ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಭಗವದ್ಗೀತೆ ಶಾಲಾ ಪಠ್ಯವಾಗಬೇಕೆ?

ಶಾಲಾಪಠ್ಯದಲ್ಲಿ ಭಗವದ್ಗೀತೆ ಅಳವಡಿಸಲು ಹೊರಟ ಸರ್ಕಾರದ ಕ್ರಮ ಸರಿಯೇ?
Last Updated 25 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಏಕ ಕಾಲದಲ್ಲಿ ಹಿಂಸೆ ಹಾಗೂ ಅಹಿಂಸೆ, ಕರ್ಮ ಹಾಗೂ ವೈರಾಗ್ಯ, ಸರ್ವ ಸಮಾನತೆ ಹಾಗೂ ಭಿನ್ನತೆ, ಇತ್ಯಾದಿ ಪರಸ್ಪರ ವಿರುದ್ಧ ವೈಚಾರಿಕತೆಯನ್ನು ಸಮರ್ಥಿಸುವ ಗೀತೆಯನ್ನು ಪಠ್ಯವನ್ನಾಗಿ ಅಳವಡಿಸಿಕೊಳ್ಳುವ ಯೋಜನೆಯಲ್ಲಿ ಅನೇಕ ಮಿತಿಗಳು ಹಾಗೂ ಅಪಾಯಕಾರಿ ಸಾಧ್ಯತೆಗಳು ಕಂಡು ಬರುತ್ತವೆ.

**
ಇತ್ತೀಚಿನ ದಿನಗಳಲ್ಲಿ ಮತ್ತೆ ಭಗವದ್ಗೀತೆ ವಾದ-ವಿವಾದಗಳಿಗೆ ಕಾರಣವಾಗಿದೆ. ಮೊದಲಿಗೆ, ಸುಮಾರು ಎಂಟು ವರ್ಷಗಳ ಹಿಂದೆ (2014), ಆಗ ಕೇಂದ್ರದಲ್ಲಿ ವಿದೇಶಾಂಗ ಸಚಿವೆಯಾಗಿದ್ದ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ‘ಭಗವದ್ಗೀತೆಯನ್ನು ‘ರಾಷ್ಟ್ರೀಯ ಗ್ರಂಥ’ವನ್ನಾಗಿಸಬೇಕು’ ಎಂದು ದೆಹಲಿಯ ‘ಗೀತಾ ಪ್ರೇರಣಾ ಮಹೋತ್ಸವ’ದಲ್ಲಿ ಭಾಷಣ ಮಾಡಿದ್ದರು. ಸರಿ ಸುಮಾರು ಅದೇ ಕಾಲದಲ್ಲಿ (2013), ಕರ್ನಾಟಕದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಮಂತ್ರಿಗಳಾಗಿದ್ದ ಕಾಗೇರಿಯವರು ಭಗವದ್ಗೀತೆಯನ್ನೂ ಶಾಲೆಗಳ ಪಠ್ಯಗಳಲ್ಲಿ ಸೇರಿಸಬೇಕು ಎಂದು ಸಾರ್ವಜನಿಕ ಹೇಳಿಕೆ ನೀಡಿದ್ದರು.ಮತ್ತೆ ಈಗ ಅದೇ ಖಾತೆಯ ಮಂತ್ರಿಗಳಾಗಿರುವ ಬಿ. ಸಿ. ನಾಗೇಶ್ ಅವರು ಭಗವದ್ಗೀತೆಯನ್ನು ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕಾಗಿ ಪಠ್ಯಗಳಲ್ಲಿ ಸೇರಿಸಬೇಕೆಂದು, ಮತ್ತು ಆ ವಿಚಾರದಲ್ಲಿ ಸಲಹೆ-ಸೂಚನೆಗಳನ್ನು ಕೊಡಲು ಒಂದು ಸಮಿತಿಯನ್ನು ರಚಿಸುವುದಾಗಿ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಷಿ ಅವರು ‘ಈ ವಿಷಯವನ್ನು ಕುರಿತು ಯಾರೂ ವಿರೋಧ ವ್ಯಕ್ತಪಡಿಸಬಾರದು’ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಗೀತೆಯಲ್ಲಿ ಏನಿವೆ ಅಂತಹ ಮೌಲ್ಯಗಳು ಹಾಗೂ ತತ್ವಗಳು?
ಭಗವದ್ಗೀತೆ ಅಥವಾ ಗೀತೆ ಎಂದು ಪ್ರಸಿದ್ಧವಾಗಿರುವ, 18 ಅಧ್ಯಾಯಗಳುಳ್ಳ, ಈ ಕೃತಿ ಮಹಾಭಾರತದ ‘ಭೀಷ್ಮಪರ್ವ’ದ ಪ್ರಾರಂಭದಲ್ಲಿ ಬರುತ್ತದೆ. ವಿದ್ವಾಸರು ಗೀತೆಯಲ್ಲಿರುವ 18 ಅಧ್ಯಾಯಗಳನ್ನು ಆರು ಅಧ್ಯಾಯಗಳ ಮೂರು ಘಟಕಗಳಂತೆ ವರ್ಗೀಕರಿಸುತ್ತಾರೆ: ‘ಕರ್ಮಯೋಗ’, ‘ಜ್ಞಾನಯೋಗ’, ಮತ್ತು ‘ಭಕ್ತಿಯೋಗ’. ಕಳೆದ ಶತಮಾನದವರೆಗೂ ಗೀತೆಯನ್ನು ಒಂದು ಮಹತ್ವದ ಧರ್ಮಗ್ರಂಥವೆಂದು ಕಾಣುತ್ತಾ, ಅದನ್ನು ಆಧ್ಯಾತ್ಮಿಕ ನೆಲೆಯಲ್ಲಿ ವಿದ್ವಾಂಸರು ವ್ಯಾಖ್ಯಾನಿಸುತ್ತಿದ್ದರು. ಆದರೆ ಅದಕ್ಕೊಂದು ರಾಜಕೀಯ ಆಯಾಮವನ್ನು ಕೊಟ್ಟವರು ಲೋಕಮಾನ್ಯ ಬಾಲಗಂಗಾಧರ ತಿಲಕ್.

ಪ್ರಸಿದ್ಧ ರಾಷ್ಟ್ರನಾಯಕರಾಗಿದ್ದ ತಿಲಕರು, ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಅಧಿಕೃತತೆಯನ್ನು ಕೊಡುವ ಉದ್ದೇಶದಿಂದ ಗೀತಾ ರಹಸ್ಯ ಎಂಬ ಕೃತಿಯನ್ನು 1908ರಲ್ಲಿ ರಚಿಸಿದರು. ತಮ್ಮ ನೂತನ ವ್ಯಾಖ್ಯಾನದಲ್ಲಿ ತಿಲಕರು ಇಡೀ ಭಗವದ್ಗೀತೆಯನ್ನು ಒಂದು ಅನ್ಯೋಕ್ತಿಯಂತೆ (allegory) ವ್ಯಾಖ್ಯಾನಿಸುತ್ತಾರೆ: ‘ಕರ್ಮ’ = ರಾಷ್ಟ್ರಕ್ಕಾಗಿ ಪ್ರತಿಯೊಬ್ಬ ಪ್ರಜೆಯೂ ಮಾಡಬೇಕಾದ ಸೇವೆ; ಕುರುಕ್ಷೇತ್ರ ಯುದ್ಧ =ಸ್ವಾತಂತ್ರ್ಯ ಹೋರಾಟ; ಅರ್ಜುನ=ಪರದಾಸ್ಯದಲ್ಲಿರುವ ಭಾರತೀಯರು; ಬ್ರಿಟಿಷರು=ಕೌರವರು; ಮುಕ್ತಿ=ದೇಶದ ಸ್ವಾತಂತ್ರ್ಯಇತ್ಯಾದಿ.

‘ಕ್ಲೈಬ್ಯಂ ಮಾಸ್ಮ ಗಮಃ ಪಾರ್ಥ ನೈತತ್ ತ್ವಯಿ ಉಪಪದ್ಯತೇ...’ ಎಂದು ಕೃಷ್ಣನು ಅರ್ಜುನನಿಗೆ ಕೊಡುವ ಉಪದೇಶಕ್ಕೆ ಮಹತ್ವ ಕೊಟ್ಟು, ತಿಲಕರು ‘ಉದ್ದೇಶವು ನಿಸ್ವಾರ್ಥದಿಂದ ಕೂಡಿದ್ದರೆ, ಆ ಉದ್ದೇಶ ಸಾಧನೆಗಾಗಿ ಹಿಂಸಾಮಾರ್ಗವನ್ನು ಅನುಸರಿಸುವುದೂ ಕೂಡಾ ಸಮರ್ಥನೀಯ’ ಎಂದು ವಾದಿಸುತ್ತಾರೆ.

ಗಾಂಧೀಜಿಯವರು ನೈತಿಕ ನೆಲೆಯಲ್ಲಿ ಗೀತೆಯನ್ನು ಗ್ರಹಿಸುತ್ತಾರೆ. ತಮ್ಮ ಆಶ್ರಮದಲ್ಲಿ ಅವರು 1926ರಲ್ಲಿ ಗೀತೆಯನ್ನು ಕುರಿತು ಮಾಡಿದ ಸರಣಿ ಉಪನ್ಯಾಸಗಳನ್ನು ಆಧರಿಸಿದ ಕೃತಿ ಅನಂತರ, ‘Discourses on the Gita’ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಅದನ್ನು ಗಾಂಧೀಜಿಯವರೇ 1929ರಲ್ಲಿ ‘ಅನಾಸಕ್ತಿ ಯೋಗ’ ಎಂಬ ಹೆಸರಿನಲ್ಲಿ ಗುಜರಾತಿ ಭಾಷೆಗೆ ಅನುವಾದಿಸಿ, ಅದಕ್ಕೆ ಮುನ್ನುಡಿ ಮತ್ತು ಅಲ್ಲಲ್ಲಿ ಟಿಪ್ಪಣಿಗಳನ್ನೂ ಕೊಟ್ಟರು. (ಮಹದೇವ ದೇಸಾಯಿ ಅದನ್ನು The Gita According to Gandhi ಎಂಬ ಹೆಸರಿನಲ್ಲಿ 1933ರಲ್ಲಿ ಪ್ರಕಟಿಸಿದರು.)ಗಾಂಧೀಜಿ ಅವರಿಗೆ ಗೀತೆಯು ಮುಖ್ಯವಾಗುವುದು ನೈತಿಕ ನೆಲೆಯಲ್ಲಿ. ಮತ್ತು ಅವರ ‘ನೈತಿಕ ಸಂಹಿತೆ’ಯ ಚೌಕಟ್ಟಿನ ಕೇಂದ್ರದಲ್ಲಿ ಸ್ತ್ರೀಸಮಾನತೆ, ಜಾತಿನಿರ್ಮೂಲನ, ಅಹಿಂಸೆ, ಶಾಂತಿ, ಇತ್ಯಾದಿಗಳನ್ನೊಳಗೊಂಡ ಸುಧಾರಣಾವಾದಿ ಚಿಂತನೆಯಿದೆ. ಗಾಂಧಿಜಿ ಅವರ ದೃಷ್ಟಿಯಲ್ಲಿ ಗೀತೆಯು, ‘ವಾಸ್ತವಿಕ ಯುದ್ಧದ ನೆಪದಲ್ಲಿ ಮನುಷ್ಯರ ಹೃದಯಗಳಲ್ಲಿ ಸದಾ ನಡೆಯುವ ಸಂಘರ್ಷವನ್ನು ಚಿತ್ರಿಸುತ್ತದೆ.’

ಈ ಹಿನ್ನೆಲೆಯಲ್ಲಿ ಈಗ ಗೀತೆಯನ್ನು ಶಾಲಾಪಠ್ಯಗಳಲ್ಲಿ ಅಳವಡಿಸುವ ಯೋಜನೆಗೆ ಬಂದರೆ, ಮೊದಲಿಗೆ ನಾವು ಆ ಪಠ್ಯದ ಲಕ್ಷ್ಯವಾದ ವಿದ್ಯಾರ್ಥಿಗಳನ್ನು ಗಮನಿಸಬೇಕು. 6-12 ತರಗತಿಯವರು ಎಂದರೆ 12ರಿಂದ 18 ವರ್ಷಗಳ ಕಿಶೋರ-ಕಿಶೋರಿಯರು. ಈ ಕಿಶೋರಾವಸ್ಥೆಯಲ್ಲಿ ಅವರಲ್ಲಿ ಹೊಸದೇನನ್ನಾದರೂ ಕಲಿಯುವ-ಮಾಡುವ ಅದಮ್ಯ ಉತ್ಸಾಹವಿರುತ್ತದೆ. ಆದರೆ ವಿಮರ್ಶನ ಶಕ್ತಿಯನ್ನು ಇನ್ನೂ ಬೆಳೆಸಿಕೊಳ್ಳದಿರುವುದರಿಂದ, ಅವರು ಭಾವನೆಗಳಿಂದ ಬಹು ಬೇಗ ಪ್ರಭಾವಿತರಾಗುತ್ತಾರೆ ಮತ್ತು ರೋಚಕವಾಗಿ ಹಾಗೂ ಭಾವನಾತ್ಮಕವಾಗಿ ಯಾರು ಏನು ಹೇಳಿದರೂ ಅದನ್ನು ಪ್ರಶ್ನಿಸದೆ ಅಂತರಂಗೀಕರಿಸಿಕೊಳ್ಳುತ್ತಾರೆ. ಆದುದರಿಂದ ಅವರ ಶಾಲಾ ಪಠ್ಯಗಳನ್ನು ಸಿದ್ಧಪಡಿಸುವಾಗ ಇನ್ನಿಲ್ಲದ ಎಚ್ಚರಿಕೆ ಅವಶ್ಯಕವಾಗುತ್ತದೆ: ಅ) ಅವರು ಗ್ರಹಿಸಲಾಗದ ಅಮೂರ್ತ ವಿಚಾರಗಳು (ಎಂದರೆ ಆತ್ಮ-ಪರಮಾತ್ಮ ಕಲ್ಪನೆ, ಕರ್ಮ-ಪುನರ್ಜನ್ಮ, ಇತ್ಯಾದಿ) ಪಠ್ಯಗಳಲ್ಲಿರಬಾರದು; ಆ) ನಮ್ಮ ಸಂವಿಧಾನದ ಮುಖ್ಯ ವಿಚಾರಗಳನ್ನು ಹಾಗೂ ಮಹತ್ವವನ್ನು ಸರಳ ಭಾಷೆಯಲ್ಲಿ ತಿಳಿಸುವ ಪಾಠಗಳಿರಬೇಕು; ಮತ್ತು ಇ) ನಮ್ಮ ರಾಷ್ಟ್ರದ ಪ್ರಮುಖ ಭಾಷೆಗಳು-ಮತಗಳು-ಜನಾಂಗಗಳು ಇವುಗಳ ಅರಿವನ್ನು ವಿದ್ಯಾರ್ಥಿಗಳಿಗೆ ಕೊಡುವಂತಿರಬೇಕು.

ಈ ಹಿನ್ನೆಲೆಯಲ್ಲಿ, ಏಕ ಕಾಲದಲ್ಲಿ ಹಿಂಸೆ ಹಾಗೂ ಅಹಿಂಸೆ, ಕರ್ಮ ಹಾಗೂ ವೈರಾಗ್ಯ, ಸರ್ವ ಸಮಾನತೆ ಹಾಗೂ ಭಿನ್ನತೆ, ಇತ್ಯಾದಿ ಪರಸ್ಪರ ವಿರುದ್ಧ ವೈಚಾರಿಕತೆಯನ್ನು ಸಮರ್ಥಿಸುವ ಗೀತೆಯನ್ನು ಪಠ್ಯವನ್ನಾಗಿ ಅಳವಡಿಸಿಕೊಳ್ಳುವ ಯೋಜನೆಯಲ್ಲಿ ಅನೇಕ ಮಿತಿಗಳು ಹಾಗೂ ಅಪಾಯಕಾರಿ ಸಾಧ್ಯತೆಗಳು ಕಂಡು ಬರುತ್ತವೆ. ಮುಖ್ಯವಾಗಿ:

1 ಗೀತೆಯನ್ನು ಅನ್ಯೋಕ್ತಿಯಂತೆ ಪರಿಗಣಿಸುವ ತಿಲಕರ ವೈಚಾರಿಕತೆ ಸ್ವಾತಂತ್ರ್ಯಹೋರಾಟದ ಕಾಲದಲ್ಲಿ ತುಂಬಾ ಪ್ರಸ್ತುತವಾಗಿತ್ತು. ಆದರೆ, ಅವರ ‘ಅನ್ಯೋಕ್ತಿ’ ಮಾದರಿ ಇಂದು ಅಪಾಯಕಾರಿಯಾಗಬಹುದು. ‘ಸ್ವಧರ್ಮೆ ನಿಧನಂ ಶ್ರೇಯ:, ಪರಧರ್ಮೋ ಭಯಾವಹಃ’ (3:35) ಎಂಬ ಶ್ಲೋಕವನ್ನು ಅನುಸರಿಸಿ, ಹಿಂದು/ಮುಸ್ಲಿಂ/ ಕ್ರಿಶ್ಚಿಯನ್ನರು ‘ಸ್ವಧರ್ಮ’ವೆಂದರೆ ತಮ್ಮ ಧರ್ಮವೆಂದು ಪರಿಗಣಿಸಿ, ‘ಅನ್ಯ ಧರ್ಮ/ ಅನ್ಯ ಭಾಷೆ/ ಅನ್ಯ ಸಂಸ್ಕೃತಿ’ ಇತ್ಯಾದಿಗಳ ವಿರುದ್ಧ ಹೋರಾಡುವುದು ಪ್ರತಿಯೊಬ್ಬನ ಕರ್ತವ್ಯ ಎಂಬ ಸಿದ್ಧಾಂತಕ್ಕೆ ಬಂದರೆ, ನಮ್ಮ ಸಂವಿಧಾನದ ಅಡಿಗಲ್ಲಾದ ‘ಸರ್ವ ಸಮಾನತೆ’ಯ ತತ್ವವು ಸಂಪೂರ್ಣವಾಗಿ ಮೂಲೆಗುಂಪಾಗುವುದಿಲ್ಲವೆ? ಹಾಗೆಯೇ, ಈ ಸೂತ್ರವು ವ್ಯಕ್ತಿಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದಿಲ್ಲವೆ?

2 ‘ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ / ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂಸೃಜಾಮ್ಯಹಂ’ (4:7) - ಈ ಪ್ರಸಿದ್ಧ ಶ್ಲೋಕದಲ್ಲಿ ಬರುವ ‘ಧರ್ಮ’ ಎಂದರೆ ಏನು? ಉತ್ತರ ‘ಮತ,’ ‘ನ್ಯಾಯ,’ ‘ಕರ್ತವ್ಯ,’ ‘ಔದಾರ್ಯ’ ಏನು ಬೇಕಾದರೂ ಆಗಬಹುದು. ಹಾಗೆಯೇ, ‘ಈಗ ಈ ಧರ್ಮಕ್ಕೆ ಗ್ಲಾನಿಯಾಗಿದೆ’ ಎಂದು ಯಾರು ನಿರ್ಧರಿಸುತ್ತಾರೆ?

3 ‘ಚಾತುರ್ವರ್ಣ್ಯಂ ಮಯಾಸೃಷ್ಟಂ ಗುಣಕರ್ಮ ವಿಭಾಗಶ:’ (4:13) – ಈ ಶ್ಲೋಕವಂತೂ ಅತ್ಯಂತ ಚರ್ಚಾಸ್ಪದವಾದುದು. ‘ನಾನೇ ನಾಲ್ಕು ವರ್ಣಗಳನ್ನು ಸೃಷ್ಟಿಸಿದ್ದೇನೆ’ ಎಂದರೆ ಆ ವರ್ಣಗಳ ಸೃಷ್ಟಿಯಾದ ಮೇಲೆ ಅವರವರ ಗುಣ-ಕರ್ಮಗಳಿಗನುಸಾರವಾಗಿ ಅವರ ಶ್ರೇಣೀಕರಣವನ್ನು ಆ ಸೃಷ್ಟಿಕರ್ತನೇ ಮಾಡಿದನೆ? ಯಾವ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಮಾಜ ಸುಧಾರಕರು ಶತಮಾನಗಳ ಕಾಲ ಹೋರಾಡಿದರೋ ಅದೇ ವ್ಯವಸ್ಥೆಯನ್ನು ಈಗ ಮಕ್ಕಳಿಗೆ ನಾವು ಕಲಿಸಬೇಕೆ? ಇದೇ ನೆಲೆಯಲ್ಲಿ, ‘ಸ್ತ್ರೀಯೋ ವೈಶ್ಯಾಸ್ತಥಾ ಶೂದ್ರಾಸ್ತೇಪಿ ಯಾಂತಿ ಪರಾಂಗತಿಂ’ (9:32) ಎಂದು ಕೃಷ್ಣನು ಹೇಳುವಾಗ, ‘ಸ್ತ್ರೀಯರು, ವೈಶ್ಯರು ಮತ್ತು ಶೂದ್ರರು’ ಹುಟ್ಟಿನಿಂದ ಎರಡನೆಯ ದರ್ಜೆಯ ಮಾನವರು; ಭಗವಂತನ ವಿಶೇಷ ಕೃಪೆಯಿಂದ ಮಾತ್ರ ಅವರಿಗೆ ಮುಕ್ತಿ ಸಾಧ್ಯ ಎಂದಾಗುವುದಿಲ್ಲವೆ?

‘ನೀತಿಶಿಕ್ಷಣವನ್ನು ಶಾಲೆಯಲ್ಲಿ ಕಲಿಸಲೇಬೇಕು; ಭಗವದ್ಗೀತೆ ಅದರಲ್ಲಿರಲೇ ಬೇಕು’ ಎಂದಾದರೆ, ಮೊದಲಿಗೆ ಆ ಬಗೆಯ ಶಿಕ್ಷಣವನ್ನು ಕೊಡಬಲ್ಲ ಶಿಕ್ಷಕರು ಶಾಲೆಗಳಲ್ಲಿ ಇರಬೇಕು. ಪಠ್ಯಾವಳಿಯಲ್ಲಿ, ಗಾಂಧೀಜಿಯವರ Discourses on the Gita ಕೃತಿಯಿಂದ ಆಯ್ದ ಭಾಗಗಳು, ವಿವೇಕಾನಂದರಭಾಷಣಗಳು, ಕುವೆಂಪು ಅವರ ‘ನಿರಂಕುಶಮತಿಗಳಾಗಿ,’ ಶಿವರಾಮ ಕಾರಂತರ ‘ಬಾಳ್ವೆಯೇ ಬೆಳಕು,’ ಇತ್ಯಾದಿಗಳಿಂದ (ನಮ್ಮ ಸಂವಿಧಾನದ ಚೌಕಟ್ಟಿನಲ್ಲಿ) ಆಯ್ದ ಭಾಗಗಳು; ಮತ್ತು ಪರಿಸರ ಪ್ರಜ್ಞೆ, ನಿಸರ್ಗ-ಮಾನವ ಸಂಬಂಧ, ಇತ್ಯಾದಿಗಳನ್ನು ಸೇರಿಸಬಹುದು. ಒಟ್ಟಿನಲ್ಲಿ, ನೀತಿಶಿಕ್ಷಣದ ಉದ್ದೇಶ ‘ಬಹುತ್ವ’ದ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವುದಾಗಬೇಕು.

-ಸಿ.ಎನ್.ರಾಮಚಂದ್ರನ್,ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ
-ಸಿ.ಎನ್.ರಾಮಚಂದ್ರನ್,ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT