ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚರ್ಚೆ: ಸಿಲಿಕಾನ್‌ ಸಿಟಿಯ ಸಮಗ್ರ ಅಭಿವೃದ್ಧಿ, ಸಮನ್ವಯದತ್ತ ಚಿತ್ತ

'ಗ್ರೇಟರ್‌ ಬೆಂಗಳೂರು ಆಡಳಿತ’ ಮಸೂದೆಯಿಂದ ರಾಜಧಾನಿಗೆ ಅನುಕೂಲವೇ?
Published : 13 ಸೆಪ್ಟೆಂಬರ್ 2024, 19:30 IST
Last Updated : 13 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments
ನಮ್ಮ ಬೆಂಗಳೂರು ನಗರವನ್ನು ಉತ್ತಮ ವಾಸಯೋಗ್ಯ, ಪರಿಸರಸ್ನೇಹಿ ನಗರವನ್ನಾಗ ಮಾಡಬೇಕಾಗಿದೆ. ಅಭಿವೃದ್ಧಿಯ ತುತ್ತತುದಿಯಲ್ಲಿರುವ ನಗರದಲ್ಲಿ ನೈಸರ್ಗಿಕ ಸಂಪನ್ಮೂಲವನ್ನೂ ಉಳಿಸಿಕೊಳ್ಳಬೇಕಾಗಿದೆ. ಇವೆಲ್ಲವೂ ಕಾರ್ಯಸಾಧುವಾಗಬೇಕಾದರೆ ನಗರಕ್ಕಾಗಿಯೇ ಒಂದು ಸಮನ್ವಯ ಮತ್ತು ಸಮಗ್ರ ಕಾಯ್ದೆಯ ಅಗತ್ಯವಿದೆ.

ಪಾರಂಪರಿಕ ಅಸ್ತಿತ್ವ ಉಳಿಸಿಕೊಂಡಿರುವ ಕೆರೆ– ಉದ್ಯಾನಗಳ ನಗರ, ಹವಾನಿಯಂತ್ರಿತ ನಗರ, ಹೈಟೆಕ್‌ ಸಿಟಿ, ಕಾಸ್ಮೊಪಾಲಿಟನ್‌ ಸಿಟಿ, ಸಿಲಿಕಾನ್‌ ಸಿಟಿ ಎಂಬೆಲ್ಲ ಹೆಸರು ಹೊತ್ತಿರುವ ಬೆಂಗಳೂರು 360 ಡಿಗ್ರಿಯಲ್ಲೂ ಬೆಳೆಯುತ್ತಿದ್ದು ಇದೀಗ, ಟೆಕ್ನೋಪೊಲಿಸ್‌ ಸಿಟಿಯಾಗಿದೆ. ಯೋಜನಾರಹಿತವಾಗಿ ಬೆಳೆದಿರುವ ಈ ನಗರದಲ್ಲಿ ಜೀವನಮಟ್ಟ ಸುಧಾರಿಸಲು, ಸ್ವಚ್ಛ–ಅಭಿವೃದ್ಧಿಯುತ ನಗರವನ್ನಾಗಿಸಲು ಒಂದು ಸ್ಪಷ್ಟ, ಪ್ರತ್ಯೇಕ ಕಾಯ್ದೆಯ ಅಗತ್ಯವಿದೆ. ಈ ಪ್ರಯತ್ನವೇ ‘ಗ್ರೇಟರ್‌ ಬೆಂಗಳೂರು ಆಡಳಿತ’ ಮಸೂದೆ.

ಬೆಂಗಳೂರು ನಿರ್ಮಾಣವಾದ ಕಾಲದಿಂದಲೂ ಬೆಳವಣಿಗೆ ಕಾಣುತ್ತಲೇ ಇದೆ. ಈ ನಗರಕ್ಕೆ ಅಭಿವೃದ್ಧಿ ಕಾಮಗಾರಿಗಳಷ್ಟೇ ಅಲ್ಲ, ಅನಿಯಮಿತ ಮೂಲಸೌಕರ್ಯಗಳೂ ಸೇರಿದಂತೆ ಎಲ್ಲ ಆಯಾಮಗಳಲ್ಲೂ ನಿರ್ವಹಣೆ, ಮೇಲ್ವಿಚಾರಣೆಯ ಅಗತ್ಯವಿದೆ. ಮೂರು ದಶಕಗಳಲ್ಲಿ ನಗರ ನಿಯಂತ್ರಣವಿಲ್ಲದೆ ಅತಿವೇಗವಾಗಿ ಬೆಳೆಯುತ್ತಿದೆ. ಯೋಜನಾರಹಿತ ನಗರೀಕರಣದ ನಾಗಾಲೋಟಕ್ಕೆ ತಡೆಯನ್ನೂ ಹಾಕಬೇಕಾಗಿದೆ. ಉತ್ತಮ ಹಾಗೂ ಶಾಂತಿಯುತ ಜೀವನ, ಪರಿಸರಯುಕ್ತ ವಾತಾವರಣವಿರುವ ಕಡೆ ಬದುಕುವುದಕ್ಕಾಗಿ ಬೆಂಗಳೂರನ್ನು ಹೆಚ್ಚಿನ ಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವಿಷಯದಲ್ಲಿ ದೇಶದಲ್ಲೇ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಒಂದು ಸಮೀಕ್ಷೆ ಪ್ರಕಾರ, ಪ್ರತಿ ವರ್ಷ 5 ಲಕ್ಷದಿಂದ 7 ಲಕ್ಷ ಜನರು ಬೆಂಗಳೂರಿಗೆ ಬಂದು ನೆಲಸುತ್ತಿದ್ದಾರೆ.

ಚೆನ್ನೈ, ಮುಂಬೈ, ಕೋಲ್ಕತ್ತ ನಗರಗಳು ಸಮುದ್ರದ ದಡ ಹೊಂದಿರುವುದರಿಂದ ಒಂದು ಭಾಗದಲ್ಲಿ ಮಾತ್ರ ಬೆಳೆಯುತ್ತಿವೆ. ಸಮುದ್ರ ಮಟ್ಟದಿಂದ ಸುಮಾರು 1000 ಮೀಟರ್‌ ಎತ್ತರದಲ್ಲಿರುವ ಬೆಂಗಳೂರು, 360 ಡಿಗ್ರಿಯಲ್ಲೂ ಬೆಳೆಯುತ್ತಿದೆ. ಮೊದಲನೇ ಪಂಚವಾರ್ಷಿಕ ಯೋಜನೆಯ ಸಂದರ್ಭದಿಂದಲೂ ಸಾರ್ವಜನಿಕ ಉದ್ದಿಮೆಗಳು ಬೆಂಗಳೂರಿಗೆ ಮೊದಲ ಪ್ರಾಶಸ್ತ್ಯ ನೀಡಿವೆ. ಅದರಿಂದಲೇ ಬಿಇಎಲ್, ಎಚ್‌ಎಂಟಿ, ಎಚ್‌ಎಎಲ್‌, ಬಿಎಚ್‌ಇಎಲ್‌ನಂತಹ ಹಲವು  ಹಲವು ಉದ್ದಿಮೆಗಳು ಇಲ್ಲಿಗೆ ಬಂದವು. ಸಿಲಿಕಾನ್‌ ಸಿಟಿಯಾದ ನಂತರ ಶಿಕ್ಷಣದ ಹಬ್‌, ಆರೋಗ್ಯ ಪ್ರವಾಸೋದ್ಯಮದಲ್ಲೂ ಅಗ್ರಸ್ಥಾನದಲ್ಲೇ ಇದೆ. ಬೆಂಗಳೂರಿನ ಜನಸಂಖ್ಯೆ ಅಂದಾಜು 1.30 ಕೋಟಿ. ಅದರಲ್ಲಿ ಶೇ 50ರಷ್ಟೂ ಸ್ಥಳೀಯರಿಲ್ಲ. ಇಂತಹ ನಗರಕ್ಕೆ ಹಲವು ಸವಾಲುಗಳಿವೆ.

ನಮ್ಮ ಬೆಂಗಳೂರು ನಗರವನ್ನು ಉತ್ತಮ ವಾಸಯೋಗ್ಯ, ಪರಿಸರಸ್ನೇಹಿ ನಗರವನ್ನಾಗಿಸಬೇಕಾಗಿದೆ. ಅಭಿವೃದ್ಧಿ ತುತ್ತತುದಿಯಲ್ಲಿಯಲ್ಲಿರುವ ನಗರದಲ್ಲಿ ನೈಸರ್ಗಿಕ ಸಂಪನ್ಮೂಲವನ್ನೂ ಉಳಿಸಿಕೊಳ್ಳಬೇಕಾಗಿದೆ. ಇವೆಲ್ಲವೂ ಕಾರ್ಯಸಾಧುವಾಗಬೇಕಾದರೆ ನಗರಕ್ಕೇ ಒಂದು ಸಮನ್ವಯ ಕಾಯ್ದೆಯ ಅಗತ್ಯವಿದೆ. ಈಗಿರುವ ಬಿಬಿಎಂಪಿ–2020 ಕಾಯ್ದೆ ಸಮಗ್ರವಾಗಿಲ್ಲ. ನಗರದಲ್ಲಿ ನಾಗರಿಕರಿಗೆ ಸೌಲಭ್ಯ ನೀಡುತ್ತಿರುವ ಇಲಾಖೆಗಳ ಮೇಲೂ ನಿಗಾ ವಹಿಸಲಾಗುವುದಿಲ್ಲ. ಪರಂಪರೆಯನ್ನು ಉಳಿಸಿಕೊಂಡು, ತಾಂತ್ರಿಕತೆಯಲ್ಲಿ ಬೆಳೆಯುತ್ತಿರುವ ಬೆಂಗಳೂರನ್ನು ಸಮಗ್ರವಾಗಿ ಸಂರಕ್ಷಿಸಬೇಕಾಗಿದೆ. ಕೈಗಾರಿಕೆ, ನಗರ ಯೋಜನೆ, ಸಾರಿಗೆ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಗರಕ್ಕೇ ಪ್ರತ್ಯೇಕ ನೀತಿ–ನಿಯಮಗಳು ಬೇಕಾಗುತ್ತವೆ. ಇವೆಲ್ಲದ್ದಕ್ಕೂ ಬೆಸ್ಕಾಂ, ಜಲಮಂಡಳಿ, ಆರೋಗ್ಯ, ಬಿಎಂಟಿಸಿ, ಪೊಲೀಸ್‌, ಸಂಚಾರ ಪೊಲೀಸ್‌, ಕಂದಾಯ ಸೇರಿದಂತೆ ಎಲ್ಲ ಇಲಾಖೆಗಳನ್ನೂ ಒಂದೇ ಸೂರಿನಲ್ಲಿ ತರಬೇಕಾದ ಅಗತ್ಯವಿದೆ. ಇವೆಲ್ಲವನ್ನೂ ಮನಗಂಡಿರುವ ಸರ್ಕಾರ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ಯನ್ನು ಮಂಡಿಸಿದೆ. ನಗರಕ್ಕೆ ತನ್ನದೇ ಬೆಳವಣಿಗೆ ಸ್ವರೂಪವನ್ನು ಕಂಡುಕೊಳ್ಳಲು ಅಗತ್ಯವಾದ ಎಲ್ಲ ರೀತಿಯ ಕಾನೂನು, ಆರ್ಥಿಕ ಬಲವನ್ನು ಈ ಮಸೂದೆ ನೀಡಲಿದೆ. 

ಸಂವಿಧಾನದ ಕಲಂ 243 ಡಬ್ಲ್ಯುನ 12ನೇ ಪರಿಚ್ಛೇದದಲ್ಲಿ ನಾಗರಿಕರಿಗೆ ಒದಗಿಸಬೇಕಾದ 18 ಪ್ರಮುಖ ಸೇವೆಗಳನ್ನು ಪಾಲಿಕೆಗಳ ವ್ಯಾಪ್ತಿಗೆ ನೀಡಲಾಗಿದೆ. ಅವುಗಳೂ ಸೇರಿದಂತೆ ಸಾರಿಗೆ, ಕಂದಾಯ ಇಲಾಖೆಗಳನ್ನೂ ‘ಗ್ರೇಟರ್‌ ಬೆಂಗಳೂರು ಆಡಳಿತ’ದ ವ್ಯಾಪ್ತಿಗೆ ತರುವುದು ಮಸೂದೆಯ ಉದ್ದೇಶ. ಬಿಬಿಎಂಪಿ ವ್ಯಾಪ‍್ತಿಯನ್ನೂ ಒಳಗೊಂಡ ‘ಗ್ರೇಟರ್‌ ಬೆಂಗಳೂರು’ ಪ್ರದೇಶವನ್ನು ಸರ್ಕಾರ ಗುರುತಿಸಲಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ನಗರ ಪಾಲಿಕೆಗಳು ಮತ್ತು ವಾರ್ಡ್‌ ಸಮಿತಿ ಎಂಬ ಮೂರು ಹಂತದಲ್ಲಿ ಆಡಳಿತ ನಿರ್ವಹಣೆಯಾಗುತ್ತದೆ. ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ರಚನೆಯಾಗುತ್ತದೆ. ಸಚಿವರು, ನಗರದ ಶಾಸಕರು, ಮೇಯರ್‌ಗಳು ಹಾಗೂ ಎಲ್ಲ ಇಲಾಖೆಯ ಮುಖ್ಯಸ್ಥರು ಈ ಪ್ರಾಧಿಕಾರದಲ್ಲಿ ಸದಸ್ಯರಾಗಿರುತ್ತಾರೆ. ಎಲ್ಲ ಇಲಾಖೆಗಳ ವ್ಯಾಪ್ತಿಗೂ ಅನ್ವಯಿಸುವ ನೀತಿ–ನಿಯಮಗಳನ್ನು ಇಲ್ಲೇ ರಚಿಸಲಾಗುತ್ತದೆ. ಮುಖ್ಯಮಂತ್ರಿಯವರ ಅಧ್ಯಕ್ಷತೆಯ ಪ್ರಾಧಿಕಾರದಿಂದ ಪಾಲಿಕೆಗಳಿಗೆ ಸಮತೋಲಿತವಾಗಿ ಹಣಕಾಸು, ಅನುದಾನದ ಹಂಚಿಕೆಯನ್ನೂ ನಿರ್ವಹಿಸಲಾಗುತ್ತದೆ. 

ಪ್ರಾಧಿಕಾರವು ಆರ್ಥಿಕ ಅಭಿವೃದ್ಧಿ ಏಜೆನ್ಸಿಯಾಗಿ, ಸಾರ್ವಜನಿಕ– ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಹೂಡಿಕೆಗಳನ್ನೂ ಆಕರ್ಷಿಸಲಾಗುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಹವಾಮಾನ ಕ್ರಿಯಾಕೋಶದಿಂದ, ನಗರ, ಪ್ರಾದೇಶಿಕ– ಪಟ್ಟಣ ಯೋಜನೆ, ಮೂಲ ಸೌಕರ್ಯ ಮತ್ತು ಸಾರಿಗೆ, ಪರಿಸರ ಮತ್ತು ಹವಾಮಾನ ಬದಲಾವಣೆ, ಬಡತನ ಮತ್ತು ಒಳಗೊಳ್ಳುವಿಕೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಅಭಿವೃದ್ದಿಗೆ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ ಕಾರ್ಯತಂತ್ರ ರೂಪುಗೊಳ್ಳಲಿದೆ. ‘ಗ್ರೇಟರ್‌ ಬೆಂಗಳೂರು’ನಲ್ಲಿ ರಚನೆಯಾಗುವ ನಗರ ಪಾಲಿಕೆಗಳಲ್ಲಿ ಮೇಯರ್‌, ಮುಖ್ಯ ಆಯುಕ್ತ, ಜಂಟಿ ಆಯುಕ್ತರು, ಸ್ಥಾಯಿ ಸಮಿತಿಗಳೂ, ವಲಯ ಸಮಿತಿಗಳು, ವಾರ್ಡ್‌ ಸಮಿತಿಗಳು ಹಾಗೂ ಪ್ರದೇಶ ಸಭಾಗಳಿದ್ದು ಸ್ಥಳೀಯ ಅಗತ್ಯಗಳನ್ನು ಪೂರೈಸಲು ಕಾರ್ಯನಿರ್ವಹಿಸಲಿವೆ. ಸ್ಥಳೀಯ ಸಮಸ್ಯೆಗಳಿಗೆ ನಗರಪಾಲಿಕೆ ಮಟ್ಟದಲ್ಲಿ ಪೂರ್ಣ ಪರಿಹಾರ ಸಾಧ್ಯವಾಗದಿದ್ದರೆ, ಪ್ರಾಧಿಕಾರದಲ್ಲಿ ವಿಷಯ ಮಂಡಿಸಿ, ಅಗತ್ಯ ಸಲಹೆ ಹಾಗೂ ಸಹಕಾರವನ್ನೂ ಪಡೆದುಕೊಳ್ಳಬಹುದಾಗಿದೆ.

‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ ದೀರ್ಘಕಾಲದಲ್ಲಿ ಬೆಂಗಳೂರನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವಂತಹ ವಿಶೇಷ ಉದ್ದೇಶ ಹೊಂದಿದೆ. ನಗರ ಯೋಜನೆಗಳ ಮೇಲೆ ಅಂಕುಶವಿರಿಸಿ, ನಗರವನ್ನು ಜೀವನಯೋಗ್ಯ ನಗರವನ್ನಾಗಿಸುವ ಕಾಯ್ದೆ ಇದಾಗಲಿದೆ. ಸಮನ್ವಯ–ಸಮಗ್ರ ಕಾಯ್ದೆಯಾಗಲಿರುವ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ಗೆ ಇನ್ನಷ್ಟು ಸೇರಿಸಲೂ ಅವಕಾಶವಿದೆ. ಅದಕ್ಕಾಗಿಯೇ ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಜಂಟಿ ಸದನ ಸಮಿತಿ ರಚಿಸಿದ್ದಾರೆ. ಅಷ್ಟೇ ಅಲ್ಲದೆ, ಸಂಘ–ಸಂಸ್ಥೆಗಳು, ನಾಗರಿಕರು ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಒಟ್ಟಾರೆಯಾಗಿ, ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಆಡಳಿತ ನಿರ್ವಹಣೆಗೆ ಹೊಸತನ ನೀಡುವ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ ನಗರಕ್ಕೆ ಅತಿಹೆಚ್ಚು ಅಗತ್ಯವಿದೆ.

ಲೇಖಕ: ಬೆಂಗಳೂರಿನ ಮಾಜಿ ಮೇಯರ್‌ (ನಿರೂಪಣೆ: ಆರ್. ಮಂಜುನಾಥ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT