಂತೆ’ ಎಂದಳು ನನ್ನತ್ತ ನೋಡುತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT