ಶನಿವಾರ, ಜುಲೈ 31, 2021
26 °C

ಚುರುಮುರಿ: ನಾಲ್ಕನೇ ಅಲೆ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ಸಂಜೆ ಟೀ ಸಮಯಕ್ಕೆ ಸರಿಯಾಗಿ ತೆಪರೇಸಿ ಮನೆಗೆ ಬಂದ ಗುಡ್ಡೆ ‘ಏನಲೆ... ರಾತ್ರಿ ಫ್ರೀನಾ? ಗುಂಡು ಹಾಕಾಕೆ ಹೋಗೋಣ್ವ?’ ಎಂದ.

‘ಶ್... ಮೆಲ್ಲಗೆ ಮಾತಾಡೋ, ಅಡುಗಿ ಮನ್ಯಾಗೆ ವಾತಾವರಣ ಸರಿ ಇಲ್ಲ. ಕಿಡಿ ಬಿದ್ರೆ ಬೆಂಕಿ ಹತ್ತುತತಿ’ ತೆಪರೇಸಿ ಪಿಸುಗುಟ್ಟಿದ.

‘ಯಾಕಲೆ ಏನಾತು?’

‘ಏನಿಲ್ಲ, ಲಾಕ್‍ಡೌನ್ ತೆಗೆದಾರಲ್ಲ, ಎಲ್ಲಿಗಾದ್ರು ಟ್ರಿಪ್ ಹೋಗಾಣ ಅಂತ ಪಮ್ಮಿ ತೆಲಿ ತಿಂತಿದ್ಲು. ನಾನು ಇನ್ನೂ ಕೊರೊನಾ ಕಡಿಮೆ ಆಗಿಲ್ಲ ಇರು, ಮೂರನೇ ಅಲೆ ಬೇರೆ ಬರಾಕತ್ತೇತಿ ಅಂದೆ. ಅದ್ಕೆ ಸಿಟ್ಟಿಗೆದ್ದು ಮಾತುಬಿಟ್ಟಾಳ. ಇಷ್ಟೊತ್ತಾತು, ಇನ್ನೂ ಟೀ ಬಂದಿಲ್ಲ ನೋಡು’ ತೆಪರೇಸಿ ವಿವರಿಸಿದ.

‘ನಿನ್ತೆಲಿ, ಟ್ರಿಪ್ ತಾನೇ? ನಾಳೆನೇ ಹೋಗೋಣ ನಡಿ ಅನ್ನಬೇಕು. ಆಮೇಲೆ ಏನಾದ್ರು ಒಂದು ಸುಳ್ಳು ಹೇಳಿ ಮುಂದಕ್ಕೆ ಹಾಕಬೇಕು. ಟಿ.ವಿ. ರಿಪೋಟ್ರು ನೀನು, ನಿನಗೆ ಸುಳ್ಳು ಹೇಳೋದು ಕಲಿಸಬೇಕಾ?’ ಗುಡ್ಡೆ ಕಿಸಕ್ಕೆಂದ.

‘ಅದಾತು, ಮಧ್ಯಾನ ಇನ್ನೊಂದು ಎಡವಟ್ಟಾತು. ‘ಅಡುಗಿ ಮನಿನಲ್ಲಿ ಸೋರಾಕತ್ತೇತಿ, ಒಂದು ವಾರದಿಂದ ಯಾರೂ ಕೇಳೋರಿಲ್ಲ’ ಅಂತ ಕಿಟಿಕಿಟಿ ಶುರು ಮಾಡಿದ್ಲು. ನಂಗೂ ಸಿಟ್ಟಿತ್ತಾ, ‘ಸೋರ್ತಿದ್ರೆ ಅದನ್ನ ನೀನೇ ಹಿಡ್ಕಂಡು ನಿಂದ್ರು’ ಅಂದೆ. ಅಲ್ಲಿಗೆ ಕತಿ ಮುಗೀತು...’

‘ಅಂದ್ರೆ ಕೆಆರ್‌ಎಸ್ ಡ್ಯಾಂ ಬಿರುಕಿನ ಗಲಾಟಿ ನಿಮ್ಮನ್ಯಾಗೂ ಶುರು ಆದಂಗಾತು, ಮತ್ತೆಂಗೆ? ರಾತ್ರಿ ಹೋಗೋದೋ...’

ಗುಡ್ಡೆ ಮಾತಿನ್ನೂ ಮುಗಿದಿರಲಿಲ್ಲ. ಅಡುಗೆ ಮನೇಲಿ ಪಾತ್ರೆ, ಸೌಟು, ಚಮಚಗಳ ಆರ್ಭಟ ಶುರುವಾಯಿತು. ಗುಡ್ಡೆ ಗಾಬರಿಯಿಂದ ‘ಏನಲೆ ಇದು?’ ಎಂದ ಮೆಲ್ಲಗೆ.

‘ಇದಾ? ನಾಲ್ಕನೇ ಅಲೆ... ಸುಮ್ನೆ ಸೌಂಡ್ ಮಾಡದೆ ಎದ್ದು ಮನೆಗೋಗು...’ ಬೆವರೊರೆಸಿಕೊಂಡ ತೆಪರೇಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು