ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಕೊರೊನಾ ಸಂತ್ರಸ್ತರ ಕುಟುಂಬಕ್ಕೆ ನೆರವು: ಸರ್ಕಾರದ ವಿಳಂಬ ಧೋರಣೆ ಸಲ್ಲ

Last Updated 11 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಕೋವಿಡ್‌– 19 ಬಾಧೆಯಿಂದ ಸಾವಿಗೀಡಾದ ‘ಕೊರೊನಾ ಯೋಧ’ರ ಕುಟುಂಬದವರು ಜೀವನ ನಿರ್ವಹಣೆಗೆ ತೊಂದರೆ ಪಡುತ್ತಿರುವ ಘಟನೆಗಳು ಸರ್ಕಾರಿ ವ್ಯವಸ್ಥೆಯ ಹೊಣೆಗೇಡಿತನಕ್ಕೆ ಉದಾಹರಣೆಯಂತಿವೆ. ಜೀವವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದ ಕೊರೊನಾ ಯೋಧರಿಗೆ ಸರ್ಕಾರ ಹಾಗೂ ಸಮಾಜ ಕೃತಜ್ಞವಾಗಿರಬೇಕು. ಕೊರೊನಾ ಕಾರಣದಿಂದಲೇ ಜೀವ ಕಳೆದುಕೊಂಡ ನತದೃಷ್ಟ ನೌಕರರ ಕುಟುಂಬಗಳಿಗೆ ಸರ್ಕಾರ ತಕ್ಷಣವೇ ಎಲ್ಲ ರೀತಿಯ ನೆರವನ್ನು ಒದಗಿಸಿಕೊಡಬೇಕಾಗಿತ್ತು. ಕೋವಿಡ್‌ನಿಂದ ಕೆಲವು ನೌಕರರು ಮೃತಪಟ್ಟು 9 ತಿಂಗಳು ಕಳೆದ ನಂತರವೂ ಅವರ ಕುಟುಂಬಗಳಿಗೆ ಸಲ್ಲಬೇಕಾದ ವಿಮೆಯ ಹಣ ತಲುಪಿಲ್ಲ ಎನ್ನುವುದು ಸರ್ಕಾರಿ ವ್ಯವಸ್ಥೆಗೆ, ಕೃತಜ್ಞತೆ ಮತ್ತು ಕೃತಘ್ನತೆಯ ನಡುವಿನ ವ್ಯತ್ಯಾಸ ಗೊತ್ತಿಲ್ಲದಿರುವುದನ್ನು ಸೂಚಿಸುವಂತಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಉದ್ಯೋಗಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದಾಗ ಖಾಸಗಿ ಆಸ್ಪತ್ರೆಯ ವೆಚ್ಚವನ್ನು ಕುಟುಂಬವೇ ಭರಿಸಿದೆ. ದುಡಿಯುವ ವ್ಯಕ್ತಿಯನ್ನು ಉಳಿಸಿಕೊಳ್ಳಲಾಗದ ಆ ಕುಟುಂಬ ಈಗ ಜೀವನ ನಿರ್ವಹಣೆಗೆ ಒದ್ದಾಡುತ್ತಿದೆ. ಪಾಲಿಕೆ ಸಿಬ್ಬಂದಿಯ ಕುಟುಂಬದ ಸ್ಥಿತಿಯೇ ಹೀಗಾದರೆ, ಉಳಿದವರ ಗತಿಯೇನು? ಆರ್ಥಿಕ ಸಂಕಷ್ಟದಿಂದಾಗಿ ಇರುವ ಕೆಲಸಗಳನ್ನು ಕಳೆದುಕೊಂಡವರು, ಮನೆ ಬಾಡಿಗೆ, ನಿತ್ಯದ ಅಗತ್ಯಗಳು ಹಾಗೂ ಮಕ್ಕಳ ಶಾಲಾ ಶುಲ್ಕ ಹೊಂದಿಸಲಾರದೆ ಒದ್ದಾಡುತ್ತಿದ್ದಾರೆ. ಕುಟುಂಬದ ವ್ಯಕ್ತಿಗಳನ್ನು ಕಳೆದುಕೊಂಡ ನೋವಿನ ಜೊತೆಗೆ, ಅನ್ನದ ದಾರಿಯೂ ಮುಚ್ಚಿಹೋದ ಸಂಕಟ
ವನ್ನು ಇರುವವರು ಅನುಭವಿಸಬೇಕಾದ ಸ್ಥಿತಿಯನ್ನು ಊಹಿಸಿಕೊಳ್ಳುವುದೂ ಕಷ್ಟ. ಇಂಥ ಸಂಕಷ್ಟ ಸೃಷ್ಟಿಯಾಗಲು ಕೊರೊನಾ ವೈರಸ್‌ನಂತೆಯೇ ಸರ್ಕಾರದ ಕರ್ತವ್ಯಲೋಪವೂ ಕಾರಣವಾಗಿದೆ.

ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರ ಕುಟುಂಬಗಳಿಗೆ ಕೇಂದ್ರ ಸರ್ಕಾರದ ‘ಗರೀಬ್‌ ಕಲ್ಯಾಣ್‌’ ವಿಮೆ ದೊರೆಯಲಿದೆ. ಇತರ ಇಲಾಖೆಗಳ ಸಂತ್ರಸ್ತರಿಗೆ ₹ 30 ಲಕ್ಷ ವಿಮೆ ನೀಡುವುದಾಗಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ಆ ಆದೇಶ ಬಹುತೇಕ ಪ್ರಕರಣಗಳಲ್ಲಿ ಕಾಗದದ ಮೇಲಷ್ಟೇ ಉಳಿದುಕೊಂಡಿದೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದ ವಿವಿಧ ಭಾಗಗಳಲ್ಲಿ 108 ಮಂದಿ ಆರೋಗ್ಯ ಕಾರ್ಯಕರ್ತರು ಕೋವಿಡ್‌ ನಿಯಂತ್ರಣ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಅವರಲ್ಲಿ 60 ಮಂದಿಯ ಅರ್ಜಿಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. 20 ಕುಟುಂಬಗಳಿಗೆ ವಿಮೆ ಮೊತ್ತ ಕೈಸೇರಿದ್ದು, ಮೂರು ಕುಟುಂಬಗಳಿಗೆ ಹಣ ಮಂಜೂರಾಗಿದೆ. ಉಳಿದ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಬಿಬಿಎಂಪಿ ಹೊರತುಪಡಿಸಿ ಇನ್ನಿತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 18 ಮಂದಿ ಪೌರ ಕಾರ್ಮಿಕರೂ ಸೇರಿ 32 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಮೃತ ಪೌರಕಾರ್ಮಿಕರಲ್ಲಿ 13 ಮಂದಿಯ ಕುಟುಂಬಗಳಿಗಷ್ಟೆ ಈವರೆಗೆ ವಿಮಾ ಮೊತ್ತ ತಲುಪಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಂತ್ರಣದಲ್ಲಿ ತೊಡಗಿದ್ದ 18 ಮಂದಿ ಸಾವಿಗೀಡಾಗಿದ್ದು, ಅವರಲ್ಲಿ ಯಾರೊಬ್ಬರಿಗೂ ವಿಮೆ ದೊರೆತಿಲ್ಲ ಎಂದು ವರದಿಯಾಗಿದೆ. ಹಣ ದೊರೆಯುವುದಿರಲಿ, ಕೆಲವು ಸಂತ್ರಸ್ತರ ದಾಖಲೆಗಳೇ ಬಿಬಿಎಂಪಿ ವತಿಯಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಈ ಅಂಕಿಅಂಶಗಳು, ಕೊರೊನಾ ಯೋಧರ ಬಗೆಗಿನ ಸರ್ಕಾರದ ಅನುಕಂಪದಲ್ಲಿ ‍ಪ್ರಾಮಾಣಿಕತೆಗಿಂತಲೂ ಪ್ರಚಾರತಂತ್ರವೇ ಹೆಚ್ಚಾಗಿರುವ ಶಂಕೆ ಹುಟ್ಟಿಸುವಂತಿದೆ. ಕೊರೊನಾ ಕರ್ತವ್ಯಕ್ಕೆ ಮೀಸಲಾದ ಆಸ್ಪತ್ರೆಗಳ ಮೇಲೆ ವಿಮಾನಗಳಿಂದ ಪುಷ್ಪವೃಷ್ಟಿ ಮಾಡಲಾಗಿತ್ತು. ಸಾರ್ವಜನಿಕವಾಗಿ ಚಪ್ಪಾಳೆ ತಟ್ಟುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯನ್ನು ಉತ್ತೇಜಿಸಲಾಗಿತ್ತು. ಈ ಸಾಂಕೇತಿಕ ಆಚರಣೆಗಳಿಗಷ್ಟೇ ಸರ್ಕಾರದ ಕೃತಜ್ಞತೆ, ಜವಾಬ್ದಾರಿ ಮುಗಿದುಹೋಗಬಾರದು. ಒಣ ಪ್ರಶಂಸೆಯಿಂದ ಸಂತ್ರಸ್ತರ ಹೊಟ್ಟೆ ತುಂಬುವುದಿಲ್ಲ. ಜೀವಹಾನಿಯನ್ನಂತೂ ತುಂಬಿಕೊಡುವುದು ಯಾರಿಂದಲೂ ಸಾಧ್ಯವಿಲ್ಲ. ಕನಿಷ್ಠಪಕ್ಷ ಸಂತ್ರಸ್ತ ಕುಟುಂಬದ ಜೀವನ ನಿರ್ವಹಣೆಗೆ ಅಗತ್ಯವಾದ ಅನುಕೂಲಗಳನ್ನಾದರೂ ಸರ್ಕಾರ ಮಾಡಿಕೊಡಬೇಕು. ಸಮಾಜದ ಹಿತಕ್ಕಾಗಿ ಸೇವೆ ಸಲ್ಲಿಸಿ ಹುತಾತ್ಮರಾದ ವ್ಯಕ್ತಿಗಳ ತ್ಯಾಗಕ್ಕೆ ಯಾವ ಅರ್ಥವೂ ಇಲ್ಲ ಎನ್ನುವ ಭಾವನೆ, ಸಂತ್ರಸ್ತರ ಕುಟುಂಬಗಳಿಗೆ ಉಂಟಾಗಬಾರದು. ಕೊರೊನಾ ಯೋಧರ ಕುಟುಂಬದ ಸಂಕಟ, ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ವಿಳಂಬಗತಿ ಅನುಸರಿಸದೆ, ತಕ್ಷಣ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಇದು ಮಾನವೀಯ ನಡೆಯಷ್ಟೇ ಅಲ್ಲ, ಸರ್ಕಾರದ ಆದ್ಯ ಕರ್ತವ್ಯವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT