ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಪ್ರಜಾವಾಣಿ ಚರ್ಚೆ: ಸನಾತನ ಧರ್ಮವೇ ಭಾರತೀಯ ಅಸ್ಮಿತೆ
ಪ್ರಜಾವಾಣಿ ಚರ್ಚೆ: ಸನಾತನ ಧರ್ಮವೇ ಭಾರತೀಯ ಅಸ್ಮಿತೆ
Published 15 ಸೆಪ್ಟೆಂಬರ್ 2023, 15:04 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ವೋಟ್‌ಬ್ಯಾಂಕ್‌ ಆಧಾರಿತ ಹಾಗೂ ಅದರಿಂದಲೇ ನಿರ್ದೇಶಿಸಲ್ಪಟ್ಟ ರಾಜಕೀಯ ವ್ಯವಸ್ಥೆಯು ಸನಾತನ ಧರ್ಮಕ್ಕೆ ಸಂಬಂಧಿಸಿದ ಎಲ್ಲವನ್ನೂ ವಿವಾದಾಸ್ಪದ ಆಗಿಸುವಲ್ಲಿ ವ್ಯವಸ್ಥಿತವಾಗಿ ನಿರತವಾದವು. ಸನಾತನ ಭಾರತ ಹಿಂದಕ್ಕೆ ಸರಿದು ‘ಸೆಕ್ಯುಲರ್‌ ಇಂಡಿಯಾ’ ಮುನ್ನೆಲೆಗೆ ಬಂದಿತು. ಇದರಿಂದಾಗಿ ಹಿಂದೂಗಳು ತಮ್ಮ ಬದುಕನ್ನು ಒಂದು ಬಗೆಯಲ್ಲಿ ಕದ್ದು–ಮುಚ್ಚಿ ಮುನ್ನಡೆಸುವಂಥ ಪರಿಸ್ಥಿತಿ ನಿರ್ಮಾಣವಾಯಿತು. ಇವರೆಲ್ಲರೂ ಮುಕ್ತವಾಗಿ ಬದುಕುವ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುವಂತಾಯಿತು. ಸನಾತನದ ಕುರಿತಾಗಿ ಅಸಹಿಷ್ಣುತೆಯ ವಾತಾವರಣ ನಿರ್ಮಾಣವಾಯಿತು.

***

‘ಸರ್ವೇ ಜನಾಃ ಸುಖಿನೋ ಭವಂತು’ ಇದು ಸನಾತನ (ಹಿಂದೂ) ಧರ್ಮದ ಕರೆ. ಇದನ್ನು ಕಿತ್ತೆಸೆಯಬೇಕು ಎಂದು ಹೇಳುವ ಮನಃಸ್ಥಿತಿ ಎಂಥದು? ಮನುಕುಲವೆಲ್ಲ ಸಂಘರ್ಷದ ಸುಳಿಗೆ ಸಿಕ್ಕು ನರಳಾಡಬೇಕು, ಸುಖ, ಶಾಂತಿ, ನೆಮ್ಮದಿಗಳಿಗೆ ಅನುವು ಇರಬಾರದು. ಹೀಗಾದಾಗಲೇ ವೋಟು ಒಟ್ಟುಗೂಡಿಸುವ ತಂತ್ರ ಸಾಧನೆಯಾಗುವುದು. ಇದು ಸನಾತನದ ಕುರಿತು ಜರಿಯುವವರ ಗುರಿ. ಇದನ್ನು ಮೊದಲೇ ಸ್ಪಷ್ಟಪಡಿಸುತ್ತೇನೆ.

‘ಸತ್ಯಂ ವದ ಧರ್ಮಂ ಚರ’ (ತೈತ್ತಿರೀಯ ಉಪನಿಷತ್ತು)- ಇದು ಸನಾತನ ಧರ್ಮದ ಮುಖ್ಯ ಆಶಯ. ಈ ಜೀವನ ಪರಿಯನ್ನು ತಿರಸ್ಕರಿಸಬೇಕು ಎಂದರೆ ಏನರ್ಥ? ‘ಆ ನೋ ಭದ್ರಾಃ ಕೃತವೋ ವಿಶ್ವತಃ’ (ಸಕಲೆಡೆಗಳಿಂದ ಆಗಮಿಸಲಿ ಸುವಿಚಾರಗಳು) ಇದು ವೇದಗಳ ಸಂದೇಶ. ಈ ಸಂದೇಶವನ್ನು ಅಮಾನ್ಯ ಮಾಡುವುದು ಎಂದರೆ ಅದು ಸಂಕುಚಿತ ಮನೋಭಾವದ ಪರಮಾವಧಿ ಅನಿಸುವುದಿಲ್ಲವೇ?

ಸನಾತನ (ಹಿಂದೂ) ಧರ್ಮವು ಭಾರತೀಯರಲ್ಲಿ ಅಂತರ್ಗತವಾದ ಸುಪ್ತ ಶಕ್ತಿಯನ್ನು ಪ್ರತಿನಿಧಿಸುತ್ತದೆ. ‘ಹಿಂದೂ ಧರ್ಮ’ವನ್ನು ವ್ಯಾಖ್ಯಾನಿಸುವುದು ಕಷ್ಟ. ನಮ್ಮ ದೇಶದ ಜನರ ನಿತ್ಯಜೀವನದ ಭಾಗವಾಗಿದೆ ಅದು. ಧರ್ಮವು ಅನುಭವದ ಆಧಾರ ಹೊಂದಿದೆಯೇ ಹೊರತು ಪಾಂಡಿತ್ಯದ ಆಧಾರ ಹೊಂದಿಲ್ಲ. ಬುದ್ಧಿಜೀವಿಗಳಿಗೆ ಪಾಂಡಿತ್ಯ ಮುಖ್ಯವೇ ಹೊರತು, ಅನುಭವವಲ್ಲ. ಆದರೆ, ಸಾಮಾನ್ಯರಿಗೆ ಅನುಭವವೇ ಪ್ರಧಾನ, ಪಾಂಡಿತ್ಯವಲ್ಲ. ‘ಹಿಂದೂ ಧರ್ಮ’ ಎಂಬುದು ಸನಾತನ ಧರ್ಮ ಎಂದು ಬಹುಕಾಲದಿಂದ ಚಾಲ್ತಿಯಲ್ಲಿರುವ ಧರ್ಮದ ಹೊಸ ಹೆಸರು ಎಂದು ಹೇಳಬಹುದು. ಇದರ ಪ್ರಧಾನ ಗುಣ ನಿರಂತರತೆ. ಅದಕ್ಕೆಂದೇ ಸನಾತನ ಧರ್ಮವು ಚಿರ ಪುರಾತನ ಅತಿ ವಿನೂತನ. ‘ಆ ನೋ ಭದ್ರಾಃ...’ ಕರೆಯ ಅನುಸಾರ ಯಾವುದನ್ನೂ ತಿರಸ್ಕರಿಸದೇ ಇರುವುದರಿಂದ ಅದಕ್ಕೆ ಸಾರ್ವತ್ರಿಕ ಸಿಂಧುತ್ವ ಇದೆ. ಈ ಸರ್ವಗ್ರಾಹಿ ಜೀವನಪದ್ಧತಿ ಒಂದು ಹೆಸರಿಲ್ಲದ ತತ್ವಪ್ರಣಾಳಿಕೆಯಾಗಿತ್ತು. ಅದಕ್ಕೆ ತನ್ನನ್ನು ಪ್ರತ್ಯೇಕವಾಗಿ ಘೋಷಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಯಾಕೆಂದರೆ ಅದನ್ನು ಹೊಂದುವ ವಿಚಾರಪ್ರಣಾಳಿಕೆ ಇನ್ನೊಂದು ಇರಲಿಲ್ಲ. ಆನಂತರ ಹುಟ್ಟಿದ ಸೆಮೆಟಿಕ್‌ ಮತಗಳು ಸನಾತನ ಧರ್ಮವನ್ನು ತಿರಸ್ಕರಿಸಲು, ತುಳಿಯಲು ಆರಂಭಿಸಿದ್ದರಿಂದ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಅವಶ್ಯಕತೆ ಸನಾತನ ಧರ್ಮಕ್ಕೆ ಬಂದಿತು.

ಪ್ರಾಚೀನ ಭಾರತಕ್ಕೆ ಸಂಬಂಧಿಸಿದ್ದು ಏನೇ ಇರಲಿ, ಸ್ವಾತಂತ್ರ್ಯಾನಂತರದಲ್ಲಿ ಅದೆಲ್ಲವನ್ನೂ ಕೋಮುವಾದಿ ಎಂದೂ ಸೆಕ್ಯುಲರ್‌ ವಿಚಾರಧಾರೆಗೆ ವಿರುದ್ಧ ಇರುವಂಥವು ಎಂದೂ ಪ್ರಚಾರದ ಭರಾಟೆ ಆರಂಭವಾಯಿತು. ವೋಟ್‌ಬ್ಯಾಂಕ್‌ ಆಧಾರಿತ ಹಾಗೂ ಅದರಿಂದಲೇ ನಿರ್ದೇಶಿಸಲ್ಪಟ್ಟ ರಾಜಕೀಯ ವ್ಯವಸ್ಥೆಯು ಸನಾತನ ಧರ್ಮಕ್ಕೆ ಸಂಬಂಧಿಸಿದ ಎಲ್ಲವನ್ನೂ ವಿವಾದಾಸ್ಪದ ಆಗಿಸುವಲ್ಲಿ ವ್ಯವಸ್ಥಿತವಾಗಿ ನಿರತವಾದವು. ಸನಾತನ ಭಾರತ ಹಿಂದಕ್ಕೆ ಸರಿದು ‘ಸೆಕ್ಯುಲರ್‌ ಇಂಡಿಯಾ’ ಮುನ್ನೆಲೆಗೆ ಬಂದಿತು. ಇದರಿಂದಾಗಿ ಹಿಂದೂಗಳು ತಮ್ಮ ಬದುಕನ್ನು ಒಂದು ಬಗೆಯಲ್ಲಿ ಕದ್ದು–ಮುಚ್ಚಿ ಮುನ್ನಡೆಸುವಂಥ ಪರಿಸ್ಥಿತಿ ನಿರ್ಮಾಣವಾಯಿತು. ಇವರೆಲ್ಲರೂ ಮುಕ್ತವಾಗಿ ಬದುಕುವ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುವಂತಾಯಿತು. ಸನಾತನದ ಕುರಿತಾಗಿ ಅಸಹಿಷ್ಣುತೆಯ ವಾತಾವರಣ ನಿರ್ಮಾಣವಾಯಿತು.

ಧರ್ಮದ ಶ್ರೇಷ್ಠ ಕಲ್ಪನೆಯಲ್ಲಿ ಸಾಗಿಬಂದ ಸನಾತನ ಭಾರತೀಯ ಪರಂಪರೆ, ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಪ್ರಾಚೀನ ಭಾರತದ ಸಾಮಾಜಿಕ–ಸಾಂಸ್ಕೃತಿಕ ಜೀವನದ ಕುರಿತು ನಿರ್ವಿಕಾರವಾದ ಹಾಗೂ ರಾಜಕೀಯ ದುರುದ್ದೇಶ ಹೊರತುಪಡಿಸಿ ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದೆ. ಆಗ ನಮಗೆ ಅರಿವಾಗುವುದು ಸನಾತನ ಸಂಸ್ಕೃತಿಯ ಅಡಿಪಾಯ ಎಂದೆನಿಸಿದ ವೇದಗಳು ಮನುಕುಲಕ್ಕೆ ಒಳಿತು ಮಾಡಲು ಇರುವಂಥವು. ಸಾಮರಸ್ಯವೇ ವೇದಗಳ ಜೀವಾಳ. ಸ್ವಾರ್ಥ, ಒಡಕು, ಭೇದ ಇವುಗಳನ್ನು ವೇದಗಳಲ್ಲಿ ದುರ್ಬೀನು ಹಿಡಿದು ಹುಡುಕಿದರೂ ದೊರಕುವುದಿಲ್ಲ.

ತೈತ್ತಿರೀಯ ಸಂಹಿತೆ (5.7.6.6) ಬ್ರಾಹ್ಮಣರಿಗೆ, ರಾಜಕುಮಾರರಿಗೆ, ವೈಶ್ಯರಿಗೆ ಹಾಗೂ ಶೂದ್ರರಿಗೆ ಚುರುಕು ಬುದ್ಧಿಯನ್ನು (ಋಚಮ್‌) ನೀಡು ಎಂದು ತಿಳಿಸುತ್ತದೆ. ವಾಜಸನೇಯಿ ಸಂಹಿತೆ ಅಥವಾ ಶುಕ್ಲ ಯಜುರ್‌ ವೇದ (26.2) ಹೇಳುವುದೇನೆಂದರೆ: ‘ನಾನು ಎಲ್ಲ ಜನರಿಗೂ ಸಂತಸದ ಮಾತನ್ನಾಡುವೆನು; ಬ್ರಾಹ್ಮಣರಿಗೂ, ಕ್ಷತ್ರಿಯರಿಗೂ, ಶೂದ್ರರಿಗೂ ಹಾಗೂ ವೈಶ್ಯರಿಗೂ; ನಮ್ಮವರಿಗೂ ಹಾಗೂ ಅಪರಿಚಿತರಿಗೂ, ನಾನು ದೇವರಲ್ಲಿ ಹಾಗೂ ಎಲ್ಲ ಜನರಲ್ಲಿ ಬೇಧ ಎಣಿಸದಂತೆ ಆಗಲಿ’. ಇದಕ್ಕಿಂತ ಉದಾತ್ತ ಪ್ರಾರ್ಥನೆ ಯಾವುದು ಇರಬಲ್ಲದು? ವೇದಗಳಲ್ಲಿ ಅಸ್ಪೃಶ್ಯತೆ ಇದೆ ಎಂದು ಹೇಳುವವರು ಇದನ್ನು ಗಮನಿಸಬಾರದೇಕೆ?

ಸೃಷ್ಟಿಯ ಶಾಶ್ವತ ತತ್ವಗಳು ಮನುಕುಲದ ಪ್ರಗತಿಯನ್ನು ನಿರಂತರವಾಗಿ ನಿರ್ದೇಶಿಸುತ್ತವೆ ಎಂಬುದನ್ನು ದೃಢವಾಗಿ ನಂಬಿ, ಮಾನವರ ಅನುಭವ ಆಧರಿಸಿ ಜೀವನಪದ್ಧತಿ ರೂಢಿಸುವುದರಕಡೆಗೂ ಗಮನ ಹರಿಸುವುದು ಸನಾತನ ಧರ್ಮದ ವಿಶೇಷತೆಯಾಗಿದೆ. ಪ್ರಕೃತಿಯ ಅನುಲ್ಲಂಘನೀಯ ನಿಯಮಗಳನ್ನು ಅನುಷ್ಠಾನ–ಸಾಧ್ಯವಾಗುವ ರೀತಿಯಲ್ಲಿ, ನಿರಂತರ ವಿಕಾಸಶೀಲ ನಿಯಮಗಳಾಗಿ ಅಳವಡಿಸಿದಾಗ, ಅವೇ ‘ಧರ್ಮ’ ಎನಿಸಿದವು. ಈ ದೃಷ್ಟಿಕೋನದಿಂದ ಪರಿಕಲ್ಪಿತ ಧರ್ಮವೇ ಮಾನವರ ವೈಶಿಷ್ಟ್ಯವಾಗಿದೆ ಹಾಗೂ ಅವರು ವಾಸಿಸುವ ಸಮಾಜದ ಸೃಜನಶೀಲತೆ ಹಾಗೂ ಕ್ರಿಯಾಶಕ್ತಿಯನ್ನು ನಿರ್ಧರಿಸುತ್ತದೆ. ಇದನ್ನು ಸಹಿಸದ, ಒಪ್ಪಿಕೊಳ್ಳದ ವಾಮಪಂಥೀಯರು, ವ್ಯಕ್ತಿಯನ್ನು ತೃಣಸಮಾನಗೊಳಿಸಿ, ರಾಜ್ಯಾಡಳಿತವೇ ಸರ್ವಸ್ವ ಎಂದು ಬಗೆದುದರ ಪರಿಣಾಮವಾಗಿ ಭಾರತವು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿನ್ನಡೆಗೆ ಒಳಗಾಯಿತು. 

ವಿಸ್ತರಣಾವಾದಿ ಸೆಮೆಟಿಕ್‌ ಮತಗಳ ಸೀಮಿತ ಜೀವನ ದೃಷ್ಟಿಯಿಂದ, ಕಮ್ಯುನಿಸಂ, ಸೋಷಿಯಲಿಸಂ, ಕ್ಯಾಪಿಟಲಿಸಂನಂಥ ಬೇಧ–ನಿರ್ಮಾಣ ಸಿದ್ಧಾಂತಗಳಿಂದ ಹೊರತಾಗಿ ಮನುಕುಲದ ಏಳಿಗೆ ಬಯಸುವ ಪ್ರತಿಯೊಬ್ಬರೂ ಇಂದು ಸನಾತನ ಧರ್ಮದ ಆಚರಣೆ ಹಾಗೂ ಪ್ರಸಾರದಲ್ಲಿ ನಿರತರಾಗಬೇಕಾಗಿದೆ. ‘ಸನಾತನ ಧರ್ಮವು ಭಾರತವರ್ಷದ ಜನಾಂಗದ ಗುರುತು; ಈ ಶಬ್ದವು ಯಾವುದೇ ವಿಶಿಷ್ಟ ಮತಧರ್ಮ ಅಥವಾ ಆರಾಧನಾ ವಿಧಾನದ ಅರ್ಥ ಹೊಂದಿರಲಿಲ್ಲ... ಒಂದು ಧರ್ಮ ಎಂದು ಗುರುತಿಸಿದರೂ ‘ಹಿಂದೂಯಿಸಂ’ ಎಂಬುದು ಸೆಮೆಟಿಕ್‌ ಧರ್ಮಗಳೊಂದಿಗೆ ಹೋಲಿಕೆಯಾಗದು. ಅದರಲ್ಲೂ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಹೋಲಿಸಲಾಗದು... ಈ ಸೆಮೆಟಿಕ್‌ ಮತಪ್ರಚಾರದ ಕಾರ್ಯೋದ್ದೇಶಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ಹಿಂದೂ ದೃಷ್ಟಿ ಇರುವುದು’ ಎಂಬುದಾಗಿ ಸರ್ವೇಪಲ್ಲಿ ರಾಧಾಕೃಷ್ಣನ್‌ ಅವರು ಆಕ್ಸಫರ್ಡ್‌ ವಿಶ್ವವಿದ್ಯಾಲಯದ ಉಪನ್ಯಾಸದಲ್ಲಿ ತಿಳಿಸಿರುವರು.

ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ: ‘ಹಿಂದೂ ಧರ್ಮವು ತತ್ವಶಃ ಎಲ್ಲ ವಿಧದ ಶ್ರದ್ಧೆ ಮತ್ತು ಆರಾಧನೆಗಳ ರೂಪಗಳನ್ನು, ಯಾವುದೊಂದನ್ನೂ ಅನಿವಾರ್ಯವಾಗಿ ಸ್ವೀಕಾರಾರ್ಹ ಅಥವಾ ತ್ಯಾಜ್ಯವೆಂದೆಣಿಸದೆ ಒಳಗೊಳ್ಳುತ್ತದೆ. ದೈವತ್ವದ ಪ್ರಕಟೀಕರಣ, ಅದಾವುದೇ ಇರಲಿ, ಅದನ್ನು ಹಿಂದೂವು ಗೌರವಿಸುವ ಒಲವುಳ್ಳವನು, ಸೈದ್ಧಾಂತಿಕ ಸಹಿಷ್ಣುತೆ ಉಳ್ಳವನು, ಸಮನ್ವಯ ದೃಷ್ಟಿಕೋನ ಅವನ ಸ್ವಭಾವವಾಗಿದೆ. ಅತ್ಯುನ್ನತ ದೈವೀ ಶಕ್ತಿಗಳು ಜಗತ್ತಿನ ಮತ್ತು ಮಾನವಕುಲದ ಕಲ್ಯಾಣಕ್ಕಾಗಿ ಪರಸ್ಪರ ಪೂರಕವಾಗಿವೆ ಎಂಬುದನ್ನು ನಂಬುವುದು ಅವನ ಒಲವು.... ಹಿಂದೂ ಧರ್ಮ ಒಂದು ಸಂಸ್ಕೃತಿಯೂ ಹೌದು, ಅನಾದಿಯಾದ, ಸ್ಥಾಪಕನೋರ್ವನಿರದ, ಒಂದು ಕೇಂದ್ರೀಯ ಅಧಿಕಾರಪೀಠವಿರದ, ವಂಶಪಾರಂಪರ್ಯ ಅಥವಾ ಸಂಘಟಿತ ಸಂಸ್ಥಾರೂಪವಿಲ್ಲದ ಧರ್ಮಗಳ–ಸಮ್ಮಿಶ್ರಣವೂ ಹೌದು.’

ಈಗ ಹೇಳಿ, ಸನಾತನ ಧರ್ಮ ಸ್ವೀಕಾರಾರ್ಹವೋ? ತಿರಸ್ಕಾರಾರ್ಹವೋ?

ಲೇಖಕ: ವ್ಯವಸ್ಥಾಪಕ ಟ್ರಸ್ಟಿ, ಶ್ರೀ ಅರಬಿಂದೊ ಕಪಾಲಿ ಶಾಸ್ತ್ರಿ ವೇದ ಸಂಸ್ಕೃತಿ ಸಂಸ್ಥೆ (ಸಾಕ್ಷಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT