ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಅಮೆರಿಕದ ಎಸ್‌ವಿಬಿ ದಿವಾಳಿ; ಎಲ್ಲರಿಗೂ ಇವೆ ಪಾಠಗಳು

Last Updated 14 ಮಾರ್ಚ್ 2023, 21:50 IST
ಅಕ್ಷರ ಗಾತ್ರ

ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್‌ವಿಬಿ) ದಿವಾಳಿ ಆಗಿರುವುದು ಹಣಕಾಸು ಜಗತ್ತಿನಲ್ಲಿ ಕಂಪನ ಸೃಷ್ಟಿಸಿದೆ. ಇದು ದೊಡ್ಡದಾದ ಬಿಕ್ಕಟ್ಟೊಂದರ ಆರಂಭಿಕ ಸೂಚನೆಯೇ ಎಂಬ ಆತಂಕವನ್ನು ಮೂಡಿಸಿದೆ. ಎಸ್‌ವಿಬಿ ದಿವಾಳಿ ಆಗಿರುವುದನ್ನು 2008ರ ಜಾಗತಿಕ ಬಿಕ್ಕಟ್ಟಿನ ಜೊತೆ ಹೋಲಿಕೆ ಮಾಡಲಾಗುತ್ತಿದೆ. ಈ ಹೋಲಿಕೆಯ ಜೊತೆಯಲ್ಲಿಯೇ, 2008ರಲ್ಲಿ ಆಗಿದ್ದಕ್ಕೂ ಈಗ ಆಗುತ್ತಿರುವುದಕ್ಕೂ ಬಹಳ ವ್ಯತ್ಯಾಸ ಇದೆ, ಹೋಲಿಕೆಯೇ ಉತ್ಪ್ರೇಕ್ಷೆಗಳಿಂದ ಕೂಡಿದೆ ಎಂದೂ ಹೇಳಲಾಗಿದೆ.

2008ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ರಾಚನಿಕ ಸಮಸ್ಯೆಗಳು ಇನ್ನಷ್ಟು ಆಳವಾಗಿದ್ದವು, ಆಗ ಲೆಹ್ಮನ್ ಬ್ರದರ್ಸ್‌ ಹಣಕಾಸು ಸೇವಾ ಕಂಪನಿ ದಿವಾಳಿ ಆಗಿದ್ದಕ್ಕೆ ಕಾರಣಗಳು ಬೇರೆ ಇದ್ದವು. ಈಗ ಎಸ್‌ವಿಬಿ ದಿವಾಳಿ ಆದ ನಂತರದಲ್ಲಿ ಮೂಡಿರುವ ಆತಂಕವು ಒಂದಿಷ್ಟು ಎಚ್ಚರಿಕೆಯನ್ನು ಮೂಡಿಸಿದೆ. ಎಸ್‌ವಿಬಿ, ಅಮೆರಿಕದ ಹದಿನಾರನೇ ಅತಿದೊಡ್ಡ ಬ್ಯಾಂಕ್ ಆಗಿತ್ತು. ಇದರ ಆಸ್ತಿಗಳ ಒಟ್ಟು ಮೌಲ್ಯವು ಸರಿಸುಮಾರು 209 ಬಿಲಿಯನ್ ಡಾಲರ್ ಆಗಿತ್ತು (ಅಂದಾಜು ₹ 17.21 ಲಕ್ಷ ಕೋಟಿ). ಇದರ ಬಹುಪಾಲು ಗ್ರಾಹಕರು ತಂತ್ರಜ್ಞಾನ ವಲಯದವರು. ಈ ಬ್ಯಾಂಕ್‌ ನವೋದ್ಯಮಗಳಿಗೆ ಹೆಚ್ಚಿನ ಸೇವೆ ಒದಗಿಸುತ್ತಿತ್ತು. ಎಸ್‌ವಿಬಿ ದಿವಾಳಿಗೆ ಕೆಲವು ದಿನ ಮೊದಲು ಸಿಲ್ವರ್‌ಗೇಟ್ ಕ್ಯಾಪಿಟಲ್ ಎಂಬ ಇನ್ನೊಂದು ಬ್ಯಾಂಕ್ ಕೂಡ ದಿವಾಳಿ ಆಗಿದೆ. ಎಸ್‌ವಿಬಿ ದಿವಾಳಿ ನಂತರದಲ್ಲಿ ಅಮೆರಿಕದ ಕಾನೂನು ಜಾರಿ ಸಂಸ್ಥೆಗಳು ನ್ಯೂಯಾರ್ಕ್‌ನ ಸಿಗ್ನೇಚರ್ ಬ್ಯಾಂಕ್‌ ಬಾಗಿಲು ಮುಚ್ಚಿಸಿವೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ಬ್ಯಾಂಕ್‌ ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸುವ ಉದ್ದೇಶದಿಂದ ಬಡ್ಡಿ ದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಫೆಡರಲ್ ಬ್ಯಾಂಕ್‌ ತೆಗೆದುಕೊಂಡ ಬಿಗಿ ಹಣಕಾಸಿನ ನಿಲುವು ಎಸ್‌ವಿಬಿ ದಿವಾಳಿಗೆ ಒಂದು ಮುಖ್ಯ ಕಾರಣ. ಒಂದು ವರ್ಷದಲ್ಲಿ ಅಲ್ಲಿ ಎಂಟು ಬಾರಿ ಬಡ್ಡಿ ದರ ಹೆಚ್ಚಿಸಲಾಗಿದೆ. ನವೋದ್ಯಮಗಳಿಗೆ ಹಣಕಾಸಿನ ನೆರವು ಒದಗಿಸುವಲ್ಲಿ ಹೆಚ್ಚಿನ ಪರಿಣತಿ ಸಾಧಿಸಿದ್ದ ಎಸ್‌ವಿಬಿಯ ಬಾಂಡ್‌ ಮೌಲ್ಯವು, ಬದಲಾದ ಹಣಕಾಸಿನ ನೀತಿಯ ಪರಿಸ್ಥಿತಿಯಲ್ಲಿ ತಗ್ಗಲು ಆರಂಭಿಸಿತು. ಬಂಡವಾಳಕ್ಕಾಗಿ ಬ್ಯಾಂಕ್‌ ಷೇರುಗಳನ್ನು ಮಾರಾಟ ಮಾಡಲು ಆರಂಭಿಸಿದಾಗ, ಈ ಬ್ಯಾಂಕ್‌ ಮುಳುಗುತ್ತದೆ ಎಂಬ ಭೀತಿಯಲ್ಲಿ ಠೇವಣಿದಾರರು ತಾವು ಇರಿಸಿದ್ದ ಹಣವನ್ನು ಹಿಂಪಡೆಯಲು ಆರಂಭಿಸಿದರು. ತಂತ್ರಜ್ಞಾನ ವಲಯದ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಭೀತಿ ಹರಡಿದ್ದೂ ಠೇವಣಿದಾರರು ಹೀಗೆ ಮಾಡಿದ್ದಕ್ಕೆ ಒಂದು ಕಾರಣ. ಬ್ಯಾಂಕ್‌ ಬಾಗಿಲು ಮುಚ್ಚದೆ ಬೇರೆ ದಾರಿ ಉಳಿದಿರಲಿಲ್ಲ. ಆದರೆ, ಈಗ ಹಣಕಾಸು ವ್ಯವಸ್ಥೆಗೆ ನಷ್ಟ ಆಗುವುದನ್ನು ತಡೆಯಲು ಅಮೆರಿಕದ ಅಧಿಕಾರಿಗಳು ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ, ಬ್ಯಾಂಕಿಂಗ್ ವ್ಯವಸ್ಥೆಗೆ ಅಪಾಯ ಇಲ್ಲ ಎಂಬ ಭರವಸೆ ನೀಡಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕೂಡ ಇದೇ ಭರವಸೆ ನೀಡಿದ್ದಾರೆ. ಠೇವಣಿದಾರರಿಗೆ ಹಣವು ಸೋಮವಾರದಿಂದ ಮತ್ತೆ ಸಿಗಲಿದೆ ಎಂದು ಅಮೆರಿಕದ ಸರ್ಕಾರ ಹೇಳಿದೆ.

ಬೇರೆ ಬ್ಯಾಂಕ್‌ಗಳ ಜೊತೆ ಅಥವಾ ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆ ಎಸ್‌ವಿಬಿ ನಂಟು ಹೊಂದಿರಲಿಲ್ಲ. ಹೀಗಾಗಿ, ಈ ಬ್ಯಾಂಕ್‌ ದಿವಾಳಿ ಎದ್ದಿರುವುದು ಬೇರೆ ಬ್ಯಾಂಕ್‌ಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿಕ್ಕಿಲ್ಲ. ಹೀಗಿದ್ದರೂ ಒಂದಿಷ್ಟು ಸಮಸ್ಯೆಗಳು ಎದುರಾಗುವುದು ಖಚಿತ. ಎಸ್‌ವಿಬಿಯಲ್ಲಿ ಹಣ ಇರಿಸಿದ್ದ ನವೋದ್ಯಮಗಳಿಗೆ ಒಂದಿಷ್ಟು ತೊಡಕುಗಳು ಎದುರಾಗಬಹುದು. ಭಾರತದ ಕೆಲವು ನವೋದ್ಯಮಗಳು ಕೂಡ ಅಲ್ಲಿ ಹಣ ಇರಿಸಿದ್ದವು ಎಂಬ ವರದಿಗಳು ಇವೆ. ಎಸ್‌ವಿಬಿ ದಿವಾಳಿಯು ಒಂದಿಷ್ಟು ಪಾಠಗಳನ್ನು ಹೇಳುತ್ತಿದೆ. ಈ ಬ್ಯಾಂಕ್‌ ತನ್ನ ವಹಿವಾಟುಗಳನ್ನು ಉದ್ಯಮದ ಒಂದು ವಲಯದ ಮೇಲೆ ಹೆಚ್ಚು ಕೇಂದ್ರೀಕರಿಸಿತ್ತು. ವಹಿವಾಟುಗಳನ್ನು ವಿವಿಧ ವಲಯಗಳಿಗೆ ವಿಸ್ತರಿಸಿ ರಲಿಲ್ಲ. ಬಾಂಡ್‌ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದ ಆಗುವ ಅಪಾಯವನ್ನು ಎದುರಿಸಲು ಸೂಕ್ತ ಸಿದ್ಧತೆ ಮಾಡಿಕೊಂಡಿರಲಿಲ್ಲ. ಎಸ್‌ವಿಬಿ ವಿಚಾರವಾಗಿ ಜನವರಿಯಲ್ಲಿ ಬಂದಿದ್ದ ಕೆಲವು ಎಚ್ಚರಿಕೆಯ ಸಂದೇಶಗಳನ್ನು ಶಾಸನಬದ್ಧ ನಿಯಂತ್ರಣ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬ್ಯಾಂಕ್‌ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳು ಆಡಳಿತದಲ್ಲಿ ಅತ್ಯುತ್ತಮ ಮಟ್ಟವನ್ನು ಕಾಯ್ದುಕೊಳ್ಳುವಂತೆ ಶಾಸನ ಬದ್ಧ ನಿಯಂತ್ರಣ ಸಂಸ್ಥೆಗಳು ನಿರಂತರವಾಗಿ ನಿಗಾ ಇರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT