ಸಂಸ್ಕೃತ, ಪ್ರಾಕೃತದ ವ್ಯಾಕರಣಕ್ಕೂ ದ್ರಾವಿಡ ಭಾಷೆಗಳ ವ್ಯಾಕರಣಕ್ಕೂ ಹೋಲಿಸಿದರೆ ಬಹಳ ವ್ಯತ್ಯಾಸ ಕಾಣುತ್ತದೆ. ಆದರೆ, ತಮಿಳು ಮತ್ತು ಕನ್ನಡ, ತೆಲುಗು ಮತ್ತು ಕನ್ನಡ, ಮಲಯಾಳ ಮತ್ತು ಕನ್ನಡ ವ್ಯಾಕರಣಗಳಲ್ಲಿ ಹೊಂದಾಣಿಕೆ ಇದೆ. ಇವು ಒಂದು ಮೂಲಕ್ಕೆ ಸೇರಿದವು ಎನ್ನುವುದು ಈ ಹೊಂದಾಣಿಕೆಯಿಂದ ತಿಳಿಯುತ್ತದೆ. ಅದೇ ರೀತಿ ತಮಿಳರ ಪೂರ್ವದ ಸಾಹಿತ್ಯ ಓದಿದರೆ ಇದು ನಮ್ಮದೇ ಎಂದು ಕನ್ನಡಿಗರಿಗೆ ಅನ್ನಿಸುತ್ತದೆ. ಹಾಗೆ ಅನ್ನಿಸಿದ ಮಾತ್ರಕ್ಕೆ, ಸಾಮ್ಯ ಇದ್ದ ಮಾತ್ರಕ್ಕೆ ಇವು ಒಂದರಿಂದ ಒಂದು ಬಂದದ್ದಲ್ಲ; ಒಂದು ಮೂಲದಿಂದ ಬಂದು ಬೇರೆ ಬೇರೆ ಆದಂಥವು. ಇವುಗಳ ಲಿಪಿಗಳು ಭಿನ್ನ. ಇವು ಪ್ರತ್ಯೇಕ ಭಾಷೆಗಳು, ಸೋದರ ಭಾಷೆಗಳು, ಜ್ಞಾತಿ ಭಾಷೆಗಳು ಎನ್ನುವುದು ಭಾಷಾವಿಜ್ಞಾನದ ಆಧಾರದಿಂದಲೂ ಚಾರಿತ್ರಿಕ ಆಧಾರದಿಂದಲೂ ನಿರೂಪಿತವಾಗಿದೆ
ದೇಶದ ಮೊದಲ ಗವರ್ನರ್ ಜನರಲ್ ಆಗಿದ್ದ ಸಿ.ರಾಜಗೋಪಾಲಚಾರಿ ಅವರು 1968–69ರಲ್ಲಿ ಒಂದು ಲೇಖನ ಬರೆದಿದ್ದರು. ಕನ್ನಡವು ತಮಿಳಿನಿಂದ ಹುಟ್ಟಿದ ಭಾಷೆಯಾಗಿದ್ದು, ತೆಲುಗು ಲಿಪಿಯನ್ನು ಬಳಸುತ್ತದೆ ಎಂದು ಅದರಲ್ಲಿ ಪ್ರತಿಪಾದಿಸಿದ್ದರು. ಆಗ ಸಾಹಿತಿಗಳು, ಕನ್ನಡ ಹೋರಾಟಗಾರರು ನಾವೆಲ್ಲ ಸೇರಿ ದೊಡ್ಡ ಪ್ರತಿಭಟನೆಯನ್ನೇ ನಡೆಸಿದೆವು. ನಂತರ ಅವರು ಕ್ಷಮೆಯಾಚಿಸಿದ್ದರು