ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ‘ನಿಧಿ’ ಬಳಕೆಯಲ್ಲಿ ಶಾಸಕರ ನಿರಾಸಕ್ತಿ ಸಮರ್ಥನೀಯವಲ್ಲ

Published 2 ಜೂನ್ 2024, 23:34 IST
Last Updated 2 ಜೂನ್ 2024, 23:34 IST
ಅಕ್ಷರ ಗಾತ್ರ

ಅಭಿವೃದ್ಧಿ ಕಾಮಗಾರಿಗಳು ಮತ್ತು ಸೇವೆಗಳ ವಿಚಾರದಲ್ಲಿ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಶಾಸಕರಿಗೆ ಅನುಕೂಲವಾಗುವಂತೆ 2001-02ರಿಂದ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ (ಕೆಎಲ್‌ಲ್ಯಾಡ್ಸ್‌) ಯೋಜನೆಯನ್ನು ಅನುಷ್ಠಾನಕ್ಕೆ ತರಲಾಯಿತು. ಪ್ರತಿ ವರ್ಷವೂ ಈ ನಿಧಿಯಡಿ ಮಂಜೂರಾಗುವ ಅನುದಾನವನ್ನು ಬಳಸಿಕೊಂಡು ತಮ್ಮ ಆಯ್ಕೆಯ ಸಾರ್ವಜನಿಕ ಕಾಮಗಾರಿಗಳನ್ನು
ಕೈಗೊಳ್ಳುವುದು ಮತ್ತು ಆ ಕ್ಷೇತ್ರದ ಜನರಿಗೆ ಸೇವೆಗಳನ್ನು ಒದಗಿಸುವುದಕ್ಕೆ ಅವಕಾಶವಿದೆ. ಆರಂಭದಲ್ಲಿ ಈ ಯೋಜನೆಯಡಿ ಪ್ರತಿ ಶಾಸಕರಿಗೆ ವರ್ಷಕ್ಕೆ ₹ 25 ಲಕ್ಷ ಅನುದಾನ ಒದಗಿಸಲಾಗುತ್ತಿತ್ತು. 2006-07ರಲ್ಲಿ ಅನುದಾನವನ್ನು ₹ 1 ಕೋಟಿಗೆ ಹೆಚ್ಚಿಸಲಾಯಿತು. 2013-14ರಿಂದ ಪ್ರತಿ ಶಾಸಕರಿಗೆ ವಾರ್ಷಿಕ
₹ 2 ಕೋಟಿ ಅನುದಾನ ನೀಡಲಾಗುತ್ತಿದೆ. ವಿಧಾನಸಭೆಯ 224 ಮತ್ತು ವಿಧಾನ ಪರಿಷತ್‌ನ 75 ಸದಸ್ಯರಿಗೆ ಕೆಎಲ್‌ಲ್ಯಾಡ್ಸ್‌ ಅಡಿಯಲ್ಲಿ ಅನುದಾನ ದೊರಕುತ್ತಿದೆ. ತಮ್ಮ ಕ್ಷೇತ್ರಕ್ಕೆ ದೊರಕುವ ಅನುದಾನದ ಪ್ರಮಾಣ ಸಾಲದು ಎಂದು ಅವಕಾಶ ಸಿಕ್ಕಾಗಲೆಲ್ಲ ಸರ್ಕಾರದ ವಿರುದ್ಧ ಹರಿಹಾಯುವ ಶಾಸಕರು, ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ದೊರಕುವ ಅನುದಾನವನ್ನು ಕಾಲಮಿತಿಯೊಳಗೆ ಬಳಕೆ ಮಾಡುತ್ತಿಲ್ಲ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಬಹಿರಂಗವಾಗಿದೆ. 2023-24ನೇ ಆರ್ಥಿಕ ವರ್ಷದಲ್ಲಿ ರಾಜ್ಯದ ಶಾಸಕರಿಗೆ ಕೆಎಲ್‌ಲ್ಯಾಡ್ಸ್‌ ಅಡಿಯಲ್ಲಿ ಹಿಂದಿನ ವರ್ಷಗಳ ಬಾಕಿಯೂ ಸೇರಿದಂತೆ ಲಭ್ಯವಿದ್ದ ₹ 1,256 ಕೋಟಿ ಅನುದಾನದಲ್ಲಿ ಬರೀ ₹ 218 ಕೋಟಿ ವೆಚ್ಚ ಮಾಡಲಾಗಿದೆ ಎಂಬುದು ಶಾಸಕರ ನಿರಾಸಕ್ತಿಗೆ ಕನ್ನಡಿ ಹಿಡಿದಿದೆ. ₹ 1,038 ಕೋಟಿಯಷ್ಟು ಅನುದಾನ ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ (ಪಿ.ಡಿ) ಖಾತೆಗಳಲ್ಲಿ ವರ್ಷದಿಂದ ಬಾಕಿ ಉಳಿದಿದೆ.

ಕುಡಿಯುವ ನೀರು ಪೂರೈಕೆ, ರಸ್ತೆಗಳ ನಿರ್ಮಾಣ, ಶಾಲಾ, ಕಾಲೇಜುಗಳ ಕಟ್ಟಡ, ಶೌಚಾಲಯ ನಿರ್ಮಾಣ, ವಿದ್ಯಾರ್ಥಿ ನಿಲಯಗಳು, ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಹೊಸ ಕೊಠಡಿಗಳ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಕೃತಕ ಕಾಲು ಜೋಡಣೆ ಸೇರಿದಂತೆ ಅನೇಕ ಜನಸ್ನೇಹಿ ಕಾಮಗಾರಿಗಳು, ಕೆಲಸಗಳನ್ನು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ಕೈಗೆತ್ತಿಕೊಳ್ಳಲು ಅವಕಾಶವಿದೆ. ಈ ನಿಧಿಯಡಿ ಒದಗಿಸುವ ಅನುದಾನದ ಮೊತ್ತವನ್ನು ಹೆಚ್ಚಿಸುವಂತೆ ಪ್ರತಿ ಬಾರಿಯೂ ವಿಧಾನಮಂಡಲದ ಅಧಿವೇಶನದಲ್ಲಿ ಬೇಡಿಕೆ ಇಡುವ ಶಾಸಕರು, ಲಭ್ಯವಿರುವ ಅನುದಾನದ ಬಳಕೆಗೆ ಆಸಕ್ತಿ ತೋರದಿರುವುದು ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ದ್ರೋಹ ಬಗೆದಂತೆ. ಈ ನಿಧಿಯಡಿ ಕೈಗೆತ್ತಿಕೊಂಡ 31,236 ಕಾಮಗಾರಿಗಳು ಹಲವು ವರ್ಷಗಳಿಂದಲೂ ಪೂರ್ಣಗೊಂಡಿಲ್ಲ. ಶಾಸಕರು ತಮ್ಮ ಆಯ್ಕೆಯ ಕಾಮಗಾರಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ, ಅನುಮೋದನೆ ಪಡೆಯಬೇಕಾಗುತ್ತದೆ. ಕೆಳಹಂತದ ಅಧಿಕಾರಿಗಳು ಕ್ರಿಯಾ ಯೋಜನೆ ಮತ್ತು ಕಾಮಗಾರಿಗಳ ಪಟ್ಟಿ ಅನುಮೋದನೆ, ಮುಂಗಡ ಅನುದಾನ ಬಿಡುಗಡೆಯಲ್ಲಿ ವಿಳಂಬ ಮಾಡುತ್ತಿರುವುದು, ಕಾಮಗಾರಿಗಳ ಆರಂಭಕ್ಕೆ ನಿರಾಸಕ್ತಿ ಮತ್ತು ಪೂರ್ಣಗೊಂಡ ಕಾಮಗಾರಿಗಳ ಗುತ್ತಿಗೆದಾರರಿಗೆ ಬಿಲ್‌ ಪಾವತಿಸದೇ ಇರುವುದು ಕೆಎಲ್‌ಲ್ಯಾಡ್ಸ್‌ ಅನುದಾನ ಬಳಕೆಯಲ್ಲಿ ಪ್ರಗತಿ ಕ್ಷೀಣಿಸಲು ಕಾರಣ ಎಂಬ ದೂರುಗಳಿವೆ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬಳಕೆಗೆ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಲಾಗದು. ಆದರೆ, ವಿಧಾನಮಂಡಲದ ಸದಸ್ಯತ್ವದ ಕಾರಣಕ್ಕಾಗಿ ಶಾಸನಬದ್ಧವಾಗಿ ತಮಗೆ ವಾರ್ಷಿಕವಾಗಿ ಲಭಿಸುತ್ತಿರುವ ₹ 2 ಕೋಟಿ ಅನುದಾನವನ್ನು ಅತ್ಯಂತ
ಜವಾಬ್ದಾರಿಯುತವಾಗಿ ಬಳಸುವ ಮೂಲಕ ತೆರಿಗೆ ಹಣದ ಸದ್ಬಳಕೆಯ ಮಾದರಿಯೊಂದನ್ನು ರೂಪಿಸಬೇಕಾದ ಹೊಣೆಗಾರಿಕೆ ಶಾಸಕರ ಮೇಲಿದೆ. ಆದರೆ, ಕಾಮಗಾರಿಗಳ ಪಟ್ಟಿಯನ್ನೂ ಸಲ್ಲಿಸದೆ
₹ 1,038 ಕೋಟಿಯಷ್ಟು ಅಧಿಕ ಮೊತ್ತದ ಅನುದಾನ ನಿರುಪಯುಕ್ತವಾಗಿ ಉಳಿಯುವಂತೆ ಮಾಡಿರುವುದು ಶಾಸಕರ ಬೇಜವಾಬ್ದಾರಿಯುತ ನಡವಳಿಕೆಗೆ ಸಾಕ್ಷಿ. ತಮ್ಮ ಕ್ಷೇತ್ರಕ್ಕೆ ಬೃಹತ್‌ ಮೊತ್ತದ ಅನುದಾನ ಲಭಿಸಿಲ್ಲ ಎಂದು ಆರೋಪ ಮಾಡುವ, ಈ ಸಂಬಂಧ ವಿಧಾನಮಂಡಲದಲ್ಲಿ ಗದ್ದಲ ಎಬ್ಬಿಸುವ ಶಾಸಕರು ಕೆಎಲ್‌ಲ್ಯಾಡ್ಸ್‌ ಅನುದಾನ ಬಳಕೆಗೆ ನಿರಾಸಕ್ತಿ ತೋರುತ್ತಿರುವುದರ ಹಿಂದಿನ ಗುಟ್ಟು ಬಯಲಾಗಬೇಕಿದೆ. ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡದ ಶಾಸಕರಿಗೆ ದೊಡ್ಡ ಮೊತ್ತದ ಅನುದಾನಕ್ಕೆ ಬೇಡಿಕೆ ಇಡುವ ನೈತಿಕತೆ ಇರಲು ಹೇಗೆ ಸಾಧ್ಯ? ಕಾಲುಸಂಕಗಳಿಲ್ಲದೇ ಹಳ್ಳಿಗರು ಪ್ರವಾಹದಲ್ಲಿ ಕೊಚ್ಚಿ ಹೋಗುವುದು, ಕುಡಿಯುವ ನೀರಿಗೆ ಹಾಹಾಕಾರ, ಶಾಲೆ, ಕಾಲೇಜು, ಆಸ್ಪತ್ರೆ, ಅಂಗನವಾಡಿಗಳಲ್ಲಿನ ಕೊಠಡಿಗಳ ಕೊರತೆಯಂತಹ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಅನುದಾನ ಒದಗಿಸಲು ಸರ್ಕಾರ ಹೆಣಗಾಡುತ್ತಿದೆ. ಅಂತಹ ಜನೋಪಯೋಗಿ ಕೆಲಸಗಳಿಗೆ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನೇ ಪೂರ್ಣ ಪ್ರಮಾಣದಲ್ಲಿ ಬಳಸುವ ವಿವೇಚನೆಯನ್ನು ಶಾಸಕರು ತೋರಬೇಕಿದೆ. ಕೆಎಲ್‌ಲ್ಯಾಡ್ಸ್‌ ಅನುದಾನ ಬಳಕೆಗೆ ಇದೇ ರೀತಿ ನಿರಾಸಕ್ತಿ ಮುಂದುವರಿದರೆ ಈ ಯೋಜನೆಯನ್ನೇ ರದ್ದುಗೊಳಿಸಿ, ಪೂರ್ಣ ಮೊತ್ತದ ಅನುದಾನವನ್ನು ಜನೋಪಯೋಗಿ ಕಾರ್ಯಗಳಿಗೆ ಬಳಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳುವ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT