ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿ ಗಣತಿ ವರದಿ’ಗೆ ಸದಸ್ಯ ಕಾರ್ಯದರ್ಶಿ ಸಹಿ ಇದೆ: ಕಾಂತರಾಜು ಸ್ಪಷ್ಟನೆ

‘ಸಂವಾದ’ದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜು ಸ್ಪಷ್ಟನೆ
Last Updated 14 ಸೆಪ್ಟೆಂಬರ್ 2021, 20:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜಾತಿ ಜನಗಣತಿಗೆ ಸಂಬಂಧಿಸಿದಂತೆ ಹಂತಹಂತವಾಗಿ ಸಿದ್ಧಪಡಿಸಿದ ಎಲ್ಲಾ ವರದಿಗಳಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಿದ್ದಾರೆ. ಅಂತಿಮ ವರದಿಗಷ್ಟೇ ಹಾಕಿಲ್ಲ.ಈಗಲಾದರೂ ಅದಕ್ಕೆ ಸಹಿ ಹಾಕಿ, ಸದನದಲ್ಲಿ ಮಂಡಿಸಿ ಜಾರಿಗೆ ತರಬೇಕು...’

‘ಜಾತಿ ಜನಗಣತಿಯ ಗೊಂದಲ’ ಕುರಿತು ‘ಪ್ರಜಾವಾಣಿ’ ಮಂಗಳವಾರ ಆಯೋಜಿಸಿದ್ದ ಬಹುಮಾಧ್ಯಮ ಸಂವಾದದಲ್ಲಿ, ವರದಿ ಕುರಿತು ಸದಸ್ಯ ಕಾರ್ಯದರ್ಶಿ ಸಹಿ ವಿಚಾರವಾಗಿ ನಡೆಯುತ್ತಿರುವ ಚರ್ಚೆಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್‌. ಕಾಂತರಾಜು ಸ್ಪಷ್ಟನೆ ನೀಡಿದರು.

ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ, ಮಾಜಿ ಸಚಿವ ಕಾಂಗ್ರೆಸ್‌ನ ಡಾ.ಎಚ್‌.ಸಿ. ಮಹಾದೇವಪ್ಪ, ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ರಾಜಲಕ್ಷ್ಮಿ ಅಂಕಲಗಿ ಸಂವಾದದಲ್ಲಿಭಾಗವಹಿಸಿದ್ದರು. ‘ಸಾಮಾಜಿಕ ನ್ಯಾಯ ಮತ್ತು ಸಮಸಮಾಜ ನಿರ್ಮಾಣಕ್ಕಾಗಿ ಜಾತಿ ಜನಗಣತಿ ವರದಿ ಜಾರಿಯಾಗಬೇಕು’ ಎಂದು ಎಲ್ಲರೂ ಸಮಾನ ಅಭಿಪ್ರಾಯ ವ್ಯಕ್ತಪಡಿಸಿದರು.

‘ಯಾರು ಮಾಡಿಸಿದರು ಎಂಬುದು ಮುಖ್ಯವಲ್ಲ’

‘ಸಮೀಕ್ಷೆಯಿಂದ ಯಾರೂ ಹೊರಗುಳಿಯದಂತೆ ನೋಡಿಕೊಳ್ಳಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಶೇ 98 ಹಾಗೂ ಬೆಂಗಳೂರಿನ ಶೇ 88ರಷ್ಟು ಭಾಗ ಸಮೀಕ್ಷೆಗೆ ಒಳಪಟ್ಟಿದೆ. ಸಂವಿಧಾನದ ಪೀಠಿಕೆಯ ಉದ್ದೇಶ ಈಡೇರಬೇಕಾದರೆ ಇಂತಹ ಸಮೀಕ್ಷೆ ನಡೆಯಬೇಕು. ಯಾವ ಸರ್ಕಾರ ಜಾತಿ ಜನಗಣತಿಯನ್ನು ಮಾಡಿಸಿತು ಎಂಬುದು ಇಲ್ಲಿ ಮುಖ್ಯವಲ್ಲ. ಇದು ಸಂವಿಧಾನದ ಆಜ್ಞಾಪನವಾಗಿದೆ. ಹಿಂದಿನ ಮಂಡಲ್ ಆಯೋಗವನ್ನು ನೇಮಿಸಿದ್ದು ಮೊರಾರ್ಜಿ ದೇಸಾಯಿ ಸರ್ಕಾರ. ನಂತರ ಇಂದಿರಾ ಗಾಂಧಿ ಸರ್ಕಾರ ವರದಿ ಸ್ವೀಕರಿಸಿತು. ಅಂತಿಮವಾಗಿ ವಿ.ಪಿ. ಸಿಂಗ್ ಸರ್ಕಾರ ಜಾರಿಗೆ ತಂದಿತು’.

ಎಚ್. ಕಾಂತರಾಜು, ಮಾಜಿ ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

***

‘ಸಹಿ ಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳಿ’

‘ವರದಿಗೆ ಸಹಿ ಮಾಡುವುದು ಸದಸ್ಯ ಕಾರ್ಯದರ್ಶಿ ಕರ್ತವ್ಯ. ಆತ ಸರ್ಕಾರದ ಸಂಬಳ ತೆಗೆದುಕೊಂಡಿಲ್ಲವೇ? ಸಹಿ ಹಾಕದಿದ್ದರೆ ಕಾರ್ಯದರ್ಶಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ, ಮಧ್ಯದಲ್ಲಿ ಕಾರ್ಯದರ್ಶಿಯನ್ನು ಏಕೆ ವರ್ಗಾವಣೆ ಮಾಡಲಾಯಿತು? ಇದರ ಹಿಂದಿನ ಸಂಚು ಏನು? ಎಂಬುದು ಮುಖ್ಯವಾಗುತ್ತದೆ. ‘ಜಾತಿ ಜನಗಣತಿ’ ಸಿದ್ದರಾಮಯ್ಯ ವರದಿಯಲ್ಲ. ಸಂವಿಧಾನ ಪ್ರೇರಿತ ಆಯೋಗದ ವರದಿ. ಈಗ ಎಬ್ಬಿಸಿರುವ ಗೊಂದಲಗಳ ಹಿಂದೆ, ಹಿಂದುಳಿದವರನ್ನು ಶಾಶ್ವತವಾಗಿ ಭಿಕ್ಷುಕರನ್ನಾಗಿರುವ ಹುನ್ನಾರ ಅಡಗಿದೆ. ಉಳ್ಳವರಂತೆ ಇಲ್ಲದವರೂ ಹೋರಾಟಕ್ಕೆ ತಯಾರಾಗಬೇಕು’.

ಬಿ.ಜೆ. ಪುಟ್ಟಸ್ವಾಮಿ, ಉಪಾಧ್ಯಕ್ಷ, ರಾಜ್ಯ ಯೋಜನಾ ಮಂಡಳಿ

***
‘ಪಟ್ಟಭದ್ರರ ಹುನ್ನಾರ’

‘ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ವಿರುದ್ಧ ನಿಲುವು ತಳೆದಿರುವ ಪಟ್ಟಭದ್ರ ಶಕ್ತಿಗಳು ಜಾತಿ ಜನಗಣತಿ ವರದಿ ಜಾರಿಯಾಗದಂತೆ ಹುನ್ನಾರ ಮಾಡುತ್ತಿವೆ. ಜಾತಿಯನ್ನು ವೈಭವೀಕರಿಸಿ ಸಭೆ– ಸಮಾವೇಶ ಮಾಡುವವರೇ ವರದಿಯನ್ನು ವಿರೋಧಿಸುತ್ತಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಜನರನ್ನು ಮೇಲೆತ್ತಲು ಜಾತಿ ಜನಗಣತಿ ಅಗತ್ಯ. ಸಂವಿಧಾನದಲ್ಲಿ ಇದನ್ನು ಒತ್ತಿ ಹೇಳಿದ್ದಾರೆ. ರಾಜಕೀಯ ಪಕ್ಷಗಳು ವರದಿ ಕುರಿತು ಸಹಮತಕ್ಕೆ ಬರಬೇಕು. ಕಾರ್ಯದರ್ಶಿ ಸಹಿ ಹಾಕಿಲ್ಲ ಎಂದು ಕುಂಟುನೆಪ ಹೇಳದೆ, ವರದಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಬೇಕು’.

ಡಾ.ಎಚ್‌.ಸಿ. ಮಹಾದೇವಪ್ಪ, ಕಾಂಗ್ರೆಸ್ ಮುಖಂಡ

***
‘ಜನರಿಗೆ ಮಾಡುವ ಮೋಸ’

‘ವರದಿಗೆ ಕಾರ್ಯದರ್ಶಿ ಸಹಿ ಮಾಡಿಲ್ಲ ಎನ್ನುವುದು ಜನರಿಗೆ ಮಾಡುವ ಮೋಸ.‌‌‌ ನ್ಯೂನತೆಗಳಿದ್ದರೆ ಸರಿಪಡಿಸುವ ಪ್ರಕ್ರಿಯೆಗೆ ಕೈ ಹಾಕಬೇಕೇ ಹೊರತು ತಿರಸ್ಕರಿಸಬಾರದು. ರಾಜಕೀಯ ಚಿತ್ರಣ ಬದಲಾಗುತ್ತದೆಂದು ಯಾರೂ ಆ ಕೆಲಸಕ್ಕೆ ಕೈ ಹಾಕುತ್ತಿಲ್ಲ. 1947ರಲ್ಲಿ ಒಬಿಸಿಯಲ್ಲಿ 2,400 ಇದ್ದ ಜಾತಿಗಳು 2006ರ ಹೊತ್ತಿಗೆ 5,013ಕ್ಕೆ ಏರಿದವು. ಸದ್ಯ 6 ಸಾವಿರ ಜಾತಿಗಳಿವೆ. ಈ ಬದಲಾವಣೆ ಕುರಿತು ಅಧ್ಯಯನವಾಗಬೇಕು. 1931ರಲ್ಲಿ ಜನಸಂಖ್ಯೆ 30 ಕೋಟಿ ಇದ್ದಾಗಿನ ಜಾತಿ ಜನಗಣತಿಯನ್ನೇ, ಇಂದಿನ 135 ಕೋಟಿ ಜನಸಂಖ್ಯೆಗೆ ಅನ್ವಯಿಸುವುದು ಎಷ್ಟು ಸರಿ?’.

ರಾಜಲಕ್ಷ್ಮಿ ಅಂಕಲಗಿ, ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT