ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಸೀಲ್‍ಡೌನ್ ಅಲಂಕಾರ

Last Updated 20 ಏಪ್ರಿಲ್ 2020, 16:48 IST
ಅಕ್ಷರ ಗಾತ್ರ

‘ಭಾಳಾ ಸಡ್ಲಾಯ್ತಾದೆ ಕನೋ’ ಅಂದ್ರು ತುರೇಮಣೆ. ಪಾಪ ಅಂದುಕಂಡು ‘ಅಲ್ಲಾ ಸಾ, ಸಡ್ಲಾದ್ರೆ ಲಾಡಿ ಬಿಗಿಯಾಗಿ ಎಳೆದು ಕಟ್ಕಳದಲ್ವಾ’ ಅಂದೆ ನಾನು. ಅವರಿಗೆ ಅಷ್ಟಕ್ಕೇ ಸಿಟ್ಟು ಬಂತು.

‘ಥೂ ಬಡ್ಡಿಹೈದ್ನೆ, ನನ್ನ ಚಡ್ಡಿ ಲಾಡಿ ಸಡ್ಲಾಗದೆ ಅಂದ್ನಾ. ಐಟಿ-ಬಿಟಿಯೋರು, ಅಧಿಕಾರಿಗಳು ಆಪೀಸಿಗೆ ಬರಬೇಕಂತೆ. ಲಾಕ್‍ಡೌನ್ ಆದ್ರೂ ಕ್ಯಾಮೆ ಇಲ್ಲದ ಜನೆಲ್ಲಾ ತಿದಿಮೂಗು ಇಕ್ಕ್ಯಂಡು ಬೀದೀ ಮ್ಯಾಲೇ ಅವ್ರೆ. ಪೊಲೀಸ್ನೋರು ಕೈಮುಗಿದು ಕಾಲಿಗೆ ಬಿದ್ರೂ ಕೇಳತಿಲ್ಲ’ ಅಂದ್ರು.

‘ಪೊಲೀಸಿನೋರು ಕುಡಕಂದು ಗಲಾಟೆ ಮಾಡೊ ಗರತೀರ ಕಾಯ್ತರಾ, ಪಾಸಂಡಿಗಳ ಚೆಕ್ ಮಾಡತರಾ, ಜನ ಗುಟ್ಕಾ-ಪಾನ್ ಮಸಾಲ ಎಲ್ಲಿ ಉಗೀತರೆ ಅಂತ ನೋಡತರಾ? ಇಲ್ಲಾ ಪಾದರಾಯರ ರೋಗಕ್ಷೇಮ ನೋಡ್ತರಾ?’ ಅಂದೆ.

‘ಬಡ್ಡಿ ಹೈದ್ನೆ, ನಿನ್ನೇ ಕಂಟೈನ್ಮೆಂಟು ಝೋನಿಗೆ ಕಮಾಂಡರಾಗಿ ತಗಬೇಕಾಗಿತ್ತು ಕನೋ’ ಅಂತ ತೌಡು ಕುಟ್ಟಿದರು.

‘ನೋಡಿ ಸಾ, ಸೀಲ್‍ಡೌನ್ ಇದ್ರೂ ಅಡಬಿಟ್ಟಿ ಓಡಾಡ ಜನಕ್ಕೆ ಭಯಸ್ಕರ ಶಿಕ್ಷಣ ಕೊಡಬೇಕು. ಬೀದಿ ಮೇಲೆ ಬಂದ್ರೆ ಹೆಂಗೋ ಅಂತ ತೊಳ್ಳೆ ನಡಗಬೇಕು ಸಾ’ ಅಂದೆ.

‘ಆಯ್ತಪ್ಪಾ ಈಗ ಕ್ವಾರಂಟೈನಿಗೆ ಬರಕುಲ್ಲ ಅಂತ ಗಲಾಟೆ. ನೀನಾಗಿದ್ರೆ ಏನು ಮಾಡ್ತಿದ್ದೆ? ನಿನ್ನ ಪ್ಲಾನೇನು?’ ಅಂದರು. ನಾನು ಮುಂದುವರಿಸಿದೆ.

‘ನೋಡಿ ಸಾ, ಸೀಲ್‍ಡೌನ್- ಲಾಕ್‍ಡೌನ್ ಏರಿಯಾದಲ್ಲಿ ರೋಡಿಗೊಂದೊಂದು ಕಿಕ್‍ಪೋಸ್ಟ್ ಮಾಡುಸ್ತೀನಿ. ಅಂಗೈ ಅಗಲದ ಕಬ್ಬಿಣದ ರಿಂಗು ಮ್ಯಾಲೆ ಕೊರೊನಾ ವೈರಸ್ ಥರಾ ಮುದ್ರೆ ಮಾಡಿಸಿ, ಅದ ಕೆಂಡದ ಮೇಲೆ ಚೆನ್ನಾಗಿ ಕಾಯಿಸಿ ಇಟ್ಟಿರತೀವಿ. ಸಬೂಬು ಹೇಳಿಕ್ಯಂಡು ರೋಡಿಗೆ ಬಂದೋರಿಗೆಲ್ಲಾ ಅಂಡಿನ ಮೇಲೆ ಬಿಸಿಬಿಸಿ ಕೊರೊನಾ ಮುದ್ರಾಧಾರಣೆ ಮಾಡ್ತೀವಿ. ಕುಂಟಿಕ್ಯಂಡೋಗಿ ದಬ್ಬಾಕ್ಯಂಡು ಮನಿಕಬೇಕು! ಆದ್ರೂ ಎರಡನೇ ಸಾರಿ ಬೀದಿಗೆ ಬಂದೋರಿಗೆ ಬೆನ್ನಮ್ಯಾಲೆ, ಮೂರನೇ ಸಾರಿಗೂ ಬಂದೋರಿಗೆ ಹಣೆ ಮ್ಯಾಲೆ ಮುದ್ರೆ ಹಾಕಿಸ್ತೀನಿ. ಸೀಲ್‍ಡೌನ್ ಅಂದ್ರೆ ಬ್ಯಾಕಿಗೆ ಸೀಲ್ ಹಾಕೋ ಬ್ಯಾಕ್‍ಅಲಂಕಾರ ಅಲ್ಲುವ್ರಾ ಸಾರ್’ ಅಂತಂದೆ ನಾನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT