ಮಂಗಳವಾರ, ಡಿಸೆಂಬರ್ 7, 2021
23 °C

ಸಂಪಾದಕೀಯ: ಬ್ರಾಹ್ಮಣೇತರ ಅರ್ಚಕರ ನೇಮಕ; ಕರ್ನಾಟಕದಲ್ಲೂ ಜಾರಿಗೆ ಬರಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ತಮಿಳುನಾಡಿನಲ್ಲಿ ಸರ್ಕಾರದ ನಿರ್ವಹಣೆಯಲ್ಲಿರುವ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸಿರುವ ಡಿಎಂಕೆ ನೇತೃತ್ವದ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಸಾಮಾಜಿಕ ನ್ಯಾಯದ ಚಿಂತನೆ ಯನ್ನು ಕಾರ್ಯರೂಪಕ್ಕೆ ತರುವ ದಿಸೆಯಲ್ಲಿ ಪ್ರಮುಖ ಹೆಜ್ಜೆಯಾದ, ಪೂಜಾಸ್ಥಳಗಳಲ್ಲಿ ಬಹುತ್ವದ ಚೆಲುವನ್ನು ಸಾಕಾರಗೊಳಿಸುವ ಪ್ರಗತಿಪರ ಮಾದರಿಯನ್ನು ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳೂ ಅನುಸರಿಸಬೇಕಾಗಿದೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಇಪ್ಪತ್ತನಾಲ್ಕು ಬ್ರಾಹ್ಮಣೇತರರನ್ನು ಅರ್ಚಕರಾಗಿ ಹಾಗೂ ಒಬ್ಬ ಮಹಿಳೆಯನ್ನು ‘ಓದುವರ್‌’ (ಪವಿತ್ರ ಮಂತ್ರಗಳನ್ನು ಪಠಿಸುವವರು) ಸ್ಥಾನಕ್ಕೆ ನಿಯೋಜಿಸಿರುವ ನೇಮಕಾತಿ ಪತ್ರಗಳನ್ನು ಇತ್ತೀಚೆಗೆ ವಿತರಿಸಿದ್ದಾರೆ. ನಿಯೋಜಿತ ದೇಗುಲ ಗಳಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿರುವ ಹೊಸ ಅರ್ಚಕರನ್ನು ಪರಿಶಿಷ್ಟ ಸಮುದಾಯ ಸೇರಿದಂತೆ ವಿವಿಧ ಹಿಂದುಳಿದ ವರ್ಗಗಳಿಂದ ಆಯ್ಕೆ ಮಾಡಲಾಗಿದೆ. ಪೂಜಾ ಕಾರ್ಯಗಳನ್ನು ನೆರವೇರಿಸುವುದಕ್ಕೆ ಅನರ್ಹರೆಂದು ಭಾವಿಸಲಾಗಿದ್ದ ವರ್ಗದ ಜನರನ್ನು ಅರ್ಚಕರನ್ನಾಗಿ ನೇಮಿಸುವ ಸರ್ಕಾರದ ಪ್ರಯತ್ನ ಸಾಂಪ್ರದಾಯಿಕ ಸಮಾಜದಲ್ಲಿ ಸಮಾನತೆಯ ಹೊಸನೀರಿನ ಹರಿವಿಗೆ ಅವಕಾಶ ಕಲ್ಪಿಸುತ್ತದೆ.

ಬ್ರಾಹ್ಮಣೇತರರನ್ನು ದೇಗುಲಗಳಲ್ಲಿ ಅರ್ಚಕರನ್ನಾಗಿ ನೇಮಿಸುವ ಚಿಂತನೆ ಹೊಸತಲ್ಲವಾದರೂ, ಆ ಯೋಚನೆ ದೊಡ್ಡ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿರುವುದು ಇದೇ ಮೊದಲು. ವಿವಿಧ ಸಮುದಾಯಗಳಿಗೆ ಸೇರಿದವರನ್ನು ಅರ್ಚಕ ಸ್ಥಾನಕ್ಕೆ ಸಜ್ಜುಗೊಳಿಸಲು ಅಗತ್ಯವಿರುವ ತರಬೇತಿ ಯನ್ನು ನೀಡಲು ಕರುಣಾನಿಧಿ ನೇತೃತ್ವದ ಸರ್ಕಾರ 2006ರಲ್ಲಿ ನಿರ್ಧರಿಸಿತ್ತು. ಆ ನಿರ್ಧಾರದ ಅನ್ವಯ 2007ರಿಂದಲೇ ಬ್ರಾಹ್ಮಣೇತರರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಅರ್ಚಕ ತರಬೇತಿ ನೀಡಲಾಗುತ್ತಿದೆ. ಆದರೆ, ಕಾನೂನು ತೊಡಕುಗಳಿಂದಾಗಿ ಇದುವರೆಗೆ ನೇಮಕಾತಿಗಳು ಸಾಧ್ಯವಾಗಿರಲಿಲ್ಲ. ಬ್ರಾಹ್ಮಣೇತರರನ್ನು ಅರ್ಚಕರನ್ನಾಗಿ ನೇಮಿಸುವ ನಿರ್ಧಾರವನ್ನು 2015ರಲ್ಲಿ ಸುಪ್ರೀಂ ಕೋರ್ಟ್‌ ಎತ್ತಿಹಿಡಿದ ನಂತರ, ಒಬ್ಬಿಬ್ಬರನ್ನು ಅರ್ಚಕರನ್ನಾಗಿ ನೇಮಿಸಲಾಗಿತ್ತಷ್ಟೇ. ಸಾಮಾಜಿಕ ನ್ಯಾಯದ ಆ ಸಾಂಕೇತಿಕ ಕ್ರಮವನ್ನು ಮೀರಿ ಬ್ರಾಹ್ಮಣೇತರ ಅರ್ಚಕರ ನೇಮಕವನ್ನು ದೊಡ್ಡ ಪ್ರಮಾಣದಲ್ಲಿ ನಡೆಸುವ ಮೂಲಕ, ಪ್ರಗತಿಪರ ಆಂದೋಲನವೊಂದಕ್ಕೆ ತಮಿಳುನಾಡು ಸರ್ಕಾರ ಚಾಲನೆ ನೀಡಿದೆ.

ಎಲ್ಲ ಸಮುದಾಯಗಳನ್ನು ಸಮಾನವಾಗಿ ಭಾವಿಸುವ ಹಾಗೂ ಎಲ್ಲರಿಗೂ ಸಮಾನ ಸಾಮಾಜಿಕ ಅವಕಾಶಗಳನ್ನು ಕಲ್ಪಿಸುವ ದಿಸೆಯಲ್ಲಿ ತಮಿಳುನಾಡು ಸರ್ಕಾರದ ನೇಮಕಗಳಿಗೆ ವಿಶೇಷ ಮಹತ್ವವಿದೆ. ಕಳೆದ ಶತಮಾನದಲ್ಲಿ ನಡೆದ ಸಾಮಾಜಿಕ ನ್ಯಾಯದ ಆಂದೋಲನವು ಎಲ್ಲ ವರ್ಗದವರಿಗೆ ಅರ್ಚಕ ಹುದ್ದೆಯ ಹಕ್ಕುಗಳನ್ನು ದೊರಕಿಸಿಕೊಡಲು ಒತ್ತಾಯಿಸಿತ್ತು. ಹಿಂದುಳಿದ ಸಮುದಾಯಗಳಿಗೆ ಹಾಗೂ ದಲಿತರಿಗೆ ದೇವರನ್ನು ಮುಖ್ಯವಾಹಿನಿಯೊಂದಿಗೆ ಬೆರೆತು ಪೂಜಿಸುವ ಅವಕಾಶವಿರಲಿ, ಕೆಲವು ದೇಗುಲಗಳಲ್ಲಿ ಪ್ರವೇಶವನ್ನೇ ನಿರ್ಬಂಧಿಸಲಾಗಿತ್ತು. ಜಾತಿ ಹಾಗೂ ಸಮುದಾಯಗಳ ಚೌಕಟ್ಟನ್ನು ಹೊರತುಪಡಿಸಿ ಸಮಾಜದ ಎಲ್ಲ ವರ್ಗದವರಿಗೂ ದೇವರನ್ನು ದೇಗುಲಗಳಲ್ಲಿ ಆರಾಧಿಸುವ ಹಾಗೂ ದೇವಸ್ಥಾನಗಳಲ್ಲಿ ಅರ್ಚಕ ಸ್ಥಾನವನ್ನು ನಿರ್ವಹಿಸುವ ಅವಕಾಶವನ್ನು ಕೊಡಬೇಕೆನ್ನುವ ಒತ್ತಾಯ ಪ್ರಗತಿಪರ ವರ್ಗಗಳಿಂದ ಕೇಳಿಬರುತ್ತಲೇ ಇದೆ. ಅರ್ಚಕ ಸ್ಥಾನವು ನಿರ್ದಿಷ್ಟ ಸಮುದಾಯಗಳಿಗೆ ಮಾತ್ರ ಮೀಸಲೆನ್ನುವುದಕ್ಕೆ ಯಾವ ಸಮರ್ಪಕ ಕಾರಣವೂ ಇಲ್ಲ.

ಪೌರೋಹಿತ್ಯವನ್ನು ಯಾವುದೇ ಸಮುದಾಯಕ್ಕೆ ಸೀಮಿತಗೊಳಿಸುವುದು ತರವಲ್ಲ. ಪೌರೋಹಿತ್ಯ ನಿರ್ವಹಣೆಗೆ ಬೇಕಾದ ಆಸಕ್ತಿ ಮತ್ತು ಕೌಶಲವನ್ನು ಹೊಂದಿರುವ ಯಾರು ಬೇಕಾದರೂ ಅರ್ಚಕ ಹುದ್ದೆಯನ್ನು ನಿರ್ವಹಿಸುವ ಅವಕಾಶ ಪಡೆಯುವುದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶ ಇರಬೇಕು. 

ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವ ಪ್ರಯತ್ನಗಳಿಗೆ ಸಾಂಪ್ರದಾಯಿಕ ಸಮಾಜದಲ್ಲಿ ವಿರೋಧ ಎದುರಾಗಬಹುದು. ಕಾನೂನು ಹೋರಾಟ ನಡೆಸಬೇಕಾದ ಅನಿವಾರ್ಯವೂ ಎದುರಾಗ ಬಹುದು. ಇಂತಹ ಅಡೆತಡೆಗಳನ್ನು ತಮಿಳುನಾಡು ಸರ್ಕಾರ ಸಮರ್ಥವಾಗಿ ಎದುರಿಸಿದ್ದು, ಪೂರ್ವಗ್ರಹಪೀಡಿತ ಪ್ರತಿರೋಧಗಳಿಗೆ ಜಗ್ಗದೆ ತನ್ನ ನಿರ್ಧಾರಕ್ಕೆ ಬದ್ಧವಾಗಿ ಉಳಿದಿದೆ. ಸಮಾಜದ ಕೆಲವು ವರ್ಗಗಳು ಹೊಂದಿರುವ ಪೂರ್ವಗ್ರಹ ಹಾಗೂ ಪ್ರತಿರೋಧ ಕಾಲಕ್ರಮೇಣ ಕಡಿಮೆಯಾಗುತ್ತದೆ. ಪ್ರಗತಿಪರ ಯೋಜನೆಗಳು ಒಮ್ಮಿಂದೊಮ್ಮೆಗೇ ಸಮಾಜದ ಒಪ್ಪಿಗೆ ಪಡೆಯುತ್ತವೆಂದೂ ನಿರೀಕ್ಷಿಸಲಾಗದು. ಕೇರಳ ಸರ್ಕಾರವು 2017ರಲ್ಲಿ 36 ಬ್ರಾಹ್ಮಣೇತರರನ್ನು ದೇಗುಲಗಳಲ್ಲಿ ಅರ್ಚಕರನ್ನಾಗಿ ನೇಮಿಸಿತ್ತು. ನೆರೆಯ ರಾಜ್ಯಗಳ ಪ್ರಗತಿಪರ ನಡವಳಿಕೆಗಳು ಕರ್ನಾಟಕ ಸರ್ಕಾರಕ್ಕೆ ಪ್ರೇರಣೆಯಾಗಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ, ಮುಜರಾಯಿ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸುವುದಾಗಿ ಹೇಳಿದ್ದರು. ಚಿಂತನೆಯ ರೂಪದಲ್ಲಿ ಉಳಿದಿರುವ ಆ ಮಾತನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು.

ಅರ್ಚಕ ವೃತ್ತಿಯನ್ನು ಬ್ರಾಹ್ಮಣರಿಗೆ ಮಾತ್ರ ಸೀಮಿತಗೊಳಿಸಿ ಕಾನೂನು ರೂಪಿಸಬೇಕೆಂದು ಉಡುಪಿ ಪೇಜಾವರ ಮಠದ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿರುವುದಾಗಿ ವರದಿಯಾಗಿದೆ. ಯಾವುದೇ ಒಂದು ವೃತ್ತಿ ಯನ್ನು ನಿರ್ದಿಷ್ಟ ಸಮುದಾಯಕ್ಕೆ ಮೀಸಲಿಡುವುದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಜಾತಿ ಮನೋಭಾವವನ್ನು ಬಲಪಡಿಸುವ ಪ್ರಯತ್ನಗಳಿಂದ ಸರ್ಕಾರ ದೂರವಿರಬೇಕು. ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಾಧನೆಯ ನಿಟ್ಟಿನಲ್ಲಿ ಒದಗಿಬರುವ ಸಣ್ಣ ಅವಕಾಶವನ್ನೂ ಸರ್ಕಾರ ಬಿಟ್ಟುಕೊಡ ಬಾರದು. ರಾಜ್ಯದ ಕೆಲವು ದೇಗುಲಗಳಲ್ಲಿ ಬ್ರಾಹ್ಮಣೇತರರು ಈಗಾಗಲೇ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಜರಾಯಿ ಇಲಾಖೆಯ ದೇಗುಲಗಳ ಅರ್ಚಕ ಸ್ಥಾನಕ್ಕೆ ಎಲ್ಲ ವರ್ಗದವರಿಗೂ ಅವಕಾಶ ಕಲ್ಪಿಸುವ ಮೂಲಕ, ‘ಬಹುತ್ವ ಭಾರತ’ದ ಚೆಲುವನ್ನು ಪೂಜಾಸ್ಥಳಗಳಲ್ಲಿ ಅನುಷ್ಠಾನಗೊಳಿಸುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕು. ಅರ್ಚಕ ವೃತ್ತಿಯಲ್ಲಿ ಆಸಕ್ತಿಯುಳ್ಳವರಿಗೆ ಸೂಕ್ತ ತರಬೇತಿ ನೀಡುವ ಹೊಣೆಗಾರಿಕೆಯೂ ಸರ್ಕಾರದ್ದೇ ಆಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು