ಮಂಗಳವಾರ, ಮಾರ್ಚ್ 21, 2023
28 °C

ಸಂಪಾದಕೀಯ: ಅದಾನಿ ಸಮೂಹದ ಮೇಲೆ ಆರೋಪ; ಈ ಪ್ರಶ್ನೆಗಳಿಗೆ ಬೇಕಿದೆ ಉತ್ತರ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಅಮೆರಿಕದ ಹೂಡಿಕೆ ಮತ್ತು ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ ತನ್ನ ವರದಿ ಪ್ರಕಟಿಸಿದ ಬಳಿಕ ಅದಾನಿ ಸಮೂಹದ ಷೇರುಗಳ ಮೌಲ್ಯವು ವಾರಕ್ಕೂ ಹೆಚ್ಚಿನ ಅವಧಿಯಿಂದ ನಿರಂತರವಾಗಿ ಕುಸಿಯುತ್ತಲೇ ಇದೆ. ವಾಸ್ತವಾಂಶಗಳನ್ನು ತಿರುಚಿದೆ ಮತ್ತು ಅಕ್ರಮ ಎಸಗಿದೆ ಎಂದು ಹಿಂಡನ್‌ಬರ್ಗ್‌ ವರದಿಯಲ್ಲಿ ಆರೋಪಿಸಿದ ಬಳಿಕ ಅದಾನಿ ಸಮೂಹದ ಷೇರುಗಳ ಮೌಲ್ಯವು ಸುಮಾರು ₹ 9.5 ಲಕ್ಷ ಕೋಟಿಯಷ್ಟು ಕುಸಿದಿದೆ. ಅದಾನಿ ಸಮೂಹವು ಭಾರಿ ನಿರೀಕ್ಷೆಯೊಂದಿಗೆ ಘೋಷಿಸಿದ್ದ ಎಫ್‌ಪಿಒ, ಮುಗ್ಗರಿಸುತ್ತಾ ಸಾಗಿತು ಮತ್ತು ಕೊನೆಯ ದಿನ ಅದನ್ನು ಮೇಲೆತ್ತುವ ಸಂಶಯಾಸ್ಪದವಾದ ಪ್ರಯತ್ನವೂ ನಡೆಯಿತು. ಆದರೆ, ಹೊಸದಾಗಿ ಬಂಡವಾಳ ಸಂಗ್ರಹಿಸುವ ಎಫ್‌ಪಿಒ ಪ್ರಯತ್ನವನ್ನು ಅದಾನಿ ಸಮೂಹವು ಕೈಬಿಟ್ಟಿತು. ವರದಿಯಲ್ಲಿ ಎತ್ತಲಾದ ಪ್ರಶ್ನೆಗಳಿಗೆ ಅದಾನಿ ಸಮೂಹವು ಉತ್ತರ ನೀಡಲು ಸಾಧ್ಯವಾಗದ್ದು ಈ ಪ್ರಮಾಣದ ಕುಸಿತಕ್ಕೆ ಕಾರಣ. ಹಿಂಡನ್‌ಬರ್ಗ್‌ನ 106 ಪುಟಗಳ ವರದಿಯು ದುರುದ್ದೇಶದಿಂದ ಕೂಡಿದೆ, ಹಳೆಯ ವಿಷಯಗಳನ್ನಷ್ಟೇ ಒಳಗೊಂಡಿದೆ ಮತ್ತು ಆಧಾರರಹಿತವಾಗಿದೆ ಎಂದು ಅದಾನಿ ಸಮೂಹವು ಮೊದಲಿಗೆ ಹೇಳಿತು. ಬಳಿಕ, 400ಕ್ಕೂ ಹೆಚ್ಚು ಪುಟಗಳ ಪ್ರತಿಕ್ರಿಯೆಯನ್ನು ಪ್ರಕಟಿಸಿತು. ಆದರೆ, ಹಿಂಡನ್‌ಬರ್ಗ್‌ ವರದಿಯಲ್ಲಿ ಎತ್ತಲಾಗಿದ್ದ ನಿರ್ದಿಷ್ಟವಾದ 88 ‍ಪ್ರಶ್ನೆಗಳಿಗೆ ಅದಾನಿ ಸಮೂಹದ ಉತ್ತರದಲ್ಲಿ ಯಾವುದೇ ಸ್ಪಷ್ಟನೆ ಇರಲಿಲ್ಲ. ಈ ಇಡೀ ಪ್ರಕರಣವು ಹಲವು ಪ್ರಶ್ನೆಗಳನ್ನು ಎತ್ತಿದೆ ಮತ್ತು ಅದಕ್ಕೆ ಉತ್ತರ ಬೇಕಾಗಿದೆ.

ಅದಾನಿ ಸಮೂಹವು ಎಂಟು ವರ್ಷಗಳಲ್ಲಿ ಸಾಧಿಸಿದ ಅಸಾಧಾರಣ ಬೆಳವಣಿಗೆಯ ಕುರಿತು ನಿಯಂತ್ರಣ ಸಂಸ್ಥೆಗಳಾದ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಯಾವುದೇ ತನಿಖೆಯನ್ನು ನಡೆಸಿಲ್ಲ ಏಕೆ? ಹಿಂಡನ್‌ಬರ್ಗ್‌ ವರದಿಯು ಇಷ್ಟೊಂದು ಪ್ರಶ್ನೆಗಳನ್ನು ಎತ್ತಿದ ಮೇಲೆಯೂ ನಿಯಂತ್ರಣ ಸಂಸ್ಥೆಗಳು ಸುಮ್ಮನಿರುವುದು ಏಕೆ? ವರದಿಯಲ್ಲಿ ನಿರ್ದಿಷ್ಟವಾದ ಆರೋಪಕ್ಕೆ ಗುರಿಯಾಗಿರುವ ಅದಾನಿ ಸಮೂಹದ ಜೊತೆಗೆ ನಂಟು ಹೊಂದಿರುವ ವ್ಯಕ್ತಿಗಳ ಕುರಿತು ಕೂಡ ತನಿಖೆ ನಡೆಸಿಲ್ಲ ಏಕೆ? ಅದಾನಿ ಸಮೂಹದ ಜೊತೆಗೆ ಚೀನಾದ ಪೌರ ಚಾಂಗ್‌ ಚುಂಗ್‌ ಲಿಂಗ್‌ ಹೊಂದಿರುವ ಸಂಬಂಧದ ಕುರಿತು ಕೂಡ ತನಿಖೆ ನಡೆಸಿಲ್ಲ ಏಕೆ? ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅದಾನಿ ಸಮೂಹದ ಕಂಪನಿಗಳು ಮತ್ತು ವ್ಯಕ್ತಿಗಳ ಚಟುವಟಿಕೆಗಳ ಕುರಿತು ಅನುಮಾನ ವ್ಯಕ್ತಪಡಿಸಿತ್ತು ಎಂಬುದು ನಿಜವೇ? ಹೌದಾಗಿದ್ದರೆ ಅದರ ನಂತರ ಯಾವುದೇ ಕ್ರಮ ಜರುಗಿಸಿಲ್ಲ ಏಕೆ? ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರಕ್ಕೆ ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ ಅವರು ನಿಕಟವಾಗಿರುವುದು ಇದಕ್ಕೆ ಕಾರಣವೇ? ನಿಯಂತ್ರಣ ಸಂಸ್ಥೆಗಳಲ್ಲಿ ಕೂಡ ಅದಾನಿ ಸಮೂಹದ ಜೊತೆಗೆ ನಂಟು ಹೊಂದಿರುವವರು ಇದ್ದಾರೆಯೇ?

ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ನಾಯಕರು ಮತ್ತು ಅವರಿಗೆ ಸಂಬಂಧಿಸಿದ ವಹಿವಾಟುಗಳ ಕುರಿತು ಡಿಆರ್‌ಐ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತಹ ಸಂಸ್ಥೆಗಳು ಅತ್ಯಂತ ಕ್ರಿಯಾಶೀಲವಾಗಿವೆ. ಆದರೆ, ಇಷ್ಟೊಂದು ಗಂಭೀರವಾದ ಆರೋಪಗಳು ಇದ್ದರೂ ಅದಾನಿ ಸಮೂಹದ ಕುರಿತಂತೆ ಈ ಸಂಸ್ಥೆಗಳು ಸುಮ್ಮನಿರುವುದು ಏಕೆ? ಸಾವಿರಾರು ಷೆಲ್‌ ಕಂಪನಿಗಳನ್ನು ಸರ್ಕಾರವು ಮುಚ್ಚಿಸಿದೆ. ಆದರೆ, ಅದಾನಿ ಸಮೂಹದ ಜೊತೆಗೆ ನಂಟು ಹೊಂದಿರುವ ಷೆಲ್‌ ಕಂಪನಿಗಳನ್ನು ಸುಮ್ಮನೆ ಬಿಟ್ಟಿರುವುದು ಏಕೆ? ಅದಾನಿ ಸಮೂಹ ಅಥವಾ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಚುನಾವಣಾ ಬಾಂಡ್ ಮೂಲಕ ಎಷ್ಟು ದೇಣಿಗೆ ಬಂದಿದೆ ಎಂಬುದನ್ನು ಬಿಜೆಪಿ ಬಹಿರಂಗಪಡಿಸುತ್ತದೆಯೇ? ಅದಾನಿ ಪ್ರಕರಣದ ಕುರಿತು ಹೇಳಿಕೆ ಕೊಡಲೇಬೇಕಾದ ಸಂದರ್ಭ ಬಂದಾಗ ಸರ್ಕಾರದ ಪ್ರತಿನಿಧಿಗಳು ಸಂಕ್ಷಿಪ್ತವಾದ ಹೇಳಿಕೆಯನ್ನಷ್ಟೇ ಕೊಡುತ್ತಿರುವುದು ಏಕೆ? ಅಲ್ಲಗಳೆಯುವ ರೀತಿಯಲ್ಲಿ ಅಥವಾ ಸಂವೇದನಾರಹಿತವಾಗಿ ಮಾತನಾಡುತ್ತಿರುವುದು ಏಕೆ? ಸಂಸತ್ತಿನಲ್ಲಿ ಚರ್ಚೆ ಮಾಡುವುದಕ್ಕೆ ಸರ್ಕಾರ ಸಿದ್ಧವಿಲ್ಲದಿರುವುದು ಏಕೆ? ಸ್ವತಂತ್ರವಾದ ತನಿಖೆಗೆ ಆದೇಶ ಮಾಡಿಲ್ಲದಿರುವುದು ಏಕೆ? ಅದಾನಿ ಸಮೂಹವನ್ನು ಮಾಧ್ಯಮದ ಒಂದು ವರ್ಗವು ರಕ್ಷಣೆ ಮಾಡಲು ಯತ್ನಿಸುತ್ತಿರುವುದು ಹಾಗೂ ಸಮೂಹದ ಮೇಲಿರುವ ಆರೋಪಗಳ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸುತ್ತಿರುವವರ ವಿರುದ್ಧ ಮಾಡುತ್ತಿರುವ ಟೀಕೆಗಳ ಹಿಂದೆ ಮತ್ತು ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯನ್ನು ನಿಂದಿಸುತ್ತಿರುವುದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ದೇಶದ ವಹಿವಾಟು ವಾತಾವರಣ, ಬಂಡವಾಳ ಮಾರುಕಟ್ಟೆಗಳ ವಿಶ್ವಾಸಾರ್ಹತೆ, ನಿಯಂತ್ರಣ ಮತ್ತು ಆಡಳಿತ ವ್ಯವಸ್ಥೆಗಳ ಆರೋಗ್ಯದ ದೃಷ್ಟಿಯಿಂದ ಮುಖ್ಯವಲ್ಲವೇ? ಅದೂ ಅಲ್ಲದೆ ವ್ಯಾಪಾರ ವ್ಯವಸ್ಥೆಯ ಒಟ್ಟು ವರ್ಚಸ್ಸಿನ ದೃಷ್ಟಿಯಿಂದಲೂ ಇದು ಮಹತ್ವದ್ದಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು