ಶನಿವಾರ, ಜೂನ್ 19, 2021
27 °C
ದೇಶದ ಪ್ರಧಾನಿಯನ್ನು ಯಾರೂ ಪ್ರಶ್ನಿಸುವಂತಿಲ್ಲವೇ?

ಚರ್ಚೆ | ‘ಪ್ರಶ್ನಾತೀತರು’ ಎಂಬ ಭ್ರಮೆ ಇಲ್ಲ: ವಿ. ಸುನಿಲ್‌ ಕುಮಾರ್

ವಿ‌ ಸುನಿಲ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

‘ಮೋದಿ ಕಾಣೆಯಾಗಿದ್ದಾರೆ’ ಎಂದು ದೆಹಲಿಯಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಯಿತು. ಅದನ್ನು ಅಂಟಿಸಿದವರ ವಿರುದ್ಧ ಸಾರ್ವಜನಿಕರು ದೂರು ನೀಡಿದಾಗ, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪ್ರಜಾತಂತ್ರದಲ್ಲಿರುವ ನಿಯಮದ ಪ್ರಕಾರವೇ ನಡೆದಿದೆ. ಇದಕ್ಕೂ ಪ್ರಧಾನಿಗೂ ಏನು ಸಂಬಂಧ. ಕಾನೂನು ತನ್ನ ಕೆಲಸ ಮಾಡಬೇಕಲ್ಲವೆ?

ವಾಕ್‌ ಸ್ವಾತಂತ್ರ್ಯ ಸಂವಿಧಾನ ನಮ್ಮೆಲ್ಲರಿಗೂ ನೀಡಿರುವ ಹಕ್ಕು. ಅದನ್ನು ಎಲ್ಲರೂ ಗೌರವಿಸಬೇಕು. ನಾವೂ ಗೌರವಿಸುತ್ತೇವೆ. ಹಾಗೆಯೇ ಟೀಕೆ–ಟಿಪ್ಪಣಿಗಳಿಗೆ ಯಾರೂ ಅತೀತರಲ್ಲ. ದ್ವೇಷಪೂರ್ಣ ಮನಸ್ಸುಗಳು ಈ ಪವಿತ್ರ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವಾಗಿ ಕೀಳು ಮಟ್ಟದಲ್ಲಿ ನಿರಂತರವಾಗಿ ಒಬ್ಬ ವ್ಯಕ್ತಿಯನ್ನು ಗುರಿ ಮಾಡಿದರೆ ಒಪ್ಪುದಕ್ಕೆ ಸಾಧ್ಯವೇ? ಅದು ಪ್ರಧಾನಿ ನರೇಂದ್ರ ಮೋದಿ ವಿಷಯದಲ್ಲಿ ಮಾತ್ರವಲ್ಲ, ಯಾವುದೇ ಪಕ್ಷದ ನಾಯಕರನ್ನು ‘ಟಾರ್ಗೆಟ್‌’ ಎಂಬಂತೆ ಟೀಕೆ ಮಾಡುವುದನ್ನು ಒಪ್ಪಲು ಸಾಧ್ಯವೇ?

ದೇಶದಲ್ಲಿ ಈಗ ಆಗಿರುವುದು ಅದೇ. ನರೇಂದ್ರ ಮೋದಿಯವರು ಪ್ರಧಾನಿ ಆದ ದಿನದಿಂದಲೂ ದೇಶದಲ್ಲಿ ಒಂದು ವರ್ಗ, ಪಕ್ಷ ಮತ್ತು ಒಂದು ವರ್ಗದ ಮಾಧ್ಯಮ ಆರೋಗ್ಯಪೂರ್ಣವಾಗಿ ಟೀಕಿಸುವುದರ ಬದಲು ಪ್ರಧಾನಿ ಆಗಿದ್ದೇ ತಪ್ಪು, ಅವರು ಮಾಡಿದ್ದೆಲ್ಲವೂ ತಪ್ಪು ಎಂಬಂತೆ ಹಗೆ ಸಾಧಿಸುತ್ತಾ ಬಂದಿರುವುದನ್ನು ನೋಡಬಹುದು. ವಾಕ್‌ ಸ್ವಾತಂತ್ರ್ಯಕ್ಕಿಂತ ಅಜೆಂಡಾವೇ ಹೆಚ್ಚು ಕೆಲಸ ಮಾಡುತ್ತಿದೆ. ದೇಶದ ಇತಿಹಾಸದಲ್ಲಿ ಇಷ್ಟೊಂದು ಪೂರ್ವಗ್ರಹಪೀಡಿತ ಮತ್ತು ದ್ವೇಷದಿಂದ ಕೂಡಿದ ಟೀಕೆಗಳನ್ನು ಯಾವುದೇ ಪ್ರಧಾನಿ ಎದುರಿಸಿಲ್ಲ. ದೇಶ–ವಿದೇಶಗಳ ಪತ್ರಿಕೆಗಳನ್ನೇ ತೆಗೆದುಕೊಳ್ಳಿ, ಪ್ರಧಾನಿ ಕುರಿತು ಬಂದಿರುವ ಲೇಖನಗಳ ಸಮೀಕ್ಷೆ ಯಾರಾದರೂ ಮಾಡಿದರೆ, ಅದರಲ್ಲಿ ಮೋದಿಯ ವ್ಯಕ್ತಿತ್ವ, ಉಡುಪಿನಿಂದ ಹಿಡಿದು ಆಡಳಿತದವರೆಗೆ ಎಲ್ಲವೂ ಟೀಕೆಗೆ ಒಳಗಾಗಿವೆ. ಹಾಗೆಂದು, ಮೋದಿ ಟೀಕಾತೀತರು ಎಂದು ಎಂದೂ ಭಾವಿಸಿಲ್ಲ. ತಮಗೆ ಎದುರಾದ ಟೀಕೆಗಳನ್ನು ಮೌನವಾಗಿ ಸ್ವೀಕರಿಸುವ ಅವರು, ಹೆಚ್ಚು ಕೆಲಸ ಮಾಡುವ ಮೂಲಕವೇ ಉತ್ತರ ನೀಡಲು ಬಯಸುತ್ತಾರೆ. ಅದು ಅವರ ಶೈಲಿ.

ಓದಿ: ಚರ್ಚೆ | ಪ್ರಶ್ನಾತೀತ ಪ್ರಧಾನಿ ದೇಶದ ಹಿತಕ್ಕೆ ಹಾನಿ: ಕೃಷ್ಣ ಬೈರೇಗೌಡ

ಮೋದಿಯವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಆದ ದಿನದಿಂದಲೇ ಒಂದು ವರ್ಗಕ್ಕೆ ಸಹಿಸಲು ಆಗಲಿಲ್ಲ. ಒಂದು ಕುಟುಂಬದ ಹಿಡಿತದಿಂದ ದೇಶ ಕೈ ತಪ್ಪಬಾರದು ಎಂಬುದೇ ಅವರ ಕುತ್ಸಿತ ಹಿತಾಸಕ್ತಿ. ಯಾರೋ ಒಬ್ಬ ಸಾಮಾನ್ಯ ವ್ಯಕ್ತಿ ಬಂದು ಕೂರುತ್ತಾನಲ್ಲ ಎಂಬ ಆತಂಕ. ಅದಕ್ಕಾಗಿ ಚುನಾವಣೆ ವೇಳೆ ಕಠೋರ ನುಡಿಗಳು– ನರಹಂತಕ, ಸಾವಿನ ವ್ಯಾಪಾರಿ, ಕೀಳು ಜಾತಿಯವ, ಚಾಯ್‌ ವಾಲಾ ಎಂದು ಹಂಗಿಸಿದರು. ಯಾವಾಗ ಇವೆಲ್ಲವನ್ನು ಮೆಟ್ಟಿ ಮೋದಿ ಬಹುಮತದಿಂದ ಆಯ್ಕೆ ಆಗಿ ಬಂದರೋ, ಆಗ ಹಲವರಲ್ಲಿ ಅಸೂಯೆ ಮತ್ತು ಅಸಹನೆಯ ಪಿತ್ಥ ನೆತ್ತಿಗೇರಿತು. ವಿಶ್ವದ ಹಲವು ಮುಖಂಡರು ಮೋದಿಯವರನ್ನು ಅಭಿನಂದಿಸಿದ್ದರೂ, ಅಧಿಕಾರ ಕಳೆದುಕೊಂಡ ‘ಕುಟುಂಬ’ದವರು ಕನಿಷ್ಠ ಅಭಿನಂದನೆ ಸಲ್ಲಿಸುವ ಸೌಜನ್ಯ ತೋರಿಸಲಿಲ್ಲ. ಅಂದರೆ, ಇವರ ಅಸಹನೆ ಯಾವ ಮಟ್ಟದಲ್ಲಿರಬೇಕು ಎಂಬುದನ್ನು ಗಮನಿಸಬೇಕು.

ಹಿಂದೆ ಕಾಂಗ್ರೆಸ್ಸೇತರ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಕುಟಿಲತೆಯಿಂದ ಪತನಗೊಳಿಸಿ, ಮತ್ತೆ ಗದ್ದುಗೆ ಏರುತ್ತಿದ್ದರು. ಆ ಕುಟಿಲತೆಯನ್ನು 70 ವರ್ಷಗಳಿಂದ ದೇಶ ನೋಡಿದೆ. ಮೋದಿ ಅವಧಿಯಲ್ಲಿ ಅದು ಸಾಧ್ಯವಾಗದಂತೆ ಭರ್ಜರಿ ಜಯವನ್ನು ಜನತೆಯೇ ನೀಡಿದ್ದರು. ಹೀಗಾಗಿ ಮೋದಿ ಸರ್ಕಾರದ ವಿರುದ್ಧ ಕುಟುಂಬದ ಹಿತೈಷಿ ವರ್ಗ ‘ಗೆರಿಲ್ಲಾ’ ಮಾದರಿಯನ್ನು ಅನುಸರಿಸಿತು. ಕೆಲವು ಹಿಂಸಾತ್ಮಕ ಘಟನೆಗಳು ದೇಶದ ವಿವಿಧ ಭಾಗದಲ್ಲಿ ನಡೆದಾಗ, ಅದಕ್ಕೂ ಮೋದಿ ಸರ್ಕಾರಕ್ಕೂ ನಂಟು ಬೆಸೆದರು. ದೇಶದಲ್ಲಿ ಅಸಹನೆ ಹೆಚ್ಚಾಗಿದೆ ಎಂದು ಹುಯಿಲೆಬ್ಬಿಸಿದರು. ಇವರ ಅವಧಿಯಲ್ಲಿ ಅನೇಕ ಬಗೆಯಲ್ಲಿ ಉಪಕೃತರಾದ ‘ಬೌದ್ಧಿಕ’ ವಲಯ ‘ಅವಾರ್ಡ್‌ ವಾಪ್ಸಿ’ ಮೂಲಕ ಮೋದಿ ವಿರುದ್ಧ ಮೊದಲ ಯುದ್ಧ ಸಾರಿತು. ದಲಿತ ವ್ಯಕ್ತಿಗಳು ಮತ್ತು ಮುಸ್ಲಿಂ ವ್ಯಕ್ತಿಗಳ ಮೇಲೆ ಹಲ್ಲೆ ನಡೆದಾಗ ಅದಕ್ಕೂ ಸರ್ಕಾರಕ್ಕೆ ನಂಟು ಕಲ್ಪಿಸಿದರು. ಮೋದಿ ದಲಿತ ಮತ್ತು ಮುಸ್ಲಿಂ ವಿರೋಧಿ ಎಂದು ಬಿಂಬಿಸಿದರು. ಕಾಂಗ್ರೆಸ್‌ ಅವಧಿಯಲ್ಲಿ ಇಂತಹ ಅಸಂಖ್ಯಾತ ಹೇಯ ಘಟನೆಗಳು ನಡೆದಿದ್ದಾಗ ಈ ವರ್ಗ ಮೌನವಾಗಿ ಇರುತ್ತಿತ್ತು.

ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂಬುದು ಗೊತ್ತಾದ ಬಳಿಕ ಮೋದಿ ವಿರೋಧಿಸುವ ಶಕ್ತಿಗಳು, ಪಕ್ಷಗಳು ತಮ್ಮ ‘ಗೆರಿಲ್ಲಾ’ ಯುದ್ಧದಲ್ಲಿ ವಿವಿಧ ಬಗೆಯ ಅಸ್ತ್ರಗಳನ್ನು ಹಿರಿದು ತೆಗೆಯಲಾರಂಭಿಸಿದರು. ಅದರಲ್ಲಿ ಗೋಬೆಲ್ಸ್‌ ಮಾದರಿಯ ಅಪಪ್ರಚಾರವೂ ಒಂದು. ಇದರಲ್ಲಿ ‘ಸಮಾನ ಮನಸ್ಕ’ರೆಲ್ಲಾ ದೇಶದ ಹಿತವನ್ನು ಬಲಿಗೊಟ್ಟು ಒಂದಾದರು. 

ಹಲವು ‘ಗೆರಿಲ್ಲಾ’ ಯುದ್ಧದಲ್ಲಿ ಸೋತವರಿಗೆ ಈಗ ಸಿಕ್ಕಿರುವ ಹೊಸ ಅಸ್ತ್ರವೆಂದರೆ, ಕೋವಿಡ್‌ ಎರಡನೇ ಅಲೆ. ಇದರಲ್ಲಿ ಸರ್ಕಾರಕ್ಕೆ ಹೆಗಲು ಕೊಡಬೇಕಾಗಿತ್ತು. ಹೌದು, ಎರಡನೇ ಅಲೆ ಅಚಾನಕ್‌ ಅಪ್ಪಳಿಸಿತು. ದೇಶದ ಆರೋಗ್ಯ ವ್ಯವಸ್ಥೆ ಕೊರೊನಾ ಸುನಾಮಿಯನ್ನು ಎದುರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಇದಕ್ಕೆ ಏಳು ವರ್ಷ ಆಡಳಿತ ಮಾಡಿದ ಮೋದಿ ಅವರನ್ನು ಹೊಣೆ ಮಾಡಿದರೆ ಆಗುವುದಿಲ್ಲ. ಈ ‘ಕುವ್ಯವಸ್ಥೆ’ಯಲ್ಲಿ 60 ಕ್ಕೂ ಹೆಚ್ಚು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ನ ಪಾಲು ಇಲ್ಲವೇ? ಲಸಿಕೆ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಶಕ್ತಿಯನ್ನು ಹಾಳು ಗೆಡವಿದ್ದು ಯಾರು? ಯುಪಿಎ 1ರ ಅವಧಿಯಲ್ಲಿ ಸಾರ್ವಜನಿಕ ಸ್ವಾಮ್ಯದ ಮೂರು ಪ್ರಮುಖ ಲಸಿಕೆ ಉತ್ಪಾದಕ ಘಟಕಗಳ ಲೈಸೆನ್ಸ್‌ ರದ್ದು ಮಾಡಿ ಖಾಸಗಿಯವರಿಗೆ ಮಣೆ ಹಾಕಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಸರ್ಕಾರಕ್ಕೆ ಸಲ್ಲಬೇಕಲ್ಲವೆ. ದೇಶದಲ್ಲಿ ಲಸಿಕೆ ಸಿಗುತ್ತಿಲ್ಲ ಎಂದು ರಾಹುಲ್ ಗಾಂಧಿ, ಸೋನಿಯಾಗಾಂಧಿ ಅಬ್ಬರಿಸುತ್ತಿದ್ದಾರೆ. ಲಸಿಕೆ ಉತ್ಪಾದಕ ಘಟಕಗಳ ಕತ್ತು ಹಿಸುಕಿದ್ದು ಅವರದ್ದೇ ಸರ್ಕಾರದ ಅವಧಿಯಲ್ಲಿ ಅಲ್ಲವೇ?

ಇವರ ಗೆರಿಲ್ಲಾ ಯುದ್ಧದ ಭಾಗವಾಗಿ ‘ಮೋದಿ ಕಾಣೆಯಾಗಿದ್ದಾರೆ’ ಎಂದು ದೆಹಲಿಯಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಯಿತು. ಅದನ್ನು ಅಂಟಿಸಿದವರ ವಿರುದ್ಧ ಸಾರ್ವಜನಿಕರು ದೂರು ನೀಡಿದಾಗ, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪ್ರಜಾತಂತ್ರದಲ್ಲಿರುವ ನಿಯಮದ ಪ್ರಕಾರವೇ ನಡೆದಿದೆ. ಇದಕ್ಕೂ ಪ್ರಧಾನಿಗೂ ಏನು ಸಂಬಂಧ. ಕಾನೂನು ತನ್ನ ಕೆಲಸ ಮಾಡಬೇಕಲ್ಲವೆ?

ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಪಕ್ಷವು ಯುಪಿಎ– 2 ಸರ್ಕಾರದ ಅವಧಿಯಲ್ಲಿ ಬಲಪಂಥೀಯರ ಟ್ವಿಟರ್‌, ಬ್ಲಾಗ್‌ಗಳು ಮತ್ತು ವೆಬ್‌ಸೈಟ್‌ಗಳ ಮೇಲೆ ನಿರ್ಬಂಧ ವಿಧಿಸಿತ್ತು. ವಿಶೇಷವಾಗಿ ಆ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಮೇಲೆ ಯಾವುದೇ ರೀತಿಯ ಟೀಕೆಗಳನ್ನು ಸಹಿಸದಷ್ಟು ‘ವ್ಯಕ್ತಿಪೂಜೆ’ ಅಲ್ಲಿ ಹೆಪ್ಪುಗಟ್ಟಿತ್ತು ಎಂಬುದನ್ನು ಮರೆಯಲು ಸಾಧ್ಯವೇ?

ಯುಪಿಎ ಅವಧಿಯಲ್ಲಿ (2008) ಸ್ಪ್ಯಾನಿಷ್‌ ಲೇಖಕ ಜೇವಿಯರ್ ಮೊರೊ ಅವರು ‘ಎಲ್ ಸಾರಿ ರೋಜೊ’ ಅಂದರೆ ‘ಕೆಂಪು ಸೀರೆ’ ಎಂಬ ಪುಸ್ತಕವನ್ನು ಪ್ರಕಟಿಸಿದರು. ಅದು ಸೋನಿಯಾಗಾಂಧಿ ಕುರಿತಾಗಿದ್ದು. ಆ ಪುಸ್ತಕವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಯು‍ಪಿಎ ಸರ್ಕಾರ ಬಿಡಲಿಲ್ಲ. ಗದ್ದಲ ಎಬ್ಬಿಸಿದ್ದು ಮಾತ್ರವಲ್ಲದೆ, ಲೇಖಕನ ವಿರುದ್ಧ ಭಾರತೀಯ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಹಾಗಿದ್ದರೆ ಸೋನಿಯಾ ಪ್ರಶ್ನಾತೀತರೆ? ಆಗ ನಮ್ಮ ಲಿಬರಲ್‌ಗಳು ಏಕೆ ಪ್ರಶ್ನಿಸಲಿಲ್ಲ? ಮೋದಿ ವಿರುದ್ಧ ಹೀನಾಯವಾಗಿ ಬರೆದ ಎಷ್ಟೋ ಪುಸ್ತಕಗಳು ಬಿಡುಗಡೆ ಆಗಿವೆ. ಯಾರಾದರೂ ತಡೆದ ನಿದರ್ಶನವಿದೆಯೆ? ‘ನೆಹರೂ–ಗಾಂಧಿ’ ಪರಿವಾರದ ಎಲ್ಲ ಸರ್ವಾಧಿಕಾರಿ ನಡೆಗಳಿಗೂ ಬೇರೆಯದೇ ಆದ ಬಣ್ಣ ಬಳಿದು ರಕ್ಷಾ ಕವಚವಾಗಿ ನಿಂತವರು ಉಪಕೃತ ಬೌದ್ಧಿಕರು. ಮೋದಿ ಅವರಿಗೆ ಆ ರಕ್ಷಾ ಕವಚವಿಲ್ಲ, ಏಕೆಂದರೆ ಅವರು ನೈಜ ನಾಯಕ. ಮಿಥ್ಯಾ ಟೀಕೆಗಳಿಗೆ ತಲೆ ಕೆಡಿಸಿಕೊಂಡವರಲ್ಲ. ಪ್ರಶ್ನಾತೀತ ಎಂದು ಭಾವಿಸಿಯೂ ಇಲ್ಲ. ಆ ಭ್ರಮೆಯೂ ಇಲ್ಲ.

- ಲೇಖಕರು ಆಡಳಿತ ಪಕ್ಷದ ಮುಖ್ಯ ಸಚೇತಕ, ವಿಧಾನಸಭೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು