ಗುರುವಾರ , ಜೂನ್ 30, 2022
22 °C

ಚುರುಮುರಿ: ಉಕ್ರೇನ್ ಪಾದಯಾತ್ರೆ

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ನಮ್ ಬಸಣ್ಣ ಚಿನ್ನ ತೂಗಿದಂಗೆ ಬಜೆಟ್ಟು ರೆಡಿ ಮಾಡಿ ಕೊಟ್ಟಿರದೇನೋ ಸರಿ, ಆದರೆ ರಾಜಕೀಯ ಪಾದಯಾತ್ರೆ ಮಾಡೋರಿಗೂ ನೀರಿನ ವ್ಯಾನು ಯೋಜನೆ ಘೋಷಣೆ ಮಾಡಬೇಕಾಗಿತ್ತು’ ಅಂತ ನೊಂದ್ಕಂಡರು ತುರೇಮಣೆ.

‘ಅಲ್ಲಾ ಸಾ, ಎಂಬಿಬಿಎಸ್ ಓದಕೋಗಿದ್ದ ಪಾಪದ ಹುಡ್ಲು ಉಕ್ರೇನಿನಗೆ ಹೆದರಿ ಹೇರ್ ಲಿಫ್ಟ್‌ ಮಾಡಿಕ್ಯಂಡವೆ. ಅವುನ್ನ ವಾಪಸ್ ಕರಕಬರದು ಯಂಗೆ ಅಂತ ಯೋಚ್ನೆ ಮಾಡದೆ ನಗಸಾರ ಆಡ್ತಿರಾ?’ ಅಂತ ಸಿಟ್ಟು ತೋರಿಸಿದೆ.

‘ರಾಜಕಾರಣಿಗಳು, ರಿಯಲ್ ಎಸ್ಟೇಟ್ ಕುಳಗಳು ಜಾತಿಗೊಂದು, ಬೀದಿಗೊಂದು ಮೆಡಿಕಲ್ ಕಾಲೇಜು ತಕ್ಕಂದು ಕೋಟಿ-ಕೋಟಿ ಡೊನೇಶನ್ ಕೇಳ್ತ ಕುಂತವರೆ. ಬುದುವಂತ ಮಕ್ಕಳಿಗೆ ಫ್ರೀ ಸೀಟು ಕೊಡಕ್ಕಾಗಲ್ವೇನ್ಲಾ? ಉಕ್ರೇನಿಗೋದೋರು ಇಲ್ಲಿ ಅರ್ಹತಾ ಪರೀಕ್ಷೇನೆ ಪಾಸು ಮಾಡಕ್ಕಾಗಲ್ಲ ಅಂತ ಚ್ವಾರೆ ಮಾತಾಡತರೆ ಮಂತ್ರಿಗಳು’ ಅಂತ ಬೇಜಾರಾದರು.

‘ಉಕ್ರೇನಿಂದ ಹುಡ್ಲು ವೀಡಿಯೋ ಮಾಡಿದ್ವಂತೆ ಕನ್ರೋ. ‘ನಾವು ರಷ್ಯಾ ದೇಸಕ್ಕೆ ನಡಕೋಯ್ತಿವಿ. ಮುಂದುಕ್ಕೆ ನೀವೇ ಜವಾಬ್ದಾರರು’ ಅಂತ!’ ಯಂಟಪ್ಪಣ್ಣ ಚಿಂತೆಗೆ ಬಿತ್ತು.

‘ಅಣೈ, ರಾಜಕಾರಣಿಗಳು ಮ್ಯಾಕೆದಾಟು ಪಾದಯಾತ್ರೆ ಮಾಡಿ ದೂಳೆಬ್ಬಿಸಿದ ಖುಷಿಲವ್ರೆ. ‘ಸ್ಯಾನೆ ಮಜವಾಗದೆ! ಹಿಂಗೇ ಮಹದಾಯಿ, ಎತ್ತಿನಹೊಳೆ, ಕೃಷ್ಣಾ ಪಾದಯಾತ್ರೆ ಮಾಡುತ್ಲೇ ಇರಮು’ ಅಂತ ಕೈ ಪಕ್ಸ ಅಂದದಂತೆ. ಉಕ್ರೇನಲ್ಲಿ ಹುಡ್ಲು ಕೈಲಿ ಹಿಡಿದುದ್ದು ಕಾಂಗ್ರೇಸ್ ಧ್ವಜ ಅಂದ್ಕಂದು ಅಲ್ಲಿಗೂ ಪಾದಯಾತ್ರೆ ಮಾಡಬೌದು. ಮುಂದೆ ಅಧಿಕಾರ ಹಿಡಿಯಕ್ಕೆ ಅನುಕೂಲಾಯ್ತದೆ ಅಂತ ಮಂತ್ರಿಗಳು ‘ನಾವೇ ಉಕ್ರೇನಿಗೆ ಪಾದಯಾತ್ರೆ ಮಾಡಿ ಹುಡ್ಲುನೆಲ್ಲಾ ಎತ್ತಾಕ್ಕ್ಯಂದು ಬತ್ತೀವಿ!’ ಅಂತ ದಿಬ್ಬಣ ಹೊಂಡಬೌದಂತೆ’ ಅಂದ್ರು ತುರೇಮಣೆ.

‘ಅದ್ಕೆ ಮಂತೆ ಶಾಸಕಾಂಗ ದರಿದ್ರವಾಗ್ಯದೆ ಅಂತ ದತ್ತಣ್ಣ ನೊಂದ್ಕಂಡಿರದು’ ಅಂದೆ.

‘ಅದಿರ‍್ಲಿ ರಶ್ಯಾದೋವು ಇವುನ್ನೆಲ್ಲಾ ಯುದ್ಧ ಕೈದಿಗಳು ಅಂತ ಒಳಾಕ್ಕಾಂಡ್ರೇನು ಮಾಡದ್ಲಾ?’ ಯಂಟಪ್ಪಣ್ಣ ತನ್ನ ಶಂಕೆ ಹೇಳಿತು.

‘ಬುಡಿ ಯಂಟಪ್ಪಣ್ಣ. ರಾಜ್ಯ ನೆಮ್ಮದಿಯಾಗಿರತದೆ’ ಅನ್ನದಾ ತುರೇಮಣೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.