ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ತಾಂತ್ರಿಕ ನೆಪ ಪೋಣಿಸಿ ಸಮಯ ಕಳೆಯುವುದೇಕೆ?

Last Updated 26 ನವೆಂಬರ್ 2021, 20:26 IST
ಅಕ್ಷರ ಗಾತ್ರ

ದೇಶದಲ್ಲಿ ಈಗ ಹೆಚ್ಚು ಚರ್ಚೆ ಆಗುತ್ತಿರುವ ವಿಷಯ ಎಂದರೆ, ಪ್ರಧಾನಿಯವರು ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದುಕೊಂಡಿರುವುದು. ಪ್ರತಿಪಕ್ಷಗಳು ಹಾಗೂ ಟೀಕಾಕಾರರ ಪಾಲಿಗೆ ಅವು ವಿವಾದಿತ ಅಥವಾ ಕರಾಳ ಕಾಯ್ದೆಗಳಷ್ಟೇ. ಅನ್ನದಾತರೂ ಒಳಗೊಂಡಂತೆ ಭಾರತದ ನೂರು ಕೋಟಿಗೂ ಹೆಚ್ಚು ಜನರು ಹಾಗೂ ಕೇಂದ್ರ ಸರ್ಕಾರದ ದೃಷ್ಟಿಯಲ್ಲಿ ಅವು ದೇಶ ಹಿತಕ್ಕಾಗಿ ರೂಪಿಸಿದ ಹಾಗೂ ರೈತರ ಸಬಲೀಕರಣಕ್ಕಾಗಿ ಜಾರಿಗೆ ತಂದಿದ್ದ ಸುಧಾರಣಾ ಕ್ರಮಗಳು. ಎರಡನೇ ಅಂಶದಲ್ಲಿ ನನಗೆ ನಂಬಿಕೆ ಇದೆ.

ಒಂದು ಸುಳ್ಳನ್ನು ವ್ಯವಸ್ಥಿತವಾಗಿ ಹೇಳುತ್ತಲೇ ಅದನ್ನು ಸತ್ಯಕ್ಕಿಂತ ಹೆಚ್ಚು ಜನಜನಿತ ಮಾಡಬಹುದು ಎನ್ನುವ ಮಾತನ್ನು ಇಲ್ಲಿ ಕೆಲವರಿಗೆ ಅನ್ವಯಿಸಿ ಹೇಳಬಹುದು. ಕೃಷಿ ಕಾಯ್ದೆಗಳ ವಿಚಾರದಲ್ಲಿ ಆಗಿದ್ದೂ ಇದೇ. ನಿಜ ಫಲಾನುಭವಿಗಳನ್ನು, ಅಂದರೆ ರೈತರನ್ನು ಹೊರತುಪಡಿಸಿ, ಅವುಗಳಿಗೆ ಸಂಬಂಧ ಇಲ್ಲದವರೇ ಹೆಚ್ಚು ಮಾತನಾಡಿದರು, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಅಥವಾ ಬಹಿರಂಗವಾಗಿ ಬರೀ ಮಿಥ್ಯೆಗಳನ್ನೇ ಹಬ್ಬಿಸುತ್ತಾ ರಾಷ್ಟ್ರೀಯವಾಗಿ ಅರಾಜಕತೆಯನ್ನು ಸೃಷ್ಟಿ ಮಾಡಲು ವ್ಯವಸ್ಥಿತ ಪ್ರಯತ್ನ ನಡೆಸಿದರು. ಇಂಥ ವಿನಾಶಕಾರಿ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ ಎನ್ನುವುದು ನನ್ನ ನೋವು.

2014ರಲ್ಲಿ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ, ಅವರು ಅನೇಕ ಸುಧಾರಣಾ ಕ್ರಮಗಳನ್ನು ದೇಶದ ಮೇಲಿನ ಅಚಲ ನಿಷ್ಠೆಯೊಂದಿಗೆ ಕೈಗೊಂಡರು. ಹಾಗೆ ಜಾರಿಗೆ ತಂದ ಕ್ರಮಗಳಲ್ಲಿ ನೋಟು ಅಮಾನ್ಯ, ಜಿಎಸ್‌ಟಿ ಹಾಗೂ ಕೃಷಿ ಕಾಯ್ದೆಗಳ ಜಾರಿ ಅತ್ಯಂತ ಮಹತ್ವದವು. ದೇಶವನ್ನು ಹೊಸ ದಿಕ್ಕಿನತ್ತ ಮುನ್ನಡೆಸುವ ಅಥವಾ ಜಡ್ಡುಗಟ್ಟಿದ್ದ ಅಭಿವೃದ್ಧಿ ಯಂತ್ರಕ್ಕೆ ಚಿಕಿತ್ಸೆ ಕೊಡುವ ಉದ್ದೇಶದಿಂದ ಅವರು ಈ ಕ್ರಮಕ್ಕೆ ಮುಂದಾಗಿದ್ದರು. ಹಾಗೆ ನೋಡಿದರೆ, ಬಹಳ ಹಿಂದೆಯೇ ಈ ಸುಧಾರಣಾ ಕ್ರಮಗಳು ಜಾರಿಗೆ ಬರುವ ಅವಶ್ಯಕತೆ ಇತ್ತು. ಬರಲಿಲ್ಲ ಏಕೆ? ರಾಜಕೀಯ ಇಚ್ಛಾಶಕ್ತಿ ಹಾಗೂ ಅಭಿವೃದ್ಧಿಯಡೆಗಿನ ಬದ್ಧತೆ ಇಲ್ಲದಿದ್ದುದೇ ಅದಕ್ಕೆ ಕಾರಣ.

ಮೋದಿ ಅವರು ಅಂಥ ಪ್ರಬಲ ಇಚ್ಛಾಶಕ್ತಿ ಮತ್ತು ಬದ್ಧತೆಯೊಂದಿಗೆ ಹೆಜ್ಜೆ ಇಟ್ಟರು. ಈ ಎರಡೂ ಅಂಶಗಳ ದೃಷ್ಟಿಯ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳಲ್ಲಿ ಭಾರತ ಬದಲಾದ ಬಗೆಯನ್ನು ನಾವು ನಿಷ್ಕಲ್ಮಶ ಭಾವದೊಂದಿಗೆ ಗುರುತಿಸಬೇಕು. ಹೀಗೆ ಗುರುತಿಸುವಿಕೆಯಲ್ಲಿ ಪ್ರಾಮಾಣಿಕತೆ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಕೃಷಿ ಕಾಯ್ದೆಗಳೇ ಸಾಕ್ಷಿ.

ಒಂದು ಅಂಶವನ್ನು ಕಾಯ್ದೆಗಳ ವಿರೋಧಿಗಳು ನೆನಪಿನಲ್ಲಿಟ್ಟುಕೊಂಡು ಹೆಜ್ಜೆ ಇಡಬೇಕಿತ್ತು. ಯಾವುದೇ ಸುಧಾರಣಾ ಕ್ರಮವನ್ನು ಏಕಾಏಕಿ ಜಾರಿ ಮಾಡಲು ಸಾಧ್ಯವಿಲ್ಲ. ಕೃಷಿ ಕಾಯ್ದೆಗಳನ್ನು ಕೂಡ ಸಾಕಷ್ಟು ಪೂರ್ವಸಿದ್ಧತೆಯೊಂದಿಗೇ ಜಾರಿ ಮಾಡಲಾಗಿದೆ ಎನ್ನುವುದು ವ್ಯವಸ್ಥಿತ ವಿರೋಧವನ್ನೇ ಮುಂದು ಮಾಡಿಕೊಂಡು ಅಬ್ಬರಿಸಿದವರಿಗೆ ಅರ್ಥವಾಗಲಿಲ್ಲ. ನೂರಾಮೂವತ್ತು ಕೋಟಿ ಜನಸಂಖ್ಯೆ ಮೀರುತ್ತಿರುವ ಭಾರತ ಒಂದೆಡೆಯಾದರೆ, ಜಾಗತಿಕವಾಗಿ ಬದಲಾಗುತ್ತಿರುವ ಸಮೀಕರಣಗಳು, ಎದುರಾಗುತ್ತಿರುವ ಹೊಸ ಸವಾಲುಗಳ ಬಗ್ಗೆ ಅವರೆಲ್ಲರೂ ಪ್ರಾಂಜಲ ಮನಸ್ಸಿನಿಂದ ಚರ್ಚೆ ಮಾಡಬೇಕಿತ್ತು.

ನೋವಿನ ಸಂಗತಿ ಎಂದರೆ, ತನ್ನ ಸದುದ್ದೇಶವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಒಂದು ವರ್ಷ ಚಾತಕ ಪಕ್ಷಿಯಂತೆ ಕಾದ ಕೇಂದ್ರ ಸರ್ಕಾರವನ್ನು ‘ಕೆಲವರು’ ಶತ್ರುವಿನಂತೆ ನೋಡಿದರೆ ವಿನಾ, ನೆರೆಯ ಚೀನಾಕ್ಕಿಂತ ಮುಂದೆ ಹೆಜ್ಜೆ ಇಡುವುದು ಹೇಗೆ ಎಂಬುದನ್ನು ಯೋಚಿಸಲಿಲ್ಲ. 2025ರ ಹೊತ್ತಿಗೆ ಭಾರತ ಆಹಾರ ಸ್ವಾವಲಂಬನೆ ಸಾಧಿಸದಿದ್ದರೆ ಏನಾಗುತ್ತದೆ ಎಂದು ಕ್ಷಣ ಮಾತ್ರವೂ ಚಿಂತಿಸಲಿಲ್ಲ. ಬದಲಿಗೆ ಪ್ರತಿಷ್ಠೆಗೆ ಜೋತುಬಿದ್ದು ಸರ್ಕಾರವನ್ನೇ ಶತ್ರುವಾಗಿ ಕಂಡ ಕೆಟ್ಟ ಮನಃಸ್ಥಿತಿಯ ಬಗ್ಗೆ ಏನು ಹೇಳಬೇಕೋ ನನಗೆ ಅರ್ಥವಾಗಲಿಲ್ಲ.

19ರಂದು ಪ್ರಧಾನಿ ಯವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದಾಗ ಅವರ ಮಾತುಗಳಲ್ಲಿ ಆರ್ದ್ರತೆ ಇತ್ತು. ಒಂದು ಯಶಸ್ಸಿನ ಹೆಜ್ಜೆ ಇದಕ್ಕಿದ್ದ ಹಾಗೆ ಹಿಂದಕ್ಕೆ ಬಿದ್ದೆಡೆಗಿನ ಬೇಸರ ಅವರಲ್ಲಿತ್ತು.‘ನಿಜವಾದ ಮತ್ತು ಶುದ್ಧ ಹೃದಯದಿಂದ ನಾನು ಭಾರತದ ಕ್ಷಮೆ ಯಾಚಿಸುತ್ತೇನೆ. ರೈತರಿಗೆ ಕೃಷಿ ಕಾನೂನುಗಳ ಬಗ್ಗೆ ಮನವರಿಕೆ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದೇವೆ’ ಎಂದು ಮೋದಿ ಹೇಳಿದ್ದರು.

ಆದರೆ, ತಿನ್ನುವ ಅನ್ನದಲ್ಲಿ ಕಲ್ಲು ಹುಡುಕುವ ಚಾಳಿಯ ಕೆಲವರಿಗೆ ಇವತ್ತಿನ ಅಗತ್ಯಗಳು ಅರ್ಥವಾಗುತ್ತಿಲ್ಲ. ಕೃಷಿ ಕಾಯ್ದೆಗಳನ್ನು ಜಾರಿಗೆ ತರುವಾಗ ಯಾರನ್ನೂ ಕೇಳಿ ಅನುಷ್ಠಾನಕ್ಕೆ ತರಲಿಲ್ಲ, ಅದೇ ರೀತಿ ವಾಪಸ್‌ ಪಡೆಯುವಾಗ ಯಾರನ್ನೂ ಕೇಳಿ ರದ್ದು ಮಾಡಲಿಲ್ಲ ಎನ್ನುವ ಹೊಸ ವರಸೆಯನ್ನು ವಿರೋಧಿಗಳು ಶುರುವಿಟ್ಟುಕೊಂಡಿದ್ದಾರೆ. ಅಲ್ಲದೆ, ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಕಾರಣಕ್ಕೆ ಮೋದಿ ಅವರು ಕಾಯ್ದೆಗಳನ್ನು ರದ್ದು ಮಾಡಿದ್ದಾರೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ನಮ್ಮಲ್ಲಿ ಟೀಕೆಗಳ ಸ್ಥಿತಿ ಇದು. ಟೀಕೆಗಷ್ಟೇ ಸೀಮಿತವಾಗಿ ಟೀಕೆ ಮಾಡಲಾಗುತ್ತಿದೆ. ವಿಶಾಲ ದೃಷ್ಟಿಕೋನದಲ್ಲಿ ನಡೆಯಬೇಕಾದ ಚರ್ಚೆಯಲ್ಲಿ ಹಿತಾಸಕ್ತಿ ರಾಜಕೀಯದ ವಿಜೃಂಭಣೆ ನಡೆಯುತ್ತಿದೆ. ಇದು ಒಪ್ಪಲಾಗದ ಸಂಗತಿ.

ಇದರ ಜತೆಗೆ ಇನ್ನೊಂದು ತರ್ಕಹೀನ ಅಂಶವನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆದಿದೆ. ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಘೋಷಣೆಗೂ ಮುನ್ನ, ಈ ವಿಚಾರದ ಬಗ್ಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿಲ್ಲ. ಸಂಸತ್ತಿನಲ್ಲಿ ಅಂಗೀಕಾರವಾದ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಏಕಪಕ್ಷೀಯವಾಗಿ ಘೋಷಿಸುವುದು ಎಷ್ಟು ಸರಿ? ಇದು ಸರ್ವಾಧಿಕಾರ ಅನಿಸುವುದಿಲ್ಲವೇ? ಸಚಿವ ಸಂಪುಟವನ್ನು ನಿರ್ಲಕ್ಷಿಸಿ ಪ್ರಧಾನಿ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಭಾವನೆ ಬರುವುದಿಲ್ಲವೇ? ಸಚಿವ ಸಂಪುಟ ಸಭೆಯು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಚರ್ಚಿಸುವಾಗ ಸಂಪುಟದ ಸದಸ್ಯರ ಮೇಲೆ ಪ್ರಧಾನಿಯ ನಿರ್ಧಾರವು ಪ್ರಭಾವ ಬೀರುವುದಿಲ್ಲವೇ? ಈ ಚರ್ಚೆಯನ್ನುವೃಥಾ ಮುನ್ನೆಲೆಗೆ ತರಲಾಗಿದೆ.

ಪ್ರಧಾನಿ ಪದವಿಯಲ್ಲಿದ್ದವರು ಇಂಥ ನಿರ್ಧಾರಗಳನ್ನುಅನೇಕ ಸಂದರ್ಭಗಳಲ್ಲಿ ಕೈಗೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ನೆಹರೂ, ನರಸಿಂಹ ರಾವ್‌, ಅಟಲ್‌ ಬಿಹಾರಿ ವಾಜಪೇಯಿ ಮೊದಲಾದವರು ಪ್ರಧಾನಿ ಸ್ಥಾನದಲ್ಲಿ ಇದ್ದಾಗ ದೇಶದ ಹಿತದ ದೃಷ್ಟಿಯಿಂದ ಅನೇಕ ನಿರ್ಧಾರಗಳನ್ನು ಸ್ವತಃ ಪ್ರಕಟಿಸಿರುವುದನ್ನು ನಾವು ಮರೆಯುವಂತಿಲ್ಲ. ಆದರೆ, ರಾಷ್ಟ್ರದ ಹಿತಕ್ಕೆ ತಾಂತ್ರಿಕ ನೆಪಗಳನ್ನು ಪೋಣಿಸಿಕೊಂಡು ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವೇನಿದೆ?

ರಕ್ಷಣೆ, ಕೃಷಿ, ಉದ್ಯೋಗ, ವಿಜ್ಞಾನ, ಸಂಶೋಧನೆ, ಅಭಿವೃದ್ಧಿ, ಶಿಕ್ಷಣ ಇತ್ಯಾದಿಗಳಲ್ಲಿ ರಾಜಕೀಯಕ್ಕೆ ಅವಕಾಶ ಇರಬಾರದು. ದೇಶಕ್ಕೆ ಸಂವಿಧಾನ ಸಮರ್ಪಣೆಯಾದ 72 ವರ್ಷಗಳ ಘಟ್ಟದಲ್ಲಿ ನಾವು ಮುಂದೆ ಹೆಜ್ಜೆ ಇಡಬೇಕೇ ಹೊರತು ರಾಜಿ ರಾಜಕೀಯಕ್ಕೆ ಜೋತುಬಿದ್ದು ರಾಷ್ಟ್ರದ ಹಿತಾಸಕ್ತಿಯನ್ನು ಬಲಿಗೊಡಬಾರದು. ಈ ಬಗ್ಗೆ ನಾವೆಲ್ಲರೂ ತೆರೆದ ಮನಸ್ಸಿನಿಂದ ಚಿಂತಿಸಬೇಕಾದ ತುರ್ತು ಸಂದರ್ಭ ಇದಾಗಿದೆ. ಸುಳ್ಳುಗಳನ್ನೇ ಪೋಣಿಸಿ ಜನರ ದಿಕ್ಕು ತಪ್ಪಿಸಿ ರಾಜಕೀಯ ಮಾಡಲೆತ್ನಿಸುವ ಹಿತಾಸಕ್ತಿ ಗುಂಪಿನ ಕೆಲವೇ ನೇತಾರರು ಈಗಲಾದರೂ ಸತ್ಯವನ್ನು ಅರ್ಥ ಮಾಡಿಕೊಳ್ಳಲಿ.

ಲೇಖಕ: ಕರ್ನಾಟ‌ಕದ ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT