ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಧರ್ಮ-, ಹಿಂದೂ- ಪದಗಳ ಹಿನ್ನಲೆ- ಒಂದು ಸಮೀಕ್ಷೆ

ಹಿಂದೂ ಎಂಬುದು ಭಾರತ ಮೂಲದ ಪದ ಅಲ್ಲವೇ?
Last Updated 11 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಹಿಂದೂ ಪದವು ಎಲ್ಲಿಂದ ಹೇಗೆ ಯಾವಾಗ ಬಂತೆನ್ನುವುದು ಖಚಿತವಾಗಿ ಹೇಳಲಾಗದ್ದಾದರೂ, ಈಗ ನಮ್ಮ ವ್ಯವಹಾರದಲ್ಲಿ ‘ಧರ್ಮ’ ಎನ್ನುವ ಅರ್ಥದಲ್ಲೇ ನಿಂತುಬಿಟ್ಟಿವೆ. ‘ಸನಾತನ’, ‘ಧರ್ಮ’, ‘ಹಿಂದೂ’ ಪದಗಳಂತೆಯೇ ‘ಹಿಂದೂ’ ಪದವೂ ಈ ನೆಲದ ಮೂಲಸಂಸ್ಕೃತಿ-ಮತಪಂಥಗಳ ಸಮುಚ್ಚಯದ ಅಸ್ಮಿತೆಯ ಗುರುತಾಗಿಬಿಟ್ಟಿವೆ.

**

ಪರ್ಯಾಯ ನಾಮಗಳನ್ನು ಬಳಸುವುದು ಭಾರತದಲ್ಲಿ ಸರ್ವೇಸಾಮಾನ್ಯ. ಅಂತೆಯೇ, ಅನಾದಿಯಿಂದ ವಿಕಾಸವಾಗುತ್ತ ಬಂದ ಜೀವನನೀತಿಯನ್ನು ಧರ್ಮ, ಸನಾತನಧರ್ಮ, ಆರ್ಷಧರ್ಮ, ಆರ್ಯಸಂಸ್ಕೃತಿ, ಋಷಿಸಂಸ್ಕೃತಿ ಮುಂತಾದ ನಾಮಧೇಯಗಳಿಂದ ನಿರ್ದೇಶಿಸುವುದು ಪದ್ಧತಿ. ಸಮಷ್ಟಿಹಿತಕ್ಕೆ ಬಾಧಕವಾಗದಂತಹ ಯಾವುದೇ ವಿಶೇಷಧರ್ಮವು (ಮತಪಂಥಗಳು) ‘ಸನಾತನ’ವೇ. ಈ ನೆಲದಲ್ಲಿ ಸಹಜವಾಗಿ ಅರಳಿ ಸಮರಸವಾಗಿ ಬಾಳಿದ ವೈದಿಕ-ಆಗಮ-ತಂತ್ರ-ಜಾನಪದ-ವನ್ಯ-ಬೌದ್ಧ-ಜೈನ-ಸಿಖ್‌ ಆದಿಯಾಗಿ ಎಲ್ಲ ಮತಪಂಥಗಳೂ ಅವುಗಳ ಪ್ರಭೇದಗಳೂ ‘ಸನಾತನ’ವೆಂಬ ಈ ಅರ್ಥವ್ಯಾಪ್ತಿಗೆ ಒಳಪಡುತ್ತವೆ. ಕೀಟದಿಂದ ಹಿಡಿದು ಆನೆಯವರೆಗೂ, ಹುಲ್ಲಿನಿಂದ ಹಿಡಿದು ಹೆಮ್ಮರದವರೆಗೂ ಎಲ್ಲವನ್ನೂ ಧರಿಸಿ ಪೋಷಿಸುವ ದೊಡ್ಡ ಅಡವಿಯಂತೆ, ಈ ನೆಲದ ಸನಾತನ ಸಂಸ್ಕೃತಿಯೂ, ಅನಾದಿಯಿಂದಲೂ ಅಸಂಖ್ಯ ವೈವಿಧ್ಯಮಯ ಮತ-ಪಂಥ-ಪದ್ಧತಿಗಳ ತವರಾಗಿದೆ. ತತ್ವಶಾಸ್ತ್ರ-ಉಪಾಸನಾ ಶೈಲಿಗಳಿಂದ ಹಿಡಿದು ಆಹಾರ-ವೇಷ-ಭೂಷ-ಭಾಷೆ-ಕಲೆ-ಸಾಹಿತ್ಯ- ಜೀವನಶೈಲಿಗಳವರೆಗೂ ಸರ್ವತ್ರ ವೈವಿಧ್ಯಮಯ ಅಭಿವ್ಯಕ್ತಿಯು ಮೆರೆದಿವೆ. ನಿರಂತರ ತತ್ವಾನುಸಂಧಾನ, ಪ್ರಕೃತಿಯಲ್ಲಿ ದೇವರನ್ನು ಕಾಣುವ ಭಾವ ಹಾಗೂ ಕಲಾಭಿಜ್ಞತೆಯಿಂದ ತಮ್ಮತಮ್ಮ ಬದುಕನ್ನು ಕಟ್ಟಿಕೊಳ್ಳುವ ಸ್ವೋಪಜ್ಞತೆ- ಇವು ಈ ನೆಲದಲ್ಲಿ ಹುಟ್ಟಿಬೆಳೆದ ಎಲ್ಲ ಮತಪಂಥಗಳಲ್ಲೂ ಅಂತರ್ಗತವಾಗಿವೆ, ಎಲ್ಲರನ್ನು ಬೆಸೆಯುವ ಐಕ್ಯಸೂತ್ರವಾಗಿವೆ.

ಅನಾದಿಯಿಂದಲೂ ಭಾರತೀಯರು ತಮ್ಮ ಹೆಸರುಗಳನ್ನು ತಮ್ಮ ನೆಲ-ಜಲ-ಬೆಟ್ಟ-ವನಸ್ಪತಿಗಳ ಜೊತೆಗೆ ಬೆಸೆದುಕೊಂಡಿದ್ದಾರೆ. ನಮ್ಮ ಪಾಲಿಗೆ ಭೂಮಿ-ನದಿಗಳು ಮಾತೃರೂಪಗಳೇ. ಹೀಗಾಗಿ ‘ಸಪ್ತಸಿಂಧುಗಳ ದೇಶ’ (ಸರಸ್ವತೀ, ಸಿಂಧು, ವಿತಸ್ತಾ, ಅಸಿಕ್ನೀ, ವೃಷ್ಣಿ, ವಿಪಾಶಾ, ವ್ಯಾಸ, ಶತದ್ರುಗಳನ್ನು ಸಪ್ತಸಿಂಧುಗಳೆಂದು ಕರೆಯಲಾಗುತ್ತದೆ), ಸಾರಸ್ವತರು, ಸೈಂಧವರು ಮುಂತಾದ ನದಿಸಂಬಂಧಿತ ನಾಮೋಪನಾಮಗಳನ್ನು ಆಯಾ ಪ್ರದೇಶದವರು ತಳೆಯುವುದುಂಟು. ಸಪ್ತಸಿಂಧುಗಳ ದೇಶವೇ ‘ಸಿಂಧುಸ್ಥಾನ’ವಾಯಿತೆಂದೂ, ಸಿಂಧುನದೀತೀರದ ನಿವಾಸಿಗಳಿಗೂ ಕಾಲಾಂತರದಲ್ಲಿ ಸಿಂಧುನದಿಯ ಪೂರ್ವಕ್ಕಿರುವ ಸಮಸ್ತಭೂಭಾಗಕ್ಕೂ ‘ಸಿಂಧುಸ್ಥಾನ’ವೆಂಬ ಹೆಸರು ಮುಂಬರೆಯಿತೆನ್ನುವ ಅಭಿಮತವಿದೆ. ಪರ್ಷಿಯಾ-ಮೆಸೊಪೊಟಾಮಿಯ ಇತ್ಯಾದಿಗಳೂ ಸೇರಿದಂತೆ ಆ ಕಾಲದ ಭಾರತದ ಪಶ್ಚಿಮದ ಭಾಗಗಳಲ್ಲಿ ಕಾಲಾಂತರದಲ್ಲಿ ಸೆಮಾಂಟಿಕ್ ಬದಲಾವಣೆ ಯಿಂದಾಗಿ ‘ಸ’-ಕಾರವು ‘ಹ’ ಕಾರವಾಗುತ್ತ ಬಂದು ಸಪ್ತ=ಹೆಪ್ಟ ಆದಂತೆ ಸಿಂಧು=ಹಿಂದು’ ಆಯಿತು ಎಂದೂ, ಪ್ರಾಚೀನಕಾಲದಿಂದಲೂ ವಿಖ್ಯಾತ ಗುರುಕುಲಗಳೂ ಸಮೃದ್ಧ ವ್ಯಾಪಾರಕೇಂದ್ರಗಳೂ ಇದ್ದಂತಹ ಭಾರತಕ್ಕೆ ವಿದೇಶೀಯರು ಬೃಹತ್ಪ್ರಮಾಣದಲ್ಲಿ ಬರುತ್ತಿದ್ದ ಕಾರಣ ಈ ನಾಡನ್ನು ಅವರು ‘ಹಿಂದುಸ್ಥಾನ’, ಇಂಡಸ್, ಇಂಡೀಸ್, ಇಂಡಿಯಾ ಎಂದು ಕರೆದರು ಎಂದೂ ಪ್ರಸಿದ್ಧ ಅಭಿಮತವಿದೆ. (ಭಾಷೆಯ ಪದವರ್ಣ-ಉಚ್ಚಾರ-ಅರ್ಥಗಳ, ಬದಲಾವಣೆಗಳ, ಭಾಷೆ-ಉಪಭಾಷೆಗಳ ಸಂಬಂಧಗಳ ಅಧ್ಯಯನವೇ ಸೆಮಾಂಟಿಕ್ಸ್). ‘ಇಂದುವನ್ನು (ಚಂದ್ರ) ಅನುಸರಿಸಿ, ಅರ್ಥಾತ್ ಚಾಂದ್ರಪಂಚಾಂಗವನ್ನು ಅನುಸರಿಸಿ ವ್ಯವಹರಿಸುವವರು’ ಎಂದೂ ಭಾರತವನ್ನು ಇಂದುಸ್ ಎಂದು ಕೆಲವಿದೇಶಿಯರು ಕರೆದರು ಎನ್ನುವ ಅಭಿಮತವೂ ಇದೆ.

ಅದೇನೇ ಆಗಲಿ, ‘ಸಿಂಧು’, ‘ಇಂದು’ ಮುಂತಾದ ಮೂಲಪದಗಳು ಭಾರತ ಮೂಲದ್ದೇ ಆಗಿದ್ದು, ಉಚ್ಚಾರ ಭೇದದಿಂದಲೂ, ಅರ್ವಾಚೀನ ಕಾಲದಲ್ಲಿ ವಿದೇಶೀಯರ ಬಾಯಲ್ಲೂ ಅಪಭ್ರಂಶಗೊಂಡು ಹಿಂದೂ-ಇಂಡಿಯಾ ಇತ್ಯಾದಿ ಬಂದಿವೆ ಎನ್ನುವುದು ದಿಟ.

ಶತಮಾನಗಳ ರಾಜಕೀಯ ವೈಪರೀತ್ಯಗಳ ಮಧ್ಯೆ ಈ ಅಪಭ್ರಂಶಗಳು ‘ಧರ್ಮ’ ಮತ್ತು ‘ಭಾರತ’ ಪದಗಳಿಗೆ ಪರ್ಯಾಯವಾಗಿ ವ್ಯವಹಾರದಲ್ಲಿ ಸೇರಿಹೋಗಿ, ಈಗ ನಮ್ಮದಾಗಿಬಿಟ್ಟಿವೆ. ಹೀಗಾಗಿ ‘ಧರ್ಮ‘, ‘ಸನಾತನಧರ್ಮ’, ‘ಭಾರತ’ ಎನ್ನುವಾಗ ಬರುವ ಅರ್ಥ ಭಾವ ವಿಶೇಷಗಳೇ ಈ ಪದಗಳ ವಿಷಯದಲ್ಲೂ ಹೊಮ್ಮುತ್ತವೆ.

ಆಕ್ರಮಣಗಳಿಗೆ ಬಹುಭೂಭಾಗವನ್ನು ಕಳೆದುಕೊಂಡು ಚಿಕ್ಕದಾಗಿರುವ ಇಂದಿನ ಭೂಪಟವನ್ನಷ್ಟೇ ‘ಎಲ್ಲ ಕಾಲದ ಭಾರತ’ ಎಂದು ನಾವು ಭ್ರಮಿಸಬಾರದು. ಆಕ್ರಮಣಗಳ ಪೂರ್ವದಲ್ಲಿ ಪಶ್ಚಿಮದ ಪರ್ಷಿಯಾ ಮೆಸೊಪೊಟಾಮಿಯಾಗಳವರೆಗೂ, ಪೂರ್ವದಲ್ಲಿ ಬರ್ಮಾ-ಕಂಬೋಡಿಯಾಗಳವರೆಗೂ ಭಾರತದ ಸನಾತನ ಸಂಸ್ಕೃತಿಯು ಹರಡಿನಿಂತಿತ್ತು. ಹಲವು ಜನಪದಗಳ ಸಮುಚ್ಚಯದ ವಿಶಾಲ ಭೂಖಂಡವಾದ ಭಾರತವನ್ನೂ, ವಿವಿಧ ಭಾಷೆ-ಮತ-ಪಂಥಗಳ ಇಲ್ಲಿನ ವಿಕಾಸಪ್ರಾಯ ಸಂಸ್ಕೃತಿಯನ್ನೂ ‘ಹಿಂದು’ ಪದದಿಂದ ಗುರುತಿಸುವುದು ಕೆಲವು ಶತಮಾನಗಳಿಂದ ಬೆಳೆದುಬಂದಿದೆ. ಭಾರತೀಯರಾದ ಹಿಂದೂ-ಬೌದ್ಧ-ಜೈನ-ಸಿಖ್ಖರನ್ನಷ್ಟೇ ಅಲ್ಲದೆ, ಭಾರತದ ಕ್ರೈಸ್ತ-ಇಸ್ಲಾಮ್ ಮತಗಳವರನ್ನೂ, ಪಾಕಿಸ್ತಾನ-ಬಾಂಗ್ಲಾದೇಶಗಳವರನ್ನೂ ‘ಹಿಂದೂ’ ಎಂದೇ ಸಂಬೋಧಿಸುವ ವಾಡಿಕೆ ಇಂದಿಗೂ ಹಲವು ಪಶ್ಚಿಮ ಹಾಗೂ ಮಧ್ಯಪ್ರಾಚ್ಯದೇಶಗಳಲ್ಲಿರುವುದನ್ನು ಕಾಣಬಹುದು.

ಅದೇನೇ ಇರಲಿ, ಪ್ರಾಚೀನ ಮಧ್ಯಯುಗಗಳವರೆಗೂ ಈ ನಾಡಿನ ಜೀವನಸಂಹಿತೆಯನ್ನು ‘ಧರ್ಮ’, ‘ಆರ್ಷ’ ಮುಂತಾದ ಪದಗಳಿಂದಲೇ ನಿರ್ದೇಶಿಸುವುದು ಮೂಲಪದ್ಧತಿಯಾಗಿತ್ತು. ವೇದ, ಸ್ಮೃತಿ, ಪುರಾಣ, ಕಾವ್ಯ ಶಾಸನಾದಿಗಳಲ್ಲೂ ‘ಧರ್ಮ’ ಪದವೇ ಬಳಕೆಯಲ್ಲಿರುವುದೇ ಹೊರತು ‘ಹಿಂದೂ’ ಪದವಲ್ಲ. ಒಟ್ಟಿನಲ್ಲಿ ಹಿಂದೂ ಪದವು ಎಲ್ಲಿಂದ ಹೇಗೆ ಯಾವಾಗ ಬಂತೆನ್ನುವುದು ಖಚಿತವಾಗಿ ಹೇಳಲಾಗದ್ದಾದರೂ, ಈಗ ನಮ್ಮ ವ್ಯವಹಾರದಲ್ಲಿ ‘ಧರ್ಮ’ ಎನ್ನುವ ಅರ್ಥದಲ್ಲೇ ನಿಂತುಬಿಟ್ಟಿವೆ. ‘ಸನಾತನ’, ‘ಧರ್ಮ’, ‘ಹಿಂದೂ’ ಪದಗಳಂತೆಯೇ ‘ಹಿಂದೂ’ ಪದವೂ ಈ ನೆಲದ ಮೂಲಸಂಸ್ಕೃತಿ-ಮತಪಂಥಗಳ ಸಮುಚ್ಚಯದ ಅಸ್ಮಿತೆಯ ಗುರುತಾಗಿಬಿಟ್ಟಿವೆ. ಇದಕ್ಕೆ ಅಪಮಾನವೆಸಗಿದರೆ ನಮಗೆಲ್ಲರಿಗೂ ನೋವಾಗುತ್ತದೆ. ಅಂತಹ ಮಾತುಗಳು -ಕೃತಿಗಳು ಖಂಡನೀಯ.

ನಮ್ಮನ್ನು ಒಡೆದು ಆಳಲೆಂದೇ ಅಂದು ಆಂಗ್ಲರು, ನಮ್ಮ ಭಾವೈಕ್ಯವನ್ನು ಸಂಕೇತಿಸುವಂತಹ ‘ಧರ್ಮ’, ‘ಸನಾತನ’ ಎಂಬ ಪದಗಳಿಂದ ನಮ್ಮನ್ನು ಗುರುತಿಸುವ ಬದಲು, ನಮ್ಮನ್ನು ಬೇರೆ ಬೇರೆಯೆಂದೇ ಎತ್ತಿತೋರಿಸಬೇಕೆಂದೇ ‘ಬ್ರಾಹ್ಮಣ’, ‘ಬೌದ್ಧ’, ‘ಲಿಂಗಾಯತ’, ‘ಜೈನ’, ‘ಕುರುಬ’, ‘ಗೌಡ’… ಎನ್ನುತ್ತ, ಅಲ್ಲೂ ‘ಕೆಳದರ್ಜೆ’ ‘ಮೇಲ್ದರ್ಜೆ’ ಎಂದೆಲ್ಲ ಕರೆಕರೆದು, ಇದ್ದ ಸಣ್ಣಪುಟ್ಟ ಭೇದಗಳ ಬಿರುಕುಗಳನ್ನು ಕಂದಕವನ್ನಾಗಿಸಿದರು. ಇಂದಿಗೂ ಭಾರತವನ್ನು ಸರ್ವಥಾ ದಮನಿಸಿ ನಿಯಂತ್ರಿಸ ಬಯಸುವ ವೈಶ್ವಿಕ ಹುನ್ನಾರಗಳೂ ಅವರ ಗುಲಾಮರಾದ ಇಲ್ಲಿನ ದೇಶದ್ರೋಹಿಗಳೂ ಈ ದೇಶದ ವೈವಿಧ್ಯಮಯವಾದ ಮೂಲ ಧರ್ಮ-ಸಂಸ್ಕೃತಿ-ಕಲೆ-ಸಾಹಿತ್ಯ-ಜೀವನ ಶೈಲಿಗಳನ್ನೆಲ್ಲ ಅಳಿಸುತ್ತ, ಎಲ್ಲರನ್ನೂ ಮತಾಂತರಕ್ಕೊಡ್ಡಲು ಶ್ರಮಿಸಿದ್ದಾರೆ. ಇವರಿಗೆಲ್ಲ ‘ಹಿಂದೂ’, ‘ಸನಾತನ’, ‘ಧರ್ಮ’, ‘ಭಾರತ’, ‘ಸಂಸ್ಕೃತಿ’ ಮುಂತಾದ ಭಾವೈಕ್ಯ ಸಾಧಕ ಪದಗಳೆಂದರೆ ಅದೇನೋ ಅಸಹನೆ, ದ್ವೇಷ. ನಮ್ಮಲ್ಲಿ ಭೇದವನ್ನೇ ಎತ್ತಿತೋರುವಂತಹ ಜಾತಿವಾಚಕ ಪದಗಳೆಂದರೆ ಇಷ್ಟ! ಹಾಗಾಗಿ ನೇರವಾಗಿಯೋ ಪರೋಕ್ಷವಾಗಿಯೋ ದೊಡ್ದದಾಗಿಯೋ ಚಿಕ್ಕದಾಗಿಯೋ ಮಾತು-ಕೃತಿ-ಚಲನಚಿತ್ರ-ಮಾಧ್ಯಮ-ಪಠ್ಯಗಳ ಮೂಲಕ ತಮ್ಮ ಈ ದ್ವೇಷವಿಷವನ್ನು ಹಿಂಡುತ್ತಲೇ ಇರುತ್ತಾರೆ. ಈಗೀಗಲಂತೂ ತನ್ನ ನಾಡು-ನುಡಿ-ಧರ್ಮ-ಸಂಸ್ಕೃತಿಗಳ ಗುರುತಾಗಿ ‘ನಾನು ಹಿಂದೂ’ ಎಂದು ಯಾರಾದರೂ ಸುಮ್ಮನೆ ಲೋಕಾಭಿರಾಮವಾಗಿ ಹೇಳಿದರೂ ಮೈಪರಚಿಕೊಂಡು ದ್ವೇಷ ಕಾರುವ ಮಟ್ಟಕ್ಕೆ ಈ ಮನೋರೋಗ ಬಲಿತಿದೆ. ಗ್ರಾಮ-ನಗರ-ಸರ್ಕಾರದವರೆಲ್ಲರೂ ದೈವ-ಧರ್ಮಗಳನ್ನಾಧರಿಸಿ ಒಗ್ಗಟ್ಟಾಗಿ ಬಾಳಬೇಕೆಂಬ ಸಂದೇಶವನ್ನು ಸಾರುವ ‘ಕಾಂತಾರ’ ಚಲನಚಿತ್ರವನ್ನೂ ಇವರುಗಳಿಗೆ ಸಹಿಸಲಾಗಲಿಲ್ಲ! ಈ ದೇಶದ ಎಲ್ಲವೂ ಹಾಳು, ಎಲ್ಲೆಲ್ಲೂ ಇರುವುದು ಕೇವಲ ಜಾತಿ-ಕಲಹಗಳೇ ಎಂದು ಕಿರುಚುತ್ತಿದ್ದರೇ ಮಾತ್ರ ಇವರಿಗೆ ನಿದ್ರೆ. ‘ಇಲ್ಲ! ನಾವೆಲ್ಲ, ಎಷ್ಟಾದರೂ ಒಂದೇ ನೆಲಜಲಸಂಸ್ಕೃತಿಯ ಚಿಗುರುಗಳು, ಒಂದಾಗೋಣ ಬನ್ನಿ’ ಎಂದರೆ ಅದೇನೋ ಕಿರಿಕಿರಿ!

ಇರಲಿ, ವಾಸ್ತವವನ್ನು ಹುಡುಕುತ ಹಿಂದಕ್ಕೆ ಹೋದರೆ, ನಮಗೊದಗುವುದು ಸರ್ವರನೂ ಒಗ್ಗೂಡಿಸುವ ಸನಾತನ ಸಂಸ್ಕೃತಿಕಸೂತ್ರವೇ.

ಲೇಖಕಿ: ಸಂಸ್ಕೃತಿ ಚಿಂತಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT