ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ | ಉಚಿತ ಕೊಡುಗೆ ಕೊಟ್ಟರೆ ತಪ್ಪೇನು?- ಯೋಗೇಂದ್ರ ಯಾದವ್‌

ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಭರವಸೆ ಕೊಡುವುದು ಸರಿಯೇ?
Last Updated 12 ಆಗಸ್ಟ್ 2022, 23:30 IST
ಅಕ್ಷರ ಗಾತ್ರ

‘ಉಚಿತ ಕೊಡುಗೆ’ಗಳ ಕುರಿತು ನಡೆಯುತ್ತಿರುವ ರಾಷ್ಟ್ರೀಯ ಚರ್ಚೆಯಿಂದ ಈವರೆಗೆ ಒಂದು ಸಕಾರಾತ್ಮಕ ಫಲ ಉಂಟಾಗಿದೆ. ಅದೆಂದರೆ, ರುಚಿಯಲ್ಲಿ ಚಾಕೊಲೇಟ್‌ ಅಥವಾ ಮಿಠಾಯಿಯನ್ನು ಸೋಲಿಸಬಲ್ಲ ನನ್ನ ಅಚ್ಚುಮೆಚ್ಚಿನ ‘ರೆವ್ಡಿ’– ಎಳ್ಳು ಮತ್ತು ಬೆಲ್ಲ ಬಳಸಿ ತಯಾರಿಸಿದ ಸಿಹಿತಿಂಡಿ– ಕುರಿತು ಇಡೀ ದೇಶಕ್ಕೆ ತಿಳಿಯಿತು. ಉಳಿದಂತೆ ಈ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆ ಅಭಿರುಚಿಹೀನ ಮತ್ತು ಅರ್ಥಹೀನ.

‘ಉಚಿತ ಕೊಡುಗೆ’ಗಳ ಬಗ್ಗೆ ಗಂಭೀರ ಪ್ರಶ್ನೆ ಇರುವುದರಿಂದ ಚರ್ಚೆ ಈ ರೀತಿ ಆಗಬೇಕಾಗಿರಲಿಲ್ಲ: ರಾಜಕೀಯ ಪಕ್ಷಗಳು ಮತದಾರರ ಸ್ಥಿತಿಯಲ್ಲಿ ದೀರ್ಘಾವಧಿಯಲ್ಲಿ ಗಮನಾರ್ಹ ಸುಧಾರಣೆ ಸಾಧ್ಯವಾಗುವ ಕ್ರಮಗಳನ್ನು ಕೈಗೊಳ್ಳುವ ಬಲು ಸಣ್ಣ ಸಣ್ಣ ಉಡುಗೊರೆಗಳನ್ನು ನೇರವಾಗಿ ನೀಡುವುದು ಏಕೆ? ಇಲ್ಲಿ ಇರುವ ಸಮಸ್ಯೆ ಏನೆಂದರೆ, ಈ ಪ್ರಶ್ನೆ ಕೇಳುವ ಅರ್ಹತೆ ಇಲ್ಲದ ಜನರು, ಈ ಪ್ರಶ್ನೆ ಕೇಳಲು ಸೂಕ್ತವಲ್ಲದ ವೇದಿಕೆಯಲ್ಲಿ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಹಾಗಾಗಿ, ಈ ಕುರಿತು ಅರ್ಥಪೂರ್ಣ ಚರ್ಚೆ ಅಸಾಧ್ಯವಾಗಿಬಿಟ್ಟಿದೆ.

ನಾವು ಈ ಎರಡೂ ತೊಡಕುಗಳನ್ನು ಬದಿಗೆ ಸರಿಸೋಣ. ಮತದಾರರನ್ನು ಆಕರ್ಷಿಸುವುದಕ್ಕಾಗಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ನೀಡುವ ‘ರೆವ್ಡಿ ಸಂಸ್ಕೃತಿ’ಯ ಕುರಿತು ಪ್ರಶ್ನೆಗಳನ್ನು ಎತ್ತಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವ ನೈತಿಕ ಹಕ್ಕೂ ಇಲ್ಲ ಎಂಬುದು ಸ್ಪಷ್ಟ. ಅವರು ಮತ್ತು ಅವರ ಪಕ್ಷವು ಈ ವಿಚಾರದಲ್ಲಿ ಎಸಗಿರುವ ತಪ್ಪು ಇತರ ಪಕ್ಷಗಳಿಗಿಂತ ಕಡಿಮೆ ಏನಲ್ಲ. ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹15 ಲಕ್ಷ ಜಮೆ ಮಾಡುವ ಬಗ್ಗೆ ಮಾತನಾಡಿದವರು ಮೋದಿ ಅವರೇ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಾಲ ಮನ್ನಾ ಭರವಸೆಯನ್ನು ಅವರೇ ಕೊಟ್ಟಿದ್ದರು. ಅವರ ಪಕ್ಷವು ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಎಲ್ಲ ರೀತಿಯ ಉಚಿತ ಕೊಡುಗೆಗಳ ಭರವಸೆಗಳನ್ನೂ ಮತದಾರರಿಗೆ ನೀಡಿದೆ.

ಈ ವಿಚಾರ ಚರ್ಚೆಯಾಗಬೇಕಾದ ವೇದಿಕೆ ಸುಪ್ರೀಂ ಕೋರ್ಟ್‌ ಖಂಡಿತವಾಗಿಯೂ ಅಲ್ಲ. ಉಚಿತ ಕೊಡುಗೆಗಳ ಭರವಸೆ ಕೊಟ್ಟ ರಾಜಕೀಯ ಪಕ್ಷದ ಮಾನ್ಯತೆ ರದ್ದುಮಾಡಬೇಕು ಎಂದು ಅರ್ಜಿದಾರರೊಬ್ಬರು ಸುಪ್ರೀಂ ಕೋರ್ಟನ್ನು ಕೋರಿದ್ದಾರೆ. ಚುನಾವಣಾ ಬಾಂಡ್‌ ಕುರಿತ ಅರ್ಜಿಗಳ ವಿಚಾರಣೆಗೆ ಸಮಯ ಕೊಡಲಾಗದ ಸುಪ್ರೀಂ ಕೋರ್ಟ್‌, ಉಚಿತ ಕೊಡುಗೆಗಳ ಕುರಿತ ಅರ್ಜಿಯ ವಿಚಾರಣೆ ನಡೆಸುತ್ತಾ ಕೂತಿದೆ.

ಇಂತಹ ಪ್ರಸ್ತಾವಗಳ ಉಲ್ಲೇಖವಾದಾಗಲೆಲ್ಲ, ಕಳೆದು ಹೋದ ಬೀಗದ ಕೈಗಳನ್ನು ದೀಪದ ಕಂಬದ ಕೆಳಗೆ ಹುಡುಕುವ ವ್ಯಕ್ತಿಯ ಪ‍್ರಸಂಗ ನನಗೆ ನೆನಪಾಗುತ್ತದೆ. ‘ಬೀಗದ ಕೈ ಕಳೆದು ಹೋದದ್ದು ಎಲ್ಲಿ?’ ಎಂದು ಕೇಳಿದರೆ, ಆತ ದೂರದ ಕತ್ತಲಿನ ಪ್ರದೇಶದತ್ತ ಬೊಟ್ಟು ಮಾಡುತ್ತಾನೆ. ‘ಹಾಗಾದರೆ ಇಲ್ಲಿ ಏಕೆ ಹುಡುಕುತ್ತಿರುವೆ?’ ಎಂದು ಕೇಳಿದರೆ ‘ಏಕೆಂದರೆ ಇಲ್ಲಿ ಬೆಳಕು ಇದೆ’ ಎಂದು ಮುಗ್ಧವಾಗಿ ಹೇಳುತ್ತಾನೆ. ರಾಜಕೀಯದಲ್ಲಿರುವ ಅನಿಷ್ಟಗಳಿಗೆ ನ್ಯಾಯಾಂಗ ಅಥವಾ ಸಾಂಸ್ಥಿಕ ಪರಿಹಾರಗಳನ್ನು ಬಯಸುವ ಜನರನ್ನು ಕಂಡರೆ ನನಗೆ ಆ ಮುಗ್ಧನಂತೆ ಇವರೂ ಅಮಾಯಕರು ಅನಿಸುತ್ತದೆ.

ರಾಜಕೀಯ ಪಕ್ಷಗಳ ಚಿಹ್ನೆಯನ್ನು ರದ್ದುಪಡಿಸುವ ಮೂಲಕ ಆ ಪಕ್ಷಕ್ಕೆ ರಾಜಕೀಯ ಯಶಸ್ಸು ದಕ್ಕದಂತೆ ಮಾಡುವುದು ರೋಗಕ್ಕಿಂತ ಕೆಟ್ಟದಾದ ಔಷಧ ಎಂಬುದು ಒಂದು ನಿಮಿಷ ಯೋಚಿಸಿದರೆ ತಿಳಿಯುತ್ತದೆ. ಪ್ರಜಾ‍ಪ್ರಭುತ್ವದಲ್ಲಿ ಈ ಖಡ್ಗವನ್ನು ಯಾರೂ ಝಳಪಿಸಬಾರದು. ರಾಜಕೀಯ ಪ್ರತಿಸ್ಪರ್ಧಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಒಂದಲ್ಲ ಒಂದು ನೆಪ ಒಡ್ಡಿ ತಡೆಯುವುದು ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ಅತ್ಯಂತ ಸಾಮಾನ್ಯ ತಂತ್ರ. ಇಂತಹ ಅವಕಾಶ ನಮ್ಮ ದೇಶದಲ್ಲಿ ಇಲ್ಲ. ಇಂತಹ ಅವಕಾಶವು ತೆರೆದುಕೊಳ್ಳಲೇಬಾರದು.

ಬಾಹ್ಯ ಬೆದರಿಕೆಗಳು, ಅಲ್ಪಾವಧಿ ಲೋಪಗಳು, ವೈಯಕ್ತಿಕ ಇಷ್ಟಾನಿಷ್ಟಗಳು, ಬಹುಸಂಖ್ಯಾತವಾದದ ಅತಿರೇಕಗಳಿಂದೆಲ್ಲ ಪ್ರಜಾಪ್ರಭುತ್ವವನ್ನು ದೂರ ಇರಿಸಬಹುದು. ಆದರೆ, ಪ್ರಜಾಸತ್ತೆಯನ್ನು ಜನರಿಂದ ದೂರ ಇರಿಸಲು ಸಾಧ್ಯವಾಗದು. ‘ಉಚಿತ ಕೊಡುಗೆ’ಗಳು ಜನರನ್ನು ಆಕರ್ಷಿಸುತ್ತವೆ ಎಂದಾದರೆ, ಜನರಲ್ಲಿ ಜಾಗೃತಿ ಮೂಡಿಸಿ. ಬಹಿರಂಗಪಡಿಸಬೇಕಾದ ಅಂಶಗಳನ್ನು ಇನ್ನಷ್ಟು ಹೆಚ್ಚಿಸಿ, ಈ ಭರವಸೆಗಳ ಟೊಳ್ಳುತನವನ್ನು ಬಯಲಾಗಿಸಬಹುದು. ಅಸಾಧ್ಯವಾದ ಭರವಸೆಗಳನ್ನು ನೀಡಿದ ರಾಜಕೀಯ ಪಕ್ಷಗಳ ಕುರಿತು ತನಿಖಾ ವರದಿ ಪ್ರಕಟಿಸುವಂತೆ ಮಾಧ್ಯಮವನ್ನು ಸಶಕ್ತಗೊಳಿಸಬಹುದು.

ಅತ್ಯಂತ ಮೂಲಭೂತ ಪ್ರಶ್ನೆ ಏನೆಂದರೆ, ಉಚಿತ ಕೊಡುಗೆಗಳು ಎಂದರೆ ಏನು ಮತ್ತು ಪ್ರಜಾಪ್ರಭುತ್ವದಲ್ಲಿ ಅದು ಇದ್ದರೆ ತಪ್ಪೇನು ಎಂಬುದಾಗಿದೆ. ಜನರಿಗೆ ಉಚಿತವಾಗಿ ಏನನ್ನಾದರೂ ಕೊಡುವುದಾದರೆ ಅದಕ್ಕೆ ಆಕ್ಷೇಪ ಏಕೆ? ಬಂಡವಾಳಶಾಹಿ ದೇಶಗಳಲ್ಲಿ ಕೂಡ ಪೊಲೀಸ್ ಮತ್ತು ಸೇನೆಯ ಸೇವೆಯನ್ನು ಜನರಿಗೆ ಉಚಿತವಾಗಿಯೇ ಒದಗಿಸಲಾಗುತ್ತಿದೆ. ಅದಕ್ಕೆ ಯಾವ ಆಕ್ಷೇಪವೂ ಇರುವುದಿಲ್ಲ. ಶಿಕ್ಷಣ, ಆರೋಗ್ಯ, ಜೀವನೋಪಾಯ ಮತ್ತು ಘನತೆಯಿಂದ ಬದುಕುವ ಸ್ಥಿತಿಯನ್ನು ಪ್ರತಿಯೊಬ್ಬರಿಗೂ ಉಚಿತವಾಗಿ ಒದಗಿಸುವ ಕಲ್ಯಾಣ ರಾಜ್ಯವಾಗಿಯೇ ಇರಬೇಕು ಎಂದು ನಮ್ಮ ಸಂವಿಧಾನವೂ ಹೇಳುತ್ತದೆ. ಶಿಕ್ಷಣ, ವೈದ್ಯಕೀಯ ಸೇವೆ ಮತ್ತು ಇತರ ಸೇವೆಗಳನ್ನು ಉಚಿತವಾಗಿ ನೀಡಿದರೆ ಅದಕ್ಕೆ ಯಾರ ಅಭ್ಯಂತರವೂ ಇಲ್ಲ. ಸರ್ಕಾರವು ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ಈ ಮೂಲಕ ಪೂರೈಸುತ್ತಿದೆ ಅಷ್ಟೇ.

ಆದರೆ, ಆಕ್ಷೇಪ ವ್ಯಕ್ತಪಡಿಸಲೇಬೇಕಾದ ಉಚಿತ ಕೊಡುಗೆಗಳ ಬೇರೊಂದು ಬಗೆ ಇದೆ. ಶ್ರೀಮಂತರಿಗೆ ಸದ್ದಿಲ್ಲದೆ ನೀಡುವ ಭಾರಿ ಮೊತ್ತದ ಸಹಾಯಧನ ಅದು. ಸರ್ಕಾರವು ಪ್ರತಿ ವರ್ಷವೂ ಕೋಟ್ಯಂತರ ರೂಪಾಯಿ ಕಾರ್ಪೊರೇಟ್‌ ತೆರಿಗೆಯನ್ನು ಅಧಿಕೃತವಾಗಿಯೇ ಮನ್ನಾ ಮಾಡುತ್ತದೆ. ಈ ಕಂಪನಿಗಳು ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತವೆ. ಕಳೆದ ಐದು ವರ್ಷಗಳಲ್ಲಿ ಸುಮಾರು ₹10 ಲಕ್ಷ ಕೋಟಿ ಸಾಲವನ್ನು ವಸೂಲಿ ಮಾಡಲಾಗದ ಸಾಲ ಎಂಬ ವರ್ಗಕ್ಕೆ ಸೇರಿಸಲಾಗಿದೆ. ಇದು ಅತ್ಯಂತ ಶ್ರೀಮಂತರಿಗೆ ಅರ್ಹತೆ ಇಲ್ಲದಿದ್ದರೂ ನೀಡುವ ಉಚಿತ ಕೊಡುಗೆಗಳಾಗಿವೆ. ಉಚಿತ ಕೊಡುಗೆಗಳ ಬಗ್ಗೆ ಆಕ್ಷೇಪ ಇರುವವರ ಪಟ್ಟಿಯಲ್ಲಿ ಈ ರೀತಿಯ ಉಚಿತ ಕೊಡುಗೆಗಳು ಮೊದಲಿಗೇ ಇರಬೇಕು. ಆದರೆ, ಇದರ ಬಗ್ಗೆ ಮಾಧ್ಯಮದಲ್ಲಿಯಾಗಲಿ ಸುಪ್ರೀಂ ಕೋರ್ಟ್‌ನಲ್ಲಿಯಾಗಲಿ ಚರ್ಚೆಯೇ ಆಗುತ್ತಿಲ್ಲ.

ಟಿ.ವಿ, ಚಿನ್ನದ ಸರ, ಮಿಕ್ಸರ್‌, ಕಂಪ್ಯೂಟರ್‌, ಟ್ಯಾಬ್ಲೆಟ್‌ ಇತ್ಯಾದಿಗಳನ್ನು ಉಚಿತವಾಗಿ ನೀಡುವುದರ ಬಗ್ಗೆ ಏನೆನ್ನಬೇಕು? ಖಂಡಿತವಾಗಿಯೂ ಇವು ಕೆಟ್ಟದಾದ ಸಹಾಯಧನಗಳು ಮತ್ತು ಸರ್ಕಾರದ ಹಣದ ಸರಿಯಾದ ರೀತಿಯ ಬಳಕೆ ಅಲ್ಲ. ಇಂತಹ ಉಚಿತ ಕೊಡುಗೆಗಳಿಗೆ ವೆಚ್ಚ ಮಾಡುವ ಮೊತ್ತವನ್ನು ಮೂಲಸೌಕರ್ಯ ಸೃಷ್ಟಿಗೆ ಮತ್ತು ಇತರ ಸೌಲಭ್ಯಗಳನ್ನು ಉತ್ತಮಪಡಿಸಲು ಬಳಸಿದರೆ ಅದರಿಂದ ಬಡವರಿಗೆ ಹೆಚ್ಚಿನ ಅನುಕೂಲ ಆಗುತ್ತದೆ.

ಕೊನೆಯದಾಗಿ, ಬಡಜನರು ಉಚಿತ ಕೊಡುಗೆ ಸಂಸ್ಕೃತಿಯನ್ನು ಇಷ್ಟಪಡಲು ಕಾರಣಗಳೇನು ಎಂಬುದರ ಬಗ್ಗೆ ಯೋಚಿಸೋಣ. ಈ ‘ವಿಚಾರಹೀನ’ ಉಚಿತ ಕೊಡುಗೆಗಳ ಭರವಸೆಗಳಿಗೆ ಬಲಿ ಬೀಳುವವರು ವಿವೇಕಹೀನರು ಆಗಿರಲಿಕ್ಕಿಲ್ಲ ಅಲ್ಲವೇ? ಪ್ರಜಾಪ್ರಭುತ್ವದ ತರ್ಕವನ್ನು ಪರಿಣತರಿಗಿಂತ ಹೆಚ್ಚು ಚೆನ್ನಾಗಿ ಇವರು ಅರ್ಥ ಮಾಡಿಕೊಂಡಿರಬಹುದು. ಹಣವು ತಮ್ಮವರೆಗೆ ಇಳಿದು ಬರುವುದರ ಅಸಾಧ್ಯತೆಯ ಅರಿವು ಅವರಿಗೆ ಇರಬಹುದು. ‘ತರ್ಕಬದ್ಧ’ ನೀತಿಯ ಸಹಜ ಕಾರ್ಯನಿರ್ವಹಣೆಯಲ್ಲಿ ತಮ್ಮ ವರೆಗೆ ಏನೂ ಹರಿದು ಬಾರದು ಎಂಬುದರ ಅರಿವೂ ಅವರಿಗೆ ಇರಬಹುದು. ಈಗ, ತಮಗೆ ಎಷ್ಟನ್ನು ದಕ್ಕಿಸಿಕೊಳ್ಳಲು ಸಾಧ್ಯವೋ ಅಷ್ಟನ್ನು ಪಡೆದುಕೊಳ್ಳೋಣ ಎಂಬುದೂ ಆಗಿರಬಹುದು. ಉಚಿತ ಕೊಡುಗೆಗಳು ಮಾತ್ರ ಅವರಿಗೆ ವಾಸ್ತವದಲ್ಲಿ ದೊರೆಯುವ ಲಾಭ. ಹಾಗಾಗಿಯೇ ಅವರು ಉಚಿತ ಕೊಡುಗೆಗಳ ಪರವಾಗಿಯೇ ಇರುತ್ತಾರೆ. ಉಚಿತ ಕೊಡುಗೆಗಳ ಕುರಿತು ಆಕ್ಷೇಪ ಇರುವವರು ಅಮರ್ತ್ಯ ಸೇನ್‌ ಒಮ್ಮೆ ಹೇಳಿರುವಂತೆ ‘ವಿವೇಕವಂತ ಮುಟ್ಠಾಳರೇ’?

ಲೇಖಕ: ಸ್ವರಾಜ್ ಇಂಡಿಯಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT