ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಚರ್ಚೆ: ಮಿತಿ ಮತ್ತು ರದ್ದತಿಯ ಭೀತಿ

Last Updated 3 ಡಿಸೆಂಬರ್ 2022, 2:04 IST
ಅಕ್ಷರ ಗಾತ್ರ

ಒಬಿಸಿ ಸಮುದಾಯಗಳು ಮೀಸಲಾತಿ ಪಡೆಯಲು ಮತ್ತು ಕೆನೆಪದರವನ್ನು ಮೀಸಲಾತಿಯಿಂದ ಹೊರಗೆ ಇರಿಸಲು ನಿಗದಿ ಮಾಡಿದ ಆದಾಯ ಮಿತಿಗಿಂತ ಇಡಬ್ಲ್ಯುಎಸ್‌ಗೆ ನಿಗದಿ ಮಾಡಲಾಗಿರುವ ಆದಾಯ ಮಿತಿಯು ಬಹಳ ಹೆಚ್ಚು. ಇತರ ಮೀಸಲಾತಿಯ ವ್ಯಾಪ್ತಿಯಲ್ಲಿ ಬರುವ ವರ್ಗಗಳು ಬಡತನದಲ್ಲಿಯೇ ಇದ್ದರೂ ಈ ವರ್ಗಗಳನ್ನು ಇಡಬ್ಲ್ಯುಎಸ್‌ ಮೀಸಲಾತಿಗೆ ಪರಿಗಣಿಸಲಾಗುವುದಿಲ್ಲ ಎಂಬುದು ಆಘಾತಕರ. ಇದಕ್ಕೆ ಯಾವುದೇ ಕಾರಣವನ್ನೂ ನೀಡಲಾಗಿಲ್ಲ

------

-ನ್ಯಾಯಮೂರ್ತಿ ಕೆ. ಚಂದ್ರು

ಮೀಸಲಾತಿಯು ಶೋಷಿತ ವರ್ಗಗಳನ್ನು ಸಶಕ್ತಗೊಳಿಸುವ ಪ್ರಕ್ರಿಯೆ ಎಂಬುದರ ಕುರಿತು ನಿರಂತರವಾಗಿ ಚರ್ಚೆ ನಡೆದಿದೆ. ಮೀಸಲಾತಿಯ ಪರಿಕಲ್ಪನೆಗೆ ಸಂಬಂಧಿಸಿ ‘ವರ್ಗ’ ಮತ್ತು ‘ಜಾತಿ’ಯ ವಿಚಾರದ ಗ್ರಹಿಕೆಯು ನ್ಯಾಯಾಂಗಕ್ಕೆ ಮಾತ್ರವಲ್ಲ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ನಿಲುಕಿಗೆಕೂಡ ಸಿಕ್ಕಿಲ್ಲ. ಸಂವಿಧಾನದಲ್ಲಿ 395 ವಿಧಿಗಳು ಇದ್ದರೂ 15 ಮತ್ತು 16ನೇ ವಿಧಿಗಳಲ್ಲಿ ಮಾತ್ರ ‘ಜಾತಿ’ ಮತ್ತು ‘ವರ್ಗ’ದ ಪ್ರಸ್ತಾಪ ಇದೆ. ಅಷ್ಟೊಂದು ಸುದೀರ್ಘವಾದ ಸಂವಿಧಾನದಲ್ಲಿಯೂ ‘ವರ್ಗ’ ಮತ್ತು ‘ಜಾತಿ’ಯ ವ್ಯಾಖ್ಯಾನ ಇಲ್ಲ. ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಕೂಡ ಈ ಎರಡು ಪದಗಳ ಕುರಿತು ಸಂವಾದ ನಡೆದಿಲ್ಲ.

ನ್ಯಾಯಮೂರ್ತಿ ಕೆ. ಚಂದ್ರು
ನ್ಯಾಯಮೂರ್ತಿ ಕೆ. ಚಂದ್ರು

‘ಜಾತಿ’ ಮತ್ತು ‘ವರ್ಗ’ಕ್ಕೆ ಸಂಬಂಧಿಸಿದ ಮೊದಲ ಪರೀಕ್ಷೆಯು ಮದ್ರಾಸ್‌ ಹೈಕೋರ್ಟ್‌ನ ಮುಂದೆ ಬಂತು. ಬಳಿಕ ಅದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ಮದ್ರಾಸ್‌ ಪ್ರಾಂತ್ಯದ ಆಗಿನ ಸರ್ಕಾರವು (ಉತ್ತರ ಮಲಬಾರ್‌, ದಕ್ಷಿಣ ಕನ್ನಡ, ಆಂಧ್ರ ಪ್ರದೇಶ ಒಳಗೊಂಡ ಪ್ರದೇಶ) ಸರ್ಕಾರಿ ಉದ್ಯೋಗಗಳನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ಹಂಚಿಕೆ ಮಾಡುವ ಪದ್ಧತಿ ಅಳವಡಿಸಿಕೊಂಡಿತ್ತು. 1950ರ ಜನವರಿ 26ರಂದು ಸಂವಿಧಾನವು ಜಾರಿಗೆ ಬಂದ ಬಳಿಕವೂ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಜಾತಿ ಆಧಾರಿತ ಸರ್ಕಾರಿ ಆದೇಶವನ್ನು ಸರ್ಕಾರವು ಹೊರಡಿಸಿತ್ತು. ಈ ಆದೇಶದ ಆಧಾರದಲ್ಲಿ ಹೀಗೆ ಮೀಸಲಾತಿ ನೀಡಲಾಗಿತ್ತು– ಬ್ರಾಹ್ಮಣೇತರರು (ಹಿಂದೂ) (6), ಹಿಂದುಳಿದ ಹಿಂದುಗಳು (2), ಬ್ರಾಹ್ಮಣರು (2), ಹರಿಜನ (2), ಆಂಗ್ಲೊ ಇಂಡಿಯನ್‌ ಮತ್ತು ಭಾರತೀಯ ಕ್ರೈಸ್ತರು (1) ಮತ್ತು ಮುಸ್ಲಿಂ (1).

ಮದ್ರಾಸ್‌ ಸರ್ಕಾರವು 1950ರ ಜುಲೈ 27ರಂದು ಹೊರಡಿಸಿದ್ದ ಆದೇಶವನ್ನು ಮದ್ರಾಸ್‌ ಹೈಕೋರ್ಟ್ ರದ್ದುಪಡಿಸಿತ್ತು. ಮದ್ರಾಸ್ ಸರ್ಕಾರವು ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು. ಮದ್ರಾಸ್‌ ಹೈಕೋರ್ಟ್‌ನ ಆದೇಶವನ್ನು ರದ್ದುಪಡಿಸಲು ಸುಪ್ರಿಂ ಕೋರ್ಟ್‌ ನಿರಾಕರಿಸಿತು. ದಕ್ಷಿಣದಲ್ಲಿ ಉಂಟಾದ ಪ್ರತಿಭಟನೆಯ ಕಾರಣದಿಂದಾಗಿ ಸರ್ಕಾರವು ಸಂವಿಧಾನಕ್ಕೆ ಮೊದಲ ತಿದ್ದುಪಡಿ ಮಾಡಿ 16(4) ವಿಧಿಯನ್ನು ಸೇರಿಸಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಿತು. ಹೀಗೆ, ಈ ತಿದ್ದುಪಡಿಯು ಮೀಸಲಾತಿ ಪ್ರಕ್ರಿಯೆಯ ಮೈಲುಗಲ್ಲಾಯಿತು.

ಆದರೆ, ಜಾತಿ ಮತ್ತು ವರ್ಗದ ಗೋಜಲು ಪ್ರಶ್ನೆಯು ನ್ಯಾಯಾಲಯಗಳನ್ನು ಸದಾ ಕಾಲ ಕಾಡುತ್ತಲೇ ಬಂದಿದೆ. ಹಿಂದುಳಿದ ವರ್ಗಗಳನ್ನು ಗುರುತಿಸಲು ಕರ್ನಾಟಕ ಸರ್ಕಾರವು ಆಯೋಗವೊಂದನ್ನು ನೇಮಿಸಿದ ವಿಚಾರವು ಸುಪ್ರೀಂ ಕೋರ್ಟ್‌ ಮುಂದೆ ಬಂತು. ನ್ಯಾಯಮೂರ್ತಿ ಒ.ಚಿನ್ನಪ್ಪ ರೆಡ್ಡಿ ಅವರು ಜಾತಿ ಮತ್ತು ವರ್ಗದ ನಡುವಣ ಸಂಬಂಧವನ್ನು ಹೀಗೆ ವಿವರಿಸಿದ್ದಾರೆ: ‘ಭಾರತದ ಗ್ರಾಮೀಣ ಸಮಾಜದಲ್ಲಿ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಶಕ್ತಿಯು ಜಾತಿ ವ್ಯವಸ್ಥೆಯೊಂದಿಗೆ ಎಷ್ಟೊಂದು ಹಾಸು ಹೊಕ್ಕಾಗಿದೆ ಎಂದರೆ ಜಾತಿಯೇ ಸಾಮಾಜಿಕ ಹಿಂದುಳಿದಿರುವಿಕೆ ಮತ್ತು ಬಡತನದ ಕಾರಣ ಎಂದು ಯಾವುದೇ ಹಿಂಜರಿಕೆ ಇಲ್ಲದೆ ಹೇಳಬಹುದು. ಆದ್ದರಿಂದ, ಸಾಮಾಜಿಕ ಹಿಂದುಳಿದಿರುವಿಕೆಯನ್ನು ವ್ಯಕ್ತಿಯ ಜಾತಿಯ ಜೊತೆಗೆ ಗುರುತಿಸಬಹುದು’.

‘ಒಂದು ಜಾತಿಯುಸಾಮಾಜಿಕವಾಗಿ ಹಿಂದುಳಿದಿದೆ ಎಂಬುದನ್ನು ಗುರುತಿಸಲು ಬಡತನ, ಜಾತಿ, ವೃತ್ತಿ ಮತ್ತು ವಸತಿಯು ಮುಖ್ಯ ಅಂಶಗಳಾಗಿವೆ... ಆದರೆ, ನಮ್ಮ ದೇಶದ ಬಹುಪಾಲು ಜನರು ಬಡವರೇ ಆಗಿರುವುದರಿಂದ ಮತ್ತು ಅವರಲ್ಲಿ ಕೆಲವರು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿದ್ದು, ಕೆಲವರು ಹಿಂದುಳಿದಿರುವುದರಿಂದ ಸಾಂವಿಧಾನಿಕವಾಗಿ ಹಿಂದುಳಿದವರು ಎಂದು ಗುರುತಿಸಲು ಬಡತನ
ವೊಂದನ್ನೇ ಮಾನದಂಡವಾಗಿ ಇರಿಸಿಕೊಳ್ಳಲು ಸಾಧ್ಯವಿಲ್ಲ’ (ಕೆ.ವಿ.ವಸಂತ್‌ ಕುಮಾರ್‌, 1985).

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ (ಎಸ್‌ಇಬಿಸಿ) ಮಂಡಲ್‌ ಆಯೋಗದ ವರದಿಯ ಆಧಾರದಲ್ಲಿ 1990ರ ದಶಕದಲ್ಲಿ ಮೀಸಲಾತಿ ಘೋಷಿಸಿದಾಗ, ಬಲಪಂಥೀಯ ರಾಜಕೀಯ ಪಕ್ಷಗಳ ಕುಮ್ಮಕ್ಕಿನಿಂದ ವಿದ್ಯಾರ್ಥಿಗಳು ಗಲಭೆ ಸೃಷ್ಟಿಸಿದರು. ವಿಚಾರವು ಸುಪ್ರೀಂ ಕೋರ್ಟ್ ಮುಂದೆ ಮತ್ತೊಮ್ಮೆ ಬಂತು ಮತ್ತು ಒಂಬತ್ತುನ್ಯಾಯಮೂರ್ತಿಗಳ ಪೀಠವು ಅದರ ವಿಚಾರಣೆ ನಡೆಸಿತು. ಸಂವಿಧಾನದ 16(4)ನೇ ವಿಧಿಯು ಸಾಮಾಜಿಕ ಹಿಂದುಳಿದಿರುವಿಕೆಗೆ ಸಂಬಂಧಿಸಿದ್ದಾಗಿದೆ ಮತ್ತು ಖಂಡಿತವಾಗಿಯೂ ಭಾರತದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯು ಒಂದರೊಡನೊಂದು ತಳಕು ಹಾಕಿಕೊಂಡಿದೆ. ಆರ್ಥಿಕ ಮಾನದಂಡವೊಂದರ ಮೇಲೆ ಮಾತ್ರ ಹಿಂದುಳಿದ ವರ್ಗವನ್ನು ಗುರುತಿಸಲು ಸಾಧ್ಯವಿಲ್ಲ. ಹಾಗಾಗಿಯೇ ಆರ್ಥಿಕ ಮಾನದಂಡದ ಮೂಲಕ ಮಾತ್ರ ಮೀಸಲಾತಿಯನ್ನೂ ನೀಡಲಾಗದು (ಇಂದಿರಾ ಸಾಹ್ನಿ, 1992).

ಏಮ್ಸ್‌, ಜವಾಹರಲಾಲ್‌ ಸ್ನಾತಕೋತ್ತರ ವೈದ್ಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಮುಂತಾದ ಸಂಸ್ಥೆಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಯಲ್ಲಿ ಮೀಸಲಾತಿಯನ್ನು ಹೊರಗಿಟ್ಟಾಗ ಸಂವಿಧಾನಕ್ಕೆ 93ನೇ ತಿದ್ದುಪಡಿಯನ್ನು 2006ರಲ್ಲಿ ಸಂಸತ್ತು ತಂದಿತು. ಈ ತಿದ್ದುಪಡಿಗೆ ಅನುಗುಣವಾಗಿ ಕೇಂದ್ರೀಯ ಶಿಕ್ಷಣ ಸಂಸ್ಥೆಗಳು(ಪ್ರವೇಶಾತಿಯಲ್ಲಿ ಮೀಸಲಾತಿ) ಕಾಯ್ದೆ 2006 ಅನ್ನು ಜಾರಿಗೆ ತರಲಾಯಿತು. ಇದರ ಪ್ರಕಾರ, ಎಸ್‌ಸಿಗೆ ಶೇ 15, ಎಸ್‌ಟಿಗೆ ಶೇ 7.5 ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶೇ 27ರಷ್ಟು ಮೀಸಲಾತಿಯನ್ನು ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ನೀಡಲಾಯಿತು.

ಇತರ ಹಿಂದುಳಿದ ವರ್ಗಗಳ ಜನರು ಸರ್ಕಾರಿ ನೌಕರಿಗೆ ಸೇರುವ ಸಂದರ್ಭದಲ್ಲಿ ಮಾತ್ರ ಮೀಸಲಾತಿಗೆ ಅರ್ಹತೆ ಹೊಂದಿದ್ದಾರೆಯೇ ಹೊರತು ಸೇರಿದ ನಂತರ ಅಲ್ಲ ಎಂದು ಮಂಡಲ್‌ ಆಯೋಗದ ಅನ್ವಯ ಒಬಿಸಿಗೆ ಮೀಸಲಾತಿಯ ವಿಚಾರದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, 1995ರಲ್ಲಿ 77ನೇ ತಿದ್ದುಪಡಿ ಮೂಲಕ ಸಂವಿಧಾನಕ್ಕೆ 16 (4ಎ) ವಿಧಿಯನ್ನು ಸೇರಿಸಲಾಯಿತು. ಸರ್ಕಾರಿ ಹುದ್ದೆಯ ಯಾವುದೇ ವರ್ಗ ಅಥವಾ ವರ್ಗಗಳಲ್ಲಿ ಇರುವವರಿಗೂ ಬಡ್ತಿಯಲ್ಲಿ ಮೀಸಲಾತಿ ನೀಡಲು ಈ ತಿದ್ದುಪಡಿಯು ಅವಕಾಶ ಕೊಟ್ಟಿತು.

ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲು ಹಲವು ರಾಜ್ಯ ಸರ್ಕಾರಗಳು ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಉತ್ತರಾಖಂಡ ಸರ್ಕಾರವು ಪ್ರಮಾಣಾತ್ಮಕ ದತ್ತಾಂಶ ಸಂಗ್ರಹಿಸಲು ಸಮಿತಿಯೊಂದನ್ನು ನೇಮಿಸಿತು. ಪ್ರಾತಿನಿಧ್ಯ ಕಡಿಮೆ ಇರುವ ಎಸ್‌ಸಿ, ಎಸ್‌ಟಿ ಸಮುದಾಯಗಳ ಜನರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿತು. ಆದರೆ, ಸರ್ಕಾರ ಅದನ್ನು ನಿರಾಕರಿಸಿತು. ಈ ವಿಚಾರವು ಸುಪ್ರೀಂ ಕೋರ್ಟ್‌ಗೆ ಬಂತು. ಬಡ್ತಿಯಲ್ಲಿ ಮೀಸಲಾತಿ ನೀಡಲೇಬೇಕು ಎಂದು ನ್ಯಾಯಾಲಯದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲಾಗದು ಎಂದು ಕೋರ್ಟ್‌ ಹೇಳಿತು (ಮುಕೇಶ್‌ ಕುಮಾರ್‌, 2020).

ಈ ಮೂಲಕ, ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿಗೆ ಪೂರ್ಣವಿರಾಮ ಬಿತ್ತು ಮತ್ತು ಬಡ್ತಿಯಲ್ಲಿ ಮೀಸಲು ಒಂದು ಕನಸಾಗಿ ಬಿಟ್ಟಿತು. ಸಂವಿಧಾನದ 12ನೇ ವಿಧಿಯ ಅನ್ವಯ, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು (ಪಿಎಸ್‌ಯು) ಸರ್ಕಾರದ ಭಾಗವೇ ಆಗಿವೆ. ಹಾಗಾಗಿ, ಅಲ್ಲಿನ ನೇಮಕಾತಿಯಲ್ಲಿ ಮೀಸಲಾತಿ ನೀಡುವುದು ಕಡ್ಡಾಯ. ಆದರೆ, ಉದಾರೀಕರಣ ಮತ್ತು ಖಾಸಗೀಕರಣದ ಕಾರಣದಿಂದ ಪಿಎಸ್‌ಯುಗಳಲ್ಲಿ ಇದ್ದ ಸರ್ಕಾರದ ಬಂಡವಾಳವನ್ನು ಹಿಂದಕ್ಕೆ ಪಡೆಯಲಾಗಿದೆ. ಈ ಮೂಲಕ ಪಿಎಸ್‌ಯುಗಳಲ್ಲಿ ಕೂಡ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇಲ್ಲದಂತಾಗಿದೆ.

ಲೋಕಸಭೆಗೆ 2019ರಲ್ಲಿ ಚುನಾವಣೆ ನಡೆಯುವುದಕ್ಕೆ ಸ್ವಲ್ಪ ಮೊದಲು, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂವಿಧಾನಕ್ಕೆ 103ನೇ ತಿದ್ದುಪಡಿಯನ್ನು ತರಾತುರಿಯಲ್ಲಿ ತಂದಿತು. 2019ರ ಜನವರಿ 14ರಿಂದ ಜಾರಿಗೆ ಬರುವಂತೆ ಈ ತಿದ್ದುಪಡಿಯನ್ನು ಸಂಸತ್ತು ಅಂಗೀಕರಿಸಿತು. ಸವರ್ಣೀಯರಲ್ಲಿ ಇರುವ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್‌) ಭಾರಿ ಆದಾಯ ಮಿತಿಯ ಮೀಸಲಾತಿಯು 2019ರ ಲೋಕಸಭಾ ಚುನಾವಣೆಯಲ್ಲಿ ನೆರವು ನೀಡಬಹುದು ಎಂಬುದು ಲೆಕ್ಕಾಚಾರವಾಗಿತ್ತು. ಎಲ್ಲ ರೀತಿಯ ಮೀಸಲಾತಿಯೂ
ಶೇ 50ರ ಮಿತಿಯನ್ನು ಮೀರಬಾರದು ಎಂದು ಸುಪ್ರೀಂ ಕೋರ್ಟ್‌ ನಿಗದಿ ಮಾಡಿದ್ದನ್ನು ಈ ವಿಶೇಷ ಶೇ 10ರ ಮೀಸಲಾತಿಯು ಮೀರುತ್ತದೆ ಎಂಬುದನ್ನು ಸರ್ಕಾರವು ಗಣನೆಗೇ ತೆಗೆದುಕೊಳ್ಳಲಿಲ್ಲ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನಿಗದಿ ಮಾಡಲಾಗಿದೆ. ಒಬಿಸಿ ಮೀಸಲಾತಿಯನ್ನು ನಿಗದಿ ಮಾಡುವಾಗ ಜನಸಂಖ್ಯೆಯ ಅನುಪಾತವನ್ನು ಗಣನೆಗೆ ತೆಗೆದುಕೊಂಡಿಲ್ಲ. ಮೀಸಲಾತಿಯನ್ನು ಶೇ 27ಕ್ಕೆ ನಿಗದಿ ಮಾಡಲಾಯಿತು.

ಮೀಸಲಾತಿಯಿಂದ ಹೊರಗೆ ಇದ್ದ ಸಮುದಾಯಗಳ ಜನಸಂಖ್ಯೆಯ ದತ್ತಾಂಶವನ್ನು ಸರ್ಕಾರವು ಯಾವತ್ತೂ ಸಂಗ್ರಹಿಸಿದ್ದೇ ಇಲ್ಲ. ಹೀಗಿರುವಾಗ, ಮೀಸಲಾತಿಯನ್ನು ಶೇ 10ಕ್ಕೆ ನಿಗದಿ ಮಾಡಿದ್ದು ಹೇಗೆ ಎಂಬುದು ಸ್ಪಷ್ಟವಿಲ್ಲ. ಒಬಿಸಿ ಸಮುದಾಯಗಳು ಮೀಸಲಾತಿ ಪಡೆಯಲು ಮತ್ತು ಕೆನೆಪದರವನ್ನು ಮೀಸಲಾತಿಯಿಂದ ಹೊರಗೆ ಇರಿಸಲು ನಿಗದಿ ಮಾಡಿದ ಆದಾಯ ಮಿತಿಗಿಂತಇಡಬ್ಲ್ಯುಎಸ್‌ಗೆ ನಿಗದಿ ಮಾಡಲಾಗಿರುವ ಆದಾಯ ಮಿತಿಯು ಬಹಳ ಹೆಚ್ಚು. ಇತರ ಮೀಸಲಾತಿಯ ವ್ಯಾಪ್ತಿಯಲ್ಲಿ ಬರುವ ವರ್ಗಗಳು ಬಡತನದಲ್ಲಿಯೇ ಇದ್ದರೂ ಈ ವರ್ಗಗಳನ್ನು ಇಡಬ್ಲ್ಯುಎಸ್‌ ಮೀಸಲಾತಿಗೆ ಪರಿಗಣಿಸಲಾಗುವುದಿಲ್ಲ ಎಂಬುದು ಆಘಾತಕರ. ಇದಕ್ಕೆ ಯಾವುದೇ ಕಾರಣವನ್ನೂ ನೀಡಲಾಗಿಲ್ಲ.

ಇಡಬ್ಲ್ಯುಎಸ್‌ ಮೀಸಲಾತಿ ಮತ್ತು 103ನೇ ತಿದ್ದುಪಡಿಯನ್ನುಸುಪ್ರೀಂ ಕೋರ್ಟ್ 3:2 ಬಹುಮತದೊಂದಿಗೆ ಎತ್ತಿ ಹಿಡಿದಿದೆ. ಮೀಸಲಾತಿ ಹೊಂದಿರುವ ಇತರ ವರ್ಗಗಳಿಗೆ ಕೂಡ ಇಡಬ್ಲ್ಯುಎಸ್‌ ಮೀಸಲಾತಿಯನ್ನು ಏಕೆ ವಿಸ್ತರಿಸಿಲ್ಲ ಎಂಬುದು ಮಾತ್ರ ಭಿನ್ನಮತದ ತೀರ್ಪು ನೀಡಿದ ನ್ಯಾಯಮೂರ್ತಿಗಳ ‍ಪ್ರಶ್ನೆಯಾಗಿತ್ತು. ಕೇಂದ್ರವು ನಿಗದಿ ಮಾಡಿರುವ ಆದಾಯ ಮಿತಿಯ ಕುರಿತೂ ಕೆಲವು ಸಂದೇಹಗಳನ್ನುವ್ಯಕ್ತಪಡಿಸಲಾಗಿದೆ (ಜನಹಿತ ಅಭಿಯಾನ, 2022). ಸುಪ್ರೀಂ ಕೋರ್ಟ್‌ ನಿಗದಿ ಮಾಡಿದ ಶೇ 50ರ ಮೀಸಲಾತಿಯ ಉಲ್ಲಂಘನೆಯ ಕುರಿತು ಅನುಮಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ತಮಿಳುನಾಡಿದ್ದೂ (ಶೇ 69) ಸೇರಿದಂತೆ ವಿವಿಧ ರಾಜ್ಯಗಳ ಮೀಸಲಾತಿ ವ್ಯವಸ್ಥೆಯಮರುಪ‍ರಿಶೀಲನೆಗೆ ಇದು ಅಡ್ಡಿ ಮಾಡಬಹುದು ಎಂದಿದ್ದಾರೆ.

ಇಡಬ್ಲ್ಯುಎಸ್‌ ಸಮುದಾಯಗಳಿಗೆ ನೀಡಲಾದ ಶೇ 10ರಷ್ಟು ಮೀಸಲಾತಿಯು ಈವರೆಗೆ ಇದ್ದ ಪ್ರತಿಭೆ ಮತ್ತು ಮೀಸಲಾತಿ ಎಂಬ ವಾದವನ್ನು ತಳ್ಳಿ ಹಾಕುತ್ತದೆ. ಈವರೆಗೆ ಅಪರಿಚಿತವಾಗಿದ್ದಇಡಬ್ಲ್ಯುಎಸ್‌ ವರ್ಗಕ್ಕೆ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಸಶಕ್ತೀಕರಿಸಲು
ಸಂವಿಧಾನದಲ್ಲಿಯೇ ಅಡಕವಾಗಿದ್ದ ಸಾಮಾಜಿಕ ನ್ಯಾಯದಪರಿಕಲ್ಪನೆಯನ್ನು 103ನೇ ತಿದ್ದುಪಡಿಯು ಹೂತು ಹಾಕಿದೆ. ರಾಜ್ಯಗಳಿಗೆ ಒಂದು ಅನುಕೂಲವೂ ಆಗಿದೆ. ಮೀಸಲಾತಿ ಹೊಂದಿರುವ ವರ್ಗಗಳಿಗೆ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡಿದ್ದ ರಾಜ್ಯಗಳಿಗೆ ಇದ್ದಭಯವನ್ನು ಹೋಗಲಾಡಿಸಿದೆ.

ಅದರ ಜೊತೆಗೆ, ಮೀಸಲಾತಿಯ ಪರಿಕಲ್ಪನೆಯು ನ್ಯಾಯಾಲಯದಿಂದಲೇ ಗಂಡಾಂತರಕ್ಕೆ ಒಳಗಾಗಿದೆ.ಬಹುಮತದ ತೀರ್ಪು ಕೊಟ್ಟ ನ್ಯಾಯಮೂರ್ತಿಗಳಲ್ಲಿ ಒಬ್ಬರು ಗುಜರಾತ್‌ ಹೈಕೋರ್ಟ್‌ನಲ್ಲಿ ಇದ್ದಾಗ ಹೀಗೆ ಹೇಳಿದ್ದರು: ‘ಸ್ವಾತಂತ್ರ್ಯ ಬಂದು 65 ವರ್ಷಗಳ ಬಳಿಕವೂ ಈ ದೇಶದಲ್ಲಿ ಮೀಸಲಾತಿ ಕೇಳುತ್ತಿರುವುದು ನಾಚಿಕೆಗೇಡು’. ಅವರ ಪ್ರಕಾರ, ಮೀಸಲಾತಿಯು ಈ ದೇಶವನ್ನು ನಾಶಪಡಿಸಿದೆ, ದೇಶವು ಸರಿಯಾದ ದಿಕ್ಕಿನಲ್ಲಿ ಪ್ರಗತಿ ಹೊಂದುವುದಕ್ಕೆ ಇದು ಅಡ್ಡಿಯಾಗಿದೆ. ಅವರು 2028ರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ. ಅವರು ಎರಡು ವರ್ಷಕ್ಕೂ ಹೆಚ್ಚು ಅವಧಿಗೆ ಈ ಹುದ್ದೆಯಲ್ಲಿ ಇರಲಿದ್ದಾರೆ. ಹಾಗಾಗಿಯೇ, ಈಗ ಇರುವ ಪ್ರಶ್ನೆಯು ಮೀಸಲಾತಿಯ ಮಿತಿಯದ್ದು ಅಷ್ಟೇ ಅಲ್ಲ, ಮೀಸಲಾತಿ ಪರಿಕಲ್ಪನೆಯೇ ರದ್ದತಿಯಾಗಲಿದೆ ಎಂಬುದು ಕೂಡಾ ಆಗಿದೆ.

ಲೇಖಕ: ನಿವೃತ್ತ ನ್ಯಾಯಮೂರ್ತಿ, ಮದ್ರಾಸ್‌ ಹೈಕೋರ್ಟ್‌

---

‘ತೀರ್ಪು ಅತಾರ್ಕಿಕ’

ಅಖಿಲಾವಿದ್ಯಾಸಂದ್ರ
ಅಖಿಲಾವಿದ್ಯಾಸಂದ್ರ

ಮೀಸಲಾತಿಯ ಪ್ರಮಾಣವು ಶೇ 50ರಷ್ಟನ್ನು ಮೀರಬಾರದು ಎಂದು ಇಂದಿರಾ ಸಾಹ್ನಿ ಪ್ರಕರಣದಲ್ಲಿ ತೀರ್ಪು ನೀಡಿದ್ದು 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ. ಈಗ ಈ ಮಿತಿಯನ್ನು ಮೀರಬಹುದು ಎಂದು ಇಡಬ್ಲ್ಯುಎಸ್‌ ಪ್ರಕರಣದಲ್ಲಿ ತೀರ್ಪು ನೀಡಿದ್ದು, ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ. 9 ನ್ಯಾಯಮೂರ್ತಿಗಳ ಪೀಠವು ನೀಡಿದ್ದ ತೀರ್ಪನ್ನು ಐವರು ನ್ಯಾಯಮೂರ್ತಿಗಳ ಪೀಠವು ಮೀರುವುದು ಕಾನೂನುಬದ್ಧವಲ್ಲ. ಯಾವ ಸಮುದಾಯದ ಜನರ ಸಂಖ್ಯೆ ಎಷ್ಟಿದೆ ಮತ್ತು ಅವರ ಹಿಂದುಳಿದಿರುವಿಕೆಯ ಪ್ರಮಾಣ ಎಂಥದ್ದು ಎಂದು ವಿವರಿಸುವ ಮಂಡಲ ಆಯೋಗದ ವರದಿಯ ಆಧಾರದಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ತೀರ್ಪು ನೀಡಲಾಗಿತ್ತು. ಆದರೆ ಇಡಬ್ಲ್ಯುಎಸ್‌ ಪ್ರಕರಣದಲ್ಲಿನ ತೀರ್ಪು ನೀಡುವಾಗ ಇಂತಹ ಯಾವುದೇ ವೈಜ್ಞಾನಿಕ ವರದಿಯನ್ನು ಆಧರಿಸಿಲ್ಲ. ಅಲ್ಲದೆ ಇಡಬ್ಲ್ಯುಎಸ್‌ ಅಡಿಯಲ್ಲಿ ಮೀಸಲಾತಿ ಪಡೆದಿರುವ ಸಮುದಾಯದ ಜನರ ಸಂಖ್ಯೆ ಎಷ್ಟಿದೆ? ಅವರ ಬಡತನದ ಸ್ವರೂಪ ಎಂಥದ್ದು ಎಂಬುದರ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನ ನಡೆದಿಲ್ಲ. ಹೀಗಿದ್ದೂ ಒಟ್ಟು ಜನಸಂಖ್ಯೆಯ ಶೇ 3ರಷ್ಟಿರುವವರಿಗೆ ಶೇ 10ರಷ್ಟು ಮೀಸಲಾತಿ ನೀಡಲಾಗಿದೆ. ಬೇರೆ ವರ್ಗಗಳಿಗೆ ಮೀಸಲಾತಿಗಾಗಿ ₹ 4 ಲಕ್ಷದ ಆದಾಯದ ಮಿತಿ ಇದ್ದರೆ, ಇಡಬ್ಲ್ಯುಎಸ್‌ ಮೀಸಲಾತಿಯಲ್ಲಿ ₹ 8 ಲಕ್ಷದ ಆದಾಯದ ಮಿತಿ ನೀಡಲಾಗಿದೆ. ಇದರಲ್ಲಿ ತರ್ಕವೇ ಇಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಈ ತೀರ್ಪು ಅತಾರ್ಕಿಕ, ಅಸಾಂವಿಧಾನಿಕ. ಹೀಗಾಗಿಯೇ ಈ ತೀರ್ಪನ್ನು ಮರುಪರಿಶೀಲಿಸಲು ಕೋರಿ ಅರ್ಜಿ ಸಲ್ಲಿಕೆಯಾಗಿದೆ

- ಅಖಿಲಾ ವಿದ್ಯಾಸಂದ್ರ, ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ

-----

‘ಸಾಮಾಜಿಕ ನ್ಯಾಯಕ್ಕೆ ಅಪಚಾರ ಆಗದಿರಲಿ’

ವಿ.ಆರ್‌ ಸುದರ್ಶನ್‌
ವಿ.ಆರ್‌ ಸುದರ್ಶನ್‌

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವವರು ಹಾಗೂ ಸರ್ಕಾರಿ ಸೇವೆಗಳಲ್ಲಿ ಸರಿಯಾದ ಪ್ರಾತಿನಿಧ್ಯ ಹೊಂದಿಲ್ಲದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಸಂವಿಧಾನದ 15(4)ನೇ ಮತ್ತು 16(4)ನೇ ವಿಧಿಗಳಲ್ಲಿ ಹೇಳಲಾಗಿತ್ತು. ಆ ಪ್ರಕಾರವೇ ಮೀಸಲಾತಿ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಈಗ ಕೇಂದ್ರ ಸರ್ಕಾರವು ಸಂವಿಧಾನಕ್ಕೆ 103ನೇ ತಿದ್ದುಪಡಿ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವುದನ್ನೂ ವಿಧಿ 16(4)ರ ವ್ಯಾಪ್ತಿಗೆ ತಂದಿದೆ. ಹಿಂದುಳಿದ ವರ್ಗಗಳ ಆಯೋಗ ಸೇರಿದಂತೆ ಸೂಕ್ತ ಸಂಸ್ಥೆಗಳಿಂದ ಅಧ್ಯಯನ ನಡೆಸಿ, ವರದಿ ಪಡೆದ ಬಳಿಕವೇ ಮೀಸಲಾತಿ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಇದು ಸಂಪುಟ ಸಭೆಯಲ್ಲಿ ದಿಢೀರ್‌ ತೀರ್ಮಾನ ಕೈಗೊಳ್ಳುವಂತಹ ವಿಚಾರವಲ್ಲ.

ವಿಸ್ತೃತವಾದ ಅಧ್ಯಯನ ನಡೆಸಿ, ಕಾಲಕಾಲಕ್ಕೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರಿದವರು ಹಾಗೂ ಸರ್ಕಾರಿ ಸೇವೆಗಳಲ್ಲಿ ಗಣನೀಯ ಪ್ರಾತಿನಿಧ್ಯ ಪಡೆದ ಸಮುದಾಯಗಳನ್ನು ಮೀಸಲಾತಿಯಿಂದ ಹೊರಗಿಡುವುದು ನಡೆಯಬೇಕು. ಅದೇ ರೀತಿ ಪ್ರಾತಿನಿಧ್ಯ ಪಡೆಯದ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಬಡತನವೊಂದನ್ನೇ ಆಧರಿಸಿ ಮೀಸಲಾತಿ ಕಲ್ಪಿಸಬಾರದು. ರಾಜಕೀಯ, ಆರ್ಥಿಕ ಪ್ರಾಬಲ್ಯ ಹೊಂದಿರುವ ಸಮುದಾಯಗಳ ಬಡವರು ಮತ್ತು ಪ್ರಾತಿನಿಧ್ಯವೇ ಇಲ್ಲದ ಸಮುದಾಯಗಳ ಬಡವರನ್ನು ಆರ್ಥಿಕ ಮಾನದಂಡದ ಆಧಾರದಲ್ಲಿ ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವೆ? ಕೆಲವು ಸಮುದಾಯಗಳು ತಮ್ಮಲ್ಲಿನ ಬಡವರಿಗೆ ಸ್ವಯಂ ಶಕ್ತಿ ತುಂಬುವಷ್ಟು ಶಕ್ತವಾಗಿವೆ. ಸಣ್ಣ ಸಮುದಾಯಗಳಷ್ಟೇ ಎಲ್ಲದಕ್ಕೂ ಸರ್ಕಾರಗಳನ್ನು ನೆಚ್ಚಿಕೊಂಡಿರುತ್ತವೆ. ಅಂತಹ ಸಮುದಾಯಗಳನ್ನು ಕೇಂದ್ರೀಕರಿಸಿಕೊಂಡು ಮೀಸಲಾತಿಗೆ ಸಂಬಂಧಿಸಿದ ತೀರ್ಮಾನಗಳನ್ನು ಕೈಗೊಳ್ಳುವುದು ನ್ಯಾಯಯುತ.

ದೇಶದ ಕೆಲವು ರಾಜ್ಯಗಳಲ್ಲಿ ಮೀಸಲಾತಿಯ ಪ್ರಮಾಣ ಶೇಕಡ 50ರಷ್ಟನ್ನು ಮೀರಿದೆ. ಹಲವು ರಾಜ್ಯಗಳಲ್ಲಿ ಶೇ 50ರ ಮಿತಿಯಲ್ಲಿದೆ. ದೇಶದ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಹಾಗೂ ಸರ್ಕಾರಿ ಸೇವೆಗಳಲ್ಲಿನ ಪ್ರಾತಿನಿಧ್ಯದ ಕುರಿತು ಸಮಗ್ರ ಸಮೀಕ್ಷೆ ನಡೆಸಿ, ಅದರ ಆಧಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೀಸಲಾತಿ ನೀತಿ ರೂಪಿಸಬೇಕಿದೆ. ಮೀಸಲಾತಿಗೆ ಸಂಬಂಧಿಸಿದ ವಿಚಾರಗಳಲ್ಲಿ ರಾಜ್ಯಗಳ ಅಧಿಕಾರವನ್ನು ಕೇಂದ್ರ ಸರ್ಕಾರ ಅತಿಕ್ರಮಿಸಲು ಅವಕಾಶ ಇರಕೂಡದು. ಮೀಸಲಾತಿಯು ಪ್ರತಿಭೆ ಮತ್ತು ಆರ್ಥಿಕ ಸ್ಥಿತಿಯ ಆಧಾರದಲ್ಲಿ ನಿರ್ಧಾರವಾಗುತ್ತದೆ. ಮೀಸಲಾತಿ ವ್ಯಾಪ್ತಿಯಲ್ಲಿರುವವರಿಗೆ ಪ್ರತಿಭೆ ಇರುವುದಿಲ್ಲ ಎಂಬ ಮನಃಸ್ಥಿತಿ ಬದಲಾಗಬೇಕು. ಸಾಮಾಜಿಕ ನ್ಯಾಯಕ್ಕೆ ಅಪಚಾರ ಆಗದಂತೆ ಈ ವಿಚಾರದಲ್ಲಿ ತೀರ್ಮಾನಗಳು ಆಗಬೇಕು. ಸಂಸತ್ತು, ವಿಧಾನಮಂಡಲ ಹಾಗೂ ಸಾರ್ವಜನಿಕವಾಗಿ ವಿಸ್ತೃತ ಚರ್ಚೆ ಆಗಬೇಕು. ಮೀಸಲಾತಿಗೆ ಸಂಬಂಧಿಸಿದ ವಿಚಾರಗಳಲ್ಲಿ ನ್ಯಾಯಾಂಗವು ಹೆಚ್ಚು ಎಚ್ಚರಿಕೆಯಿಂದ ತೀರ್ಮಾನಗಳನ್ನು ನೀಡುವಂತಾಗಬೇಕು.

ವಿ.ಆರ್‌. ಸುದರ್ಶನ್‌, ಮಾಜಿ ಸಭಾಪತಿ,ವಿಧಾನ ಪರಿಷತ್‌

---------

‘ಸೂಕ್ತ ಕಾನೂನು ರೂಪಿಸಬೇಕು’

ಎಚ್‌.ಕಾಂತರಾಜು
ಎಚ್‌.ಕಾಂತರಾಜು

‍ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಳವನ್ನು ನಾನು ಸ್ವಾಗತಿಸುತ್ತೇನೆ. ಆರ್ಥಿಕ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್‌) ಶೇ 10ರಷ್ಟು ಮೀಸಲಾತಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿರುವ ಕೆಲವು ಅಂಶಗಳನ್ನು ಈ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ. ಮೀಸಲಾತಿ ಪ್ರಮಾಣ ಶೇ 50ಕ್ಕಿಂತ ಹೆಚ್ಚಿಗೆ ಇರಬಾರದು ಎಂಬುದು ಆರ್ಥಿಕವಾಗಿ ಹಿಂದುಳಿದವರಿಗೆ ಅನ್ವಯ ಆಗುವುದಿಲ್ಲ. ಆದರೆ, ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳಿಗೆ ಅನ್ವಯಿಸುತ್ತದೆ ಎಂದು ಈ ಆದೇಶದಲ್ಲಿ ಬರೆಯಲಾಗಿದೆ. ಸರ್ಕಾರ ಇತ್ತೀಚೆಗೆ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಕಾರ್ಯರೂಪಕ್ಕೆ ತರಲು ಸುಪ್ರೀಂ ಕೋರ್ಟ್‌ನ ಈ ಆದೇಶವು ತೊಡಕಾಬಹುದು.ಆದ್ದರಿಂದ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಹಿತ ಕಾಯಲು ಸುಪ್ರೀಂ ಕೋರ್ಟ್‌ ತೀರ್ಪು ಮರುಪರಿಶೀಲನೆ ಕೋರಿ ಸರ್ಕಾರ ಅರ್ಜಿ ಸಲ್ಲಿಸಿ ಪ್ರಯತ್ನಿಸಬೇಕು ಅಥವಾ ಸೂಕ್ತ ಕಾನೂನು ರೂಪಿಸಬೇಕು.

ಎಚ್‌.ಕಾಂತರಾಜು, ಮಾಜಿ ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT