ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿ ಯೋಜನೆಗಳು: ಸಂಕಷ್ಟದ ಹೊರೆಯ ಭಾರ ತಗ್ಗಿಸುವ ಸದಾಶಯದ ಪ್ರಯತ್ನ –ಸಿದ್ದರಾಮಯ್ಯ

ಚರ್ಚೆ | ಸಮಾಜದ ಸಬಲೀಕರಣವೇ ಇಲ್ಲ ಆರ್ಥಿಕ ಹೊರೆಯೇ?
Published 2 ಜೂನ್ 2023, 18:54 IST
Last Updated 2 ಜೂನ್ 2023, 18:54 IST
ಅಕ್ಷರ ಗಾತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಬರಹ

ಕೇವಲ ಚುನಾವಣೆಯಲ್ಲಿ ಮತಗಳಿಕೆಯ ರಾಜಕೀಯ ಸ್ವಾರ್ಥದಿಂದ ಐದು ಗ್ಯಾರಂಟಿ ಯೋಜನೆಗಳನ್ನು ನಾವು ಘೋಷಿಸಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಮತ್ತು ದುರಾಡಳಿತದ ಫಲವನ್ನು ಉಣ್ಣುತ್ತಿರುವ ರಾಜ್ಯದ ಜನರ ಸಂಕಷ್ಟಗಳ ಹೊರೆಯನ್ನು ತುಸು ಹಗುರುಗೊಳಿಸುವ ಸದಾಶಯದಿಂದ ಈ ಯೋಜನೆಗಳನ್ನು ಘೋಷಿಸಿದ್ದೆವು

ಕರ್ನಾಟಕದ ಮಹಾಜನತೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನು ಹರಸಿ ತಮ್ಮನ್ನು ಆಳುವ ಜವಾಬ್ದಾರಿಯನ್ನು ನಮ್ಮ ಹೆಗಲ ಮೇಲೆ ಹೊರಿಸಿದ್ದಾರೆ.  ನಿರೀಕ್ಷೆಯ ಭಾರ ದೊಡ್ಡದು.  ಜನತೆ ನಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ಸರ್ಕಾರದ ಸಂಕಲ್ಪ. ನುಡಿದಂತೆ ನಡೆವ ಸರ್ಕಾರ ಎಂಬ ಕೀರ್ತಿ ಕಿರೀಟವನ್ನು ಹಿಂದಿನ ನಮ್ಮ ಸರ್ಕಾರದ ಕಾಲದಲ್ಲಿ ರಾಜ್ಯದ ಜನತೆ ನಮ್ಮ ಮುಡಿಗೇರಿಸಿದ್ದರು, ಅದನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.

ಕಳೆದ ತಿಂಗಳ ಹದಿಮೂರರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನ ನನ್ನ ಮನಸ್ಸಿನೊಳಗೊಂದು ಪ್ರಮಾಣ ಮಾಡಿದ್ದೆ. ಅದು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ಪ್ರಮಾಣ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಆ ಪ್ರಮಾಣದ ಪ್ರಕಾರ ನಡೆದುಕೊಂಡಿದ್ದೇನೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.

ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಗಳಿಗೆಯಿಂದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ನಡೆಸುತ್ತಿರುವ ಚರ್ಚೆಯನ್ನು ನಾನು ಗಮನಿಸಿದ್ದೇನೆ.  ವಿರೋಧ ಪಕ್ಷಗಳ ನಾಯಕರು ನಮ್ಮ ಸರ್ಕಾರಕ್ಕೆ ಉಸಿರಾಡಲೂ ಸಮಯ ನೀಡದೆ ಸರ್ಕಾರದ ಮೇಲೆ ಎರಗಿದ್ದಾರೆ. ಅವರಿಂದ ಒಂದಿಷ್ಟು ಸಂಯಮ ಮತ್ತು ವಿವೇಕಯುತ ನಡವಳಿಕೆಯನ್ನು ನಿರೀಕ್ಷಿಸಿದ್ದ ನನಗೆ ನಿರಾಶೆಯಾಗಿದೆ. ರಚನಾತ್ಮಕ ಸಲಹೆಗಳೊಂದಿಗೆ ನಡೆಯುವ ಚರ್ಚೆಯನ್ನು ನಾನು ಸದಾ ಸ್ವಾಗತಿಸುತ್ತೇನೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು: ರಾಜ್ಯ ಆರ್ಥಿಕ ದಿವಾಳಿಯತ್ತ ಹೋಗದಂತೆ ಎಚ್ಚರ ವಹಿಸಿ –ಬೊಮ್ಮಾಯಿ

ಈ ಯೋಜನೆಗಳ ಅನುಷ‍್ಠಾನ ಸಾಧ್ಯವೇ? ಇದಕ್ಕೆ ದುಡ್ಡು ಎಲ್ಲಿಂದ ತರುತ್ತಾರೆ? ಗ್ಯಾರಂಟಿ ಯೋಜನೆಗಳಿಗೆ ಗ್ಯಾರಂಟಿ ಎಲ್ಲಿದೆ ಇತ್ಯಾದಿ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಲಾಗುಗಿದೆ. ಈ ಪ್ರಶ್ನೆಗಳಲ್ಲಿ ಸದಾಶಯಕ್ಕಿಂತಲೂ ಹೆಚ್ಚಾಗಿ ಕುಹಕವಿರುವುದನ್ನು ರಾಜ್ಯದ ಜನತೆಯೂ ಗಮನಿಸಿರಬಹುದು. ನಾನು ಟೀಕೆ-ಟಿಪ್ಪಣಿಗಳನ್ನು ಧನಾತ್ಮಕವಾಗಿಯೇ ಸ್ವೀಕರಿಸಿದ್ದೇನೆ. ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ನಮ್ಮ ಇತಿಮಿತಿಗಳ ಅರಿವಿದೆ.

ನಾಲ್ಕು ದಶಕಗಳ ರಾಜಕೀಯ ಬದುಕು ಮತ್ತು ಹದಿಮೂರು ಬಜೆಟ್ ಮಂಡನೆಯಿಂದ ಪಡೆದಿರುವ  ಹಣಕಾಸು ನಿರ್ವಹಣೆಯ ಅನುಭವ ನನಗೂ ಇದೆ.  ಈ ಹಿನ್ನೆಲೆಯಲ್ಲಿ ಚಿಂತಿಸಿ-ಮಥಿಸಿ ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ. ಇದರಿಂದ ರಾಜ್ಯದ ಬೊಕ್ಕಸ ಬರಿದಾಗುತ್ತದೆ, ಅಭಿವೃದ್ದಿಗೆ ಹಿನ್ನಡೆಯಾಗುತ್ತದೆ ಎಂಬ ಯಾವ ಭೀತಿಯೂ ರಾಜ್ಯದ ಜನರಿಗೆ ಬೇಡ. 2013-18ರ ಅವಧಿಯ ಸರ್ಕಾರದಂತೆಯೇ ರಾಜ್ಯದ ಜನ ಮೆಚ್ಚಿಕೊಳ್ಳುವ ಆಡಳಿತವನ್ನು ಮುಂದಿನ ಐದು ವರ್ಷಗಳ ಕಾಲವೂ ನೀಡುತ್ತೇವೆ ಎಂಬ ವಿಶ್ವಾಸ ನಮ್ಮ ಸರ್ಕಾರದ ಮೇಲಿರಲಿ.

ಕೇವಲ ಚುನಾವಣೆಯಲ್ಲಿ ಮತಗಳಿಕೆಯ ರಾಜಕೀಯ ಸ್ವಾರ್ಥದಿಂದ ಐದು ಗ್ಯಾರಂಟಿ ಯೋಜನೆಗಳನ್ನು ನಾವು ಘೋಷಿಸಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಮತ್ತು ದುರಾಡಳಿತದ ಫಲವನ್ನು ಉಣ್ಣುತ್ತಿರುವ ರಾಜ್ಯದ ಜನರ ಸಂಕಷ್ಟಗಳ ಹೊರೆಯನ್ನು ತುಸು ಹಗುರುಗೊಳಿಸುವ ಸದಾಶಯದಿಂದ ಈ ಯೋಜನೆಗಳನ್ನು ಘೋಷಿಸಿದ್ದೆವು.

ವಿರೋಧ ಪಕ್ಷದ ನಾಯಕನಾಗಿ ನಾನು ಊರೂರು ಸುತ್ತುತ್ತಿದ್ದಾಗ ಆಗಿರುವ ಅನುಭವ ಕೂಡಾ ಈ ಗ್ಯಾರಂಟಿ ಯೋಜನೆಗಳಿಗೆ ಪ್ರೇರಣೆ ಎನ್ನುವುದನ್ನು ಹೇಳಬೇಕಾಗುತ್ತದೆ. ಗ್ಯಾಸ್-ಪೆಟ್ರೋಲ್-ಡೀಸೆಲ್, ದಿನನಿತ್ಯ ಬಳಕೆಯ ಮನೆಸಾಮಗ್ರಿಗಳಿಂದ ಹಿಡಿದು ರೈತ ಬಳಸುವ ರಸಗೊಬ್ಬರದ ವರೆಗೆ ಎಲ್ಲದರ ಬೆಲೆ ಏರಿಕೆಯಿಂದ ಜನರ ಜೇಬು ಖಾಲಿಯಾಗಿದ್ದನ್ನು ನಾನು ಗಮನಿಸಿದ್ದೇನೆ. ಇದರ ಜೊತೆಗೆ ನಿರುದ್ಯೋಗಿ ಯುವಜನರ ಗೋಳನ್ನೂ ನಾನು ಆಲಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ಗೃಹಿಣಿಯರು ಮತ್ತು ಯುವಜನರನ್ನು ಗುರಿಯಾಗಿಟ್ಟುಕೊಂಡು ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಿದ್ದೆವು. ಜನರ ಕೈಗೆ ದುಡ್ಡು ಬಂದು ಸೇರಿದರೆ ಅವರ ಖರೀದಿ ಸಾಮರ್ಥ್ಯ ಹೆಚ್ಚಾಗುತ್ತದೆ, ಇದರಿಂದ ಮಾರುಕಟ್ಟೆ ಚೈತನ್ಯ ಪಡೆದು ಒಟ್ಟು ಆರ್ಥಿಕತೆಯ ಸುಧಾರಣೆಯಾಗುತ್ತದೆ. ಇದೊಂದು ಸರಳ ಆರ್ಥಿಕ ಸೂತ್ರ. ಸಂಕಷ್ಟಗಳ ಸರಮಾಲೆಯಿಂದ ಜನರನ್ನು ಬಿಡುಗಡೆಗೊಳಿಸಲು ತಕ್ಷಣದ ಪರಿಹಾರವಾಗಿ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ನಮ್ಮದು ಸರ್ವರನ್ನೂ ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು-ಸಮಬಾಳು ನೀಡುವ ಸರ್ವೋದಯ ತತ್ವದ  ಅಭಿವೃದ್ದಿ ಮಾದರಿ. ಇದನ್ನೇ ನಾನು ಹೆಮ್ಮೆಯಿಂದ ‘ಕರ್ನಾಟಕ ಮಾದರಿ’ ಎನ್ನುತ್ತೇನೆ. ನಾನು ಮುಖ್ಯಮಂತ್ರಿಯಾಗಿದ್ದ  ಐದು ವರ್ಷಗಳಲ್ಲಿ (2013-18) ಸರ್ವೋದಯದ ಆಶಯದ ‘ಕರ್ನಾಟಕ ಮಾದರಿ’ ಆಡಳಿತವನ್ನು  ನೀಡಿದ್ದೆವು. ಯಾವುದೇ ನಾಡಿನ ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾಗಿ ಬೇಕಾಗಿರುವುದು ದೂರದೃಷ್ಟಿಯ ಆಲೋಚನೆಗಳು, ಸರ್ವಜನರ ಏಳಿಗೆಗೆ ಅಗತ್ಯವಾದ ನೀತಿ-ನಿರ್ಧಾರಗಳು ಮತ್ತು  ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ. ನಮ್ಮ ‘ಕರ್ನಾಟಕ ಅಭಿವೃದ್ಧಿ ಮಾದರಿ’ಯಲ್ಲಿ ಈ ಮೂರೂ ಅಂಶಗಳನ್ನು ಕಾಣಬಹುದು.

ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು.... ಬಡವ-ಬಲ್ಲಿದರೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವದಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು.... ಕೃಷಿ ಸಂಪತ್ತು ಬೆಳೆಯಬೇಕು.... ಉದ್ಯಮ ಕ್ಷೇತ್ರದ ಪ್ರಗತಿಯಾಗಬೇಕು.... ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು..... ಮೂಲಸೌಲಭ್ಯಗಳು ವೃದ್ಧಿಯಾಗಬೇಕು.... ನೆಮ್ಮದಿಯಿಂದ ಬದುಕುವಷ್ಟು ಆದಾಯ ಪ್ರತಿ ಕುಟುಂಬದ ಪಾಲಿಗಿರಬೇಕು.... ಸಂಪತ್ತು, ಅಧಿಕಾರ ಮತ್ತು ಅವಕಾಶ ಸರ್ವರಿಗೂ ಸಮಾನವಾಗಿ ಹಂಚಿಕೆಯಾಗಬೇಕು - ಇದು ‘ಕರ್ನಾಟಕ ಮಾದರಿ’ ಆಡಳಿತದ ಮೂಲ ಆಶಯ.

ಈ ಅಭಿವೃದ್ಧಿ ಮಾದರಿಗೆ ಸಾಮಾಜಿಕ ನ್ಯಾಯದ ಮೂಲಕ ಸಮಾನತೆಯ ಆಧಾರದ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದ ಬಸವಣ್ಣ, ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಪ್ರಯತ್ನಿಸಿದ್ದ ಮಹಾತ್ಮ ಗಾಂಧೀಜಿ ಮತ್ತು  ರಾಜಕೀಯ ಸ್ವಾತಂತ್ರ್ಯದ ಜತೆಯಲ್ಲಿ ಆರ್ಥಿಕ ಸ್ವಾತಂತ್ರ್ಯವೂ ಇರುವ ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂದು ಬಯಸಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತಿತರ ಸಾಮಾಜಿಕ ಮತ್ತು ರಾಜಕೀಯ ಚಿಂತಕರ ಆಶಯಗಳು ಪ್ರೇರಣೆ ನೀಡಿವೆ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ನಾಯಕನಾಗಲು ಎದೆಯ ಅಳತೆ ಮುಖ್ಯ ಅಲ್ಲ. ಆ ಎದೆಯೊಳಗೆ ಜನರ ಕಷ್ಟಗಳಿಗೆ, ಕಣ್ಣೀರಿಗೆ ಮರುಗುವ ಮತ್ತು ಸ್ಪಂದಿಸುವ ಹೃದಯ ಬೇಕಾಗುತ್ತದೆ. ನಮ್ಮದು ಇಂತಹ ಹೃದಯವಂತಿಕೆಯ ಅಭಿವೃದ್ಧಿ ಮಾದರಿ.

ನಮ್ಮ ಅಭಿವೃದ್ಧಿಯ ಮಾದರಿಯ ಕೇಂದ್ರ ಸ್ಥಾನದಲ್ಲಿರುವುದು ಒಬ್ಬ ಸಾಮಾನ್ಯ ಮನುಷ್ಯನೇ ಹೊರತು ಸೂಟುಬೂಟುಧಾರಿ ಅಲ್ಲ. ಈ ಸಾಮಾನ್ಯ ಮನುಷ್ಯ ಎಲ್ಲ ಜಾತಿ-ಧರ್ಮ-ಪ್ರದೇಶಗಳಿಗೆ ಸೇರಿರುವ ಬಡವರು, ಶೋಷಿತರು, ಅವಕಾಶ ವಂಚಿತರು, ಮಹಿಳೆಯರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳ ಪ್ರತಿನಿಧಿ.
ಮುಖ್ಯಮಂತ್ರಿಯ ಕುರ್ಚಿಯಲ್ಲಿ ಕೂತ ನನ್ನ ಕಣ್ಣೆದುರಿಗೆ ಇರುವುದು ಇದೇ ಸಾಮಾನ್ಯ ಮನುಷ್ಯ. ಈತನೇ ನನ್ನ ಕನಸಿನ ‘ಕರ್ನಾಟಕ ಅಭಿವೃದ್ದಿ ಮಾದರಿ’ಯ ಕೇಂದ್ರ ಬಿಂದು. ರಾಜಕೀಯ ಅಧಿಕಾರವನ್ನು ತಮ್ಮ ಸೇವೆ ಮಾಡಲು ಜನತೆ ನೀಡಿರುವ ಅವಕಾಶ ಎಂದು ನಾನು ತಿಳಿದುಕೊಂಡವನು. ಈ ಅವಕಾಶಕ್ಕಾಗಿ ನಾನು ಆಭಾರಿಯಾಗಿದ್ದೇನೆ.

ಐದು ಗ್ಯಾರಂಟಿ ಯೋಜನೆಗಳನ್ನು ಜಾತಿ-ಧರ್ಮ-ವರ್ಗ ನೋಡದೆ ಜಾರಿಗೊಳಿಸಿದ್ದೇವೆ. ಈ ಯೋಜನೆಗಳು ಅರ್ಹ ಫಲಾನುಭವಿಗಳ ಕೈಸೇರಬೇಕು, ಅನರ್ಹರು ಅದನ್ನು ಕಸಿದುಕೊಳ್ಳಬಾರದು. ಉಳ್ಳವರು ಔದಾರ್ಯದಿಂದ ಇಲ್ಲದವರಿಗೆ ಬಿಟ್ಟುಕೊಟ್ಟರೆ ಸರ್ಕಾರದ ಮೇಲಿನ ಆರ್ಥಿಕ ಹೊರೆ ಸ್ವಲ್ಪ ಮಟ್ಟಿಗೆ ತಗ್ಗಿ ಉಳಿಕೆಯಾಗುವ ಸಂಪನ್ಮೂಲವನ್ನು ಹೆಚ್ಚಿನ ಅಭಿವೃದ್ದಿ ಕಾರ್ಯಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಇಂತಹದ್ದೊಂದು ಸದಾಶಯವನ್ನು ನಾಡ ಬಾಂಧವರಿಂದ ನಾನು ನಿರೀಕ್ಷಿಸುವುದು ತಪ್ಪಾಗಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT