ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ರಾಜ್ಯ ಸಂಪುಟ ಉಪಸಮಿತಿಯ ಪ್ರಸ್ತಾವ ಸಕಾಲಿಕವಾಗಿದೆ. ಎರಡು ಮೂರು ದಶಕಗಳಿಂದ ರಾಜ್ಯದ ಉನ್ನತ ಶಿಕ್ಷಣದ ಗುಣಮಟ್ಟ ಆಶಾದಾಯಕವಾಗಿಲ್ಲ. ವಿಶ್ವವಿದ್ಯಾಲಯದ ಮುಖ್ಯ ಪರಿಕಲ್ಪನೆಗಳಾದ ಅಧ್ಯಯನ, ಅಧ್ಯಾಪನ, ಪರೀಕ್ಷೆ, ಮೌಲ್ಯಮಾಪನ, ಸಂಶೋಧನೆ ಮತ್ತು ಪ್ರಸಾರಾಂಗಗಳ ವಿಷಯದಲ್ಲಿ ನಾವು ಕಳೆದ ಶತಮಾನದ ಗುಣಮಟ್ಟವನ್ನು ಮೀರುವುದಿರಲಿ; ಉಳಿಸಿಕೊಳ್ಳಲೂ ಆಗಿಲ್ಲ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಮಾತ್ರವಲ್ಲ, ವಿದ್ಯಾರ್ಥಿಗಳ ಆಸಕ್ತಿ ಕೇಂದ್ರಗಳು ಬದಲಾಗಿವೆ. ಅವರ ನಿರೀಕ್ಷೆಗಳು ವಿಪರೀತವಾಗಿವೆ. ಭಾಷೆಯನ್ನು ಒಳಗೊಂಡಂತೆ ಮಾನವಿಕ ಮತ್ತು ವಿಜ್ಞಾನ ವಿಷಯಗಳ ಕಲಿಕೆಯಲ್ಲಿ ತೀವ್ರ ಹಿನ್ನಡೆ ಕಾಣುತ್ತಿರುವ ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಮಾತ್ರವೇ ಪ್ರಗತಿ ಸಾಧ್ಯವಿಲ್ಲ.

ಜಿಲ್ಲೆಗೊಂದರಂತೆ ವಿವಿಯನ್ನು ಸ್ಥಾಪಿಸಲು ಹೊರಡುವ ಮನೋಧರ್ಮದ ಹಿಂದೆ ಬಡವರಿಗೆ, ಹಿಂದುಳಿದವರಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸಬೇಕೆನ್ನುವ ಕಾಳಜಿಗಿಂತ ಚುನಾವಣೆಗಳಲ್ಲಿ ರಾಜಕೀಯ ಲಾಭ ಪಡೆಯುವ ಉದ್ದೇಶವೇ ಎದ್ದು ಕಾಣುತ್ತದೆ. ಅಥವಾ ತಮ್ಮ ರಾಜಕೀಯ ಎದುರಾಳಿಗಳಿಗೆ ‘ನೀನು ಮಾಡಲಾಗದ್ದನ್ನು ನಾನು ಮಾಡಿದ್ದೇನೆ’ ಎಂದು ತೊಡೆತಟ್ಟಿ ಉತ್ತರ ಕೊಡಬೇಕೆನ್ನುವ ಪೈಪೋಟಿ ಕಾಣುತ್ತದೆ. ವಿಶ್ವವಿದ್ಯಾಲಯದ ಸ್ಥಾಪನೆಯಿಂದ ಜನರಿಗಾದ ಪ್ರಯೋಜನವೇನು ಎಂಬುದನ್ನು ಜನರೂ ಯೋಚಿಸುವುದಿಲ್ಲ, ರಾಜಕಾರಣಿಗೂ ಅದು ಬೇಕಾಗಿಲ್ಲ.

ಕರ್ನಾಟಕದಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ ನಂತರ ಜಾನಪದ, ಸಂಗೀತ, ಸಂಸ್ಕೃತ, ಲಲಿತಕಲೆಗಳು, ಪಂಚಾಯತ್ ರಾಜ್ ಹೀಗೆ ವಿಭಿನ್ನ ಜ್ಞಾನ ಶಿಸ್ತುಗಳಿಗೆ ಒಂದೊಂದು ವಿವಿಗಳನ್ನು ಸ್ಥಾಪಿಸಲಾಯಿತು. ಇದರಿಂದ ಈ ಎಲ್ಲ ಜ್ಞಾನ ಶಿಸ್ತುಗಳನ್ನು ಕನ್ನಡದಲ್ಲಿ ಕಾಣುವ, ಕನ್ನಡಕ್ಕೆ ಜೋಡಿಸುವ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ದೇಸೀ ಭಾಷೆಗಳ ಸೃಜನಶೀಲ ಅಸ್ಮಿತೆಯನ್ನು ಪ್ರತಿನಿಧಿಸುವ ಉನ್ನತ ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸುವ ಅದ್ಭುತ ಅವಕಾಶವೊಂದನ್ನು ಕೈಚೆಲ್ಲಿದಂತಾಯಿತು. ಆದರೆ, ಅಂಥ ವಿಶ್ವವಿದ್ಯಾಲಯಗಳ ಸ್ಥಾಪನೆಯ ಹಿಂದಿನ ಸದಾಶಯಗಳು ಎಷ್ಟರಮಟ್ಟಿಗೆ ಸಾಧಿತವಾಗಿವೆ ಎಂಬುದಕ್ಕೆ ಆಯಾ ವಿಶ್ವವಿದ್ಯಾಲಯಗಳ ಆಡಳಿತ ಮತ್ತು ಬೌದ್ಧಿಕ ಸಮುದಾಯ ಉತ್ತರದಾಯಿಗಳಾಗಿವೆಯೇ ಎನ್ನುವುದು ಪ್ರಶ್ನೆ.

ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಾದಂತೆ ಕಟ್ಟಡವೂ ಒಳಗೊಂಡಂತೆ ಮೂಲಸೌಕರ್ಯಗಳನ್ನು ಒದಗಿಸಬೇಕಾದುದು ಸರ್ಕಾರದ ಹೊಣೆಗಾರಿಕೆ. ಉನ್ನತ ಶಿಕ್ಷಣ ಕ್ಷೇತ್ರವನ್ನು ಅನುತ್ಪಾದಕ ಎಂದು ಪರಿಭಾವಿಸಿರುವ ವ್ಯವಸ್ಥೆಯಲ್ಲಿ ಅಧ್ಯಾಪಕರನ್ನು, ಮಾನವ ಸಂಪನ್ಮೂಲವನ್ನು ವಿಸ್ತರಿಸುವ ಬೌದ್ಧಿಕ ಸೃಷ್ಟಿ ಕೇಂದ್ರಗಳನ್ನಾಗಿ ನೋಡುವ ದೃಷ್ಟಿಕೋನವೇ ಬತ್ತಿಹೋಗುತ್ತಿದೆ. ಅಧ್ಯಾಪಕರು ಮತ್ತು ಕುಲಪತಿಗಳ ನೇಮಕಾತಿಯಲ್ಲಿ ನಡೆಯುವ ಬ್ರಹ್ಮಾಂಡ ಭ್ರಷ್ಟಾಚಾರ ಎಲ್ಲರಿಗೂ ತಿಳಿದಿರುವಂತಹದ್ದಾಗಿದೆ.

ಅಧ್ಯಾಪಕರ ನೇಮಕಾತಿಗೆ ನೆಟ್ (NET) ಅಥವಾ ಕೆ-ಸೆಟ್ನಲ್ಲಿ (K-SET) ಅರ್ಹತೆ ಪಡೆಯುವುದು ಅಥವಾ ಪಿಎಚ್. ಡಿ. ಪದವಿ ಪಡೆಯುವುದು ಕಡ್ಡಾಯವಾಗಿದೆ. ಕೆ-ಸೆಟ್ ನಡೆಸುವವರ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿದೆ. ಯಾಕೆಂದರೆ ಕೆ –ಸೆಟ್ ಅರ್ಹತೆ ಪಡೆದ ಕೆಲವರು ತಾವು ಕೊಟ್ಟ ಲಕ್ಷಗಳ ಬಗ್ಗೆ ಲಜ್ಜೆ ಬಿಟ್ಟು ಬೀಗುತ್ತಿರುತ್ತಾರೆ. ಪಿಎಚ್.ಡಿ ಪದವಿಗಳ ಮೌಲ್ಯಮಾಪನ ಪ್ರಕ್ರಿಯೆಯಂತೂ ಹಾಸ್ಯಾಸ್ಪದವಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಕಳೆದೆರಡು ದಶಕಗಳಲ್ಲಿ ದುಡ್ಡು ಕೊಟ್ಟು ನೇಮಕಗೊಂಡವರಲ್ಲಿ ಕೆಲವು ಅಧ್ಯಾಪಕರು ತಾವು ಮಾರ್ಗದರ್ಶಕರಾಗಲು, ತಾವೇ ಮಹಾಪ್ರಬಂಧ ಬರೆಸಿಕೊಡಲು ಇಂತಿಷ್ಟು ದರ ನಿಗದಿ ಮಾಡಿ ವ್ಯಾಪಾರಕ್ಕಿಳಿದಿರುವುದು ಮುಚ್ಚಿಟ್ಟ ಸಂಗತಿಯೇನೂ ಅಲ್ಲ. ಪಿಎಚ್.ಡಿ ಪದವಿ ಆಕಾಂಕ್ಷಿಗಳು ಇದೆಲ್ಲಾ ವ್ಯವಹಾರವನ್ನು ನಿರ್ವಹಿಸಿ ನಿರಾಯಾಸವಾಗಿ ಪದವಿ ಪಡೆದು ‘ಇಷ್ಟು ಲಕ್ಷ ಹೋಯಿತು, ಅಂತೂ ಡಾಕ್ಟರ್ ಆದೆ, ಇನ್ನೇನಿದ್ದರೂ ಕುಲಪತಿಗಳ ಸೂಟ್ಕೇಸ್ ತುಂಬಿಸುವುದಷ್ಟೆ ಬಾಕಿ' ಅನ್ನುತ್ತಾರೆ.

ನೇಮಕಾತಿ ನಂತರವೂ ಬಡ್ತಿಗಾಗಿ ನಡೆಸುವ ಪ್ರಯತ್ನಗಳು ಇನ್ನೂ ಅಸಹ್ಯವಾಗಿವೆ. ಸಹ ಪ್ರಾಧ್ಯಾಪಕ/ ಪ್ರಾಧ್ಯಾಪಕರಾಗಲು ನಿಗದಿತ ಅವಧಿಯಲ್ಲಿ ಇಂತಿಷ್ಟು ಪ್ರಕಟಣೆಗಳು ಇರಬೇಕು; ಅವುಗಳು ಐಎಸ್ಎಸ್ಎನ್/ಐಎಸ್ಬಿಎನ್ ನಂಬರ್ ಹೊಂದಿರ ಬೇಕು ಮತ್ತು ಯುಜಿಸಿ ಕೇರ್ಲಿಸ್ಟ್ನಲ್ಲಿರುವ ನಿಯತಕಾಲಿಕಗಳಲ್ಲಿ ಪ್ರಕಟವಾಗಿರಬೇಕು ಎಂಬೆಲ್ಲಾ ನಿಯಮಗಳಿವೆ. ಈ ಯಾವುವೂ ಅಧ್ಯಾಪಕರಿಗೆ ಸಮಸ್ಯೆಯೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಆನ್ಲೈನ್ ನಿಯತಕಾಲಿಕಗಳಲ್ಲಿ ಬೇಕಾದವರಿಗೆ ಬೇಕಾದ ಅವಧಿಗೆ ಪ್ರಕಟಣೆಗಳನ್ನು ಹೊಂದಿಸಿಕೊಡುವ ದೊಡ್ಡ ಜಾಲವೇ ಇದೆ.

ಪ್ರಶ್ನಿಸಲಾರದ ಅಸಹಾಯಕತೆ ಅನೇಕರನ್ನು ಕಾಡುತ್ತಿದೆ. ಬೌದ್ಧಿಕ ಭ್ರಷ್ಟಾಚಾರದ ಈ ವ್ಯಾಪಕತೆಯು ಇಡೀ ಉನ್ನತ ಶಿಕ್ಷಣದ ಮೌಲಿಕತೆಯನ್ನೇ ನಾಶಪಡಿಸಿದೆ. ಪ್ರಾಮಾಣಿಕ, ಅಧ್ಯಯನಶೀಲ ಪ್ರಾಧ್ಯಾಪಕರು ತಮ್ಮ ಪಾಡಿಗೆ ತಾವಿರುವ ಸುರಕ್ಷಿತ ಪಥದಲ್ಲಿ ಇರುವುದು ಅನಿವಾರ್ಯವಾಗಿದೆ. ಒಟ್ಟಾರೆ, ಉನ್ನತ ಶಿಕ್ಷಣದಲ್ಲಿ ಉನ್ನತ ಆಲೋಚನೆಗಳು ಇಳಿಮುಖವಾಗುತ್ತಿರುವುದಂತೂ ಸತ್ಯ.

ಈ ಹೊತ್ತಿನ ವಿದ್ಯಾರ್ಥಿಗಳಲ್ಲಿ ಭಾಷೆ, ಸಂಸ್ಕೃತಿ, ವಿಜ್ಞಾನ ವಿಷಯಗಳ ಕುರಿತಾಗಿ ಆಳವಾದ ಜ್ಞಾನ ಪಡೆಯಬೇಕೆಂಬ ಉತ್ಸಾಹವೇ ಕಾಣುತ್ತಿಲ್ಲ. ಕಲಿಕೆ ಮತ್ತು ಬೋಧನಾ ವಿಧಾನಗಳಲ್ಲಿ ತಂತ್ರಜ್ಞಾನದ ಅತಿ ಬಳಕೆಯಿಂದ ಮಾಹಿತಿ ಪಡೆಯುವುದು ಮುಖ್ಯವಾಗಿದೆಯೇ ವಿನಾ ಮಾಹಿತಿಯನ್ನು ಜ್ಞಾನವನ್ನಾಗಿಸುವ, ಜ್ಞಾನವನ್ನು ವಿವೇಕವನ್ನಾಗಿಸುವ ಪ್ರಯತ್ನಗಳೇ ಕಾಣುತ್ತಿಲ್ಲ. ಯುವಜನರು ಕೌಶಲರಹಿತ ಪದವಿಗಳ ಪ್ರಮಾಣಪತ್ರಗಳನ್ನು ಪಡೆದು ಕನ್ನಡ, ಇಂಗ್ಲಿಷ್ ಭಾಷೆಗಳ ಪರಿಣಾಮಕಾರಿ ಸಂವಹನ ಸಾಧ್ಯವಾಗದೆ ಇತ್ತ ಕೃಷಿ, ಕರಕುಶಲ ಕೈಗಾರಿಕೆಗಳಲ್ಲಿ ಸೃಷ್ಟಿಶೀಲರಾಗಿ ತೊಡಗಿಸಿಕೊಳ್ಳಲಾಗದೆ ಅತಂತ್ರರಾಗುತ್ತಿದ್ದಾರೆ. ಪದವಿಯಲ್ಲಿ ಸೆಮಿಸ್ಟರ್ಗಳ ಕಾರಣದಿಂದ ಅಂಕಗಳಿಕೆ ಏರುಮುಖವಾಗಿದೆಯೇ ವಿನಾ ಅದು ಜ್ಞಾನ ಮತ್ತು ಕೌಶಲಗಳ ಪ್ರಕಾಶದಲ್ಲಿ ಕಾಣುತ್ತಿಲ್ಲ. ಈ ಬಗೆಯ ಕೊರತೆ ಸ್ನಾತಕೋತ್ತರ ಪದವಿಗಳಲ್ಲೂ ಮುಂದುವರಿದು, ಪದವಿ ಪ್ರಮಾಣಪತ್ರ ಪ್ರದಾನದ ಸಂಖ್ಯೆಯ ಏರುಗತಿ ಮಾತ್ರ ರಾಚುತ್ತದೆ. ಪ್ರಮಾಣಪತ್ರ ಹಿಡಿದು ಹೊರಟವರ ಕೈಗೆ ಉದ್ಯೋಗ ಸಿಗುತ್ತಿಲ್ಲ. ನೀರೇ ಇಲ್ಲದ ಕೆರೆಗಳಲ್ಲಿ ಮೀನು ಹಿಡಿಯಲು ಬಲೆ ಕೊಟ್ಟು ಕಳಿಸುವಂತಾಗಿದೆ ನಮ್ಮ ಉನ್ನತ ಶಿಕ್ಷಣ.

ಸಮಾಜದ ಓರೆಕೋರೆ ತಿದ್ದುವ ಸಾಮರ್ಥ್ಯ ತೋರಬೇಕಾದ ಅಧ್ಯಾಪಕರಲ್ಲಿ ಅನೇಕರು ಬೌದ್ಧಿಕ ಕ್ಷಮತೆ ಹೊಂದಿಲ್ಲದಿರುವುದು ಮಾತ್ರವಲ್ಲ, ಪಿಎಚ್.ಡಿ ಮಾರ್ಗದರ್ಶನಕ್ಕಾಗಿ ಸಂಶೋಧನಾ ವಿದ್ಯಾರ್ಥಿಗಳ ಶೋಷಣೆ ಮಾಡುತ್ತಿರುವುದು ಕಂಡೂ ಕಾಣದಂತಹ ಸತ್ಯವಾಗಿದೆ. ಹೀಗಿರುವಾಗ ಕೇವಲ ಸಂಖ್ಯೆಗಳ ಬೆನ್ನು ಬೀಳದೆ ಹಿಂದೆ ಇದ್ದ ವಿವಿಗಳಲ್ಲಿಯೇ ಜಾಗತಿಕ ಗುಣಮಟ್ಟವನ್ನು ಸಾಧಿಸ ಬೇಕಾಗಿದೆ. ದೇಶದ ಸಾವಿರಕ್ಕೂ ಹೆಚ್ಚು ವಿವಿಗಳಲ್ಲಿ ಕೇವಲ ಎರಡು ಮಾತ್ರ ಜಾಗತಿಕ ಗುಣಮಟ್ಟದೊಂದಿಗೆ ಸ್ಪರ್ಧಿಸಬಲ್ಲವು ಎಂಬ ಸಮೀಕ್ಷೆಯೇ ವಿವಿಗಳು ಯಾಕೆ ಬೇಕು ಎನ್ನುವ ಪ್ರಶ್ನೆಗೆ ಉತ್ತರ.

ಎಲ್ಲರಿಗೂ ಎಲ್ಲೆಡೆಯೂ ಶಿಕ್ಷಣ ಎಂಬ ಸದಾಶಯವನ್ನು ಕೇವಲ ಪ್ರಮಾಣಪತ್ರಗಳ ಸರಕಾಗಿಸದೆ ವಿದ್ಯೆಯ ವಿವೇಕದ ಮೂಲಕ ಮಾನವೀಯ ಸಮಾಜ ನಿರ್ಮಾಣದ ಸಾಧನವನ್ನಾಗಿ ಮಾಡಬೇಕಾಗಿದೆ. ವಿಶ್ವವಿದ್ಯಾಲಯಗಳೆಂಬ ಬಿಳಿಯಾನೆಗಳನ್ನು ಸಾಕುವ ಅನಿವಾರ್ಯ ಒತ್ತಡದಲ್ಲಿ ರಾಜಕಾರಣದ ದುರುದ್ದೇಶಗಳೂ ಬೆರೆತು ಅತ್ಯುತ್ತಮ ಬೌದ್ಧಿಕ ಸಂವಾದ ಕೇಂದ್ರಗಳಾಗಬೇಕಿದ್ದ ವಿಶ್ವವಿದ್ಯಾಲಯಗಳು ಬಹುಪಾಲು ಅಶೈಕ್ಷಣಿಕ ಚಟುವಟಿಕೆಗಳ ಆಡುಂಬೊಲವಾಗಿವೆ. ಆದ ಕಾರಣ ಸಮಸಮಾಜದ ಕನಸುಳ್ಳ ಅಧ್ಯಾಪಕ ಸಮುದಾಯ, ನಿಷ್ಠುರ ಹಾಗೂ ಪಾರದರ್ಶಕ ಆಡಳಿತ ಮತ್ತು ವೈಜ್ಞಾನಿಕ ಎಚ್ಚರವನ್ನು ಸಾಧಿಸುವ ಗುರಿಯೊಂದಿಗೆ ಸಂಖ್ಯೆ ಕಡಿಮೆಯಾದರೂ ಕಳಪೆಯಾಗದಂತಹ ಗುಣಪ್ರಕಾಶನ ಕೇಂದ್ರಗಳಾಗಿ ವಿಶ್ವವಿದ್ಯಾಲಯಗಳು ಬೆಳಗಬೇಕು.

ಲೇಖಕ: ನಿವೃತ್ತ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.